ಸೇನಾ ನರ್ಸಿಂಗ್‌ ಹುದ್ದೆ ಸ್ತ್ರೀಯರಿಗೆ ಮೀಸಲು ಅಸಾಂವಿಧಾನಿಕ, ಪುರುಷರಿಗೂ ಚಾನ್ಸ್‌ ಕೊಡಿ: ಕೋರ್ಟ್‌

By Suvarna News  |  First Published Jan 12, 2024, 3:43 PM IST

ಭಾರತೀಯ ಸೇನೆಯಲ್ಲಿ ನರ್ಸಿಂಗ್ ಹುದ್ದೆಗಳನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಕಲ್ಪಿಸುವ ‘ಭಾರತೀಯ ಮಿಲಿಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ-1943ರ ಸೆಕ್ಷನ್ 6ರಲ್ಲಿ ಬಳಕೆ ಮಾಡಿರುವ ‘ಮಹಿಳೆಯಾಗಿದ್ದರೆ’ ಎಂಬ ಪದ ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸುವ ಮೂಲಕ ಪುರುಷರಿಗೂ ಈ ಹುದ್ದೆ ಕಲ್ಪಿಸಬೇಕು ಎಂದು ಹೇಳಿದೆ.


ಬೆಂಗಳೂರು (ಜ.12): ಭಾರತೀಯ ಸೇನೆಯಲ್ಲಿ (ರಕ್ಷಣಾ ಇಲಾಖೆ) ನರ್ಸಿಂಗ್ ಹುದ್ದೆಗಳನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಕಲ್ಪಿಸುವ ‘ಭಾರತೀಯ ಮಿಲಿಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ-1943ರ ಸೆಕ್ಷನ್ 6ರಲ್ಲಿ ಬಳಕೆ ಮಾಡಿರುವ ‘ಮಹಿಳೆಯಾಗಿದ್ದರೆ’ ಎಂಬ ಪದ ಅಸಾಂವಿಧಾನಿಕ ಎಂದು ಹೈಕೋರ್ಟ್ ಘೋಷಿಸುವ ಮೂಲಕ ಪುರುಷರಿಗೂ ಈ ಹುದ್ದೆ ಕಲ್ಪಿಸಬೇಕು ಎಂದು ಹೇಳಿದೆ.

ಶುಶ್ರೂಷಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿ ರಕ್ಷಣಾ ಇಲಾಖೆ 2010ರ ಫೆಬ್ರವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ‘ಮಹಿಳೆಯಾಗಿದ್ದರೆ’ ಎಂಬುದಾಗಿ ತಿಳಿಸಿರುವುದನ್ನು ಹುಬ್ಬಳ್ಳಿಯ ಕೆಎಲ್‌ಇ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲ ಸಂಜಯ್ ಎಂ.ಪೀರಾಪುರ, ಉಪನ್ಯಾಸಕ ಶಿವಪ್ಪ ಮರನಬಸರಿ ಮತ್ತು ಕರ್ನಾಟಕ ಶುಶ್ರೂಷಕರ ಸಂಘ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

Tap to resize

Latest Videos

undefined

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 504 ಹುದ್ದೆಗಳ ಭರ್ತಿಗೆ ಸರ್ಕಾರ ಒಪ್ಪಿಗೆ, ಕೆಎಎಸ್ ಅಧಿಕಾರಿಗಳ ನೇಮಕಾತಿ ಹೇಗೆ?

