ಮಾಯಾಮೃಗಕ್ಕೆ ಅದ್ಭುತ ಪ್ರತಿಕ್ರಿಯೆ- ಟಿ ಎನ್ ಸೀತಾರಾಮ್

By Suvarna News  |  First Published Jun 28, 2021, 11:44 AM IST

ಇವತ್ತು ಆದರ್ಶಗಳಿಗೆ ಉದಾಹರಣೆಯಾಗಿ ನೀತಿ ಕತೆಗಳು ದೊರಕುತ್ತವೆ. ಆದರೆ ಕತೆ ಹೇಳುವ ಬಣ್ಣದ ಲೋಕದಲ್ಲಿದ್ದುಕೊಂಡು ಜೀವಂತ ಆದರ್ಶವೆನಿಸುವ ಅಪರೂಪದ ವ್ಯಕ್ತಿಗಳಲ್ಲಿ ಟಿ.ಎನ್ ಸೀತಾರಾಮ್ ಪ್ರಮುಖರು. ಕಿರುತೆರೆಯ ಈ ಹಿರಿಯ ಪ್ರತಿಭಾವಂತ ತಮ್ಮ ಜೀವನದಲ್ಲಿ ಕತೆಗಳಿಗೆ ಇರುವ ಪ್ರಾಮುಖ್ಯತೆ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
 


ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಹೀಗೆ ಮೂರು ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದವರು ಸೀತಾರಾಮ್. `ಪಂಚಮ ವೇದ' ಚಿತ್ರಕ್ಕೆ ಅವರು ರಚಿಸಿದ ಸಂಭಾಷಣೆಗೆ ಶ್ರೇಷ್ಠ ಸಂಭಾಷಣೆಕಾರ ಎಂದು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ನಿರ್ದೇಶನದ `ಮತದಾನ' ಚಿತ್ರ ಶ್ರೇಷ್ಠ ಚಿತ್ರವೆಂದು ರಾಜ್ಯಪ್ರಶಸ್ತಿಗೆ ಅರ್ಹವಾಗಿದೆ.`ಮುಕ್ತ' ಎನ್ನುವ ಕಿರುತೆರೆ ಧಾರಾವಾಹಿಯ ನಿರ್ದೇಶನಕ್ಕೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ನಿರ್ದೇಶಕನಾಗಿ ಆರ್ಯಭಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಯಾಮೃಗ ಎನ್ನುವ ಒಂದು ಧಾರಾವಾಹಿ ಕನ್ನಡ ಕಿರುತೆರೆ ಲೋಕದಲ್ಲಿ ಹಾಕಿಕೊಟ್ಟ ಮಾದರಿ, ಮೂಡಿಸಿಟ್ಟ ದಾಖಲೆಗಳಿಂದಾಗಿ ಸದಾ ಸ್ಮರಣಾರ್ಹರೆನಿಸಿದ್ದಾರೆ. ಅಂತ ಟಿ.ಎನ್ ಸೀತಾರಾಮ್ ಅವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ ಒಂದಷ್ಟು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

