Latest Videos

ಹತ್ಯೆ ದಿನ ನಟ ದರ್ಶನ್‌ ಬಳಸಿದ್ದ ವಸ್ತುಗಳಲ್ಲಿ ರಕ್ತದ ಕಲೆ ಪತ್ತೆ!

By Kannadaprabha NewsFirst Published Jun 17, 2024, 6:26 AM IST
Highlights

ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂದರ್ಭದಲ್ಲಿ ನಟ, ಆರೋಪಿ ದರ್ಶನ್‌ ಧರಿಸಿದ್ದ ಬಟ್ಟೆಗಳು, ಶೂಗಳು ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡಿರುವ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 

ಬೆಂಗಳೂರು (ಜೂ.17): ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂದರ್ಭದಲ್ಲಿ ನಟ, ಆರೋಪಿ ದರ್ಶನ್‌ ಧರಿಸಿದ್ದ ಬಟ್ಟೆಗಳು, ಶೂಗಳು ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡಿರುವ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಪೈಕಿ ಕೆಲ ವಸ್ತುಗಳಲ್ಲಿ ರಕ್ತದ ಕಲೆ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಈ ರಕ್ತ ಯಾರದ್ದು ಎನ್ನುವುದು ಪರೀಕ್ಷೆಯ ಬಳಿಕವಷ್ಟೇ ಖಚಿತವಾಗಲಿದೆ. ಶುಕ್ರವಾರ ತಡರಾತ್ರಿ ಆರೋಪಿ ದರ್ಶನ್‌ನನ್ನು ರಾಜರಾಜೇಶ್ವರಿನಗರದ ನಿವಾಸಕ್ಕೆ ಕರೆದೊಯ್ದಿದ್ದ ಪೊಲೀಸರು, ಸ್ಥಳ ಮಹಜರು ನಡೆಸಿ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 

ರೇಣುಕಾಸ್ವಾಮಿಯ ಕೊಲೆ ಬಳಿಕ ಮೃತದೇಹವನ್ನು ವಿಲೇವಾರಿ ಮಾಡುವಂತೆ ಸಹಚರರಿಗೆ ಸೂಚಿಸಿದ್ದ ದರ್ಶನ್‌ ಬಳಿಕ ತಮ್ಮ ನಿವಾಸಕ್ಕೆ ಬಂದಿದ್ದರು. ನಂತರ ತಾನು ಧರಿಸಿದ್ದ ಬಟ್ಟೆಗಳನ್ನು ಕಳಚಿ ಸ್ನಾನ ಮಾಡಿ ಮೈಸೂರಿನತ್ತ ಪ್ರಯಾಣಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ದರ್ಶನ್‌ನನ್ನು ಮನೆಗೆ ಕರೆತಂದು ಘಟನೆ ದಿನ ಅವರು ಧರಿಸಿದ್ದ ಬಟ್ಟೆ, ಶೂ, ಸ್ನಾನ ಮಾಡಿದ್ದ ಬಕೆಟ್‌, ಮಗ್‌ ಸೇರಿದಂತೆ ಕೆಲವೊಂದು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ವಸ್ತುಗಳಲ್ಲಿ ಕೆಲವೊಂದು ರಕ್ತದ ಕಲೆಗಳು ಕಂಡು ಬಂದಿದ್ದು, ಪೊಲೀಸರು ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್‌ರನ್ನು ಬಂಧಿಸಿದ್ದ ಇನ್ಸ್‌ಪೆಕ್ಟರ್‌ ನಾಯ್ಕ್‌ ತನಿಖಾ ತಂಡಕ್ಕೆ ಸೇರ್ಪಡೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಮರು ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್‌ ಕುಮಾರ್‌ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಇದೀಗ ಗಿರೀಶ್‌ ನಾಯ್ಕ್‌ ಅವರನ್ನು ಈ ಪ್ರಕರಣದ ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಲೋಕಸಭಾ ಚುನಾವಣೆ ವೇಳೆ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು. 

ರೇಣುಕಾಸ್ವಾಮಿಗೆ ವಿದ್ಯುತ್‌ ಶಾಕ್‌ ಕೊಟ್ಟಿದ್ದು ಬೆಂಗಳೂರಿನ ಬಿಜೆಪಿ ಶಾಸಕರ ಸಂಬಂಧಿ ದೀಪಕ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಗಿರೀಶ್‌ ನಾಯ್ಕ್‌ ಅವರೇ ತನಿಖಾಧಿಕಾರಿಯಾಗಿದ್ದರು. ಆರೋಪಿಗಳಾದ ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದರು. ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಗಿರೀಶ್‌ ನಾಯ್ಕ್‌ ಅವರನ್ನು ತನಿಖಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ, ಸಿ.ಕೆ.ಅಚ್ಚುಕಟ್ಟು ಠಾಣೆಗೆ ಮರು ವರ್ಗಾಯಿಸಿ, ಎಸಿಪಿ ಚಂದನ್‌ ಕುಮಾರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಇದೀಗ ಸಹಾಯಕ ತನಿಖಾಧಿಕಾರಿಯಾಗಿ ಗಿರೀಶ್‌ ನಾಯ್ಕ್‌ ಅವರನ್ನು ನೇಮಿಸಲಾಗಿದೆ.

click me!