ಡಿ.ಜೆ.ಹಳ್ಳಿಯ ಮೊಹಮ್ಮದ್ ಶಾಕೀಬ್, ಮೊಹಮ್ಮದ್ ಅಯಾನ್, ಅಹ್ಸಾನ್ ಅನ್ಸಾರಿ, ಸಲ್ಮಾನ್ ರಾಜ ಹಾಗೂ ದುಬೈನ ಯೂಸೇಫ್ ಶೇಠ್ ಬಂಧಿತರಾಗಿದ್ದು, ಆರೋಪಿಗಳಿಂದ ₹1.7 ಕೋಟಿ ನಗದು ಹಾಗೂ 7,700 ಯುಎಸ್ ಡಾಲರ್‌ಗಳ ನೋಟುಗಳು ಹಾಗೂ ವಂಚನೆ ಹಣದಲ್ಲಿ ಖರೀದಿಸಿದ್ದ ಬೆಂಜ್ ಕಾರನ್ನು ಜಪ್ತಿ ಮಾಡಲಾಗಿದೆ. ಈ ಸೈಬರ್ ಜಾಲದ ಕಿಂಗ್‌ಪಿನ್‌ಗಳಾದ ದುಬೈನಲ್ಲಿರುವ ನದೀಮ್ ಹಾಗೂ ಶಾಹೀಬ್ ಬಾನು ಪತ್ತೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆಸಿದೆ.
ಬೆಂಗಳೂರು(ಆ.17): ಡ್ರಗ್ಸ್ ಕೇಸ್ ದಾಖಲಿಸುವುದಾಗಿ ಹೆದರಿಸಿ ಸಾರ್ವಜನಿಕರನ್ನು ‘ಡಿಜಿಟಲ್ ಅರೆಸ್ಟ್’ಗೆ ಒಳಪಡಿಸಿ ಸುಲಿಗೆ ಮಾಡುತ್ತಿದ್ದ ದುಬೈ ಮೂಲದ ಸೈಬರ್ ವಂಚನೆ ಜಾಲದ ಐವರು ದುಷ್ಕರ್ಮಿಗಳು ಸಿಐಡಿ ಸೈಬರ್ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿ.ಜೆ.ಹಳ್ಳಿಯ ಮೊಹಮ್ಮದ್ ಶಾಕೀಬ್, ಮೊಹಮ್ಮದ್ ಅಯಾನ್, ಅಹ್ಸಾನ್ ಅನ್ಸಾರಿ, ಸಲ್ಮಾನ್ ರಾಜ ಹಾಗೂ ದುಬೈನ ಯೂಸೇಫ್ ಶೇಠ್ ಬಂಧಿತರಾಗಿದ್ದು, ಆರೋಪಿಗಳಿಂದ ₹1.7 ಕೋಟಿ ನಗದು ಹಾಗೂ 7,700 ಯುಎಸ್ ಡಾಲರ್‌ಗಳ ನೋಟುಗಳು ಹಾಗೂ ವಂಚನೆ ಹಣದಲ್ಲಿ ಖರೀದಿಸಿದ್ದ ಬೆಂಜ್ ಕಾರನ್ನು ಜಪ್ತಿ ಮಾಡಲಾಗಿದೆ. ಈ ಸೈಬರ್ ಜಾಲದ ಕಿಂಗ್‌ಪಿನ್‌ಗಳಾದ ದುಬೈನಲ್ಲಿರುವ ನದೀಮ್ ಹಾಗೂ ಶಾಹೀಬ್ ಬಾನು ಪತ್ತೆಗೆ ಸಿಐಡಿ ಕಾರ್ಯಾಚರಣೆ ಮುಂದುವರೆಸಿದೆ.
