ದಶಕದ ಬಳಿಕ ಭಾರತಕ್ಕೆ ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ವಿಶ್ವಕಪ್ ಗೆಲ್ಲುತ್ತಿದ್ದಂತೆ ನಿವೃತ್ತಿ ನಿರ್ಧಾರವನ್ನು ಕೊಹ್ಲಿ ಪ್ರಕಟ ಮಾಡಿದರೆ, ಸಂಭ್ರಮಾಚರಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ತಮ್ಮ ನಿವೃತ್ತಿಯ ವಿಚಾರವನ್ನು ಬಹಿರಂಗಪಡಿಸಿ ದರು.
ರೋಹಿತ್ ಮಾತನಾಡಿ, 'ಈ ಕ್ಷಣಕ್ಕಾಗಿ ಹಾತೊರೆಯುತ್ತಿದ್ದೆ. ನನ್ನ ಟಿ20 ವೃತ್ತಿಬದುಕೀಗ ಸಂಪೂರ್ಣವಾಗಿದೆ' ಎಂದರು. ಇದು ನನ್ನ ಪಾಲಿನ ಕೊನೆಯ ಟಿ20 ಪಂದ್ಯ. ಈ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ನಾನು ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡಿದ್ದೇನೆ. ನಾನು ಈ ಮಾದರಿಯ ಕ್ರಿಕೆಟ್ ಮೂಲಕವೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದೆ. ನಾನು ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ನಾನು ವಿಶ್ವಕಪ್ ಗೆಲ್ಲಬೇಕೆಂದುಕೊಂಡಿದ್ದೆ" ಎಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.
ಇದು ನನ್ನ ಕೊನೆಯ ಟಿ20 ವಿಶ್ವಕಪ್; ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಶಾಕ್ ಕೊಟ್ಟ ವಿರಾಟ್ ಕೊಹ್ಲಿ..!
37 ವರ್ಷದ ರೋಹಿತ್ ಶರ್ಮಾ ಭಾರತಕ್ಕೆ ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ಮೂರನೇ ನಾಯಕ ಎನಿಸಿಕೊಂಡಿದ್ದಾರೆ. ಈ ಮೊದಲು 1983ರಲ್ಲಿ ಕಪಿಲ್ ದೇವ್(ಏಕದಿನ ವಿಶ್ವಕಪ್) ಹಾಗೂ ಎಂ ಎಸ್ ಧೋನಿ(2007ರ ಟಿ20 ವಿಶ್ವಕಪ್ & 2011ರ ಏಕದಿನ ವಿಶ್ವಕಪ್) ಗೆದ್ದಿದ್ದರು. ರೋಹಿತ್ ಶರ್ಮಾ 2021ರಲ್ಲಿ ಪೂರ್ಣಪ್ರಮಾಣದ ಟೀಂ ಇಂಡಿಯಾ ನಾಯಕರಾಗಿ ನೇಮಕವಾಗಿದ್ದರು. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯ ಸೋಲದೇ ವಿಶ್ವಕಪ್ ಗೆದ್ದ ನಾಯಕ ಎನ್ನುವ ಹಿರಿಮೆ ಕೂಡಾ ರೋಹಿತ್ ಶರ್ಮಾ ಪಾಲಾಗಿದೆ.
ಇನ್ನು ಇದೇ ವೇಳೆ ರೋಹಿತ್ ಶರ್ಮಾ ತಾವು ಭಾರತ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಮುಂದುವರೆಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ, 'ಇದು ನನ್ನ ಕಡೆಯ ಟಿ20 ವಿಶ್ವಕಪ್, ನಾವು ಏನು ಮಾಡಬೇಕು ಅಂದುಕೊಂಡಿದ್ದೇವೋ ಅದನ್ನು ಸಾಧಿಸಿದ್ದೇವೆ. ಒಂದೊಂದು ದಿನ ನಾವು ಇಂದು ರನ್ ಗಳಿಸುವುದು ಸಾಧ್ಯವಿಲ್ಲ ಎಂದುಕೊಂಡಿರುತ್ತೇವೆ ಆದರೂ ಇಂದು ನಡೆದಂಥ ಘಟನೆಗಳು ನಡೆಯುತ್ತದೆ. ದೇವರು ದೊಡ್ಡವನು. ಇಂದು ಅಥವಾ ಇನ್ನೆಂದೂ ಇಲ್ಲ ಎನ್ನುವ ಸಂದರ್ಭ. ಇದು ಭಾರತದ ಪರವಾಗಿ ನನ್ನ ಕಡೆಯ ಟಿ20 ಪಂದ್ಯ, ನಾವು ಕಪ್ ಎತ್ತಲು ಬಯಸಿದ್ದೆವು' ಎಂದು ಹೇಳಿದ್ದಾರೆ.
ಜೊತೆಗೆ, 'ಹೌದು. ಇದು ಬಹಿರಂಗ ಸತ್ಯ. ಇಂದು ನಾವು ಸೋತಿದ್ದರೆ ನಾವು ವಿದಾಯ ಘೋಷಣೆ ಮಾಡುತ್ತಿರಲಿಲ್ಲ ಎಂದೇನಲ್ಲ, ಇದು ಟಿ20ಯನ್ನು ಹೊಸ ತಲೆಮಾರು ಮುನ್ನಡೆಸುವ ಸಮಯ. ಐಸಿಸಿ ಟ್ರೋಫಿ ಗೆಲ್ಲುವುದು ನಮ್ಮ ಪಾಲಿಗೆ ಸುದೀರ್ಘ ಕಾಯುವಿಕೆಯ ಅವಧಿಯಾಗಿತ್ತು. ರೋಹಿತ್‌ಗಿದು 9ನೇ ಟಿ20 ವಿಶ್ವಕಪ್, ನನಗೆ 6ನೇ ವಿಶ್ವಕಪ್. ರೋಹಿತ್ ನಿಜವಾಗಿಯೂ ಇದಕ್ಕೆ ಅರ್ಹ' ಎಂದು ಕೊಹ್ಲಿ ಗೆಲುವಿನ ಸಂಭ್ರಮ,ನಿವೃತ್ತಿಯ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
