ಬೆಳಗಾವಿ ಜೈನಮುನಿ ಕಾಮಕುಮಾರ ಸ್ವಾಮೀಜಿ ಕೊಲೆಯ ಬೆನ್ನಲ್ಲೇ, ಸ್ವಂತ ಮನೆಗೆ ಹೊಕ್ಕು ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯನ್ನು ಕೊಲೆ ಮಾಡಲಾಗಿದೆ.
ಬೆಳಗಾವಿ (ಜು.09): ಜಾಗತಿಕ ಮಟ್ಟದಲ್ಲಿ ಶಾಂತಿ ಮಂತ್ರವನ್ನು ಪಠಿಸುವ ಪಾದಯಾತ್ರೆ ಮಾಡಿ ಪ್ರವಚನಗಳನ್ನು ನೀಡುವ ಜೈನಮುನಿಯನ್ನು ಕರೆಂಟ್ ಶಾಕ್ ಕೊಟ್ಟು ಕೊಲೆಗೈದು, ತುಂಡರಿಸಿ ದೇಹ ಬೀಸಾಡಿದ ಪ್ರಕರಣ ನಡೆದು ಇನ್ನೂ ಮೂರು ದಿನಗಳು ಕಳೆದಿಲ್ಲ. ಈ ಪ್ರಕರಣ ನೆನಪು ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದಲ್ಲಿ ದಂಪತಿ ಭೀಕರ ಹತ್ಯೆ ನಡೆದಿದೆ. ಮೃತರನ್ನು ಗಜೇಂದ್ರ ವಣ್ಣೂರೆ(60) ಹಾಗೂ ಆತನ ಪತ್ನಿ ದ್ರಾಕ್ಷಾಯಿಣಿ ವಣ್ಣೂರೆ(48) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹಿರೇಕೋಡಿ ಜೈನ ಆಶ್ರಮದ ಒಳಗೇ ಹೊಕ್ಕು ಜೈನಮುನಿ ಕಾಮಕುಮಾರ ಮಹಾರಾಜ್ ಸ್ವಾಮೀಜಿಯನ್ನು ಕೊಂದ ಮಾದರಿಯಲ್ಲೇ, ದಂಪತಿ ವಾಸವಿರುವ ಸ್ವಂತ ಮನೆಗೆ ನುಗ್ಗಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಬೆಳಗಾವಿ ಜೈನಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಯಮಕನಮರಡಿ ಪೊಲೀಸರಿಂದ ಆರೋಪಿಗಳಿಗೆ ಬಲೆ: ಇನ್ನು ಈ ಘಟನೆ ಜುಲೈ 7ರ ಮಧ್ಯರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆಯಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಬಂದು ಮನೆಯ ಬಾಗಿಲನ್ನು ಒಡೆದು ನೋಡಿದಾಗ ಜೋಡಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಯಮಕನಮರಡಿ ಪೊಲೀಸರು ಆರೋಪಗಳಿಗೆ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಗೆ ದಂಪತಿ ಮೃತದೇಹಗಳನ್ನು ರವಾನೆ ಮಾಡಿದ್ದಾರೆ.
ಸಿನಿಮಾ ಶೈಲಿಯಲ್ಲಿ ಕುತ್ತಿಗೆ ಬಿಗಿದು ದರೋಡೆ ಮಾಡಿದ ಗ್ಯಾಂಗ್: ಚಿತ್ರದುರ್ಗ (ಜು.9): ಉದ್ಯಮಿಗಳ ಮಕ್ಕಳನ್ನು ಒತ್ತೆಯಾಳಾಗಿಟ್ಕೊಂಡು ರಾಬರಿ ಮಾಡುವ ದೃಶ್ಯಗಳನ್ನು ಸಿನಿಮಾದಲ್ಲಿ ನೋಡ್ತಿದ್ದೆವು. ಆದರೆ ಅದೇ ಮಾದರಿಯಲ್ಲಿ ಹಾಡು ಹಗಲಿನಲ್ಲೇ ಮನೆಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ ರಾಬರಿ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಕೋಟೆನಾಡು ಚಿತ್ರದುರ್ಗದ ಬ್ಯಾಂಕ್ ಕಾಲೋನಿಯಲ್ಲಿರುವ ಸೂರ್ಯೋದಯ ಹೋಟೆಲ್ ನ ಮಾಲೀಕ, ಉದ್ಯಮಿ ನಜೀರ್ ಅಹಮ್ಮದ್ ಅವರ ಮನೆಗೆ ಜು.8ರಂದು ಬೆಳಿಗ್ಗೆ 9.20 ಕ್ಕೆ ನುಗ್ಗಿರೊ ಮೂವರು ದರೋಡೆಕೋರರ ಗುಂಪೊಂದು ನಜೀರ್ ಅವರ ಮಗ ಸಮೀರ್ ಹಾಗೂ ಅಳಿಯನಾದ ಶಹನಾಜ್ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಐವತ್ತು ಲಕ್ಷ ರೂ.ನಗದು ಮತ್ತು 12 ತೊಲೆ ಚಿನ್ನ ಮತ್ತು ಮೊಬೈಲ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದರು.
ಹೆಂಡ್ತಿ, ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ
ಸ್ವಲ್ಪದರಲ್ಲೇ ತಪ್ಪಿದ ಪ್ರಾಣಾಪಾಯ: ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರ ತಿಳಿದ ಪೂರ್ವ ವಲಯ ಐಜಿಪಿ ತ್ಯಾಗರಾಜ್ ಹಾಗು ಚಿತ್ರದುರ್ಗ ಎಸ್ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ಮನೆಯ ಸದಸ್ಯರನ್ನೆಲ್ಲ ತಂತಿಯಿಂದ ಬಂದಿಸಿದ್ರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಂದಲೇ ಚಹಾ ಮಾಡಿಸಿಕೊಂಡು ಸೇವಿಸಿರೋ ದರೋಡೆಕೋರರು, ಮನೆಯ ಯಜಮಾನರನ್ನು ಉಸಿರು ಗಟ್ಟಿಸಿ ಕೊಲ್ಲಲು ಯತ್ನಿಸಿದ್ರು. ಅಲ್ಲದೇ ಏನಾದ್ರು ಉಪಾಯ ಮಾಡಿದ್ರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದು, ನಜೀರ್ ಅವರ ಹೊಟೆಲ್ ಹಾಗು ಇತರೆಡೆ ಇಡಲಾಗಿದ್ದ ವ್ಯಾಪಾರದ ಹಣವನ್ನು ತರಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.