ಸಂವಿಧಾನದ ಅಡಿಯಲ್ಲಿ ಮಹಿಳೆಯನ್ನು ಪ್ರತ್ಯೇಕ ವರ್ಗವೆಂದು ಪರಿಗಣಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ, ಈ ಆಶಯ ಈಡೇರಿಕೆಗೆ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು ಎನ್ನುವುದು ತಾರ್ಕಿಕವಾಗಿಲ್ಲ. ಸಂವಿಧಾನದ ಪರಿಚ್ಛೇದ 15 (3) (ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡುವ ಅವಕಾಶ) ಅಡಿಯಲ್ಲಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ಹುದ್ದೆಗಳ ನೇಮಕಾತಿಯಲ್ಲಿ ಈ ರೀತಿ ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲು ಕಲ್ಪಿಸುವುದು ಸಂವಿಧಾನದ ಪರಿಚ್ಛೇದ 14 (ಸಮಾನತೆ), 16 (2) (ಲಿಂಗ ತಾರತಮ್ಯ ತಡೆ) ಹಾಗೂ 21 (ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತಾಗಲಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು 1943ರಲ್ಲಿ ಈ ವಿವಾದಿತ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದರು. ಅದನ್ನು ಸಂವಿಧಾನದ ಅಡಿಯಲ್ಲಿ ಅಳವಡಿಸಿಕೊಂಡು ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಇದರಿಂದ ಆ ನಿಯಮವನ್ನು ಸಂವಿಧಾನದ 33ನೇ ಪರಿಚ್ಛೇದದಂತೆ ಸಂಸತ್ತು ಜಾರಿಗೆ ತಂದಿರುವ ಕಾನೂನು ಆಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಸೇನೆಗೆ ಸೇರಲು ಹಿಂಜರಿಯುತ್ತಿದ್ದ ಕಾರಣ ಮಹಿಳೆಯರನ್ನು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ಅವರಿಗೆ ಶೇ.100ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ, 1943ರಲ್ಲಿ ಇದ್ದಂತಹ ಪರಿಸ್ಥಿತಿ ಪ್ರಸ್ತುತ ಇಲ್ಲ. ಈ ಸುಗ್ರೀವಾಜ್ಞೆ ಜಾರಿಯಾಗಿ ಎಂಟು ದಶಕಗಳು ಕಳೆದಿವೆ. ಆದರೂ ಇಂದಿಗೂ ಮೀಸಲಾತಿ ಒದಗಿಸುವ ಉದ್ದೇಶಗಳು ಏನು ಎಂಬುದಕ್ಕೆ ಸೂಕ್ತ ಕಾರಣ ನೀಡಿಲ್ಲ. ಆದ ಕಾರಣ ಈ ಮೀಸಲು ಸೌಲಭ್ಯ ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಜ.23ಕ್ಕೆ 545 ಎಸ್‌ಐ ಹುದ್ದೆಗೆ ಮರುಪರೀಕ್ಷೆ

ಸಕಾರಣಗಳಿಲ್ಲದೆ ಶೇ.100ರಷ್ಟು ಮಹಿಳೆಯರಿಗೆ ಮಾತ್ರ ಅವಕಾಶ ನೀಡಿದಲ್ಲಿ ಮೀಸಲಾತಿ ಕಲ್ಪನೆ ಅಂತ್ಯಗೊಳಿಸಿದಂತಾಗುತ್ತದೆ. ಜತೆಗೆ, ಮೀಸಲು ಸೌಲಭ್ಯದಿಂದ ಪುರುಷರನ್ನು ಪ್ರತ್ಯೇಕಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ಕೋರ್ಟ್‌, 81 ವರ್ಷಗಳ ಹಳೆಯ ನಿಯಮವನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಿದೆ.

ಈ ಮಧ್ಯೆ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ 2010ರ ಅಧಿಸೂಚನೆಯಲ್ಲಿ ತಿಳಿಸಿದ್ದ ನರ್ಸಿಂಗ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮತ್ತೊಂದೆಡೆ ನರ್ಸಿಂಗ್‌ ಹುದ್ದೆಗೆ ನೇಮಕಾತಿಗೆ ನಿಗದಪಡಿಸಿದ ವಯೋಮಿತಿಯನ್ನು ಅರ್ಜಿದಾರರು ಮೀರಿದ್ದಾರೆ. ಆದ್ದರಿಂದ ಅರ್ಜಿದಾರರನ್ನು ಸೇನೆಯ ಶುಶ್ರೂಷಕರನ್ನಾಗಿ ನೇಮಕ ಮಾಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದರೆ, ಮೊದಲನೆ ಹಾಗೂ ಎರಡನೇ ಅರ್ಜಿದಾರರು ಭವಿಷ್ಯದಲ್ಲಿ ಸುಗ್ರೀವಾಜ್ಞೆ-1943ರ ಅಡಿಯಲ್ಲಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ, ಈ ಅರ್ಜಿ ವಿಚಾರಣೆ ಹಂತದಲ್ಲಿ ಅರ್ಜಿದಾರರು ಕಳೆದಿರುವ ಸಮಯವನ್ನು ಹೊರತುಪಡಿಸಿ ಅವರ ವಯಸ್ಸನ್ನು ಲೆಕ್ಕಾಚಾರ ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ವಿವರ: ಶುಶ್ರೂಷಕಿಯರ ನೇಮಕ ಸಂಬಂಧ ರಕ್ಷಣಾ ಇಲಾಖೆ (ಸೇನೆ) 2010ರ ರ ಫೆ.13 ಮತ್ತು 19ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ಅಭ್ಯರ್ಥಿಗಳು ಮಹಿಳೆಯಾಗಿದ್ದರೆ, ನಿಗದಿತ ಅರ್ಹತೆ ಹೊಂದಿದ್ದರೆ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಭಾರತೀಯ ಮಿಲಿಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ -1943ರ ಸೆಕ್ಷನ್ 6 ರಲ್ಲಿದ್ದ ಬಳಸಿರುವ ‘ಮಹಿಳೆಯಾಗಿದ್ದರೆ’ ಎಂಬ ಪದವನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿದ್ದರು.

click me!