Latest Videos

ಬೆಳಗಾವಿ: ಜಮೀನಿಗಾಗಿ ತಮ್ಮನನ್ನೇ ಬರ್ಬರವಾಗಿ ಕೊಂದ ಸಹೋದರ..!

By Kannadaprabha NewsFirst Published Jun 16, 2024, 2:38 PM IST
Highlights

ಮೊದಲಿಗೆ ವ್ಯಕ್ತಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಆಸ್ತಿ ವಿಚಾರವಾಗಿ ಸಹೋದರ ಸೇರಿದಂತೆ ಒಟ್ಟು 9 ಜನರು ಕೊಲೆಯಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗುತ್ತಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ: ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ 

ಬೆಳಗಾವಿ(ಜೂ.16):  ಜಮೀನು ಮಾರಾಟ ಮಾಡುವುದು ಬೇಡ ಎಂದಿದ್ದ ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಮೃತನ ಸಹೋದರ, ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 8 ಜನರನ್ನು ಹಾರೂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ಶ್ರೀಶೈಲ ಅಲಗೊಂಡ ಚೌಗಲಾ (39) ಹತ್ಯೆಗೀಡಾದ ವ್ಯಕ್ತಿಯ ಹಿರಿಯ ಸಹೋದರ, ಕಪ್ಪಲಗುದ್ದಿ ಗ್ರಾಮದ ಭರಮಪ್ಪ ಬಾಳಪ್ಪ ನಾಯಿಕ (34), ಮೂಡಲಗಿಯ ಪಡಿಯಪ್ಪ ಅಲಿಯಾಸ್‌ ಪ್ರದೀಪ ಶಿವಬಸು ಸುಣಗಾರ (27), ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಚಂದನ ರಾಮಪ್ಪ ಮಾದರ (22), ಮೂಡಲಗಿಯ ರಮೇಶ ಶಿವಬಸು ಚಿಪ್ಪಲಕಟ್ಟಿ (22), ದಸ್ತಗೀರ ಮರಮಸಾಬ ಹುಣಶ್ಯಾಳ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಮೂಡಲಗಿಯ ಶಾನೂರ ಅಬ್ದುಲ್‌ ಪೆಂಡಾರಿ (33) ಪರಾರಿಯಾಗಿದ್ದು, ಈತನ ಬಂಧನಕ್ಕೆ ಬಲೆ ಬಿಸಿದ್ದಾರೆ. ಈರಪ್ಪಾ ಅಲಗೊಂಡ ಚೌಗಲಾ ಹತ್ಯೆಗೀಡಾದ ವ್ಯಕ್ತಿ.

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ..ತನಿಖೆ ವೇಳೆ ನಕಲಿ ವೈದ್ಯನ ಕರಾಳ ಮುಖ ಬಯಲು!

ಪ್ರಕರಣದ ಹಿನ್ನೆಲೆ

ರಾಯಬಾಗ ತಾಲೂಕಿನ ಸುಲ್ತಾಪೂರ ಗ್ರಾಮಕ್ಕೆ ಹೊಂದಿಕೊಂಡಂತೆ ಒಂದು ಎಕರೆ ಜಮೀನಿದ್ದು, ಅದನ್ನು ಮಾರಾಟ ಮಾಡಲು ಶ್ರೀಶೈಲ ಚೌಗಲಾ ಮುಂದಾಗಿದ್ದಾನೆ. ಅಲ್ಲದೇ, ಬೇರೆಯವರ ಬಳಿ ಲಕ್ಷಾಂತರ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡಿದ್ದ. ಈ ವಿಷಯ ಕಿರಿಯ ಸಹೋದರ ಈರಪ್ಪಾ ಚೌಗಲಾನ ಗಮನಕ್ಕೆ ಬರುತ್ತಿದ್ದಂತೆ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡದಂತೆ ತಗಾದೆ ತೆಗೆದಿದ್ದಾನೆ. ಈ ವಿಷಯವಾಗಿ ಶ್ರೀಶೈಲ ಹಾಗೂ ಈರಪ್ಪ ನಡುವೆ ಜಗಳವಾಗಿದ್ದು, ಜಮೀನು ಮಾರಾಟ ಮಾಡುವ ಹಠಕ್ಕೆ ಶ್ರೀಶೈಲ್‌ ಬಿದ್ದಿದ್ದರಿಂದ ಈರಪ್ಪಾ ನ್ಯಾಯಾಲಯದ ಮೊರೆ ಹೋಗಿ ಜಮೀನು ಪರಬಾರೆ ಮಾಡದಂತೆ ಆದೇಶ ತಂದಿದ್ದಾನೆ.

