ನನ್ನ ಪ್ರೀತಿ ಒಪ್ಪಿಕೊಂಡು, ನಾನು ಕರೆದಲ್ಲಿಗೆ ಬರದಿದ್ದರೆ ನಿನ್ನನ್ನು ನೇಹಾ ಮಾದರಿಯಲ್ಲಿಯೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ, ಹೇಳಿದಂತೆಯೇ ಮನೆಗೆ ನುಗ್ಗಿ ಚಾಕು ಇರಿದು ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿ (ಮೇ 15): ನೀನು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕು. ನಾನು ಕರೆದಲ್ಲಿಗೆ ನನ್ನ ಜೊತೆಯಲ್ಲಿ ಬರಬೇಕು. ಇಲ್ಲವಾದರೆ ನೇಹಾಳನ್ನು ಕೊಲೆ ಮಾಡಿದ ಮಾದರಿಯಲ್ಲಿಯೇ ನಿನ್ನನ್ನೂ ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ ಪಾಗಲ್ ಪ್ರೇಮಿ, ಅಂಜಲಿಯನ್ನೂ ಚಾಕು ಚುಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾನೆ.
ಹೌದು, ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಆಕೆಯ ಸ್ನೇಹಿತ ಫಯಾಜ್ ಕಾಲೇಜು ಆವರಣದಲ್ಲಿಯೇ ಭೀಕರವಾಗಿ ಚಾಕು ಇರಿದು ಕೊಲೆ ಮಾಡಿದ್ದನು. ಈ ಘಟನೆಯ ನಂತರ ಇಡೀ ಹುಬ್ಬಳ್ಳಿ ನಗರದ ಜನತೆ ಬೆಚ್ಚಿ ಬಿದ್ದಿತ್ತು. ಈ ಘಟನೆಯಿಂದ ಜನರು ಕೂಡ ಹೊರಬಂದಿಲ್ಲ. ಜೊತೆಗೆ, ನೇಹಾಳನ್ನು ಕೊಲೆ ಮಾಡಿದ ಆರೋಪಿಗೆ ಶಿಕ್ಷೆಯೂ ಆಗಿಲ್ಲ. ಅಂಥದ್ದರಲ್ಲಿ ನೇಹಾ ಮರ್ಡರ್ ಮಾದರಿಯಲ್ಲೇ ಮತ್ತೊಬ್ಬ ವಿದ್ಯಾರ್ಥಿನಿ ಅಂಜಲಿ ಅಂಬಿಗೇರಳನ್ನು (20) ಮನೆಗೆ ನುಗ್ಗಿ ಬೀಕರವಾಗಿ ಚಾಕು ಚುಚ್ಚಿ ಕೊಲೆ ಮಾಡಲಾಗಿದೆ.
SSLC ವಿದ್ಯಾರ್ಥಿನಿ ತಲೆಯನ್ನು ಹೊತ್ತೊಯ್ದಿದ್ದ ಹಂತಕನ ಟಾರ್ಗೆಟ್ ಆಕೆ ಮಾತ್ರ ಆಗಿರಲಿಲ್ಲ!
ಕೊಲೆಯಾದ ಯುವತಿ ಅಂಜಲಿ ಅಂಬಿಗೇರ (20) ಆಗಿದ್ದಾಳೆ. ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ್ ಆಗಿದ್ದಾನೆ. ಹುಬ್ಬಳ್ಳಿ ನಗರದ ವೀರಾಪೂರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ಮಲಗಿದ್ದ ಅಂಜಲಿಯ ಮನೆಗೆ ಬೆಳಗ್ಗೆ 5.30ರ ಸುಮಾರಿಗೆ ನುಗ್ಗಿದ ಆರೋಪಿ ಗಿರೀಶ್ ಸಾವಂತ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಅಂಜಲಿ ಮಲಗಿದ್ದ ಸ್ಥಳಕ್ಕೆ ಹೋಗಿ ಆಕೆ ಕೂಗಿಕೊಳ್ಳಲು ಆಗದಂತೆ ಬಾಯಿ ಬಿಗಿಯಾಗಿ ಮುಚ್ಚಿ ಮನಸೋ ಇಚ್ಛೆ ಚಾಕು ಚುಚ್ಚಿದ್ದಾನೆ. ನಂತರ, ರಕ್ತದ ಮಡುವಿನಲ್ಲಿ ಯುವತಿ ಅಂಜಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದರೂ ನಿಷ್ಕರುಣಿ ಯುವಕ ಅಲ್ಲಿಂದ ಆಕೆಯನ್ನು ಬಿಟ್ಟು ಪರಾರಿ ಆಗಿದ್ದಾನೆ.
