ಸಿಟಿ ಕತೆ ಆಯ್ತು. ಈಗ ಜಿಲ್ಲಾಕೇಂದ್ರಗಳಲ್ಲಿ ಕೊರೋನಾ ಭಯ. ಮುಖದ ತುಂಬ ದಿಗಿಲು ಹೊತ್ತು ಓಡಾಡುವ ಊರ ಜನ. ಆತ್ಮೀಯರನ್ನು ಮಾತನಾಡಿಸಲೂ ಶಂಕೆ. ಮನೆಗೆ ತಂದ ಕಾಯಿಪಲ್ಲೆಗೂ ಕೊರೋನಾ ಅಂಟಿರಬಹುದಾ ಅನ್ನೋ ಭೀತಿ. ಕೊರೋನಾ ಕಾಲದಲ್ಲಿ ರಾಜ್ಯದ ಆರು ಜಿಲ್ಲೆಗಳ ಜನರ ಕಥೆ ಹೇಗಿದೆ?
ಶೇಷಮೂರ್ತಿ ಅವಧಾನಿ
ಕೊರೋನಾಬುರುಗಿಯಲ್ಲೀಗ ಬೆಟ್ಟದಷ್ಟುಭಯ
ಕೊರೋನಾ ಹೆಮ್ಮಾರಿಗೆ ದೇಶದಲ್ಲೇ ಮೊದಲ ಸಾವು ಸಂಭವಿಸಿರುವ ಕಲಬುರಗಿಯಲ್ಲೀಗ ಬೆಟ್ಟದಷ್ಟುಭಯ. ಅಷ್ಟೇ ಯಾಕೆ, ಉಹೆಗೂ ನಿಲುಕದಷ್ಟುಪ್ರಾಣಭೀತಿ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಆತಂಕದ ಕಾರ್ಮೋಡದ ಕವಿದಿದೆ. ಸೌದಿಗೆ ಹೋಗಿ ಬಂದ ಇಲ್ಲಿನ ಅಜ್ಜನ ಜೊತೆಗೇ ಬಂದ ವೈರಾಣು ಇದೀಗ ಬಿಸಿಲೂರಿನ್ನೇ ಬೆವರುವಂತೆ ಮಾಡಿದೆ.
ಸೌದಿ ಅಜ್ಜನ ಒಡಲಲಿ ಅವಿತು ಬಂದು ಕಲಬುರಗಿಯನ್ನೇ ‘ಕೊರೋನಾಬುರಗಿ’ಯಾಗಿಸಿರೋ ವೈರಾಣು ಅದ್ಯಾವ ಮಾಯೆಯಿಂದಲಾದರೂ ನಮ್ಮೊಳಗೆ ಹೊಕ್ಕಿ ಬಿಟ್ಟರೆ ಮುಂದೇನು? ಎಂಬ ಭೀತಿ ಕಾಡುತ್ತಿದೆ. ಪ್ರಾಣಭಯ- ಆತಂಕದ ಈ ಮಹಾ ನಗರದಲ್ಲೀಗ ಜೋರಾಗಿ ಕೆಮ್ಮುವ, ಸೀನುವ ಮಾತಿರಲಿ... ಒಬ್ಬರಿಗೊಬ್ಬರು ಮಾತನಾಡೋದಕ್ಕೂ ಹೆದರುತ್ತಿದ್ದಾರೆ. ಬಸ್ಸು- ರೈಲು ನಿಲ್ದಾಣ, ಮಂದಿರ- ಮಾರುಕಟ್ಟೆಗಳಲ್ಲಿ ಜೋರಾಗಿ ಕೆಮ್ಮಿದರೆ, ಸೀನಿದರೆ ಸಾಕು, ಪಕ್ಕದಲ್ಲಿದ್ದವರು 108 ಗೆ ಕರೆ ಮಾಡಿ ಅಂಬುಲನ್ಸ್ ತರಿಸಿ ಆಸ್ಪತ್ರೆಗೇ ರವಾನಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ಮನೆಯಂಗಳಕ್ಕೆ ಬಂತು ಮಹಾಮಾರಿ
ಚೀನಾದ ವುಹಾನ್ ನಗರ, ಇಟಲಿ ದೇಶದಲ್ಲಿ ಕೊರೋನಾ ಮರಣ ಮೃದಂಗ, ಸಾವು- ನೋವಿನ ವಾರ್ತೆಗಳನ್ನೆಲ್ಲ ಟೀವಿಯಲ್ಲಿ ನೋಡುತ್ತ, ಪತ್ರಿಕೆಗಳಲ್ಲಿ ಓದುತ್ತ ತಮ್ಮ ಪಾಡಿಗೆ ತಾವಿದ್ದ ಸೂರ್ಯನಗರಿಯ ಜನತೆ ಈ ಮಹಾಮಾರಿಯಿಂದಾಗುವ ಭಾರತದ ಮೊದಲ ಬೇಟೆæಗೆ ಕಲಬುರಗಿಯೇ ರಣರಂಗವಾಗಲಿದೆ ಎಂಬುದನ್ನ ಕನಸು ಮನಸಲ್ಲೂ ಯೋಚಿಸಿರಲಿಲ್ಲ.
