ಕ್ಷೌರಿಕನಿಂದ ಕೊಲೆ, 50 ರೂ ಇದ್ದಿದ್ದರೆ ದಲಿತ ಜೀವ ಉಳಿಯುತ್ತಿತ್ತು, ಹಮಾಲಿ ಮಾಡಿ ಮನೆಗೆ ಆಸರೆಯಾಗಿದ್ದವ ಕೊಲೆಯಾದ!

By Gowthami K  |  First Published Aug 19, 2024, 6:57 PM IST

ಕೊಪ್ಪಳ ಜಿಲ್ಲೆಯಲ್ಲಿ ಕ್ಷೌರದಂಗಡಿಯಲ್ಲಿ ನಡೆದ ಜಗಳ ದುರಂತ ಅಂತ್ಯ ಕಂಡಿದೆ. ಕೇವಲ ₹ 50 ಕ್ಷೌರದ ಹಣಕ್ಕಾಗಿ ನಡೆದ ಜಗಳದಲ್ಲಿ ಯುವಕನೋರ್ವ ಕೊಲೆಯಾಗಿದ್ದು, ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಸೋಮರಡ್ಡಿ ಅಳವಂಡಿ

ಕೊಪ್ಪಳ (ಆ.19) : ಕಿತ್ತು ತಿನ್ನುವ ಬಡತನದಿಂದಾಗಿ ಹಮಾಲಿ ಮಾಡಿ ಮನೆಗೆ ಆಸರೆಯಾಗಿದ್ದ ಯಮನೂರಪ್ಪ ಈರಪ್ಪ ಬಂಡಿಹಾಳ ಬಳಿ ಅಂದು ಕೇವಲ ₹ 50 ಇದ್ದಿದ್ದರೆ ಬದುಕುಳಿಯುತ್ತಿದ್ದರು!

Tap to resize

Latest Videos

undefined

ಹೌದು, ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಟಿಂಗ್ ಮಾಡಲು ನಿರಾಕರಣೆ ಮತ್ತು ಮೊದಲು ಹಣ ಕೊಡಲು ತಾಕೀತು ಮಾಡಿದ್ದರಿಂದ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೇವಲ ₹ 50 ಉದ್ರಿ ಹೇಳಲು ಮುಂದಾಗಿದ್ದೇ ಜಗಳಕ್ಕೆ ಕಾರಣವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ. ಇದರಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆಯೊಂದು ನಡೆದಿದ್ದು, ಈಗ ನಾಡಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಟಿಬಿ ಡ್ಯಾಂ ಪ್ರಾಧಿಕಾರದಲ್ಲಿ ಆಂಧ್ರದ್ದೇ ಪ್ರಾಬಲ್ಯ, ಕಾಯಂ ಅಧಿಕಾರಿ ನೇಮಕಕ್ಕೆ ರಾಜ್ಯ ಸರ್ಕಾರ ಧ್ವನಿ ಎತ್ತಲಿ

ಆಗಿದ್ದೇನು?: ಯಮನೂರಪ್ಪ ಕಟಿಂಗ್ ಮಾಡಿಸಿಕೊಳ್ಳಲು ಸಂಗನಾಳ ಗ್ರಾಮದ ಕ್ಷೌರದಂಗಡಿಗೆ ಹೋಗಿದ್ದರು. ಅಲ್ಲಿ ಆ ವೇಳೆಗಾಗಲೇ ಜಗದೀಶ ಎನ್ನುವವರು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಕ್ಷೌರ ಮಾಡಿಸಿಕೊಳ್ಳಲು ಬಂದ ಯಮನೂರಪ್ಪ ಹತ್ತಿರ ಮುದಕಪ್ಪ ಹಡಪದ ಮೊದಲೇ ಹಣ ಕೇಳಿದ್ದಾನೆ.

