ಉದ್ಯಮಿ ಹತ್ಯೆ: ಭೂಗತ ಪಾತಕಿ ಬನ್ನಂಜೆ ರಾಜ ಸೇರಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

By Govindaraj S  |  First Published Apr 5, 2022, 3:00 AM IST

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಸೋಮವಾರ ಬೆಳಗಾವಿ ಕೋಕಾ ನ್ಯಾಯಾಲಯದ ನ್ಯಾಯಾದೀಶ ಸಿ.ಎಂ.ಜೋಶಿ ಅವರು ತೀರ್ಪು ನೀಡಿದ್ದಾರೆ. 


ಬೆಳಗಾವಿ (ಏ.05): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಉದ್ಯಮಿ ಆರ್‌.ಎನ್‌.ನಾಯಕ ಹತ್ಯೆ (RN Naik Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ (Bannanje Raja) ಸೇರಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಸೋಮವಾರ ಬೆಳಗಾವಿ ಕೋಕಾ ನ್ಯಾಯಾಲಯದ ನ್ಯಾಯಾದೀಶ ಸಿ.ಎಂ.ಜೋಶಿ ಅವರು ತೀರ್ಪು ನೀಡಿದ್ದಾರೆ. 

ಈ ಪ್ರಕರಣದ 2ನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ ಉಫ್‌ರ್‍ ಸತೀಶಕುಮಾರ ಕತ್ವಾರ್‌ ಪಟೇಲ್, 3ನೇ ಆರೋಪಿ ಬೆಂಗಳೂರಿನ ಅಭಿ ಉಫ್‌ರ್ ಅಂಭಾಜಿ ಭಂಡಗಾರ, 4ನೇ ಆರೋಪಿ ಉಡುಪಿಯ ಗಣೇಶ ಉಫ್‌ರ್ ಮಂಜುನಾಥ ಭಜಂತ್ರಿ, 7ನೇ ಆರೋಪಿ ಹಾಸನದ ಮಹೇಶ ಉಫ್‌ರ್ ಅಚ್ಚಂಗಿ ಬಸವೇಗೌಡ, 8ನೇ ಆರೋಪಿ ಕೇರಳದ ಸಂತೋಷ ಎಂ.ಬಿ.ಉಫ್‌ರ್‍ ಸುಳ್ಯ ಸಂತೋಷ ಬಾಳನಗೌಡ, 9ನೇ ಆರೋಪಿ ಉಡುಪಿ ಮೂಲದ ಬನ್ನಂಜೆ ರಾಜಾ ಉಫ್‌ರ್‍ ರಾಜೇಂದ್ರಕುಮಾರ, 10ನೇ ಆರೋಪಿ ಬೆಂಗಳೂರಿನ ಜಗದೀಶ ಚಂದ್ರರಾಜ್‌ ಅರಸ್‌ ಹಾಗೂ 12ನೇ ಆರೋಪಿ ಉತ್ತರ ಪ್ರದೇಶದ ಅಂಕಿತಕುಮಾರ ಕಶ್ಯಪ್‌ ಜೀವಾವಧಿ ಶಿಕ್ಷೆಗೆ ಗುರಿಯಾದವರು. 

Tap to resize

Latest Videos

ಜತೆಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಒಟ್ಟು .38.30 ಲಕ್ಷ ದಂಡ ವಿಧಿಸಿದೆ. 5ನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್‌ಗೆ ಐದು ವರ್ಷ ಜೈಲು ಶಿಕ್ಷೆ ಜತೆಗೆ .15 ಸಾವಿರ ದಂಡ ವಿಧಿಸಿದೆ. 2013, ಡಿ.21ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಉದ್ಯಮಿ ಆರ್‌.ಎನ್‌.ನಾಯಕ ಅವರನ್ನು ಹತ್ಯೆ ಮಾಡಲಾಗಿತ್ತು. .3 ಕೋಟಿ ಹಫ್ತಾ ನೀಡದಿರುವುದಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಾಗೂ ಆತನ ಸಹಚರರು ಹತ್ಯೆಗೆ ಸಂಚು ರೂಪಿಸಿದ್ದರು. ಆರೋಪಿಗಳ ವಿರುದ್ಧ ಪೊಲೀಸರು ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಒಂಬತ್ತು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು ಇದೀಗ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಅಂಕೋಲಾ ಉದ್ಯಮಿ ನಾಯಕ್ ಹತ್ಯೆ ಪ್ರಕರಣ: ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ಇಂದು ನಿರ್ಧಾರ

ಭದ್ರತೆ ಒದ​ಗಿ​ಸಲು ನಿರ್ದೇಶನ: ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಆರೋಪಿಗಳಿಗೂ ದಂಡ ವಿಧಿಸಲಾಗಿದೆ. ಇದರಲ್ಲಿ ಆರ್‌.ಎನ್‌.ನಾಯಕ ಅವರ ಪತ್ನಿಗೆ .30 ಲಕ್ಷ ಪರಿಹಾರ ಒದಗಿಸಬೇಕು. ಪುತ್ರ ಹಾಗೂ ಸಾಕ್ಷಿ ಹೇಳಿದ ಮೈಸೂರು ಮೂಲದ ಮಹಿಳೆಗೆ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ಉತ್ತರ ಕನ್ನಡ ಎಸ್‌ಪಿ ಹಾಗೂ ಮೈಸೂರು ನಗರ ಪೊಲೀಸ್‌ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ, ಹೆಚ್ಚುವರಿ ಅಭಿಯೋಜಕ ಶಿವಪ್ರಸಾದ ಆಳ್ವಾ ವಕಾಲತ್ತು ವಹಿಸಿದ್ದರು. 

