ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಭರವಸೆ ನೀಡಿ ಲಾಡ್ಜ್‌ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಗರ್ಭಿಣಿ ಆದಾಗಲೆಲ್ಲಾ ಅಬಾರ್ಷನ್ ಮಾಡಿಸುತ್ತಾ ಬಂದಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ನೆಲಮಂಗಲ (ಡಿ.01): ಇನ್‌ಸ್ಟಾಗ್ರಾಮ್ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರನ್ನು ಪ್ರೀತಿಯಿಂದ ಚಿನ್ನ, ರನ್ನ ಎಂದೆಲ್ಲಾ ಮರಳು ಮಾಡಿ ಲಾಡ್ಜ್‌ಗೆ ಕರೆದೊಯ್ಯುವ ಶ್ರೀಕಾಂತ, ಯುವತಿಯನ್ನು ಗರ್ಭಿಣಿ ಮಾಡಿದ ನಂತರ ಮದುವೆಯಾಗು ಎಂದರೆ ಕೈ ಕೊಟ್ಟು ಹೋಗ್ತಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಲೈಫ್‌ನಲ್ಲಿ ಸೆಟಲ್ ಆಗೋವರೂ ಮಗು ಬೇಡವೆಂದು ನಾಲ್ಕೈದು ಬಾರಿ ಅಬಾರ್ಷನ್ ಮಾಡಿಸಿ ಪುನಃ ಲೈಂಗಿಕ ಕ್ರಿಯೆಗೆ ಬಳಸಿಕೊಂಡು ಯುವತಿಯರ ಜೀವನ ಹಾಳು ಮಾಡಿದ್ದಾನೆ.
ಹೌದು, ಮೊಬೈಲ್ ಬಳಸುವ ಯುವತಿಯರೇ ಎಚ್ಚರವಾಗಿರಿ. ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗುವ ಯುವಕರ ಬಗ್ಗೆ ಭಾರೀ ಎಚ್ಚರಿಕೆವಹಿಸಬೇಕು. ಇಲ್ಲವೆಂದರೆ ನಿಮ್ಮ ಜೀವನವೇ ಹಾಳಾಗಬಹುದು. ಇಲ್ಲೊಬ್ಬ ಯುವಕ ಶ್ರೀಕಾಂತ್ ಎನ್ನುವವನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಗೆ ಚಿನ್ನಾ, ರನ್ನ, ಬಂಗಾರ ಎಂದೆಲ್ಲಾ ಮಾತನಾಡಿ ಬುಟ್ಟಿಗೆ ಬೀಳಿಸಿಕೊಂಡು ಕೈಗೊಂದು ಪಾಪು ಕೊಡಲು ಯತ್ನಿಸಿದ್ದಾನೆ. ಹೀಗಾಗಿ, ಯುವತಿ ಇನ್‌ಸ್ಟಾಗ್ರಾಮ್‌ನಿಂದ ಲಾಡ್ಜ್ ರೂಮಿಗೆ ಬರುವವರೆಗೂ ಚಿನ್ನ, ರನ್ನ ಎಂದು ಹೇಳುತ್ತಾ ನಂತರ ಆಕೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ.
ಈತ ಬೆಂಗಳೂರಿನ ತಾವರೆಕೆರೆ ಬಳಿಯ ಹೊಸಪಾಳ್ಯದ ಯುವಕ ಶ್ರೀಕಾಂತ. ಆಕೆ, ನೆಲಮಂಗಲದ ಬಳಿಯ ಮಧ್ಯಮ ಕುಟುಂಬದ ಯುವತಿ. ಇನ್‌ಸ್ಟಾಗ್ರಾಮ್ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸಿದ್ದಾನೆ. ಚಾಟಿಂಗ್ ಮಾಡುತ್ತಾ ಬಣ್ಣದ ಮಾತನಾಡಿ ಪ್ರೀತಿಯ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ. ನಂತರ ಬೆಂಗಳೂರಿನಲ್ಲಿ ಪಾರ್ಕ್, ಸಿನಿಮಾ ಎಂದೆಲ್ಲಾ ಸುತ್ತಾಡಿದ ನಂತರ ಯುವತಿಗೆ ಮದುವೆ ಮಾಡಿಕೊಳ್ಳುವ ಭರವಸೆ ನೀಡಿದ್ದಾನೆ. ಆದರೆ, ಅದಕ್ಕೂ ಮುಂಚಿತವಾಗಿ ಲೈಫ್‌ನಲ್ಲಿ ಸೆಟಲ್ ಆಗಬೇಕು ಎಂದು ಹೇಳಿದ್ದಾನೆ.
