ಯೋಗೀಶ್‌ ಗೌಡ ಹತ್ಯೆ ಪ್ರಕರಣ, ವಿನಯ ಕುಲ​ಕರ್ಣಿಗೆ ಮತ್ತೊಂದು ಶಾಕ್!

ವಿನಯ ಕುಲ​ಕರ್ಣಿ ಸೋದರ ಮಾವ ಸಿಬಿಐ ವಶ​ಕ್ಕೆ| 3 ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ ಆರೋಪದಡಿ ಚಂದು ಮಾಮಾ ವಶಕ್ಕೆ| ಯೋಗೀಶ್‌ ಗೌಡ ಹತ್ಯೆಗೆ ಸುಪಾರಿ ಪಡೆದಿದ್ದ ಭೀಮಾತೀರದ ಹಂತಕ ನಾಗಪ್ಪ

Vinay Kulkarni Uncle Chandrashekhar Hindi in CBI Custody pod

ಧಾರ​ವಾಡ(ಡಿ.13): ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲ​ಕರ್ಣಿ ಅವರ ಬಂಧ​ನದ ಒಂದು ತಿಂಗಳ ನಂತರ ಸಿಬಿಐ ಅಧಿ​ಕಾ​ರಿ​ಗಳ ತಂಡವು ಮತ್ತೊರ್ವ ಪ್ರಮುಖ ಆರೋ​ಪಿ​ಯನ್ನು ವಶಕ್ಕೆ ಪಡೆ​ದಿದೆ.

ಯೋಗೀಶಗೌಡ ಕೊಲೆಯ ಸಂದ​ರ್ಭ​ದಲ್ಲಿ ಆಕ​ಸ್ಮಿ​ಕ​ವಾಗಿ ತಿರುಗಿ ಬಿದ್ದರೆ ಶೂಟ್‌ ಮಾಡಲು ಕಂಟ್ರಿ ಪಿಸ್ತೂಲಿನ ವ್ಯವಸ್ಥೆ ಮಾಡಿದ್ದ ಆರೋಪದಡಿ ವಿನಯ ಕುಲಕರ್ಣಿ ಸೋದರ ಮಾವ, ವಿಜ​ಯ​ಪು​ರದ ಚಂದ್ರ​ಶೇ​ಖರ ಇಂಡಿ ಉರ್ಫ ಚಂದು ಮಾಮಾ ಎಂಬು​ವ​ರನ್ನು ಶನಿ​ವಾರ ವಶಕ್ಕೆ ಪಡೆ​ದಿ​ದ್ದಾರೆ. ಅಲ್ಲದೇ ಯೋಗೀಶ್‌ ಹತ್ಯೆಗೂ ಮುನ್ನ ಭೀಮಾತೀರದ ಹಂತಕರಿಗೆ ಸುಪಾರಿ ನೀಡಲಾಗಿತ್ತು ಎನ್ನುವ ಅಂಶವೂ ಬಯಲಿಗೆ ಬಂದಿದೆ ಎನ್ನ​ಲಾ​ಗಿ​ದೆ.

ಏನಿದು ಪ್ರಕ​ರ​ಣ..?

ಯೋಗೀಶ ಹತ್ಯೆಗೂ ಮುನ್ನ ಈ ಹತ್ಯೆ ಸುಪಾರಿಯನ್ನು ಭೀಮಾ ತೀರದ ಹಂತಕ ಧರ್ಮರಾಜ ಚಡಚಣನಿಗೆ ನೀಡಲಾಗಿತ್ತು. ಆದರೆ, ಆತನಿಗೆ ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಡಿದ್ದ ಹಣದ ಬದಲಿಗೆ ಮೂರು ಕಂಟ್ರಿ ಪಿಸ್ತೂಲು ನೀಡುವಂತೆ ಚಂದ್ರ​ಶೇ​ಖರ ಇಂಡಿ ಮಧ್ಯಸ್ಥಿಕೆ ವಹಿಸಿದ್ದರು. ಧರ್ಮರಾಜನ ಸಹಚರ ನಾಗಪ್ಪ ಮೂರು ಪಿಸ್ತೂಲು ತಂದು ಇಂಡಿ ಕೈಗೆ ನೀಡಿದ್ದನು. ಅವೇ ಪಿಸ್ತೂಲುಗಳನ್ನು ಯೋಗೀಶ್‌ ಹಂತಕರಿಗೆ ನೀಡಲಾಗಿತ್ತು ಎಂಬ ಮಾಹಿತಿ ಇದೆ.

