ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

By Sathish Kumar KH  |  First Published Jan 30, 2024, 10:31 PM IST

ಮದುವೆಯಾಗಿ ಕೇವಲ 30 ದಿನಕ್ಕೆ ಓಡಿಹೋದ ಹೆಂಡತಿ ಹಾಗೂ ಆಕೆಯ ಪ್ರಿಯಕರನನ್ನು ಹುಡುಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.


ಬೆಳಗಾವಿ (ಜ.30): ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಂದುಳ್ಳಿ ಚಲುವೆ ಮದುವೆಗೂ ಮೊದಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆದರೆ, ಮನೆಯವರ ಬಲವಂತಕ್ಕೆ ಪ್ರೀತಿ ಮುಚ್ಚಿಟ್ಟು ಮದುವೆಯಾದ ಹೆಂಡತಿ ತನ್ನ ಹಳೇ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡಿಕೊಂಡ ಗಂಡ ಇಬ್ಬರೂ ಚೆನ್ನಾಗಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೇ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಹೌದು, ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಕೈಕೊಟ್ಟು ಓಡಿ ಹೋದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಯಾಸಿನ ಬಾಗೊಡೆ (21) ಹಾಗೂ ಹೀನಾಕೌಸರ್  ಸುದಾರಾಣೆ (19) ಕೊಲೆಯಾದ ಜೋಡಿಯಾಗಿದ್ದಾರೆ. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇನ್ನು ಇಬ್ಬರ ಮೇಲೆ ಹಲ್ಲೆ ಮಾಡುವ ವೇಳೆ ಬಿಡಿಸಲು ಬಂದಿದ್ದ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಈ ಇಬ್ಬರನ್ನು ಮಿರಜ್  ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಬಲ್ ಮರ್ಡರ್ ಮಾಡಿದ ಆರೋಪಿ ತೌಫಿಕ್ ಸ್ಥಳದಿಂದ ಪರಾರಿ ಆಗಿದ್ದಾನೆ.

Tap to resize

Latest Videos

ಗೃಹ ಸಚಿವರ ತವರಲ್ಲಿ 1ನೇ ತರಗತಿ ಬಾಲಕಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ

ತೌಫಿಕ್ ಹಾಗೂ ಹೀನಾ ಕೌಸರ್‌ಳಿಗೆ ಕಳೆದ 4 ತಿಂಗಳ ಹಿಂದೆ ಮದುವೆಯಾಗಿತ್ತು. ಮದುವೆಯಾಗಿ ಕೇವಲ 1 ತಿಂಗಳಿಗೆ (30 ದಿನಗಳು) ಹೆಂಡತಿ ಹೀನಾ ಕೌಸರ್ ಆಕೆಯ ಹಳೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಇದಾದ ಬಳಿಕ ಪುನಃ ಅವರನ್ನು ಮನೆಯವರು ಹುಡುಕಿ ಸಮಾಜದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದ್ದರು. ಈ ವೇಳೆ ತಾನು ತೌಫಿಕ್‌ ಜೊತೆಗೆ ಸಂಸಾರ ಮಾಡುವುದಕ್ಕೆ ಇಷ್ಟವಿಲ್ಲ, ಯಾಸೀನ್‌ನೇ ಬೇಕು ಎಂದು ಹೀನಾ ಹಠ ಮಾಡಿದ್ದಾಳೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ತೌಫಿಕ್‌ ಜೊತೆಗಿನ ವಿವಾಹವನ್ನು ಮುರಿದು ಯಾಸಿನ್ ಬಾಗೊಡೆ ಜೊತೆಗೆ ಹಿರಿಯರೆಲ್ಲರು ಸೇರಿ ಮದುವೆ ಮಾಡಿಸಿದ್ದರು.

ಜೀವನದಲ್ಲಿ ಹೇಗೆಲ್ಲಾ ಇರಬೇಕು ಎಂದು ಕನಸು ಕಟ್ಟಿಕೊಂಡು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಮದುವೆಯಾದ ಹೆಂಡತಿ ಕೇವಲ ಒಂದು ತಿಂಗಳಿಗೆ ಬೇರೊಬ್ಬನ ಜೊತೆಗೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಾಳೆ. ಇದನ್ನು ಕಂಡು ಸಹಿಸಿಕೊಳ್ಳಲಾಗದ ತೌಫಿಕ್‌ ತನ್ನ ಮಾಜಿ ಪತ್ನಿ ಹಾಗೂ ಆಕೆಯ ಹಾಲಿ ಗಂಡನನ್ನು ಹುಡುಕಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಇಬ್ಬರನ್ನು ಕೊಲೆ ಮಾಡಿದ ಬಳಿಕ ತಾನು ನೇರವಾಗಿ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದ ತೌಫಿಕ್ ಅಲ್ಲಿಂದ ಪರಾರಿ ಆಗಿದ್ದಾನೆ.

Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

ಡಬಲ್ ಮರ್ಡರ್ ನಡೆದ ಸ್ಥಳಕ್ಕೆ ಐಗಳಿ ಠಾಣೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ. ಈಗ ಆರೋಪಿ ತೌಫಿಕ್‌ನ ಪತ್ತೆಗಾಗಿ ಪೊಲೀಸರು ಎರಡೂ ತಂಡಗಳಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ, ಈ ಪ್ರೇಮ ಹಾಗೂ ವಿವಾಹ ಪ್ರಕರಣದಲ್ಲಿ ಯಾರದ್ದು ತಪ್ಪು ಎಂದು ಹೇಳಲು ಬರುವುದಿಲ್ಲವಾದರೂ, ಕಾನೂನಿನ ರೀತಿಯಲ್ಲಿ ಕೊಲೆ ಮಾಡಿದ್ದಂತೂ ದೊಡ್ಡ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ.

click me!