ಆರೋಪಿಯ ಬಸವರಾಜ್ ಮುತ್ತಗಿ ಹತ್ಯೆಗೆ ವಿನಯ್ ಕುಲಕರ್ಣಿ ಸಂಚು| ಸಿಬಿಐ ತನಿಖೆ ವೇಳೆ ಸತ್ಯ ಬಯಲು| ಯೋಗೀಶ್ ಗೌಡ ಹತ್ಯೆ ಪ್ರಕರಣ| ಮುತ್ತಗಿ ಮುಗಿಸುವಂತೆ ಬೆಂಗಳೂರು ಮೂಲದ ರೌಡಿಗೆ ಸುಪಾರಿ|
ಧಾರವಾಡ(ಡಿ.13): ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹೌದು, ಸಿಬಿಐ ತನಿಖೆಯಲ್ಲಿ ಬೆಚ್ಚಿ ಬೀಳಿಸುವಂತ ವಿಚಾರವೊಂದು ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಕುರಿತು ಸಿಬಿಐ ತನಿಖೆ ವೇಳೆ ಸತ್ಯ ಬಯಲಾಗಿದೆ.
ಆರೋಪಿಯ ಬಸವರಾಜ್ ಮುತ್ತಗಿ ಹತ್ಯೆಗೆ ವಿನಯ್ ಕುಲಕರ್ಣಿ ಸಂಚು ರೂಪಿಸಿದ್ದರು ಎಂಬ ಮತ್ತೊಂದು ಆರೋಪ ಕೇಳಿ ಬಂದಿದೆ. ಪ್ರಕರಣವನ್ನ ಸಿಬಿಐಗೆ ವಹಿಸುತ್ತಿದ್ದಂತೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಯೋಗೀಶ್ ಹತ್ಯೆ ಹತ್ಯೆಗೆ ಸುಪಾರಿ ಕೊಟ್ಟಿರುವ ಬಗ್ಗೆ ಬಸವರಾಜ್ ಮುತ್ತಗಿ ಮಾಹಿತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾಕ್ಷ್ಯಿ ಮುಚ್ಚಿ ಹಾಕಲು ಬಸವರಾಜ್ ಮುತ್ತಗಿ ಹತ್ಯೆಯಾದರೆ ಪ್ರಕರಣ ಮುಚ್ಚಿಹಾಕಬಹುದು ಅನ್ನೋ ಪ್ಲ್ಯಾನ್ ಕೂಡ ರೆಡಿಯಾಗಿತ್ತು ಎಂಬ ಆಘಾತಕಾರಿ ಅಂಶ ಸಿಬಿಐ ತನಿಖೆ ವೇಲೆ ಬೆಳಕಿಗೆ ಬಂದಿದೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ, ವಿನಯ ಕುಲಕರ್ಣಿಗೆ ಮತ್ತೊಂದು ಶಾಕ್!
ಒಂದು ವೇಳೆ ಬಸವರಾಜ್ ಮುತ್ತಗಿ ಹತ್ಯೆಯಾಗಿದ್ದರೆ, ಈ ಹತ್ಯೆಯನ್ನ ಯೋಗೀಶ್ ಗೌಡ ಸಹೋದರ ಗುರುನಾಥ ಗೌಡರ ತಲೆಗೆ ಕಟ್ಟುವ ಪ್ಲ್ಯಾನ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಬಸವರಾಜ್ ಮುತ್ತಗಿ ಮುಗಿಸುವಂತೆ ಬೆಂಗಳೂರು ಮೂಲದ ರೌಡಿಗೆ ಸುಪಾರಿ ನೀಡಿರುವ ಅಂಶ ಕೂಡ ಬಯಲಿಗೆ ಬಂದಿದೆ.
ತನ್ನ ಕೊಲೆಗೆ ಸ್ಕೆಚ್ ಹಾಕಿದ್ದ ವಿಚಾರದ ಬಗ್ಗೆ ಸಿಬಿಐ ವಿಚಾರಣೆ ಮುಗಿಸಿ ಹೊರಬಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಮುತ್ತಗಿ, ಈ ಸುದ್ದಿ ಸುಳ್ಳಾಗಲಿ ಅಂತ ಬಯಸುತ್ತೇನೆ. ಭಾವನೆಗಳ ಜೊತೆ ಆಟವಾಡಬಾರದು. ದೇವರ ದಯೆಯಿಂದ ಈ ಸುದ್ದಿ ಸುಳ್ಳಾಗಲಿ. ನಿಮ್ಮ ಜೊತೆ ನಾವು ಭಾವನೆಗಳೊಂದಿಗೆ ಬದುಕಿದ್ದೆವು. ಆ ಭಾವನೆಗಳಿಗೆ ದ್ರೋಹ ಮಾಡಬೇಡಿ. ನಂಬಿಕೆಗೆ ದ್ರೋಹ ಮಾಡಬೇಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿನಯ್ ಕುಲಕರ್ಣಿಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನೂ ವಿಚಾರಣೆ ನಡೆಯುತ್ತಿದೆ. ಅದರಲ್ಲಿ ಇನ್ನೂ ಅನೇಕ ಅಂಶಗಳಿವೆ. ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಮತ್ತೆ ವಿಚಾರಣೆಗೆ ಮರಳಿ ಬರುತ್ತೇನೆ ಎಂದು ಬಸವರಾಜ ಮುತ್ತಗಿ ಹೇಳಿದ್ದಾರೆ.