ಕೊರೋನಾ ಭೀತಿ: ಕೆಮ್ಮಿದ್ದಕ್ಕೆ ರೈಲಿನಿಂದ ಇಳಿಸಿದ ಕಲಬುರಗಿ ಮಂದಿ!
ಒಂದು ತಿಂಗಳು ಸೌದಿಯ ಮೆಕ್ಕಾ ಯಾತ್ರೆಗೆ ಹೋಗಿ ಬಂದ ಇಲ್ಲಿನ ವಾರ್ಡ್ 30ರ ಅಜ್ಜನ ಒಡಲು ಹೊಕ್ಕು ಅವಿತು ಕುಳಿತು ಕಲಬುರಗಿವರೆಗೂ ಬಂದ ಕೊರೋನಾ ತನಗಾಸರೆ ನೀಡಿರುವ ಅಜ್ಜನ ಪ್ರಾಣ ಬೇಟೆಯಾಡಿದ್ದಷ್ಟೇ ಅಲ್ಲ, ಇನ್ನಿಬ್ಬರಲ್ಲಿ ತನ್ನ ಅಸ್ತಿತ್ವ ತೋರಿಸಿ ‘ಪರೇಶಾನಿ’ ದ್ವಿಗುಣಗೊಳಿಸಿದೆ. ಹೀಗಾಗಿ ಕಲಬುರಗಿ ಮಂದಿ ತಾವು ತಿನ್ನುವ ಆಹಾರ, ಬಳಸೋ ತರಕಾರಿ, ದಿನಸಿಯನ್ನೂ ಶಂಕಿಸುವಂತಾಗಿದೆ.
ಹೆಚ್ಚುತ್ತಿರೋ ಹೋಮ್ ಕ್ವಾರಂಟೈನ್
ಕೊರೋನಾದಿಂದ ಸಾವಿಗೀಡಾದ ಅಜ್ಜನ ನೇರ ಸಂಪರ್ಕ ಹೊಂದಿರುವ 98 ಜನ, ಎರಡನೇ ಸಂಪರ್ಕ ಹೊಂದಿರುವ 389 ಜನ ಇಲ್ಲಿದ್ದಾರೆ. ವಿದೇಶದಿಂದ ಆಗಮಿಸಿದ 337 ಜನರನ್ನು ಸಹ ಪತ್ತೆ ಹಚ್ಚಲಾಗಿ ಒಟ್ಟಾರೆ ಇದೂ ವರೆಗೆ 811 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದೆ.
ವುಹಾನ್ ಮಾದರಿ ದಿಗ್ಭಂಧನಕ್ಕೆ ಕಂಗಾಲು
ಮನೆ ಬಾಗಿಲಿಗೇ ಬಂದ ಮಾರಿಯನ್ನ ಹಿಮ್ಮೆಟ್ಟಿಸಲೆಂದು ಜಿಲ್ಲಾಡಳಿತ ಜನ ಸಂಚಾರ, ವಾಣಿಜ್ಯ ವಹಿವಾಟು, ಜನ ಸಂಚಾರದ ಮೇಲೆ ವಿಧಿಸಿರುವ ನಿರ್ಬಂಧದಿಂದಾಗಿ ಕಲಬುರಗಿ ಚೀನಾದ ವುಹಾನ್‌ನಂತೆ ದೇಶದ ಗಮನ ಸೆಳೆದಿದೆ. ಕಳೆದ 2 ವಾರದಿಂದ ಅಘೋಷಿತ ಬಂದ್, ಅಜ್ಜನ ಸಾವು, ಇನ್ನಿಬ್ಬರಿಗೂ ಸೋಂಕು ಧೃಢ, 144 ನೇ ಕಲಂ ಇನ್ನೂ ಜಾರಿಯಲ್ಲಿದೆ. ವಾಣಿಜ್ಯ ವಹಿವಾಟು, ಬಸ್ ಸಂಚಾರ ಬಂದ್ ಆಗಿರೋ ಕಲಬುರಗಿ ಅಕ್ಷರಶಃ ನಿಶ್ಯಬ್ದ.
