ವರ್ಷಕ್ಕೊಂದು ವಿಶ್ವಕಪ್‌ಗೆ ಐಸಿಸಿ ರೆಡಿ!

By Kannadaprabha News  |  First Published Feb 19, 2020, 10:47 AM IST

ಬಿಸಿಸಿಐಗೆ ಸೆಡ್ಡು ಹೊಡೆಯಲು ಐಸಿಸಿ ಮಾಸ್ಟರ್ ಪ್ಲಾನ್ ರೂಪಿಸಿದೆ. 2023ರಿಂದ 2031ರ ವರೆಗೂ ಪ್ರತಿ ವರ್ಷ ವಿಶ್ವಕಪ್‌ ಆಯೋಜನೆಗೆ ಐಸಿಸಿ ಸಿದ್ಧತೆ ಆರಂಭಿಸಿದೆ. ಇದರ ಲಾಭ-ನಷ್ಟಗಳೇನು? ಬಿಸಿಸಿಐ ಮುಂದಿರುವ ದಾರಿ ಯಾವುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...


ನವದೆಹಲಿ(ಫೆ.19): ಪ್ರಸಾರ ಹಕ್ಕು, ಪ್ರಾಯೋಜಕತ್ವ, ಜಾಹೀರಾತು ಒಪ್ಪಂದಗಳಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾವಿರಾರು ಕೋಟಿ ರುಪಾಯಿಗಳನ್ನು ಸಂಪಾದಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಿ, ತನ್ನ ಖಜಾನೆಗೆ ಹಣ ಹರಿಯುವಂತೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮಾಸ್ಟರ್‌ ಪ್ಲಾನ್ ರೂಪಿಸಿದೆ. 

ಈ ಹಿಂದೆಯೇ ಪ್ರಸ್ತಾಪಿಸಿದ್ದಂತೆ ವರ್ಷಕ್ಕೊಂದು ಜಾಗತಿಕ ಮಟ್ಟದ ಟೂರ್ನಿಯನ್ನು ನಡೆಸಲು ಯೋಜನೆ ಸಿದ್ಧಗೊಳಿಸಿದೆ. ಅದರ ಅನುಸಾರ 2023ರಿಂದ 2031ರ ವರೆಗೂ ಪ್ರತಿ ವರ್ಷ ವಿಶ್ವಕಪ್‌ ಆಯೋಜನೆಗೆ ಐಸಿಸಿ ಸಿದ್ಧತೆ ಆರಂಭಿಸಿದೆ. ಏಕದಿನ ಹಾಗೂ ಟಿ20 ವಿಶ್ವಕಪ್‌ ಜತೆಗೆ ಏಕದಿನ ಹಾಗೂ ಟಿ20 ಚಾಂಪಿಯನ್ಸ್‌ ಕಪ್‌ ಎನ್ನುವ ಹೊಸ ಟೂರ್ನಿಗಳನ್ನುಲು ಐಸಿಸಿ ಮುಂದಾಗುತ್ತಿದೆ. ಮಾ.15ರೊಳಗೆ ಟೂರ್ನಿಗೆ ಆತಿಥ್ಯ ವಹಿಸಲು ಇಚ್ಛಿಸುವ ರಾಷ್ಟ್ರಗಳು ಬಿಡ್‌ ಸಲ್ಲಿಕೆಗೆ ಆಸಕ್ತಿ ವ್ಯಕ್ತಪಡಿಸುವಂತೆ ಐಸಿಸಿ ಸೂಚಿಸಿದೆ.

Tap to resize

Latest Videos

undefined

ಯಾವ್ಯಾವ ಟೂರ್ನಿ ಯಾವ್ಯಾವಾಗ?

2023, 2027, 2031ರಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದ್ದು, 2024, 2028ರಲ್ಲಿ ಟಿ20 ಚಾಂಪಿಯನ್ಸ್‌ ಕಪ್‌ ನಡೆಸಲು ಪ್ರಸ್ತಾಪಿಸಲಾಗಿದೆ. 2025, 2029ರಲ್ಲಿ ಏಕದಿನ ಚಾಂಪಿಯನ್ಸ್‌ ಕಪ್‌, 2026, 2030ರಲ್ಲಿ ಟಿ20 ವಿಶ್ವಕಪ್‌ ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ.

ಟೂರ್ನಿಗಳ ಮಾದರಿ ಹೇಗೆ?

ಏಕದಿನ ವಿಶ್ವಕಪ್‌ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲ. 2019ರ ಆವೃತ್ತಿಯಂತೆ 10 ತಂಡಗಳು ರೌಂಡ್‌ ರಾಬಿನ್‌ ಮಾದರಿಯಲ್ಲಿ ಸೆಣಸಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಏಕದಿನ ಚಾಂಪಿಯನ್ಸ್‌ ಕಪ್‌ ಟೂರ್ನಿ, ಚಾಂಪಿಯನ್ಸ್‌ ಟ್ರೋಫಿ ಮಾದರಿಯನ್ನು ಅನುಸರಿಸಲಿದೆ. ಟೂರ್ನಿಯಲ್ಲಿ 6 ತಂಡಗಳು ಮಾತ್ರ ಪಾಲ್ಗೊಳ್ಳಲಿದ್ದು ಕೇವಲ 16 ಪಂದ್ಯಗಳು ನಡೆಯಲಿವೆ.

