ಬುದ್ಧಿಮಾಂದ್ಯ ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುರಿಹಟ್ಟಿ ಗ್ರಾಮದಲ್ಲಿ ನಡೆದ ಘಟನೆ| ಗರ್ಭಿಣಿ ಬಾಲಕಿಗೆ ತೀವ್ರ ರಕ್ತಸ್ರಾವ ಆಗಿರುವ ಕಾರಣ ಬಳ್ಳಾರಿ ವಿಮ್ಸ್‌ನಲ್ಲಿ ಅಗತ್ಯ ಚಿಕಿತ್ಸೆ| ಅಣ್ಣನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು|
ಕೂಡ್ಲಿಗಿ(ನ.04): ಬುದ್ಧಿಮಾಂದ್ಯ ಅಣ್ಣನೊಬ್ಬ ಒಡಹುಟ್ಟಿದ ತಂಗಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪರಿಣಾಮ ಆ ಬಾಲಕಿ ಗರ್ಭಿಣಿ ಆಗಿರುವ ಆಮಾನವೀಯ ಮತ್ತು ಅಸಹ್ಯಕರ ಘಟನೆ ತಾಲೂಕಿನ ಹೊಸಹಳ್ಳಿ ಠಾಣಾ ವ್ಯಾಪ್ತಿಯ ಕುರಿಹಟ್ಟಿ ಗ್ರಾಮದಲ್ಲಿ ಜರುಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಸಮಾಜದಲ್ಲಿ ತಂಗಿಯ ಮಾನ ರಕ್ಷಿಸುವ ಜವಾಬ್ದಾರಿ ಹೆತ್ತವರು, ಅಣ್ಣ ತಮ್ಮಂದಿರ ಮೇಲೆ ಇರುತ್ತದೆ. ಆದರೆ, ಇಂತಹ ಕರ್ತವ್ಯ ಮರೆತ 19 ವರ್ಷದ ಬುದ್ಧಿಮಾಂದ್ಯ ಅಣ್ಣನೊಬ್ಬ, 9ನೇ ತರಗತಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾನೆ.
90 ವರ್ಷದ ವೃದ್ಧೆ ಮೇಲೆ ಇಬ್ಬರಿಂದ ಸಾಮೂಹಿಕ ಅತ್ಯಾಚಾರ!
ಬಾಲಕಿಯು ಅತ್ಯಾಚಾರದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ತಿಳಿಸಿಲ್ಲ. ಅಲ್ಲದೆ ಅವಳಿಗೆ ಇತ್ತೀಚಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು ಹೆತ್ತವರು ಮಗಳನ್ನು ವೈದ್ಯರ ಬಳಿ ಹೋಗಿ ಪರೀಕ್ಷಿಸಿದಾಗ ಗರ್ಭಿಣಿ ಆಗಿರುವುದು ಪರೀಕ್ಷೆ ಮೂಲಕ ದೃಢಪಡಿಸಿದ್ದಾರೆ. ನನ್ನ ಬುದ್ಧಿಮಾಂದ್ಯ ಅಣ್ಣನೇ ಕಾರಣವೆಂದು ತಂಗಿ ಒಪ್ಪಿಕೊಂಡಿದ್ದಾಳೆ.
ಸದ್ಯ ಗರ್ಭಿಣಿ ಬಾಲಕಿಗೆ ತೀವ್ರ ರಕ್ತಸ್ರಾವ ಆಗಿರುವ ಕಾರಣ ಬಳ್ಳಾರಿ ವಿಮ್ಸ್‌ನಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿ ಬಾಲಮಂದಿರದಲ್ಲಿ ಹಾರೈಕೆ ಮಾಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೂಚನೆಯಂತೆ ಕೂಡ್ಲಿಗಿ ಸಿಡಿಪಿಒ ನೀಡಿದ ಲಿಖಿತ ದೂರಿನಂತೆ ಹೊಸಹಳ್ಳಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಅಣ್ಣನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.