ಪಶು ವೈದ್ಯೆ ಕಿರುಚಬಾರೆಂದು ಬಾಯಿಗೆ ವಿಸ್ಕಿ ಸುರಿದರು!| ಪ್ರಜ್ಞೆ ತಪ್ಪಿದಾಗ ಅತ್ಯಾಚಾರ| ಎಚ್ಚರಗೊಂಡಾಗ ಮೂಗು, ಬಾಯಿ ಮುಚ್ಚಿ ಕೊಂದರು| ಹೈದರಾಬಾದ್ ಗ್ಯಾಂಗ್‌ರೇಪ್ ಕುರಿತ ಪೊಲೀಸ್ ವರದಿ
ಹೈದರಾಬಾದ್[ಡಿ.02]: ಇಲ್ಲಿನ ಪಶುವೈದ್ಯೆಯನ್ನು ಭೀಕರವಾಗಿ ಅತ್ಯಾಚಾರ ಮಾಡಿ, ಆಕೆಯನ್ನು ಕೊಂದ ನಾಲ್ವರು ಅತ್ಯಾಚಾರಿಗಳ ಮತ್ತಷ್ಟುಪಾಶವೀ ಕೃತ್ಯಗಳು ತನಿಖೆ ವೇಳೆ ಬಹಿರಂಗವಾಗಿವೆ. ಪಶುವೈದ್ಯೆಯು ಸಹಾಯಕ್ಕಾಗಿ ಕೂಗಲು ಆರಂಭಿಸಿದಾಗ ಆಕೆಯನ್ನು ಪ್ರಜ್ಞಾಹೀನಳನ್ನಾಗಿ ಮಾಡಲು, ಆಕೆಯ ಬಾಯಿಗೆ ದುರುಳರು ವಿಸ್ಕಿ ಸುರಿದಿದ್ದರು ಎಂಬ ಮಾಹಿತಿ ಪೊಲೀಸ್ ತನಿಖಾ ವರದಿಯಲ್ಲಿದೆ.
ಟ್ರಕ್ ಚಾಲಕರು, ಕ್ಲೀನರ್‌ಗಳಾದ ಮೊಹಮ್ಮದ್ ಆರಿಫ್ (26), ಜೊಲ್ಲು ನವೀನ್ (20), ಜೊಲ್ಲು ಶಿವ (20) ಹಾಗೂ ಚಿಂತಕುಂಟ ಚೆನ್ನಕೇಶವುಲು (20) ಅವರೇ ಈ ಕೃತ್ಯ ಎಸಗಿದವರು. ಪೊಲೀಸ್ ವರದಿಯಲ್ಲಿ ಇವರ ಕೃತ್ಯವನ್ನು ಎಳೆ ಎಳೆಯಾಗಿ ಬಿಡಿಸಿಡಲಾಗಿದೆ.
undefined
ಹಿಂದೂ ಯುವತಿಯರನ್ನ ಸಿಕ್ಕಲ್ಲಿ ಅತ್ಯಾಚಾರಗೈದು ಸುಟ್ಟಾಕಿ ಎಂದಿದ್ದ ಆರೋಪಿ ಅರೆಸ್ಟ್
ಬುಧವಾರ ಸಂಜೆ 5.30ಕ್ಕೆ ಶಂಶಾಬಾದ್ ಟೋಲ್ ಪ್ಲಾಜಾ ಸಮೀಪ ಆರಿಫ್ ಮತ್ತು ಇತರ ನಾಲ್ವರು ತಮ್ಮ ಟ್ರಕ್ ನಿಲ್ಲಿಸಿ, ಅಲ್ಲಿಯೇ ಮದ್ಯ ಸೇವಿಸಿದರು. ಈ ವೇಳೆ ಸಂಜೆ 6 ಗಂಟೆಗೆ ಪಶುವೈದ್ಯೆಯು ಅಲ್ಲಿ ಸ್ಕೂಟರ್ ನಿಲ್ಲಿಸಿ, ಕ್ಯಾಬ್ ಹತ್ತಿ ಬೇರೆಲ್ಲೋ ಹೋದುದನ್ನು ಗಮನಿಸಿದರು. ಆಗಲೇ ಅವರು ಪಶುವೈದ್ಯೆ ವಾಪಸು ಬಂದಾಗ ಅತ್ಯಾಚಾರ ಮಾಡಬೇಕು ಎಂದು ನಿರ್ಧರಿಸಿದರು.