ಇದರಿಂದ ಅಸಮಾಧಾನಗೊಂಡ ಶ್ರೀಶೈಲ್‌ ಸ್ವಂತ ತಮ್ಮನನ್ನು ಹತ್ಯೆ ಮಾಡುವ ಕುರಿತು ಸಂಚು ರೂಪಿಸಿ, ಇನ್ನೂಳಿದ ಆರೋಪಿಗಳಿಗೆ ಸುಫಾರಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಜೂನ್‌ 4 ರಂದು ರಾತ್ರಿ ಮನೆಯಿಂದ ಹೊರಗೆ ಹೋದ ಈರಪ್ಪ ಮರಳಿ ಮನೆಗೆ ಬರುತ್ತಿದ್ದ ಸಮಯದಲ್ಲಿ ಅಪಹರಣ ಮಾಡಿದ್ದಾರೆ. ಬಳಿಕ ಉಸಿರಿಗಟ್ಟಿಸಿ ಕೊಲೆ ಮಾಡಿದ ಬಳಿಕ ಈರಪ್ಪನ ಮೃತದೇಹವನ್ನು ಬಾಗಲಕೋಟೆ ಜಿಲ್ಲೆಯ ಬಿಳಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋರ್ತಿ ಕೋಲಾರ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.

ಕಾಣೆ ಪ್ರಕರಣ ಬೇಧಿಸಿದ ಖಾಕಿ:

ಜೂನ್‌ 4 ರಂದು ರಾತ್ರಿ ಮನೆಯಲ್ಲಿ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಈರಪ್ಪ ಚೌಗಲಾ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಜೂನ್‌ 6 ರಂದು ಮೃತ ಈರಪ್ಪನ ತಂದೆ ಅಲಗೊಂಡ ಚೌಗಲಾ ಹಾರೂಗೇರಿ ಪೊಲೀಸ್‌ ಠಾಣೆಗೆ ತೆರಳಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು.

ಹೊಸಕೋಟೆ: ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಕ್ಕೆ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ದುಷ್ಕರ್ಮಿಗಳು..!

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಾರೂಗೇರಿ ವೃತ್ತ ನಿರೀಕ್ಷಕ ಡಿ.ರವಿಚಂದ್ರನ ಹಾಗೂ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದ ಪೊಲೀಸರ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಹಲವು ಮಾಹಿತಿ ಕಲೆ ಹಾಕಿದ್ದ ಪೊಲೀಸರಿಗೆ ಬೀಳಗಿ ಠಾಣಾ ವ್ಯಾಪ್ತಿಯ ಕೋರ್ತಿ ಕೋಲಾರ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಅಲ್ಲಿಯೂ ತೆರಳಿ ಪರಿಶೀಲನೆ ನಡೆಸಿದ ಸಮಯದಲ್ಲಿ ಕಾಣೆಯಾದ ಈರಪ್ಪನಿಗೂ ಹಾಗೂ ಮೃತದೇಹಕ್ಕೂ ತಾಳೆಯಾಗಿದೆ. ಈ ಪ್ರಕರಣದ ಹಿಂದೆ ಕುಟುಂಬಸ್ಥರ ಕೈವಾಡ ಇರುವ ಕುರಿತು ಮತ್ತಷ್ಟು ಅನುಮಾನಗೊಂಡ ಪೊಲೀಸರು, ಸಹೋದರ ಶ್ರೀಶೈಲ ಚೌಗಲಾನ್ನು ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಹೋದರನ ಕೊಲೆಯ ಹಿಂದೆ ಕೈವಾಡ ಇರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಈ ಕೃತ್ಯದಲ್ಲಿ ಭಾಗಿಯಾದವರ ಕುರಿತು ಮಾಹಿತಿಯನ್ನು ನೀಡಿದ್ದಾನೆ.

ಮೊದಲಿಗೆ ವ್ಯಕ್ತಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಆಸ್ತಿ ವಿಚಾರವಾಗಿ ಸಹೋದರ ಸೇರಿದಂತೆ ಒಟ್ಟು 9 ಜನರು ಕೊಲೆಯಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗುತ್ತಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರು ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕೊಲೆ ಪ್ರಕರಣ ಬೇಧಿಸಿದ ಹಾರೂಗೇರಿ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ. 

click me!