ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಬಿಜೆಪಿ ಯುವ ಕಾರ್ಯಕರ್ತರ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಎನ್‌ಐಎಗೆ ಮಹತ್ವದ ಸೂಚನೆ ಕೊಟ್ಟಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು, (ಆಗಸ್ಟ್.05): ರಾಜ್ಯಾದ್ಯಂತ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಯುವ ಮೋರ್ಛಾದ ಪದಾಧಿಕಾರಿ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ನೀಡಿದೆ.ಕೇಂದ್ರ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಅ .3 ರಂದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಿಗೆ ಪತ್ರ ಬರೆದು ಆದೇಶಿಸಿದ್ದಾರೆ. ಭಾರತ ಸರಕಾರದ ಗೃಹ ಸಚಿವಾಲಯವು ಈ ಅದೇಶವನ್ನು ಹೊರಡಿಸಿದ್ದು, ಅದರ ಪ್ರತಿಯನ್ನು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೂ ರವಾನಿಸಲಾಗಿದೆ.
ಈ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ, 2008 ರ ಅಡಿಯಲ್ಲಿ ಬರುವ ಅಪರಾಧ ಎಂಬ ಅಭಿಪ್ರಾಯಕ್ಕೆ ಕೇಂದ್ರ ಸರಕಾರವು ಬಂದಿದೆ. ಅಪರಾಧದ ಗಂಭೀರತೆ ಮತ್ತು ಅದರ ಅಂತರ್ ರಾಜ್ಯ ಪರಿಣಾಮಗಳನ್ನು ಪರಿಗಣಿಸಿ, ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ರ ಪ್ರಕಾರ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಆದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ, 2008 ರ ಸೆಕ್ಷನ್ 8 ರೊಂದಿಗೆ ಓದಲಾದ ಸೆಕ್ಷನ್ 6 ರ ಉಪ-ವಿಭಾಗ (4) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಕೇಂದ್ರ ಸರ್ಕಾರವು ಈ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈವರೆಗೆ ಪ್ರಕರಣದಲ್ಲಿ ಪರೋಕ್ಷ ಭಾಗಿಯಾದ ನಾಲ್ವರ ಬಂಧಿಸಿರುವ ಬೆಳ್ಳಾರೆ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳನ್ನ ಪತ್ತೆ ಮಾಡಿಲ್ಲ. ಎನ್.ಐ.ಎ ತಂಡ ಬೆಳ್ಳಾರೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರೂ ಅಧಿಕೃತ ತನಿಖೆ ಆರಂಭಿಸಿರಲಿಲ್ಲ. ಇದೀಗ ಗೃಹ ಇಲಾಖೆ ಸೂಚನೆ ಬೆನ್ನಲ್ಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ.
News Hour: ಪ್ರವೀಣ್ ನೆಟ್ಟಾರು ಹಂತಕರ ಬೇಟೆಗಿಳಿದ NIA: ಸರಣಿ ಹತ್ಯೆ ವರದಿ ಪಡೆದ ಅಮಿತ್ ಶಾ
ಏನಿದು ಪ್ರಕರಣ?
ಪ್ರವೀಣ್ ನೆಟ್ಟಾರ್ ಅವರು ಬೆಳ್ಳಾರೆಯಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಎಂಬ ಕೋಳಿ ಅಂಗಡಿಯನ್ನು ನಡೆಸುತ್ತಿದ್ದರು. ಜು 26 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರವೀಣ್ ತನ್ನ ಬೈಕ್ ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್ ವೊಂದರಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ದಾಳಿ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕಿ ಉಳಿಯಲಿಲ್ಲ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರವೀಣ್ ಅವರ ಅಂಗಡಿಯಲ್ಲಿ ಕೋಳಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧು ಕುಮಾರ್ ರಾಯನ್ ಎಂಬವರು ದೂರು ನೀಡಿದ್ದರು.