ನೇಹಾಳನ್ನು ಕೊಂದಂತೆಯೇ ಕೊಲೆ ಮಾಡ್ತೀನೆಂದು ಎಚ್ಚರಿಕೆ ನೀಡಿದ್ದ: ಉತ್ತಮ ಚಾರಿತ್ರ್ಯವನ್ನು ಹೊಂದಿರದ ಗಿರೀಶ್ ಸಾವಂತ ತನನ್ನು ಪ್ರೀತಿ ಮಾಡುವಂತೆ ಅಂಜಲಿಯ ಹಿಂದೆ ಬಿದ್ದುದ್ದನು. ಆದರೆ, ಪ್ರೀತಿಗಾಗಿ ಎಷ್ಟೇ ಪೀಡಿಸುತ್ತಿದ್ದರೂ ಅಂಜಲಿ ಮಾತ್ರ ಆತನ ಪ್ರೀತಿಗೆ ಸೊಪ್ಪು ಹಾಕದೇ ಸಮಾಧಾನದಿಂದಲೇ ಆತನಿಗೆ ಬುದ್ಧಿ ಹೇಳಿ ದೂರವಿಟ್ಟಿದ್ದಳು. ಆದರೂ, ಯುವತಿಯನ್ನು ತನ್ನೊಂದಿಗೆ ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸುತ್ತಿದ್ದನು. ಕೆಲವು ದಿನಗಳ ಹಿಂದೆ ಮೈಸೂರಿಗೆ ಹೋಗೋಣ ಬಾ ಎಂದು ಅಂಜಲಿಗೆ ಕರೆದು ಧಮ್ಕಿ ಹಾಕಿದ್ದನು. ಜೊತೆಗೆ, ನೀನು ನನ್ನ ಜೊತೆ ಬರದೆ ಹೋದ್ರೆ ನೇಹಾ ಹಿರೇಮಠಳನ್ನು ಫಯಾಜ್ ಕೊಲೆ ಮಾಡಿದ ರೀತಿಯಲ್ಲಿಯೇ ನಿನ್ನನ್ನೂ ಕೊಲೆ ಮಾಡುವುದಾಗಿ ಆರೋಪಿ ಗಿರೀಶ್ ಬೆದರಿಕೆ ಹಾಕಿದ್ದನು.
ಅಂಜಲಿ ಈ ಘಟನೆಯ ಬಗ್ಗೆ ತನ್ನ ಅಜ್ಜಿಯ ಬಳಿ ಹೇಳಿಕೊಂಡಿದ್ದಳು. ಆಗ ಭಯಗೊಂಡ ಅಂಜಲಿಯ ಅಜ್ಜಿ ಗಂಗಮ್ಮ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ತನ್ನ ಮೊಮ್ಮಗಳನ್ನು ಗಿರೀಶ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನೀವು ಆತನಿಗೆ ಬುದ್ಧಿ ಹೇಳಿ, ನನ್ನ ಮೊಮ್ಮಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಆದರೆ, ಪೊಲೀಸರು ಅವನೇನೋ ಸುಮ್ಮನೆ ಹೇಳಿರುತ್ತಾನೆ. ಕೊಲೆ ಮಾಡುವುದೆಲ್ಲಾ ಹುಡುಗಾಟಿಕೆ ಅಲ್ಲ, ನಿನ್ನ ಕನಸಿಗೆ ಬಂದಿರುವ ಮೂಢನಂಬಿಕೆಯನ್ನು ಇಲ್ಲಿಗೆ ತಂದು ಹೇಳಬೇಡ ಹೋಗು ಎಂದು ಬೈದು ಕಳಿಸಿದ್ದಾರೆ.