ನನ್ನ ಬಳಿ ಇಲ್ಲ, ಆಮೇಲೆ ನಮ್ಮಣ್ಣ ಬಂದು ಕೊಡುತ್ತಾನೆ ಎಂದು ಯಮನೂರಪ್ಪ ಹೇಳಿದ್ದಾರೆ. ಆದರೆ, ಮುದುಕಪ್ಪ ನಿರಾಕರಿಸಿದ್ದಾನೆ. ರೊಕ್ಕ ಕೊಡದೆ ಕಟಿಂಗ್ ಮಾಡುವುದಿಲ್ಲ ಎಂದಿದ್ದಾನೆ. ಇದು ಪರಸ್ಪರ ಜಗಳಕ್ಕೆ ಕಾರಣವಾಗಿದೆ. ಒಬ್ಬರನ್ನೊಬ್ಬರು ಎಳೆದಾಡಲಾರಂಭಿಸಿದ್ದಾರೆ. ಇದರಿಂದ ಕ್ಷೌರ ಮಾಡಿಸಿಕೊಳ್ಳಲು ಕುಳಿತಿದ್ದ ಜಗದೀಶ ಭಯಗೊಂಡು, ಅರ್ಧ ಕ್ಷೌರವಾಗಿದ್ದರೂ ಅಲ್ಲಿಂದ ಓಡಿ ಹೋಗಿದ್ದಾರೆ.

ಈ ಮಧ್ಯೆ ಯಾರೂ ಇಲ್ಲದೆ ಇರುವುದರಿಂದ ಮುದಕಪ್ಪ ಮತ್ತು ಯಮನೂರಪ್ಪ ಅವರ ನಡುವೆ ಜಗಳ ತಾರಕಕ್ಕೆ ಹೋಗಿದೆ. ಕೈಯಲ್ಲಿದ್ದ ಕತ್ತರಿಯಿಂದಲೇ ಇರಿದಿದ್ದರಿಂದ ತೀವ್ರ ಗಾಯಗೊಂಡ ಯಮನೂರಪ್ಪ ಗೋಳಾಡುತ್ತಾ ಪಕ್ಕದ ಅಂಗಡಿಯೊಂದರಲ್ಲಿ ಹೋಗಿ ಬಿದ್ದು ಉರುಳಾಡಿದ್ದಾರೆ. ಈ ಮಾಹಿತಿಯನ್ನು ಖುದ್ದು ಮುದಕಪ್ಪನೇ ಯಮನೂರಪ್ಪ ಸಹೋದರನಿಗೆ ಕರೆ ಮಾಡಿ ಹೇಳಿದ್ದಾನೆ. ನಿನ್ನ ತಮ್ಮ ನನ್ನೊಂದಿಗೆ ಜಗಳವಾಡಿಕೊಂಡು ಅಲ್ಲಿ ಬಿದ್ದಿದ್ದಾನೆ ನೋಡಿ ಎಂದಿದ್ದಾನೆ. ಆಗ ಆಗಮಿಸಿದ ಹನುಮಂತಪ್ಪ, ತಮ್ಮನನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಾವು ಖಚಿತಪಡಿಸಿದರು.

ಗಮನಿಸಿ, ನಾಳೆಯಿಂದ ನಮ್ಮ ಮೆಟ್ರೋ ಈ ಮಾರ್ಗದಲ್ಲಿ ಸೇವೆ ವ್ಯತ್ಯಯ, ಕೆಲವ ...