- ಶಶಿಕರ ಪಾತೂರು

Tap to resize

Latest Videos

undefined

ಎರಡು ಕಾಲಘಟ್ಟವನ್ನು ಕಂಡ ಕತೆಗಾರರಲ್ಲಿ ನಿಮಗೆ ಕಾಣುವ ವ್ಯತ್ಯಾಸವೇನು?
ಅಂದಿನ ಮತ್ತು ಇಂದಿನ ಬರವಣಿಗೆಯ ಶೈಲಿಗಳಲ್ಲಿ ಖಂಡಿತವಾಗಿ ವ್ಯತ್ಯಾಸ ಇದೆ. ನನಗೆ ಸಂಬಂಧಿಸಿ ಹೇಳುವುದಾದರೆ ನನ್ನ ಭಾಷೆ ಅವತ್ತಿನದು. ನಾನು ಧಾರಾವಾಹಿಗೆ ಬರೆಯುವಾಗಲೂ ಒಂದು ಪೀಠಿಕೆ ಹಾಕಿ ಸಂಭಾಷಣೆಗೆ ಹೋಗುತ್ತಿದ್ದೆ. ಈಗ ನೇರವಾಗಿ ಸಂಭಾಷಣೆಗೆ ಹೊರಡುತ್ತೇನೆ. ನಾನು ಮೊದಲು ಪತ್ರಿಕೆಗಳಿಗೆ ಕತೆ ಬರೆಯುತ್ತಿದ್ದೆ. ಅನಂತರ ನನ್ನ ಧಾರಾವಾಹಿಗಳಿಗೆಂದು ಸಂಭಾಷಣೆ ಬರೆದಿದ್ದೇ ಹೆಚ್ಚು. ಹಾಗಾಗಿ ಈಗ ನಾನು ಕತೆ ಬರೆದರೂ ಅಲ್ಲಿ ಸಂಭಾಷಣೆಗಳೇ ತುಂಬಿದಂತಿರುತ್ತದೆ. ಲಂಕೇಶ್ ಮೇಷ್ಟ್ರು ಹೇಳುತ್ತಿದ್ದರು, "ಕತೆ ಮತ್ತು ಸಂಭಾಷಣೆ ರಕ್ತ ಮತ್ತು ಮಾಂಸದಂತೆ" ಎಂದು. ಯಾಕೆಂದರೆ ಕತೆಯಲ್ಲಿ ಅವು ಜೊತೆ ಜೊತೆಯಾಗಿಯೇ ಇರಬೇಕು ಹೊರತು ಬೇರೆ ಬೇರೆಯಾಗಿ ಅಲ್ಲ.

`ಬಿಗ್ ಬಾಸ್' ಬಗ್ಗೆ  ಚಿಕ್ಕಣ್ಣನ ಮಾತು

ಕತೆಗಾರನ ನಂಬಿಕೆಗಳೇ ಕಾದಂಬರಿಯ ಆಶಯವಾಗಿರಬಹುದೇ?
ಕತೆಗಳಲ್ಲಿ ಬರುವುದೆಲ್ಲ ಕಾದಂಬರಿಕಾರನ ನಂಬಿಕೆಯಾಗಿರಬೇಕಿಲ್ಲ, ಉದಾಹರಣೆಗೆ `ಮಲೆನಾಡಿನ ಪಿಶಾಚ' ಎನ್ನುವ ಕತೆಯ ಕೊನೆಗೆ ಮಾಸ್ತಿಯವರು ಇದು ನೀವೂ ಇರಬಹುದು; ಇಲ್ಲದೆಯೂ ಇರಬಹುದು. ನನಗೆ ಯಾರೋ ಹೇಳಿದ ಮಾತು ' ಎನ್ನುವ ಅರ್ಥದಲ್ಲಿ ಬರೆದು ಕೊನೆಗೊಳಿಸುತ್ತಾರೆ. ಅದೇ ರೀತಿ ಆನಂದ ಅವರು 'ನಾನು ಕೊಂದ ಹುಡುಗಿ' ಕತೆ ಬರೆದಾಗ ಆ ಸಂದಿಗ್ಧ ಧ್ವನಿಯಷ್ಟೇ ಆಗುತ್ತಾರೆ. ಹಾಗಂತ ಕತೆಗಾರನಾಗಿ ಅವರು ಅದನ್ನೇ ಪ್ರತಿಪಾದಿಸುತ್ತಾರೆ ಎಂದು ಅರ್ಥವಲ್ಲ. ಪಾತ್ರದ ಸಂಕಟ, ದ್ವಂದ್ವವನ್ನು ಹೊರಗೆಡಹುತ್ತಾರೆ ಅಷ್ಟೇ.

