ಬೆಂಗಳೂರು (ಅ.10) : ಆಟೋ ಚಾಲಕರ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿ ಆವಾಜ್ ಹಾಕಿದ್ದ ರೌಡಿಯನ್ನು ಇಬ್ಬರು ಆಟೋ ಚಾಲಕರು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣಯ್ಯನಪಾಳ್ಯ ನಿವಾಸಿ ರಾಹುಲ್ ಅಲಿಯಾಸ್ ಪಲ್ಲು(27) ಕೊಲೆಯಾದ ರೌಡಿ. ಈ ಸಂಬಂಧ ಆರೋಪಿಗಳಾದ ಅರುಣ್(27) ಮತ್ತು ಸತ್ಯವೇಲು(32) ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಾತ್‌ರ್ ಗೇಟ್ ಬಳಿಯ ಎನ್‌ಜಿಇಎಫ್ ಸರ್ಕಲ್‌ನಲ್ಲಿ ಶನಿವಾರ ರಾತ್ರಿ 10ಕ್ಕೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಬುರ್ಖಾ ಧರಿಸಿ ಓಡಾಡ್ತಿದ್ದವ ಖಾಕಿ ವಶಕ್ಕೆ
ಏನಿದು ಪ್ರಕರಣ?
ಆರೋಪಿಗಳಾದ ಅರುಣ್ ಮತ್ತು ಸತ್ಯವೇಲು ಆಟೋ ಚಾಲಕರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಆಟೋ ನಿಲ್ದಾಣದಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ಸತ್ಯವೇಲು ಹಾಗೂ ಆಟೋ ಚಾಲಕ ಮುರುಗನ್ ನಡುವೆ ಗಲಾಟೆಯಾಗಿತ್ತು. ಈ ಗಲಾಟೆ ವಿಚಾರವನ್ನು ಮುರುಗನ್, ತನ್ನ ಸ್ನೇಹಿತ ರೌಡಿ ರಾಹುಲ್‌ಗೆ ತಿಳಿಸಿದ್ದ. ಈ ವೇಳೆ ಮಧ್ಯಸ್ಥಿತಿಕೆವಹಿಸಿ ಅರುಣ್‌ಗೆ ಕರೆ ಮಾಡಿರುವ ರಾಹುಲ್, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ, ‘ಸಂಜೆಯೊಳಗೆ ನೀವಿಬ್ಬರು ಟೀ ಅಂಗಡಿ ಬಳಿ ಬಂದು ನನ್ನೊಂದಿಗೆ ಮಾತನಾಡಬೇಕು. ಇಲ್ಲವಾದರೆ, ನಿಮ್ಮನ್ನು ಮುಗಿಸಿ ಬಿಡುತ್ತೇನೆ. ನಾನು ಈಗಾಗಲೇ ರೌಡಿ, ಕೊಲೆ ಮಾಡಿದ್ದೇನೆ. ನಿಮ್ಮನ್ನು ಸಹ ಹೊಡೆದು ಹಾಕುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.
ರಾಹುಲ್ ಬೆದರಿಕೆ ಹಾಕಿದ್ದರಿಂದ ಆಕ್ರೋಶಗೊಂಡ ಸತ್ಯವೇಲು ಹಾಗೂ ಅರುಣ್ ಮನೆಯಿಂದ ಮಚ್ಚು ಹಾಗೂ ಚಾಕು ತೆಗೆದುಕೊಂಡು ಶನಿವಾರ ರಾತ್ರಿ 10ರ ಸುಮಾರಿಗೆ ಇನ್‌ಜಿಇಎಫ್ ಸರ್ಕಲ್‌ಗೆ ಬಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ರಾಹುಲ್ ಮೇಲೆ ಮನಸೋ ಇಚ್ಛೆ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೌಡಿಶೀಟರ್ ಹತ್ಯೆ ಆರೋಪಿ:
ಕೊಲೆಯಾದ ರಾಹುಲ್ ವಿರುದ್ಧ ಈ ಹಿಂದೆ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೊಲೆಗೆ ಯತ್ನ, ರಾಮಮೂರ್ತಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ರಾಮಮೂರ್ತಿ ನಗರ ಠಾಣೆಯ ರೌಡಿಶೀಟರ್ ಆಗಿದ್ದ ಪಾಲ್ ರವಿ ಹತ್ಯೆ ಪ್ರಕರಣದ ಐದನೇ ಆರೋಪಿಯಾಗಿ ಜೈಲು ಸೇರಿದ್ದ ರಾಹುಲ್ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದ. ಜೀವನಕ್ಕಾಗಿ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2 ಕುಟುಂಬಗಳ ಮಧ್ಯೆ ಜಮೀನು ವಿವಾದ, ಗಾಳಿಯಲ್ಲಿ ಗುಂಡು ಹಾರಿಸಿದ ರೈತ ಸಂಘದ ಅಧ್ಯಕ್ಷ!