ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಮಾರ್ಚ್ 22 ) : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಸಂಬಂಧ ಎಲ್ಲ ಆರೋಪಿಗಳು ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
undefined
ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಪಿಎಸೈ ಗೋಪಾಲ್ ಹಳ್ಳೂರ್, ಸಿಪಿಐ ಮಲ್ಲಿಕಾರ್ಜುನ್ ಅಸೋಡೆ, ಮೂವರು ಪೊಲೀಸ್ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಒಟ್ಟು 17 ಆರೋಪಿಗಳಿದ್ದು, ಇದ್ರಲ್ಲಿ 6 ನೇ ಆರೋಪಿ ಬಾಬು ಕಚನಾಳರ್ ಊರ್ಫ್ ಮೆಂಬರ್ ಮಹಾದೇವ ಬೈರಗೊಂಡ ಮೇಲೆ ನಡೆದ ಚಡಚಣ ಗ್ಯಾಂಗ್ ಅಟ್ಯಾಕ್ ವೇಳೆ ಸಾವನ್ನಪ್ಪಿದ ಕಾರಣ 16 ಆರೋಪಿಗಳು ಇಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದರು.
ಜಿಲ್ಲಾ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ!: ಹಂತಕ ಧರ್ಮರಾಜ್, ಸಹೋದರ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ನ್ಯಾಯಾಲಯಕ್ಕೆ ಹಾಜರಾಗ್ತಿರೋ ಹಿನ್ನೆಲೆಯಲ್ಲಿ ವಿಜಯಪುರ ಉಪವಿಭಾಗದ ಅಧಿಕಾರಿಗಳು ಪುಲ್ ಅಲರ್ಟ್ ಆಗಿದ್ದರು. ಜಿಲ್ಲಾ ನ್ಯಾಯಾಲಯದ ಎದುರು ಸಂಪೂರ್ಣ ಭದ್ರತೆಯನ್ನು ಕೈಗೊಂಡಿದ್ದರು. ಕೋರ್ಟ್ ಆವರಣಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಟ್ಟಿದ್ದರು. ಕೋರ್ಟ್ ಆವರಣಕ್ಕೆ ಬರುವ ಯುವಕರ ಬ್ಯಾಗ್, ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿರುವುದು ಕಂಡು ಬಂತು. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಇನ್ನು ಕೋರ್ಟ್ ಆವರಣದಲ್ಲಿ ಮಾಧ್ಯಮಗಳಿಗೆ ನಿರ್ಭಂದ ಹೇರಲಾಗಿತ್ತು.
ವಿಚಾರಣೆಗೆ ಓಕೆ ಇಷ್ಟೊಂದು ಭದ್ರತೆ ಯಾಕೆ?: ಭೀಮಾತೀರದಲ್ಲಿ ನಾಲ್ಕೈದು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಬೆಳೆದುಕೊಂಡು ಬಂದಿದೆ. ಇನ್ನು ಕಳೆದ 2017ರ ಸೆಪ್ಟೆಂಬರ್ 31 ರಂದು ಚಡಚಣ ಮಲ್ಲಿಕಾಜೀ ಮಕ್ಕಳಾದ ಧರ್ಮರಾಜ್ ಮೇಲೆ ಆಗಿನ ಚಡಚಣ ಪಿಎಸೈ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದ. ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಈ ಎರಡು ಪ್ರಕರಣಗಳನ್ನು ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.
ಕಳೆದ 2020ರ ನವೆಂಬರ್ 2ರಂದು ಇದೇ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್ ಬಳಿ ಚಡಚಣ ಗ್ಯಾಂಗ್ ನ ಹುಡುಗರು ಅಟ್ಯಾಕ್ ನಡೆಸುವ ಮೂಲಕ ಧರ್ಮರಾಜ್ ಚಡಚಣ, ಗಂಗಾಧರ ಚಡಚಣ ಹತ್ಯೆ ಪ್ರತಿಕಾರಕ್ಕೆ ಯತ್ನಸಿದ್ದರು. ಹೀಗಾಗಿ ಬೈರಗೊಂಡ ಕೋರ್ಟ್ ಗೆ ಹಾಜರಾಗುವ ವೇಳೆ ಮತ್ತೆ ಚಡಚಣ ಗ್ಯಾಂಗ್ ಅಟ್ಯಾಕ್ ಮಾಡುವ ಭೀತಿ ಬೈರಗೊಂಡನಿಗಿದ್ದು, ಈ ಹಿನ್ನೆಲೆ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಯನ್ನು ನೀಡಿದೆ..!
