ರೇಪ್ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿದವರಿಗೆ ಕಠಿಣ ಶಿಕ್ಷೆ: ಹೈದರಾಬಾದ್ ಡಿಸಿಪಿ
ರೇಪ್ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿಯುವುದು ತಪ್ಪು| ಪ್ರಕರಣದ ಆರೋಪಿಗಳು ಹಿಂದೂ, ಮುಸ್ಲಿಂ ಎರಡೂ ಧರ್ಮದವರು| ಧರ್ಮದ ಬಣ್ಣ ಬಳಿದವರ ವಿರುದ್ಧ ಕಠಿಣ ಕ್ರಮ
ಹೈದರಾಬಾದ್[ಡಿ.01]: ಹೈದರಾಬಾದ್ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಗುರುತು ಬಹಿರಂಗವಾಗುತ್ತಿದ್ದಂತೆಯೇ ಅನೇಕರು ಈ ಅಪರಾಧ ಪ್ರಕರಣಕ್ಕೆ ಧರ್ಮದ ಬಣ್ಣ ಬಳಿಯಲಾರಂಭಿಸಿದ್ದಾರೆ. ಸದ್ಯ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಹೈದರಾಬಾದ್ ಡಿಸಿಪಿ ಈ ನಡೆ ಖಂಡನೀಯ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೌದು ಹೈದರಾಬಾದ್ ನಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎಂದು ಒಕ್ಕೊರಲಿನ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಕೆಲ ಮಂದಿ ತಮ್ಮ ಪೋಸ್ಟ್ ಗಳ ಮೂಲಕ ಪ್ರಕರಣಕ್ಕೆ ಜಾತಿಯ ಬಣ್ಣ ಬಳಿದು ಸಮಾಜದಲ್ಲಿರುವ ಶಾಂತಿ ಕದಡುವ ಯತ್ನ ನಡೆಸುತ್ತಿದ್ದಾರೆ. ಹೀಗಿರುವಾ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿರುವ ಹೈದರಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ 'ಸಂತ್ರಸ್ತೆ ಮೇಲೆ ನಡೆದ ಅತ್ಯಾಚಾರಕ್ಕೆ ಜಾತಿಯ ಬಣ್ಣ ಬಳಿಯುವುದು ತಪ್ಪು. ಆರೋಪಿಗಳೆಲ್ಲರೂ ದೇಶದ ಪ್ರಮುಖ ಧರ್ಮದವರಾಗಿದ್ದಾರೆ. ಈ ಪ್ರಕರಣದಲ್ಲಿ ಹಿಂದೂ ಹಾಗೂ ಮುಸಲ್ಮಾನ ಎರಡೂ ಧರ್ಮದ ಆರೋಪಿಗಳಿದ್ದಾರೆ' ಎಂದಿದ್ದಾರೆ.
ಅಲ್ಲದೇ 'ಈ ಹೇಯ ಕೃತ್ಯಕ್ಕೆ ಧರ್ಮದ ಬಣ್ಣ ಬಳಿಯುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದಿದ್ದಾರೆ. ಇನ್ನು ಪ್ರಕರಣದ ಬೆನ್ನಲ್ಲೇ ಪ್ರಮುಖ ಪಕ್ಷದ ರಾಜಕಾರಣಿಯೊಬ್ಬರು ಇಂತಹುದೇ ಕೋಮು ಗಲಭೆಗೆ ಆಸ್ಪದ ನೀಡುವ ವಿಡಿಯೋ ಒಂದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಕುರಿತಾಗಿಯೂ ತನಿಖೆ ನಡೆಸಿ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