ನನ್ನ ತಮ್ಮನನ್ನು ಕಳೆದುಕೊಳ್ಳುವಂತಾಯಿತು. ನನ್ನ ತಮ್ಮನ ಕಟಿಂಗ್ ಮಾಡಿದ್ದರೆ ನಾನು ಬಂದು ರೊಕ್ಕ ಕೊಡುತ್ತಿದ್ದೆ, ಆದರೆ, ನಾವು ದಲಿತರು ಎನ್ನುವ ಕಾರಣಕ್ಕಾಗಿಯೇ ರೊಕ್ಕ ಕೊಟ್ಟಿಲ್ಲ ಎನ್ನುವ ನೆಪ ಹೇಳಿದ್ದಾನೆ, ಕ್ಷೌರ ನಿರಾಕರಿಸಿದ್ದಾನೆ. ಅದನ್ನು ನನ್ನ ತಮ್ಮ ಪ್ರಶ್ನೆ ಮಾಡಿದ್ದರಿಂದ ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದಲೇ ಕತ್ತರಿಯಿಂದಲೇ ಹೊಟ್ಟೆಗೆ ಹಾಕಿ ಇರಿದಿದ್ದಾನೆ ಎನ್ನುತ್ತಾರೆ ಹನುಮಂತಪ್ಪ. ನನ್ನ ತಮ್ಮನಿಗೆ ಆದ ಸ್ಥಿತಿ ಯಾರಿಗೂ ಬರಬಾರದು. ದಲಿತರು ನ್ಯಾಯಯುತ ಜೀವನ ನಡೆಸುವಂತಾಗಬೇಕು ಎಂದು ಸಹ ಆಗ್ರಹಿಸುತ್ತಾರೆ ಹನುಮಂತಪ್ಪ.

ಕಿತ್ತು ತಿನ್ನುವ ಬಡತನ: ಯಮನೂರಪ್ಪ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಂದೆ ತೀರಿಕೊಂಡಿರುವುದರಿಂದ ಮೂರು ಮಕ್ಕಳನ್ನು ತಾಯಿ ಯಲ್ಲಮ್ಮ ಅವರೇ ಬೆಳೆಸಿದ್ದಾರೆ. ದೊಡ್ಡವನು ಓದಲಿ, ಚಿಕ್ಕವನು ಓದಲಿ ಎಂದು ಮಧ್ಯದ ಇವನೇ ಹಮಾಲಿ ಮಾಡಿ (ಮೂಟೆ, ಲಗೇಜು ಹೊರುವುದು), ನಮ್ಮನ್ನೆಲ್ಲ ದುಡಿದು ಸಾಕುತ್ತಿದ್ದ, ಅವನೇ ಈಗ ಇಲ್ಲವಾಗಿದ್ದಾನೆ ಎಂದು ತಾಯಿ ಯಲ್ಲಮ್ಮ ಬಿಕ್ಕಿ ಬಿಕ್ಕಿ ಅಳುತ್ತಾಳೆ.

ನಮ್ಮ ಮನೆಯವರನ್ನು (ಪತಿಯನ್ನು) 9 ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದೇನೆ, ಆದರೆ, ಈಗ ದುಡಿಯುವ ಮಗನನ್ನೇ ಕಳೆದುಕೊಂಡಿದ್ದು, ನಮ್ಮನ್ನು ಯಾರು ಕಾಪಾಡಬೇಕು ಎಂದು ಅಳುತ್ತಿರುವ ದೃಶ್ಯ ಮನಕಲುಕುವಂತೆ ಇತ್ತು.

ಸರ್ಕಾರಿ ನೌಕರಿ: ಮೃತ ಯಮನೂರಸ್ವಾಮಿ ಕುಟುಂಬಕ್ಕೆ ಸರ್ಕಾರಿ ನೌಕರಿ, ₹8 ಲಕ್ಷ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು ತಳವಾರ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಧರ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ದಲಿತ ವ್ಯಕ್ತಿ ಕೊಲೆಯಾದರೆ ಕೊಡಬಹುದಾದ ₹8.25 ಲಕ್ಷ ಹಾಗೂ ಸರ್ಕಾರಿ ನೌಕರಿಯನ್ನು ಕೊಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಈಗ ತುರ್ತಾಗಿ ₹4 ಲಕ್ಷ ನೀಡಲಾಗುವುದು ಎಂದು ರಾಜು ತಳವಾರ ತಿಳಿಸಿದ್ದಾರೆ.