ಹತ್ತಾರು ಐಶಾರಾಮಿ ಕಾರುಗಳಲ್ಲಿ ಬಂದ ಆರೋಪಿಗಳು!: ಇನ್ನು ಇಂದು ಚಡಚಣ ಸಹೋದರರ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಮಹಾದೇವ ಬೈರಗೊಂಡ ಕೋರ್ಟ್ ಗೆ ಹಾಜರಾಗಲು ಬಂದಾಗ ಆತನ ಬೆನ್ನಿಗೆ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ರು. ಜೊತೆಗೆ ಪ್ರಕರಣದ 16 ಆರೋಪಿಗಳೆಲ್ಲ ಐಶಾರಾಮಿ ಕಾರುಗಳಲ್ಲೆ ಕೋರ್ಟ ಆವರಣಕ್ಕೆ ಬಂದ್ರು. ಮಹಾದೇವ ಬೈರಗೊಂಡ ಕಾರಿನ ಎದುರಿಗೆ ಪೊಲೀಸ್ ವಾಹನ ಇದ್ರೆ ಹಿಂದೆ ಕಾರುಗಳಲ್ಲಿ ಆರೋಪಿಗಳು, ಬೆಂಬಲಿಗರು ಆಗಮಿಸಿದ್ದರು. ಇಡಿ ದೃಶ್ಯಾವಳಿ ಸಿನಿಮಾ ರೀತಿಯಲ್ಲಿ ಕಂಡು ಬಂದಿತ್ತು. ಇನ್ನು ಮಹಾದೇವ ಬೈರಗೊಂಡ ಕೋರ್ಟ್ ಹಾಜರಾಗೋದನ್ನು ನೋಡೋದಕ್ಕಾಗಿಯೇ ಯುವಕರು ಕೋರ್ಟ್ ಆವರಣ ಸುತ್ತ ಸೇರಿದ್ದು ಕಂಡು ಬಂತು.
ವಿಜಯಪುರ ಉಪವಿಭಾಗದ ಪೊಲೀಸರಿಗೆ ಹೊಸ ತಲೆನೋವು!: ಇಂದು ಎಲ್ಲ ಆರೋಪಿಗಳ ಹಾಜರಾತಿ ಖಾತರಿ ಪಡೆಸಿಕೊಂಡಿರುವ ಜಿಲ್ಲಾ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದೆ. ಬರುವ ಜೂನ್ 8ಕ್ಕು ಮತ್ತೆ ಮಹಾದೇವ ಬೈರಗೊಂಡ ಸೇರಿ ಉಳಿದೆಲ್ಲ ಆರೋಪಿಗಳು ಜಿಲ್ಲಾ ನ್ಯಾಯಲಾಯಕ್ಕೆ ಹಾಜರಾಗಬೇಕಾಗುತ್ತೆ. ಈ ನಡುವೆ ಮಹಾದೇವ ಬೈರಗೊಂಡ ಆರೋಪಿಯಾಗಿರೋ ಈ ಪ್ರಕರಣ ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು ವಿಜಯಪುರ ಉಪ ವಿಭಾಗದ ಪೊಲೀಸರಿಗೆ ತಲೆ ನೋವು ತಂದಿಟ್ಟಿದೆ.
ಪ್ರತಿಬಾರಿ ಮಹಾದೇವ ಬೈರಗೊಂಡ ಕೋರ್ಟ್ ಗೆ ಹಾಜರಾದಾಗ ಆತನ ಭದ್ರತೆ ಕೈಗೊಳ್ಳುವ, ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಜವಾಬ್ದಾರಿ ಪೊಲೀಸರ ಮೇಲಿರುತ್ತೆ. ಮೊದಲೇ ಮಹಾದೇವ ಬೈರಗೊಂಡನ ವಿರುದ್ಧ ಪ್ರತಿಕಾರಕ್ಕೆ ಹಾತೊರೆಯೋ ಚಡಚಣ ಮಲ್ಲಿಕಾಜೀ ಗ್ಯಾಂಗ್ ಯಾವ ಕ್ಷಣದಲ್ಲಾದ್ರು ಅಟ್ಯಾಕ್ ಮಾಡುವ ಸಾಧ್ಯತೆಗಳು ಇರುತ್ವೆ. ಹೀಗಾಗಿ ಪ್ರತಿ ಬಾರಿಯು ಬೈರಗೊಂಡನಿಗೆ ಭದ್ರತೆ ನೀಡುವುದು ವಿಜಯಪುರ ಉಪ ವಿಭಾಗದ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.