ಕೊರೋನಾ ಭೀತಿ: ಭಕ್ತರಿಲ್ಲದೆ ಪ್ರಸಿದ್ಧ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನ ಖಾಲಿ ಖಾಲಿ
ಸಾಹಿತ್ಯ ಸಮ್ಮೇಳನದ ಖ್ಯಾತಿ- ಕೊರೋನಾ ಸೋಂಕಿನ ಕುಖ್ಯಾತಿ
ಐತಿಹಾಸಿಕ ಕಲಬುರಗಿ ನಗರ ಒಂದೇ ತಿಂಗಳಲ್ಲಿ ಖ್ಯಾತಿ- ಕುಖ್ಯಾತಿ ಎರಡೂ ಹೊಂದುವಂತಾಯ್ತು. 34 ವರ್ಷಗಳ ನಂತರ ಈ ನಗರಕ್ಕೊಲಿದು ಬಂದ ಅಭಾ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 5, 6 7 ರಂದು ಕಲಬುರಗಿಯಲ್ಲೇ ನಭೂತೋ... ಎಂಬಂತೆ ನಡೆದುಹೋಯ್ತು. ದಿನಕ್ಕೆ 2 ಲಕ್ಷದಂತೆ 3 ದಿನಗಳಲ್ಲಿ 6 ರಿಂದ 8 ಲಕ್ಷ ಜನ ತೊಗರಿ ನಾಡಿಗೆ ಬಂದು ಹೋದಾಗ ಇಡೀ ಕುರುನಾಡೇ ಬೆರಗಾಗಿತ್ತು. ಇದೀಗ ಮಾ. 12 ರಿಂದ ಈ ನಗರ ಜನರೇ ಇಲ್ಲದೆ ಬಣಗುಡುತ್ತಿದೆ, ಕೊರೋನಾ ಕಲಬುರಗಿ ಗೊಡವೆಯೇ ಬೇಡವೆಂದು ಬಳ್ಳಾರಿ, ಬೆಂಗಳೂರು, ಹೈದ್ರಾಬಾದ್, ವಿಜಯಪುರ ಸೇರಿದಂತೆ ಹಲವು ನಗರದ ಬಸ್ಸುಗಳೇ ರದ್ದಾಗಿವೆ. ಕಲಬುರಗಿಗೆ ಯಾರೂ ಬರಬೇಡಿರೆಂದು ಜಿಲ್ಲಾಡಳಿತವೂ ದಿಗ್ಬಂಧನ ಹೇರಿದೆ. ಕಲಬುರಗಿ ಅಂದಾಕ್ಷಣ ಸಮ್ಮೇಳನ ಭರ್ಜರಿಯಾಗಿ ನಡೆದ ಊರಿನೋರಾ? ಎಂದು ಮಾತಿಗೆ ಇಳಿಯುತ್ತಿದ್ದ ಜನ ಇದೀಗ ‘ಕಲಬುರಗಿಯವ್ರಾ..? ಅಯ್ಯೋ ಇಲ್ಲಿಗ್ಯಾಕೆ ಬಂದ್ರಿ, ಕೊಂಚ ದೂರ ನಿಲ್ಲಿ...’ ಎಂದು ಅಂತರ ಕಾಯ್ದುಕೊಳ್ಳುತ್ತ ‘ಕೊರೋನಾಬುರಗಿ’ ಗೊಡವೆ ನಮಗ್ಯಾಕೆ? ಎನ್ನುತ್ತಿದ್ದಾರೆ.