ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ
ಕಲಬುರಗಿ (ಮೇ .26): ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಅಂಬೇಡ್ಕರ ಸರ್ಕಲ್ ಬಳಿ ಕಳೆದ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಾಡಿ ಪಟ್ಟಣದ ವಿಜಯ ಕಾಂಬಳೆ (25) ಯುವಕನೇ ಕೊಲೆಯಾದ ದುರ್ದೈವಿ. ಈತ ಇದೇ ವಾಡಿ ಪಟ್ಟಣದಲ್ಲಿ ವಾಸವಾಗಿರುವ ಅಲ್ಪಸಂಖ್ಯಾತ ಕುಟುಂಬದ (Muslim) ಯುವತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಯುವತಿಯೂ ಸಹ ಈತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇಬ್ಬರ ನಡುವೆ ವಾಟ್ಸಪ್ ಚಾಟಿಂಗ್, ತಡರಾತ್ರಿವರೆಗೂ ಕಾಲಿಂಗ್, ಕದ್ದು ಮುಚ್ಚಿ ಭೇಟಿ ನಡೆಯುತ್ತಿದ್ದವು ಎನ್ನಲಾಗಿದೆ.
ವಿಜಯ ತಾಯಿಗೂ ವಾರ್ನ್: ಈ ವಿಚಾರವಾಗಿ ಪ್ರೀತಿಸಿದ ಯುವತಿಯ ಕಡೆಯವರು ವಿಜಯ ಕಾಂಬಳೆ ಜೊತೆ ಎಂಟು ತಿಂಗಳ ಹಿಂದೆಯೂ ಜಗಳ ಮಾಡಿದ್ದರು. ಆಗ ವಿಜಯ ಕಾಂಬಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅಲ್ಲದೇ ವಿಜಯ ಮನೆಗೆ ಬಂದು ಆತನ ತಾಯಿಗೂ ವಾರ್ನ್ ಮಾಡಿದ್ದರು. ನಮ್ಮ ತಂಗಿಯ ತಂಟೆಗೆ ಬಂದ್ರೆ ಹುಟ್ಲಿಲ್ ಅನ್ನಿಸಿ ಬಿಡ್ತಿವಿ ನಿನ್ನ ಮಗನ್ನ ಎಂದು ಆಕೆಯ ಅಣ್ಣ, ವಿಜಯನ ತಾಯಿಗೆ ವಾರ್ನ್ ಮಾಡಿದ್ದ.
ಅಂದು ವಾರ್ನ್ ಇಂದು ಕೊಲೆ: ಯುವತಿಯ ಬೆದರಿಕೆಯ ನಡುವೆಯೂ ದಲಿತ ಯುವಕ ವಿಜಯ ಮತ್ತು ಮುಸ್ಲಿಂ ಯುವತಿಯ ನಡುವೆ ಪ್ರೀತಿ ಪ್ರೇಮ ಮುಂದುವರೆದಿತ್ತು. ಯುವತಿಯ ಹಿನ್ನಲೆ ಗಮನಿಸದ ವಿಜಯನ ತಾಯಿ, ತಾಳಿ ಕಟ್ಟಿ ಬಿಡು ಎಂದು ಮಗನಿಗೆ ಒಮ್ಮೆ ಹೇಳಿ ಬಿಟ್ಟಿದ್ದಳು. ಇದರಿಂದ ಇನ್ನಷ್ಟು ಕೆರಳಿದ ಯುವತಿಯ ಅಣ್ಣ, ಶಾಬುದ್ದಿನ್ ತನ್ನ ಸ್ನೇಹಿತನ ಜೊತೆಗೂಡಿ ಕೊಲೆ ಮಾಡಿಯೇ ಬಿಟ್ಟಿದ್ದಾನೆ.
ಇದನ್ನೂ ಓದಿ: ಸಾಕ್ಷ್ಯ ಇಲ್ಲದಿದ್ರೂ ಕೊಲೆ ಕೇಸಲ್ಲಿ 13 ವರ್ಷ ಜೈಲಲ್ಲಿದ್ದವನಿಗೆ ಬಿಡುಗಡೆ ಭಾಗ್ಯ
ಎರಡು ವರ್ಷದ ಪ್ರೀತಿಯ ಸಮಾಧಿ ಕಟ್ಟಲು 2 ನಿಮಿಷ ಸಾಕಾಯ್ತು: ದಲಿತ ಯುವಕ ವಿಜಯ ಕಾಂಬಳೆ ಮತ್ತು ಮುಸ್ಲಿಂ ಯುವತಿಯ ನಡುವೆ ಪ್ರೇಮಾಂಕುರವಾಗಿ (Affair) ಎರಡು ವರ್ಷವಾಗಿತ್ತು. ಆದರೆ ಆಕೆಯ ಅಣ್ಣ ತನ್ನ ತಂಗಿಯನ್ನು ಪ್ರೀತಿಸಿದ ಯುವಕನನ್ನು ಹತ್ಯೆ ಮಾಡಲು ತೆಗೆದುಕೊಂಡಿದ್ದು ಕೇವಲ ಎರಡೇ ಎರಡು ನಿಮಿಷ.
