ಜಿಲ್ಲೆಯ ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ಹೊರವಲಯದಲ್ಲಿ ವೃದ್ಧನೊಬ್ಬ ಕುಡುಗೋಲಿನಿಂದ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಬೆಳಗಾವಿ (ಅ.22): ಜಿಲ್ಲೆಯ ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ಹೊರವಲಯದಲ್ಲಿ ವೃದ್ಧನೊಬ್ಬ ಕುಡುಗೋಲಿನಿಂದ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಖೋದನಾಪುರದ ರುದ್ರವ್ವ ಅಡಕಿ (55) ಮೃತ ಮಹಿಳೆ, ಚನ್ನಬಸಪ್ಪ ಸಂಗಪ್ಪ ಅಡಕಿ (60) ಕೊಲೆ ಮಾಡಿದ ಪತಿ. ಆರೋಪಿ ಚನ್ನಬಸಪ್ಪ ಸಂಗಪ್ಪ ಅಡಕಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡಕಟ್ಟಿ ಗ್ರಾಮದ ನಿವಾಸಿ. ಕೌಟುಂಬಿಕ ಕಲಹಕ್ಕೆ ಬೇಸತ್ತು ರುದ್ರವ್ವ ಅಡಕಿ ಖೋದನಾಪುರದ ತವರು ಮನೆಯಲ್ಲಿ ವಾಸವಿದ್ದರು. ಆದರೆ ಕೆಲ ದಿನಗಳ ಹಿಂದೆ ಪತ್ನಿಯ ತವರು ಮನೆಗೆ ಆಗಮಿಸಿದ್ದ ಪತಿ ಅಲ್ಲೇ ವಾಸವಿದ್ದ.
ಶುಕ್ರವಾರ ಬೆಳಗ್ಗೆಯೂ ಪತಿ-ಪತ್ನಿ ಮಧ್ಯೆ ಗಲಾಟೆ ಆಗಿದ್ದು, ನಂತರ ರುದ್ರವ್ವ ಹೊಲಕ್ಕೆ ಹೋಗಿದ್ದಾರೆ. ಅದೇ ಕೋಪದಲ್ಲಿ ಹೊಲಕ್ಕೆ ಹೋಗಿರುವ ಚನ್ನಬಸಪ್ಪ ಕುಡುಗೋಲಿನಿಂದ ರುದ್ರವ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯನ್ನು ಕೊಲೆಗೈದ ಬಳಿಕ ಪತಿ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕಿತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಇನ್ನು ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಕ್ಕದ ಮನೆಯ ವೃದ್ಧೆಯ ಚಿನ್ನಕ್ಕಾಗಿ ಕೊಲೆಗಾರರಾದ ವೃದ್ಧ ತಾಯಿ ಮತ್ತು ಮಗ!
ಪತ್ನಿ ಕೊಲೆ ಮಾಡಿದ ಆರೋಪಿ ಕಾರಾಗೃಹದಲ್ಲಿ ನೇಣಿಗೆ ಶರಣು: ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪತಿ ಮನನೊಂದು ಕಾರಾಗೃಹದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಸಮೀಪದ ನೆಹರು ಬಡಾವಣೆಯ ಆನಂದ ದುಧನಿ ತನ್ನ ಪತ್ನಿ ಸವಿತಾ ಕಿತ್ತೂರ ಎಂಬಾಕೆಯನ್ನು ಕಳೆದ ವಾರವಷ್ಟೇ ಸಂಶಯ ಹಾಗೂ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಲ್ಲಿಯ ಜಿಲ್ಲಾಸ್ಪತ್ರೆ ಸಮೀಪ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡ ಉಪ ನಗರ ಪೊಲೀಸರು ಆತನನ್ನು ಬಂಧಿಸಿ ಎರಡು ದಿನಗಳ ಹಿಂದಷ್ಟೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ನಾನಿನ್ನು ಹೊರಗೆ ಬರುವುದಿಲ್ಲ ಎಂದರಿತ ಆರೋಪಿ ಆನಂದ ಬುಧವಾರ ತಡರಾತ್ರಿ ಬೆಡ್‌ಶೀಟ್ ಬಳಸಿ ಕಾರಾಗೃಹದಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಏನಿದು ಪ್ರಕರಣ: ಸವಿತಾಳ ಮೊದಲ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಳಿಕ ಬದುಕನ್ನು ಸಾಗಿಸಲು ಸವಿತಾ ಖಾಸಗಿ ಶಿಕ್ಷಣ ಸಂಸ್ಥೆಗೆ ಕೆಲಸಕ್ಕೆ ಸೇರಿದಳು. ಆ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆನಂದ ಜತೆಗೆ ಪ್ರೀತಿ ಅಂಕುರವಾಗಿ ಮದುವೆಯಾಗಿದ್ದರು. ಆದರೆ, ಆನಂದನಿಗೂ ಮೊದಲೇ ಮದುವೆ ಆಗಿರುವ ವಿಷಯವನ್ನು ಸವಿತಾಳಲ್ಲಿ ಮುಚ್ಚಿಟ್ಟಿದ್ದನು. ಆರಂಭದಲ್ಲಿ ಚೆನ್ನಾಗಿದ್ದ ಆನಂದ ಬಳಿಕ ಸವಿತಾಳ ಬಗ್ಗೆ ಅನುಮಾನ ಪಡುತ್ತಿದ್ದನು. ನಿತ್ಯವೂ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದನು. ಇದರಿಂದ ಬೇಸತ್ತು ಸವಿತಾ ಆತನನ್ನು ಬಿಟ್ಟು ತಾಯಿ ಮನೆಯಲ್ಲಿದ್ದಳು.
ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
ಸವಿತಾಳ ತಾಯಿ ಲಲಿತಾ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಇತ್ತು. ಹೀಗಾಗಿ ಲಿಲಿತಾ ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಲಲಿತಾ ಆಸ್ಪತ್ರೆಯಲ್ಲಿಯೇ ಇದ್ದಳು. ಕೆಲಸದಿಂದ ನೇರವಾಗಿ ಆಸ್ಪತ್ರೆಗೆ ಬರುತ್ತಿದ್ದ ಸವಿತಾಳ ಮೇಲಿನ ದ್ವೇಷದಿಂದ ಕಳೆದ ವಾರ ಆರೋಪಿ ಆನಂದ ದಾರಿ ಮಧ್ಯೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಪ್ರಕರಣ ದಾಖಲಿಸಿದ ಪೊಲೀಸರು ಮಾಹಿತಿ ನೀಡಿದರು.