ಈ ಪ್ರಕ​ರ​ಣವೇ ಇದೀಗ ವಿನಯ ಕುಲಕರ್ಣಿ ಮಾವ ಚಂದು ಮಾಮಾಗೆ ಮುಳುವಾಗಿದೆ. ಇನ್ನು ಕೊಲೆಯಾದ ಬಳಿಕ ಮೂರೂ ಪಿಸ್ತೂಲುಗಳನ್ನು ಹಳ್ಳಿಯೊಂದರ ಬಳಿ ಮುಚ್ಚಿಡಲಾಗಿತ್ತು. ಅವುಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿನಯ ಕುಲ​ಕರ್ಣಿ ಬಂಧ​ನದ ನಂತರ ಪದೇ ಪದೇ ಚಂದ್ರ​ಶೇ​ಖರ ಇಂಡಿ​ಯನ್ನು ವಿಚಾ​ರಣೆ ಮಾಡಿದ ಫಲ​ವಾಗಿ ಇದೆಲ್ಲಾ ಮಾಹಿತಿ ಹೊರ ಬಂದಿದ್ದು ಇದೀಗ ಇಂಡಿ​ಯನ್ನು ವಶಕ್ಕೆ ಪಡೆದು ಸಿಬಿಐ ಮತ್ತಷ್ಟುವಿಚಾ​ರಣೆ ಮಾಡುವ ಸಾಧ್ಯ​ತೆ​ಗ​ಳಿವೆ.

ಸಿಬಿಐ ಅಧಿ​ಕಾ​ರಿ​ಗ​ಳು ಶನಿವಾರ ವಿಜ​ಯಪು​ರದ ಬಿಎಲ್‌ಡಿಇ ಕಾಲೇಜಿನ ಬಳಿ ಚಂದ್ರಶೇಖರನನ್ನು ವಶಕ್ಕೆ ಪಡೆದಿದ್ದಾರೆ. ಅದಕ್ಕೂ ಮುನ್ನ ಪಿಸ್ತೂಲುಗಳನ್ನು ತಂದು ಇಂಡಿಗೆ ನೀಡಿದ್ದ ಧರ್ಮರಾಜನ ಸಹಚರ ನಾಗ​ಪ್ಪ​ನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಸಿಬಿಐ ತನಿಖೆ ಆರಂಭಿಸಿದಾಗಿನಿಂದಲೂ ಒಂದಲ್ಲಾ ಒಂದು ಹೊಸ ಸಂಗತಿಯನ್ನು ಬಯಲಿಗೆ ತರ​ಲಾ​ಗು​ತ್ತಿದೆ. ವಿನಯ ಕುಲಕರ್ಣಿ ಬಂಧನವಾಗಿ ಐದು ವಾರ ಕಳೆದರೂ ಸಿಬಿಐ ಮುಂದಿನ ನಡೆ ಏನು ಎಂಬುದು ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಈ ಅವಧಿಯಲ್ಲಿ ಸಿಬಿಐ ಅಧಿಕಾರಿಗಳು ಈ ಪಿಸ್ತೂಲುಗಳ ಮರ್ಮದ ಹಿಂದೆ ಬಿದ್ದಿದ್ದರು ಎಂಬು​ದಕ್ಕೆ ಚಂದ್ರ​ಶೇ​ಖರ ಇಂಡಿ ಮತ್ತು ನಾಗಪ್ಪನನ್ನು ವಶಕ್ಕೆ ಪಡೆದಿರುವುದೇ ಸಾಕ್ಷಿಯಾಗಿದೆ. ಒಟ್ಟಾರೆ ಸಿಬಿಐ ಅಧಿ​ಕಾ​ರಿ​ಗಳು ಮಾತ್ರ ಯೋಗೀ​ಶ​ಗೌಡ ಕೊಲೆ ಪ್ರಕ​ರ​ಣವನ್ನು ಹೊಸದಿಕ್ಕಿಗೆ ಒಯ್ಯು​ತ್ತಿ​ದ್ದಾರೆ ಎಂಬುದು ಮಾತ್ರ ಸತ್ಯ.

Latest Videos
Follow Us:
Download App:
  • android
  • ios