ನಡೆದಿದ್ದು ಇಷ್ಟು: ನಾಳೆಗಾಗಿ ತರಕಾರಿ ತರುವುದಾಗಿ ತಾಯಿಗೆ ಹೇಳಿ ಕಳೆದ ರಾತ್ರಿ ಎಂಟು ಗಂಟೆಯ ಸುಮಾರಿಗೆ ವಿಜಯ ಕಾಂಬಳೆ ಮನೆಯಿಂದ ಹೊರಬಿದ್ದಿದ್ದ. ಎಂದಿನಂತೆ ತನ್ನ ಸ್ನೇಹಿತನ ಜೊತೆ ಜನನಿಬಿಡ ಪ್ರದೇಶ ಅಂಬೇಡ್ಕರ್ ಸರ್ಕಲ್ ಬಳಿ ಮಾತನಾಡುತ್ತ ಕುಳಿತಿದ್ದ ವಿಜಯ್. ಆಗ ಇಬ್ಬರು ಏಕಾ ಏಕಿ ದಾಳಿ ಮಾಡಿದರು. ಮೊದಲು ಬೆತ್ತದಿಂದ ವಿಜಯನ ತಲೆಗೆ ಏಟು ಕೊಟ್ಟರು. ಆಗ ಜೊತೆಯಲ್ಲಿಯೇ ಇದ್ದ ವಿಜಯನ ಸ್ನೇಹಿತ ರಾಘವೇಂದ್ರ ಆತನ ನೆರವಿಗೆ ಮುಂದಾದ.
ಬೆತ್ತದಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ತಡೆಯಲು ರಾಘವೇಂದ್ರ ಯತ್ನಿಸುತ್ತಿದ್ದ ಹೊತ್ತಲ್ಲೇ, ಇತ್ತ ಇನ್ನೊಬ್ಬ ಹಂತಕ, ನೆಲಕ್ಕೆ ಬಿದ್ದ ವಿಜಯನ ಕತ್ತಿಗೇ ಚಾಕು ಹಾಕಿದ್ದಾನೆ. ಅಷ್ಟೇ ಅಲ್ಲ ಎದೆ, ಹೊಟ್ಟೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ (Crime News). ನೋಡ ನೋಡುತ್ತಿದ್ದಂತೆಯೇ ಸ್ನೇಹಿತನ ಕಣ್ಣೆದುರೇ ವಿಜಯ ಕಾಂಬಳೇ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಪ್ರತ್ಯಕ್ಷದರ್ಶಿ ರಾಘವೇಂದ್ರ ಹೇಳುವ ಪ್ರಕಾರ ಈ ಕೊಲೆಗೆ ಹಂತಕರು ತೆಗೆದುಕೊಂಡಿರುವ ಸಮಯ ಕೇವಲ ಎರಡೇ ಎರಡು ನಿಮಿಷ. ಹಂತಕರು ತಮ್ಮ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಗನ ಪಬ್‌ಜಿ ಹುಚ್ಚಿಗೆ ಅಮ್ಮ ಬಲಿ
ಈ ಸಂಬಂಧ ಕೊಲೆಯಾದ ವಿಜಯನ ತಾಯಿ ರಾಜೇಶ್ವರಿ , ವಾಡಿ ಠಾಣೆಗೆ ದೂರು ನೀಡಿದ್ದಾಳೆ. ಮುಸ್ಲಿಂ ಯುವತಿಯನ್ನು ನನ್ನ ಮಗ ಪ್ರೀತಿಸುತ್ತಿದ್ದು ಇದೇ ಕಾರಣಕ್ಕಾಗಿ ಆಕೆಯ ಕುಟುಂಬದವರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಜಯನನ್ನು ಪ್ರೀತಿಸುತ್ತಿದ್ದ ಯುವತಿಯ ಸಹೋದರ, ಕೊಲೆ ಆರೋಪಿ ಶಾಬುದ್ದಿನ್ ಹಾಗೂ ಆತನ ಸ್ನೇಹಿತ ಪರಾರಿಯಾಗಿದ್ದು ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.