* ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶದ ಆರೋಪಿಗಳು
* ಸಂತ್ರಸ್ತ ಯುವತಿಗಾಗಿ ಪೊಲೀಸರ ಶೋಧ
* ಅತ್ಯಾಚಾರದ ವಿಡಿಯೋ ಬಾಂಗ್ಲಾದೇಶದಲ್ಲಿ ವೈರಲ್ ಮಾಡಿದ್ದ ಕಾಮುಕರು
ಬೆಂಗಳೂರು(ಮೇ.28): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮಹಜರ್‌ಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ನಿನ್ನೆ(ಗುರುವಾರ) ನಗರದ ಕೆ. ಚನ್ನಸಂದ್ರದ ಕನಕನಗರದಲ್ಲಿ ನಡೆದಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಮಲ್ವಿನ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ಅರವಿಂದ್ ಅವರು ಫೈರಿಂಗ್ ಮಾಡಿದ್ದಾರೆ. ಆರೋಪಿಗಳಾದ ರುದಯ್ ಬಾಬು. ಸಾಗರ್ ಕಾಲಿಗೆ ಗುಂಡೇಟು ಬಿದ್ದಿದೆ. ನಿರ್ಭಯಾ ರೀತಿಯಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಪಡೆದಿದ್ದರು ಎಂಬ ಆಘಾತಕಾರಿ ಸದ್ದಿಯೊಂದು ಬಯಲಾಗಿದೆ.
ಅತ್ಯಾಚಾರ ಪ್ರಕರಣದ ಆರೋಪಿಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು. ಆರೋಪಿ ಅನ್ವರ್ ಶೇಕ್ ಎಂಬ ಆರೋಪಿ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆಧಾರ್ ಕಾರ್ಡ್ ಪಡೆದಿದ್ದ ಎಂದು ಅಂಶವೊಂದು ಬಯಲಾಗಿದೆ.
6 ತಿಂಗಳ ಹಿಂದೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಆರ್ ಐ ಲೇಔಟ್ ನಲ್ಲಿ ವಾಸವಾಗಿದ್ದ ಆರೋಪಿ ಅನ್ವರ್ ಶೇಕ್ ಮನೆ ಬಾಡಿಗೆ ಪಡೆಯಲು ಬೆಂಗಳೂರಿನ ಆಧಾರ್ ಕಾರ್ಡ್ ತೋರಿಸಿದ್ದನು. ಮನೆ ಮಾಲೀಕನಿಗೆ ನಾನು ಕಾರ್ಪರೇಂಟರ್ ಅಂತಾ ಹೇಳಿ ಮನೆ ಬಾಡಿಗೆ ಪಡೆದಿದ್ದನು.
ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ, ರೇಪ್ ಎಸಗಿ ಮದ್ಯದ ಬಾಟಲ್ ಇಟ್ಟರು
ಮನೆಯಲ್ಲಿ ನಾನು, ನನ್ನ ಪತ್ನಿ ಹಾಗೂ ಸಹೋದರಿ ಇರುವುದಾಗಿ ಹೇಳಿ ಆರೋಪಿಗಳು ಮನೆ ಬಾಡಿಗೆ ಪಡೆದಿದ್ದರು. ಎನ್ ಆರ್ ಐ ಲೇಔಟ್‌ನಲ್ಲಿರುವ ಮನೆಗೆ ಆಗಾಗ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. 6 ದಿನಗಳ ಹಿಂದಷ್ಟೇ ಆತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಯುವತಿಯನ್ನೂ ಕೂಡ ಪಾರ್ಟಿ ಮಾಡುವ ನೆಪದಲ್ಲಿ ಮನೆಗೆ ಕರೆಸಿ ಆರೋಪಿಗಳು ರೇಪ್ ಮಾಡಿದ್ದರು. ಈ ಹೇಯ ಕೃತ್ಯದ ದೃಶ್ಯವನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಆ ವಿಡಿಯೋವನ್ನು ಬಾಂಗ್ಲಾದೇಶ, ಅಸ್ಸಾಂ, ಕಡೆಗಳಲ್ಲಿ ವೈರಲ್ ಕೂಡ ಮಾಡಿದ್ದರು ಎಂದು ತಿಳಿದು ಬಂದಿದೆ.
ವೈರಲ್ ಆದ ವಿಡಿಯೋವನ್ನ ಬಾಂಗ್ಲಾದೇಶದ ಪೊಲೀಸರು ಪರಿಶೀಲನೆ ನಡೆಸಿ ಭಾರತದಲ್ಲಿ ಘಟನೆ ನಡೆದಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ದೆಹಲಿ ಪೊಲೀಸರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಘಟನೆ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು. ಅದರ ಆಧಾರದ ಮೇಲೆ ಆರೋಪಿಗಳ ಮೊಬೈಲ್ ಲೋಕೆಷನ್ ಟ್ರೇಸ್ ಮಾಡಿದಾಗ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಇರುವುದು ಪತ್ತೆಯಾಗಿತ್ತು. ಲೋಕೆಷನ್ ಆಧಾರದ ಮೇಲೆ ಓರ್ವ ಮಹಿಳೆ ಸೇರಿದಂತೆ ಐವರು ಆರೋಪಿಗಳ ಬಂಧಿಸಲಾಗಿತ್ತು.
ಸದ್ಯ ಸಂತ್ರಸ್ತ ಯುವತಿ ಕೇರಳಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ ಸಂತ್ರಸ್ತ ಯುವತಿಗಾಗಿ ಬೆಂಗಳೂರು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.