ಇದನ್ನೂ ಓದಿ: ಕುಂಟನ ಕಾಮಕ್ಕೆ ಬಲಿಯಾದ ವಿದ್ಯಾರ್ಥಿನಿ: ಒಂಟಿ ಕಾಲಿನ ಪೋಲಿಯೊ ಪೀಡಿತ ಸರಣಿ ಹಂತಕ ಆಗಿದ್ದು ಹೇಗೆ?
ನಂತರ, ನಿನ್ನ ಬಿಟ್ಟಿರಲು ಸಾಧ್ಯ ಆಗುತ್ತಿಲ್ಲ ಎಂದೇಳಿ ನೆಲಮಂಗಲದ ಜಯಸೂರ್ಯ ಹಾಗೂ ಬೈರವ ಲಾಡ್ಜ್‌ಗಳಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ. ಈ ಮಧ್ಯೆ ಯುವತಿ ಗರ್ಭಿಣಿ ಆಗುತ್ತಾಳೆ. ಆಗ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಾಗ ಅಳುತ್ತಾ ನಾಟಕ ಮಾಡಿ ಲೈಪ್‌ನಲ್ಲಿ ಸೆಟಲ್ ಆಗಿಲ್ಲವೆಂದು ಮಗುವನ್ನು ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸುತ್ತಾನೆ. ಪುನಃ ಯುವತಿ ಪುಸಲಾಯಿಸಿ ಮತ್ತೆ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರು, ನೆಲಮಂಗಲ ಸೇರಿದಂತೆ ವಿವಿಧ ಲಾಡ್ಜ್‌ಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಆದಾಗಲೆಲ್ಲಾ ಅಬಾರ್ಷನ್ ಮಾಡಿಸುತ್ತಾ ಬಂದಿದ್ದಾನೆ.
ಇದೀಗ ಯುವತಿ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದು, ನೀನೇ ನನ್ನನ್ನು ಮದುವೆ ಮಾಡಿಕೊಳ್ಳಬೇಕು ಎಂದಿದ್ದಕ್ಕೆ ಆಕೆಗೆ ಜಾತಿನಿಂದನೆ ಮಾಡುತ್ತಾ ಹಲ್ಲೆಯನ್ನೂ ಮಾಡಿದ್ದಾನೆ. ನಂತರ, ಯುವತಿ ತಾನು ಮೋಸ ಹೋಗಿದ್ದಾಗಿ ತಿಳಿದು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರೀಕಾಂತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ನಂತರ, ನೆಲಮಂಗಲದಲ್ಲಿ ಯುವತಿ ಮೇಲೆ ಅತ್ಯಾಚಾರ ಮಾಡಿದ ಲಾಡ್ಜ್‌ಗಳಿಗೆ ಕರೆದೊಯ್ದು ಸ್ಥಳ ಮಹಜರ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಸ್ಸಾಂ ಹುಡುಗಿ ಕೊಲೆಗೈದ ಕೇರಳದ ಆರವ್ ಅರೆಸ್ಟ್; ಕೊಲೆನ ಕೇಸಿಗೆ ಸಿಕ್ತು ಬಿಗ್ ಟ್ವಿಸ್ಟ್!