ಕೇರಿಯಲ್ಲಿ ಮಡುಗಟ್ಟಿದ ನೀರವಮೌನ:
ಸಂಗನಾಳ ಗ್ರಾಮದಲ್ಲಿ ಸಾಮರಸ್ಯವಿದೆ. ಗ್ರಾಮದ ಮೇಲ್ವರ್ಗದವರು ಮತ್ತು ದಲಿತರ ನಡುವೆ ಇದುವರೆಗೂ ಒಂದೇ ಒಂದು ಜಗಳವಾಗಿಲ್ಲ, ಇಲ್ಲಿ ಅಸ್ಪೃಶ್ಯತೆ ಆಚರಣೆಯೂ ಇಲ್ಲ. ಆದರೆ, ಈಗ ಆಗಿರುವ ಘಟನೆಯಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ.

ಪೊಲೀಸ್ ಮಹಜರು: ಸಂಗನಾಳ ಗ್ರಾಮದಲ್ಲಿ ನಡೆದಿರುವ ಕೊಲೆ ಪ್ರಕರಣದ ಕುರಿತು ಡಿವೈಎಸ್ಪಿ ಮುತ್ತು ಸವರಗೊಳ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮಾಹಿತಿ ಸಂಗ್ರಹ ಮಾಡಿದ ಅವರು, ಸ್ಥಳದಲ್ಲಿದ್ದವರಿಂದ ಸಾಕ್ಷ್ಯ ಸಂಗ್ರಹಿಸಿದರು.

ಪ್ರಕರಣ ಕುರಿತು ಸರ್ಕಾರಕ್ಕೆ ವಿವರ ಕಳುಹಿಸಲಾಗಿದೆ. ಕಾನೂನು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡುವ ಕುರಿತ ಪ್ರಕ್ರಿಯೆ ಪ್ರಾರಂಭವಾಗಲಿದೆ.
-ರಾಜು ತಳವಾರ ಡಿಡಿ ಸಮಾಜ ಕಲ್ಯಾಣ ಇಲಾಖೆ

ಈ ಘಟನೆ ಅತ್ಯಂತ ಅಮಾನವೀಯವಾಗಿದೆ. ಕಟಿಂಗ್ ಮಾಡಲು ಹೋದ ದಲಿತ ವ್ಯಕ್ತಿಯನ್ನು ಕೊಲೆ ಮಾಡಿರುವುದು ಅತ್ಯಂತ ಖಂಡನೀಯ. ಸರ್ಕಾರ ಕೂಡಲೇ ₹ 50 ಲಕ್ಷ ಪರಿಹಾರ ಮತ್ತು ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕು.
-ಗಣೇಶ ಹೊರತಟ್ನಾಳ ದಲಿತ ಮುಖಂಡ

ನಮ್ಮೂರಿನಲ್ಲಿ ಇಂಥ ಘಟನೆ ನಡೆದಿರಲಿಲ್ಲ. ಆದರೆ, ಕಟಿಂಗ್ ಮಾಡುವ ವ್ಯಕ್ತಿ ನಮ್ಮೂರಿನವ ಅಲ್ಲವೇ ಅಲ್ಲ. ಘಟನೆಯಿಂದ ಕೊಲೆಗೀಡಾದ ಯುವಕನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ತಕ್ಷಣ ಸರ್ಕಾರ ನ್ಯಾಯ ಒದಗಿಸಬೇಕು.
-ದುರಗಪ್ಪ ನಡುಲಕೆರೆ ಗ್ರಾಪಂ ಸದಸ್ಯ

ನನ್ನ ತಮ್ಮನನ್ನು ಕಳೆದುಕೊಂಡು ನಮಗೆ ಬರಸಿಡಿಲು ಬಡಿದಂತೆ ಆಗಿದೆ. ದಲಿತ ಎನ್ನುವ ಕಾರಣಕ್ಕಾಗಿಯೇ ನಿರಾಕರಣೆ ಮಾಡಿ, ಪ್ರಶ್ನೆ ಮಾಡಿದ್ದಕ್ಕೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ.
-ಹನುಮಂತಪ್ಪ ಮೃತನ ಸಹೋದರ

click me!