ಯುವತಿ ಅಂಜಲಿ ಜೀವಕ್ಕೆ ಅಪಾಯವಿದೆ ಎಂದು ಅಜ್ಜಿ- ಮೊಮ್ಮಗಳಿಗೆ ಗೊತ್ತಿದ್ದು, ಅದನ್ನು ಪೊಲೀಸರಿಗೆ ಹೇಳಿದರೂ ರಕ್ಷಣೆ ಸಿಗಲೇ ಇಲ್ಲ. ಇದರಿಂದ ಪ್ರತಿನಿತ್ಯ ಭಯದಿಂದಲೇ ಜೀವನ ಮಾಡುತ್ತಿದ್ದರು. ಇನ್ನು ಯುವತಿ ಕೂಡ ಗಿರೀಶನ ಕೈಗೆ ಒಬ್ಬಂಟಿಯಾಗಿ ಸಿಗದೇ ಗುಂಪಿನಲ್ಲಿಯೇ ಓಡಾಡುತ್ತಿದ್ದಳು. ಆದರೆ, ಇಂದು ಬೆಳಗ್ಗೆ ಮನೆಗೇ ನುಗ್ಗಿದ ಆರೋಪಿ ಗಿರೀಶ್, ಅಂಜಲಿಯ ಎದೆ, ಹೊಟ್ಟೆ, ಬೆನ್ನು, ಕುತ್ತಿಗೆ, ತಲೆ ಸೇರಿದಂತೆ ವಿವಿಧ ಭಾಗಗಳಿಗೆ ಮನಸೋ ಇಚ್ಛೆ ಚಾಕು ಇರಿದು ಕೊಲೆ ಮಾಡಿದ್ದಾನೆ.
4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು
ಪ್ರೀತಿ ಒಪ್ಪಿಕೊಳ್ಳಲು ಗಿರೀಶನ ಚಾರಿತ್ರ್ಯವೇನೂ ಒಳ್ಳೆಯದಿರಲಿಲ್ಲ:
ಇನ್ನು ಯುವತಿ ಅಂಜಲಿಗೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಗಿರೀಶ್ ಚಾರಿತ್ರ್ಯದಲ್ಲೇನೂ ಒಳ್ಳೆಯವನಲ್ಲ. ಈಗಾಗಲೇ ಮನೆ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳ್ಳತನದ ಕೇಸಿನಲ್ಲಿ ಪೊಲೀಸ್ ಠಾಣೆಯಲ್ಲಿಯೂ ಆತನ ವಿರುದ್ಧ ಕೇಸ್ ದಾಖಲಾಗಿದ್ದವು. ಆದರೂ, ತನಗೆ ಯಾರೇನೂ ಮಾಡುವುದಿಲ್ಲ ಎಂಬ ಅಹಂನಲ್ಲಿದ್ದ ಗಿರೀಶನಿಗೆ ಬುದ್ಧಿ ಕಲಿಸುವವರೇ ಇರಲಿಲ್ಲ. ಈಗ ಮೊಮ್ಮಗಳು ಅಂಜಲಿ ಶವವಾಗಿದ್ದಾಳೆ. ಹುಬ್ಬಳ್ಳಿ ನಗರದ ಬೆಂಡಿಗೇರಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದರು. ಇನ್ನು ಕುಟುಂಬಸ್ಥರ ಆಕ್ರಂದನ ಮಾತ್ರ ಮುಗಿಲು ಮುಟ್ಟಿತ್ತು.