ನಗರದಲ್ಲಿ ಕಳ್ಳತನ, ಕಾಡಿನಲ್ಲಿ ವಾಸ: ಐನಾತಿ ಕಳ್ಳನ ಬಂಧನ
ಕೆಲ ದಿನಗಳ ಹಿಂದೆ ಕೊಡಗು ಜಿಲ್ಲೆಯ ಕಾಫಿ ಎಸ್ಟೇಟ್ ಮಾಲೀಕರೊಬ್ಬರಿಗೆ ಡ್ರಗ್ಸ್ ಕೇಸ್ ಹೆಸರಿನಲ್ಲಿ ಬೆದರಿಸಿ ಡಿಜಿಟಲ್ ಬಂಧನಕ್ಕೊಳಪಡಿಸಿ ₹2.71 ಕೋಟಿವನ್ನು ದುಷ್ಕರ್ಮಿಗಳು ವಸೂಲಿ ಮಾಡಿದ್ದರು. ಈ ಬಗ್ಗೆ ಮಡಿಕೇರಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆಗಿಳಿದ ಸಿಐಡಿ ಸೈಬರ್ ವಿಭಾಗದ ಇನ್‌ಸ್ಪೆಕ್ಟರ್ ಬಿ.ಸಿ.ಯೋಗೇಶ್ ಕುಮಾರ್ ನೇತೃತ್ವದ ಪಿಐಗಳಾದ ಜಿ.ಗುರುಪ್ರಸಾದ್ ಹಾಗೂ ವಿ.ಜಿ.ಮಂಜುನಾಥ್ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ವಂಚನೆ?:
ಜನರಿಗೆ ಫೆಡೆಕ್ಸ್ ಕಂಪನಿಗೆ ನಿಮ್ಮ ಹೆಸರಿನಲ್ಲಿ ಒಂದು ಪಾರ್ಸೆಲ್ ಬಂದಿದೆ. ಆ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವುದರಿಂದ ಆ ಪಾರ್ಸೆಲ್ ಅನ್ನು ಮುಟ್ಟುಗೋಲು ಹಾಕಲಾಗಿದೆ. ಈ ಬಗ್ಗೆ ನೀವು ಕ್ರೈಮ್ ಪೊಲೀಸ್ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಅಪರಿಚಿತರು ಫೆಡೆಕ್ಸ್ ಕೊರಿಯರ್ ಕಂಪನಿ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡುತ್ತಿದ್ದರು. ಆನಂತರ ವಾಟ್ಸ್‌ಆ್ಯಪ್ ಮೂಲಕ ಜನರಿಗೆ ಕ್ರೈಂ ಬ್ರಾಂಚ್ ಸೋಗಿನಲ್ಲಿ ಮಾತನಾಡಿ, ನಿಮ್ಮ ಪಾರ್ಸೆಲ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಪತ್ತೆ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದರು.
ಈ ಬ್ಲ್ಯಾಕ್‌ಮೇಲ್‌ಗೆ ಹೆದರಿ ಡಿಜಿಟಲ್ ಬಂಧನಕ್ಕೊಳಗಾದ ಸಂತ್ರಸ್ತರು ಹಣ ಕೊಡುತ್ತಿದ್ದರು. ಇದೇ ರೀತಿ ಡ್ರಗ್ಸ್ ಕೇಸ್ ನೆಪದಲ್ಲಿ ಮಡಿಕೇರಿ ಜಿಲ್ಲೆಯ ಕಾಫಿ ಎಸ್ಟೇಟ್ ಮಾಲಿಕನನ್ನು ಡಿಜಿಟಲ್ ಬಂಧನಕ್ಕೊಳಪಡಿಸಿ ₹2.21 ಕೋಟಿಯನ್ನು ಆರ್‌ಟಿಜಿಎಸ್ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಸಿಐಡಿಗೆ ಕೇಸ್ ವರ್ಗಾವಣೆ
ಈ ಹಣ ವಸೂಲಿ ಬಳಿಕ ಮತ್ತೆ ಎಸ್ಟೇಟ್ ಮಾಲೀಕನಿಗೆ ಸೈಬರ್ ವಂಚಕರ ಕಾಟ ಶುರುವಾಗಿದೆ. ಈ ಕರೆಗಳ ಬಗ್ಗೆ ಸಂಶಯಗೊಂಡ ಅವರು, ಮಡಿಕೇರಿ ಸಿಇಎನ್ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದರು. ತಮಗೆ ಫೆಡೆಕ್ಸ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಹಣ ಪಡೆದಿರುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.
ರಾಜ್ಯದಲ್ಲಿ ₹2 ಕೋಟಿಗೂ ಮಿಗಿಲಾದ ಸೈಬರ್ ವಂಚನೆ ಕೃತ್ಯಗಳನ್ನು ಸಿಐಡಿ ಸೈಬರ್ ವಿಭಾಗ ತನಿಖೆ ನಡೆಸಲಿದೆ. ಅಂತೆಯೇ ಮಡಿಕೇರಿ ಪ್ರಕರಣವನ್ನು ಸಿಐಡಿ ಎಸ್ಪಿ ಅನೂಪ್ ಶೆಟ್ಟಿ ಸಾರಥ್ಯದ ಸೈಬರ್ ವಿಭಾಗಕ್ಕೆ ತನಿಖೆಗೆ ಹಸ್ತಾಂತರವಾಯಿತು. ಈ ಬಗ್ಗೆ ಯೋಗೇಶ್ ನೇತೃತ್ವದಲ್ಲಿ ಎಸ್ಪಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗಿಳಿಸಿದರು.
ಹಣ ಒಯ್ಯಲು ಬಂದು ಸಿಕ್ಕಿಬಿದ್ದ
ಕಾಫಿ ಎಸ್ಟೇಟ್ ಮಾಲೀಕರ ಖಾತೆಯಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಗಳ ಬೆನ್ನತ್ತಿದ್ದ ವಂಚಕರ ಜಾಲದ ಸುಳಿವು ಸೈಬರ್ ಪೊಲೀಸರಿಗೆ ಸಿಕ್ಕಿದೆ. ಈ ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ಮುಂದುವರೆಸಿದಾಗ ಬೆಂಗಳೂರಿನಲ್ಲೇ ದುಬೈನ ಯೂಸೇಫ್ ಹಾಗೂ ಆತನ ತಂಡ ಸಿಕ್ಕಿಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗದು ಹಣ ಸಂಗ್ರಹಿಸಿದ್ದ ಸಹಚರರು:
ಸೈಬರ್ ವಂಚನೆಯಲ್ಲಿ ಸಂಪಾದಿಸಿದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಕೂಡಲೇ ಆರೋಪಿಗಳು ಡ್ರಾ ಮಾಡಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಸಹಚರ ಬಳಿ ಇದ್ದ ಹಣವನ್ನು ಒಯ್ಯಲು ದುಬೈನಿಂದ ನಗರಕ್ಕೆ ಯೂಸೇಫ್ ಬಂದಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶ ವ್ಯಾಪ್ತಿ ವಂಚನೆ ಜಾಲ:
ಈ ಆರೋಪಿಗಳ ವಂಚನೆ ಜಾಲವು ದೇಶ ವ್ಯಾಪ್ತಿ ಹರಡಿದ್ದು, ಇದುವರೆಗೆ ಬೆಂಗಳೂರು ಹಾಗೂ ಮಡಿಕೇರಿ ಸೇರಿದಂತೆ ದೇಶದ ವ್ಯಾಪ್ತಿ ವರದಿಯಾಗಿದ್ದ 19 ಪ್ರಕರಣಗಳು ಪತ್ತೆಯಾಗಿವೆ. ಇನ್ನು ತನಿಖೆ ಪ್ರಗತಿಯಲ್ಲಿದ್ದು, ಮತ್ತಷ್ಟು ಕೃತ್ಯಗಳು ಬಯಲಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ಜಾಲದ ಕಾರ್ಯನಿರ್ವಹಣೆ?
ಈ ಸೈಬರ್ ವಂಚನೆ ಜಾಲವು ವ್ಯವಸ್ಥಿತವಾದ ಸಂಘಟಿತ ಜಾಲವಾಗಿ ಕಾರ್ಯನಿರ್ವಹಿಸಿದೆ. ಈ ಜಾಲಕ್ಕೆ ದುಬೈನಲ್ಲಿರುವ ಬೆಂಗಳೂರು ಮೂಲದ ನದೀಮ್ ಹಾಗೂ ಬಾನು ಕಿಂಗ್‌ಪಿನ್‌ಗಳಾಗಿದ್ದು, ಮಧ್ಯವರ್ತಿಯಾಗಿ ದುಬೈನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಯೂಸೇಫ್ ಕೆಲಸ ಮಾಡುತ್ತಿದ್ದ. ಇನ್ನುಳಿದ ಡೆಲವರಿ ಬಾಯ್ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಾಕೀಬ್, ಅಯಾನ್, ಅನ್ಸಾರಿ ಹಾಗೂ ಸಲ್ಮಾನ್ ಹಣ ವರ್ಗಾವಣೆಗೆ ಬೇನಾಮಿ ಬ್ಯಾಂಕ್ ಖಾತೆಗಳ ಸೃಷ್ಟಿ ಹಾಗೂ ಆನ್‌ಲೈನ್‌ನ ವರ್ಗಾವಣೆ ಹಣವನ್ನು ನಗದು ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ನಾಲ್ವರಿಗೆ ತಲಾ ಬ್ಯಾಂಕ್ ಖಾತೆಗೆ 20 ರಿಂದ 30 ಸಾವಿರ ಕಮಿಷನ್ ಸಿಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕೊಡಗಿನಲ್ಲಿ ಅಕ್ರಮ ನಾಡ ಬಂದೂಕು ತಯಾರಿಸಿ ಮಾರಾಟ: ಮೂವರ ಬಂಧನ
ಟ್ರಾವೆಲ್ಸ್ ಬುಕ್ ಮಾಡಿದಾಗ ನಂಬರ್ ಸಂಗ್ರಹಿಸಿ ಕೃತ್ಯ
ಹಲವು ವರ್ಷಗಳಿಂದ ದುಬೈನಲ್ಲಿ ಡಿ.ಜೆ.ಹಳ್ಳಿಯ ಯೂಸೇಫ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದಾನೆ. ತನ್ನ ಟ್ರಾವೆಲ್ಸ್ ಸಂಸ್ಥೆಯ ಸೇವೆ ಪಡೆಯುವ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಬಳಿಕ ಅವುಗಳನ್ನು ಸೈಬರ್ ವಂಚನೆಗೆ ಆತ ಬಳಸುತ್ತಿದ್ದ ಎಂಬ ತನಿಖೆಯಲ್ಲಿ ಸಂಗತಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗದು-ಬೆಂಜ್ ಕಾರು ಜಪ್ತಿ:
ವಂಚನೆ ಹಣದಲ್ಲಿ ಕಿಂಗ್‌ಪಿನ್ ಶಾಹೀಬ್ ಬಾನು ಖರೀದಿಸಿದ್ದ ಕೋಟಿ ಮೌಲ್ಯದ ಬೆಂಜ್ ಕಾರನ್ನು ಡಿ.ಜೆ.ಹಳ್ಳಿ ಸಮೀಪದ ಆತನ ಮನೆಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.