ಸೂಪರ್‌ ಸೀರೀಸ್‌ ಚರ್ಚೆ: ಇಂಗ್ಲೆಂಡ್‌ಗೆ ಗಂಗೂಲಿ!

ಟಿ20 ಚಾಂಪಿಯನ್ಸ್‌ ಕಪ್‌, ಏಕದಿನ ವಿಶ್ವಕಪ್‌ ರೀತಿಯಲ್ಲೇ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿದ್ದು 48 ಪಂದ್ಯಗಳು ನಡೆಯಲಿವೆ. ಟಿ20 ವಿಶ್ವಕಪ್‌ನ ತಂಡಗಳ ಸಂಖ್ಯೆಯಲ್ಲಿ ಏರಿಕೆ ಮಾಡಲಾಗುವುದು. ಸದ್ಯ ಇರುವ 16 ತಂಡಗಳ ಬದಲಿಗೆ 20 ತಂಡಗಳನ್ನು ಕಣಕ್ಕಿಳಿಸಿ 55 ಪಂದ್ಯಗಳನ್ನು ನಡೆಸಲಾಗುತ್ತದೆ. ಈ ಟೂರ್ನಿಗಳ ಜತೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಮಹಿಳಾ ಏಕದಿನ ಹಾಗೂ ಟಿ20 ವಿಶ್ವಕಪ್‌ ಟೂರ್ನಿಗಳು ಸಹ ನಡೆಯಲಿವೆ.

ಬಿಸಿಸಿಐಗೆ ನಷ್ಟ ಏಕೆ?

ವರ್ಷಕ್ಕೊಂದು ವಿಶ್ವಕಪ್‌ ನಡೆಸುವುದರಿಂದ ದ್ವಿಪಕ್ಷೀಯ ಸರಣಿಗಳಿಗೆ ಕಡಿವಾಣ ಹಾಕಬಹುದು. ಇದರಿಂದ ಪ್ರಸಾರ ಹಕ್ಕು, ಜಾಹೀರಾತು ಒಪ್ಪಂದ, ಪ್ರಾಯೋಜಕತ್ವದ ಹಣದಲ್ಲಿ ಐಸಿಸಿಗೆ ದೊಡ್ಡ ಪಾಲು ಸಿಗಲಿದೆ. ಆ ಹಣವನ್ನು ಸಣ್ಣ ಸಣ್ಣ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಅಭಿವೃದ್ಧಿಗೆ ಬಳಸುವುದಾಗಿ ಐಸಿಸಿ ಹೇಳಿಕೊಂಡಿದೆ. ಆದರೆ ಐಸಿಸಿಗೆ ಹರಿದು ಬರುವ ಒಟ್ಟು ಹಣದಲ್ಲಿ ಬಿಸಿಸಿಐ, ಕ್ರಿಕೆಟ್‌ ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಳು ದೊಡ್ಡ ಪ್ರಮಾಣದ ಕೊಡುಗೆ ನೀಡಲಿವೆ. ಹೀಗಾಗಿ ಈ ಮೂರು ಮಂಡಳಿ ಸೇರಿ ಐಸಿಸಿಗೆ ತಿರುಗೇಟು ನೀಡಲು ‘ಸೂಪರ್‌ ಸೀರೀಸ್‌’ ಎನ್ನುವ ಚತುಷ್ಕೋನ ಟೂರ್ನಿಯನ್ನು ನಡೆಸಲು ಸಿದ್ಧತೆ ನಡೆಸಿವೆ.

ಬಿಸಿಸಿಐ ಏನು ಮಾಡಬಹುದು?

ಐಸಿಸಿ ವರ್ಷಕ್ಕೊಂದು ವಿಶ್ವಕಪ್‌ ನಡೆಸುವುದನ್ನು ತಪ್ಪಿಸಲು ಬಿಸಿಸಿಐ ಮುಂದೆ ಹಲವು ಆಯ್ಕೆಗಳಿವೆ. ಬಿಸಿಸಿಐ ಜತೆ ಕ್ರಿಕೆಟ್‌ ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಸಹ ಕೈಜೋಡಿಸಿದರೆ ಐಸಿಸಿಗೆ ತಿರುಗೇಟು ನೀಡಬಹುದು ಎನ್ನುವ ಲೆಕ್ಕಾಚಾರವಿದೆ.

* ವಿಶ್ವಕಪ್‌, ಚಾಂಪಿಯನ್ಸ್‌ ಕಪ್‌ ಬಹಿಷ್ಕರಿಸುವುದು

* ಟೂರ್ನಿಗಳಿಗೆ ಪ್ರಮುಖ ಆಟಗಾರರನ್ನು ಕಳುಹಿಸದೆ ಇರುವುದು

* ಐಪಿಎಲ್‌ ಅವಧಿಯನ್ನು ವಿಸ್ತರಿಸುವುದು

* ಇಂಗ್ಲೆಂಡ್‌, ಆಸ್ಪ್ರೇಲಿಯಾದ ದೇಸಿ ಟಿ20 ಟೂರ್ನಿಗಳ ವೇಳಾಪಟ್ಟಿಯನ್ನು ಬದಲಿಸುವುದು
 

click me!