ಆರಿಫ್ ಸೂಚನೆ ಮೇರೆಗೆ ಪಶುವೈದ್ಯೆಯ ಸ್ಕೂಟರನ್ನು ನವೀನ್ ಪಂಕ್ಚರ್ ಮಾಡಿದ. ರಾತ್ರಿ 9ಕ್ಕೆ ಆಕೆಯು ಮರಳಿದಾಗ ಸ್ಕೂಟರ್ ಪಂಕ್ಚರ್ ಆಗಿದ್ದನ್ನು ಗಮನಿಸಿದಳು. ಆಗ ಶಿವ ಅಲ್ಲಿಗೆ ಆಗಮಿಸಿ ಸಹಾಯ ಮಾಡುವ ನೆಪ ಹೇಳಿದ. ಸ್ಕೂಟರನ್ನು ಪಂಕ್ಚರ್ ಅಂಗಡಿಗೆ ತೆಗೆದುಕೊಂಡು ಹೋದ. ಆದರೆ ಕೆಲ ಹೊತ್ತಿನ ಬಳಿಕ ವಾಪಸು ಬಂದು ಪಂಕ್ಚರ್ ಅಂಗಡಿಗಳು ಬಂದ್ ಆಗಿವೆ ಎಂದು ಸುಳ್ಳು ಹೇಳಿದ.
ರೇಪ್ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದವರಿಗೆ ಕಠಿಣ ಶಿಕ್ಷೆ: ಹೈದರಾಬಾದ್ ಡಿಸಿಪಿ
ಆಗ ನಾಲ್ವರೂ ಪಶುವೈದ್ಯೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ಟ್ರಕ್ ಸಮೀಪದ ನಿರ್ಜನ ಕೋಣೆಯೊಂದಕ್ಕೆ ಕರೆದೊಯ್ದರು. ಆಕೆಯ ಮೊಬೈಲನ್ನು ನವೀನ್ ಸ್ವಿಚ್‌ಆಫ್ ಮಾಡಿದ. ಅಪಾಯದ ಸೂಚನೆ ಅರಿತ ಪಶುವೈದ್ಯೆ, ಸಹಾಯಕ್ಕೆ ಕಿರುಚಲು ಆರಂಭಿಸಿದಳು. ಆಗ ಆಕೆಯನ್ನು ಮೌನವಾಗಿರಿಸಲು ಬಾಯಲ್ಲಿ ವಿಸ್ಕಿ ಸುರಿದರು. ಕೆಲ ಹೊತ್ತು ಆಕೆ ಪ್ರಜ್ಞಾಹೀನಳಾದಾಗ ನಾಲ್ವರೂ ಅತ್ಯಾಚಾರ ನಡೆಸಿದರು. ಸ್ವಲ್ಪ ಹೊತ್ತಿನ ಬಳಿಕ ಆಕೆ ಎಚ್ಚರಗೊಂಡು ಮತ್ತೆ ಕೂಗಲು ಆರಂಭಿಸಿದಳು. ಆಗ ಆರಿಫ್ ಆಕೆಯ ಬಾಯಿ ಹಾಗೂ ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಂದು ಹಾಕಿದ.
ಬಳಿಕ ನಾಲ್ವರೂ ಆಕೆಯ ಶವವನ್ನು 25 ಕಿ.ಮೀ. ದೂರ ಕೊಂಡೊಯ್ದರು. ಆಕೆಯ ಶವ ಸುಡಬೇಕೆಂದು ಮಾರ್ಗ ಮಧ್ಯದಲ್ಲಿ ಪೆಟ್ರೋಲ್ ಖರೀದಿಸಿದರು. ಪೆಟ್ರೋಲನ್ನು ನೀರಿನ ಬಾಟಲಿಗಳಲ್ಲಿ ತುಂಬಿಸಿಕೊಂಡರು. ಚಾಟನಪಲ್ಲಿ ಎಂಬಲ್ಲಿನ ಸೇತುವೆ ಕೆಳಗೆ ಶವ ಎಸೆದು ಬೆಂಕಿ ಹಚ್ಚಿ ಪರಾರಿಯಾದರು.
'ನನ್ನ ಮಗ ಮಾಡಿದ್ದು ಕ್ಷಮಿಸಲಾರದ ತಪ್ಪು: ವೈದ್ಯೆಯನ್ನು ಕೊಂದಂತೆ ಆತನನ್ನೂ ಸುಟ್ಟಾಕಿ'
ಹಂತಕರಿಗೆ ಪೆಟ್ರೋಲ್ ಕೊಟ್ಟವನ ಮೇಲೆ ಕೇಸ್?
ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳಿಗೆ ಬಾಟಲಿನಲ್ಲಿ ಪೆಟ್ರೋಲ್ ತುಂಬಿಸಿಕೊಟ್ಟಪೆಟ್ರೋಲ್ ಬಂಕ್ ಮಾಲೀಕನ ಮೇಲೆ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಸಂಬಂಧ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಕೋರಿದ್ದಾರೆ. ನಿಯಮಾನುಸಾರ ಗರಿಷ್ಠ 5 ಲೀ. ಪೆಟ್ರೋಲ್ ಹಾಗೂ 200 ಲೀ.ವರೆಗೆ ಡೀಸೆಲ್‌ಅನ್ನು ಬಾಟಲು ಅಥವಾ ಕಂಟೇನರ್‌ಗಳಲ್ಲಿ ನೀಡಬಹುದು. ಆದರೆ ಇತ್ತೀಚಿನ ಕೆಲವು ಕುಕೃತ್ಯಗಳ ಕಾರಣ ತೆಲಂಗಾಣ ಸರ್ಕಾರವು ಬಾಟಲು/ಕಂಟೇನರ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡುವಂತಿಲ್ಲ ಎಂದು ಸೂಚಿಸಿತ್ತು. ಹೀಗಾಗಿ ಬಂಕ್ ಮಾಲೀಕನ ಮೇಲೆ ಕೇಸು ದಾಖಲಾಗುವ ಸಾಧ್ಯತೆ ಇದೆ.
ನಮ್ಮ ಮಕ್ಕಳಿಗೆ ಶಿಕ್ಷೆ ಕೊಡಿ: ಆರೋಪಿಗಳ ತಾಯಂದಿರು
ಹೈದರಾಬಾದ್: ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಲ್ಲಲು ಅವರ ಕುಟುಂಬದವರೂ ನಿರಾಕರಿಸಿದ್ದಾರೆ. ‘ನನ್ನ ಮಗನಿಗೆ ಯಾವುದಾದರೂ ಶಿಕ್ಷೆ ಕೊಡಿ. ನನಗೂ ಒಬ್ಬ ಮಗಳಿದ್ದಾಳೆ’ ಎಂದು ಆರೋಪಿ ಚೆನ್ನಕೇಶವುಲು ತಾಯಿ ಹೇಳಿದರು. ಆರೋಪಿ ಶಿವನ ತಾಯಿ ಪ್ರತಿಕ್ರಿಯಿಸಿ, ‘ಯಾವುದಾದರೂ ಶಿಕ್ಷೆ ಕೊಡಿ. ಎಲ್ಲವೂ ದೇವರಿಗೇ ಗೊತ್ತು’ ಎಂದು ದುಃಖಿಸಿದಳು.
ವೈದ್ಯೆ ಮೇಲೆ ರೇಪ್: ಸಂತ್ರಸ್ತೆ ತಂದೆಯನ್ನು ಠಾಣೆಯಿಂದ ಠಾಣೆಗೆ ಅಲೆಸಿದ್ದ ಪೊಲೀಸರು!
3 ಪೊಲೀಸರ ಅಮಾನತು:
ಈ ನಡುವೆ, ತಕ್ಷಣವೇ ದೂರು ಸ್ವೀಕರಿಸಲು ನಿರಾಕರಿಸಿ ಸಂತ್ರಸ್ತೆಯ ಕುಟುಂಬವನ್ನು ಅಲೆದಾಡಿಸಿದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಒಬ್ಬ ಸಬ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಪೇದೆಗಳಿದ್ದಾರೆ. ಇವರಲ್ಲಿ ಒಬ್ಬಾತನು, ‘ನಿಮ್ಮ ಮಗಳು ಯಾವನ ಜತೆಗೋ ಓಡಿ ಹೋಗಿರಬಹುದು’ ಎಂದು ದೂರು ನೀಡಲು ಬಂದವರೆದುರು ಉಡಾಫೆ ಮಾತನಾಡಿದ್ದ ಎಂದು ದೂರಲಾಗಿತ್ತು.
ವೈದ್ಯೆ ಮೇಲೆ ಅತ್ಯಾಚಾರ, ಕೊಲೆ: ಈವರೆಗೆ ಏನೇನಾಯ್ತು? ಇಲ್ಲಿದೆ ಎಲ್ಲಾ ಸುದ್ದಿಗಳು