ಬನ್ನಂಜೆ ರಾಜಾ ಪರ ವಕೀಲ ಎಂ.ಶಾಂತಾರಾಮ ಶೆಟ್ಟಿವಾದ ಮಂಡಿಸಿದ್ದರು. ಬೆಳಗಾವಿಯಲ್ಲಿ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ ಮಾತನಾಡಿ, ಕೋಕಾ ನ್ಯಾಯಾಲಯದಿಂದ 8 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಮರಣದಂಡನೆ ಶಿಕ್ಷೆ ಆಗಬೇಕಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು. ಅಲ್ಲದೇ ಈ ಪ್ರಕರಣದ ಶಿಕ್ಷೆ ಪ್ರಮಾಣವನ್ನು ಬೆಳಗಾವಿ ಕೋಕಾ ನ್ಯಾಯಾಲಯ ಪ್ರಕಟಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌ ಕಲ್ಪಿಸಲಾಗಿತ್ತು. ಅಲ್ಲದೇ ಅಪರಾಧಿಗಳ ವಾಹನಕ್ಕೂ ಹೆಚ್ಚಿನ ಭದ್ರತೆ ನೀಡಲಾಗಿತ್ತು.

ಏನಿದು ಪ್ರಕರಣ?: ಉದ್ಯಮಿ ಆರ್‌.ಎನ್‌.ನಾಯಕ ಅವರನ್ನು 2013ರ ಡಿಸೆಂಬರ್‌ 21ರಂದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು 2000ರಲ್ಲಿ ರಚಿಸಿದ್ದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿ ಪಶ್ಚಿಮ ವಲಯ ಪೊಲೀಸರು ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. .3 ಕೋಟಿ ಹಫ್ತಾ ನೀಡದ ಹಿನ್ನೆಲೆಯಲ್ಲಿ 2013ರ ಡಿ.21ರಂದು ಸುಪಾರಿ ನೀಡಿ ಉದ್ಯಮಿ ಆರ್‌.ಎನ್‌.ನಾಯಕ ಅವರನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೇ ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ 2015ರ ಫೆ.12ರಂದು ಮೊರಾಕ್ಕೊದಲ್ಲಿ ಬನ್ನಂಜೆ ರಾಜಾನನ್ನು ಪೊಲೀಸರು ಬಂಧಿಸಿದ್ದರು.

ಬಳಿಕ 2015 ಆ.14ರಂದು ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಕರೆತರಲಾಗಿತ್ತು. ಉದ್ಯಮಿ ನಾಯಕ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಬನ್ನಂಜೆ ರಾಜಾನನ್ನು ವಶಕ್ಕೆ ಪಡೆದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದ ಪೊಲೀಸರು ಒಟ್ಟು 16 ಜನರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Annamalai In Karnataka: ಬೆಳಗಾವಿಯಲ್ಲಿ ಅಣ್ಣಾಮಲೈ, ಬನ್ನಂಜೆ ರಾಜಾ ವಿರುದ್ಧ ಸಾಕ್ಷ್ಯ

ಮಾ.30ರಂದು ಈ ಪ್ರಕರಣದ ಅಂತಿಮ ಹಂತದ ವಿಚಾರಣೆ ನಡೆಸಿದ ಕೋಕಾ ನ್ಯಾಯಾಲಯ 9 ಜನರ ವಿರುದ್ಧ ಆರೋಪ ಸಾಬೀತುಪಡಿಸಿ ಏ.4ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವ ಬಗ್ಗೆ ಹಾಗೂ 6ನೇ ಆರೋಪಿ ಕೇರಳದ ರಬ್ದಿನ್‌ ಫಿಚೈ, 11ನೇ ಆರೋಪಿ ಬೆಂಗಳೂರಿನ ಮಹ್ಮದ್‌ ರಶದ್‌ ಶಾಬಂದ್ರಿ ಉಫ್‌ರ್‍ ಬಾಬು ಹಾಗೂ 16ನೇ ಆರೋಪಿ ಉತ್ತರ ಕನ್ನಡದ ಆನಂದ ರಮೇಶ ನಾಯಕ ದೋಷಮುಕ್ತ ಎಂದು ತಿಳಿಸಿತ್ತು. ಮೊದಲನೇ ಆರೋಪಿ ಆಕಾಶ ಉಫ್‌ರ್‍ ವಿವೇಕ ಉಪಾಧ್ಯಾಯ ಘಟನಾ ಸ್ಥಳದಲ್ಲಿ ನಡೆದ ಶೂಟೌಟ್‌ನಲ್ಲಿ ಮೃತಪಟ್ಟಿದ್ದಾನೆ. ಇನ್ನುಳಿದಂತೆ 13ನೇ ಆರೋಪಿ ಉತ್ತರ ಕನ್ನಡ ಭಟ್ಕಳದ ನಜೀಮ್‌ ನೀಲವರ ಉಫ್‌ರ್‍ ಮೊಹ್ಮದ್‌ ನೀಲವರ, 14ನೇ ಆರೋಪಿ ಮಂಗಳೂರಿನ ಹಾಜಿ ಅಮಿನ್‌ ಬಾಶಾ ಉಫ್‌ರ್‍ ಪಾಷಾ, 15ನೇ ಆರೋಪಿ ಹಾಸನದ ಸುಲೆಮಾನ ಉಫ್‌ರ್‍ ಸಲ್ಲು ತಲೆಮರೆಸಿಕೊಂಡಿದ್ದಾರೆ.

click me!