ವೆಬ್ ಸೀರೀಸ್‌ಗೂ ಮೊದಲು ಹೊಸ ಸಿನಿಮಾ- ರಮೇಶ್ ಅರವಿಂದ್

ಕತೆಗಾರ ಕೊನೆಯ ಹಂತದ ಒತ್ತಡದ ಸಂದರ್ಭದಲ್ಲಿ ಮಾತ್ರ ಚೆನ್ನಾಗಿ ಬರೆಯಲು ಸಾಧ್ಯ ಎನ್ನುವುದಕ್ಕೆ ಏನಂತೀರಿ?
ಒಬ್ಬ ಬರಹಗಾರನಿಗೆ ಹೊರಗಿನ ಒತ್ತಡ ಎನ್ನುವುದು ಕಾರಣ ಮಾತ್ರ. ಆದರೆ ಬರೆಯಬೇಕು ಎನ್ನುವ ಒಳಗಿನ ಒತ್ತಡ ಉಂಟಾದಾಗಲೇ ಆತ ಬರಹಗಾರನಾಗುತ್ತಾನೆ, ಅದರ ಹೊರತಾಗಿ ಒಂದು ಒಳ್ಳೆಯ ಕಾದಂಬರಿಯನ್ನು ಎಂಟು, ಹತ್ತು ವರ್ಷ ತೆಗೆದುಕೊಂಡು ಬರೆದವರನ್ನು ನೋಡಿದ್ದೇನೆ. ಬ್ರಿಟಿಷ್ ಕಾದಂರಿಕಾರ ಎಡ್ಗರ್ ವಾಲೆಸ್ ಒಂದೇ ಸಮಯದಲ್ಲಿ ಇಬ್ಬಿಬ್ಬರಿಗೆ ಡಿಕ್ಟೇಶನ್ ನೀಡುವ ಮೂಲಕ ಎರಡು ಕಾದಂಬರಿಗಳನ್ನು ಬರೆಸುತ್ತಿದ್ದರಂತೆ. ಹಾಗಾಗಿ ಒಳಗಿನ ಒತ್ತಡ ಮಖ್ಯ. ಹೊರಗಿನ ಒತ್ತಡ ನೆಪ. ಬಾಹ್ಯ ಒತ್ತಡ ಬರವಣಿಗೆಗೆ ವೇಗ ನೀಡುತ್ತದೆ ಅಷ್ಟೆ. ಟಿ.ಪಿ.ಕೈಲಾಸಂ ಅವರು ಒಂದೇ ರಾತ್ರಿಯಲ್ಲಿ ನಾಟಕ ಬರೆದು ಮುಗಿಸುತ್ತಿದ್ದರು ಎಂದು ಕೇಳಿದ್ದೇನೆ.

ಹತ್ತಾರು ಪ್ರತಿಭೆಗಳ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಕವತ್ತಾರು

ನಿಮ್ಮದೇ ಕತೆಯು ದೃಶ್ಯಗಳಾಗಿ ಕಂಡಾಗ ಇನ್ನಷ್ಟು ಬದಲಾಯಿಸಬೇಕಿತ್ತು ಎಂದು ಯಾವತ್ತಾದರೂ ಅನಿಸಿದೆಯೇ?
ಖಂಡಿತವಾಗಿ. ನಾನು ಒಂದಷ್ಟು ಧಾರಾವಾಹಿ ಮತ್ತು ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಚಿತ್ರೀಕರಣ ಮಾಡುವಾಗ ಅದೆಷ್ಟೋ ಉತ್ಸಾಹದಿಂದ ಮಾಡಿದ್ದರೂ ಆಮೇಲೆ ಕೆಲವೊಂದು ದೃಶ್ಯಗಳನ್ನು ಗಮನಿಸುವಾಗ "ಅಯ್ಯೋ ರಾಮ; ನಾನು ಯಾಕಪ್ಪಾ ಹೀಗೆ ಮಾಡಿದೆ.."ಎಂದು ಅನಿಸಿದ್ದೂ ಇದೆ. 

ಕತೆ ಬರೆಯುವುದು ಬಿಟ್ಟು ಧಾರಾವಾಹಿಯತ್ತ ಹೊರಳಲು ಮುಖ್ಯ ಕಾರಣವೇನು ?
ಕತೆ ಬರೆದರೆ ನನಗೆ ದುಡ್ಡು ಬರುತ್ತಿರಲಿಲ್ಲ. ಬದುಕು ನನಗೆ ಮುಖ್ಯವಾಗಿತ್ತು. ಯಾರೋ ಧಾರಾವಾಹಿ ಮಾಡುವಂತೆ ಸಲಹೆ ನೀಡಿದರು. ನನಗೆ ದುಡ್ಡು ಬರುವುದೆಂದು ನಂಬಿಕೆ ಇರಲಿಲ್ಲ. ಆದರೆ ಮಾಡಿದ ಮೇಲೆ ನನಗೆ ನೆಮ್ಮದಿ ಸಿಗತೊಡಗಿತು. ಆದರೆ ಕತೆ ಬರೆಯುವ ವಿಚಾರದಲ್ಲಿ ನೆಮ್ಮದಿ ಹೋಯಿತು {ನಗು} ಮತ್ತೆ `ಮಾಯಾಮೃಗ'ದಂಥ ಹೊಸ ಧಾರಾವಾಹಿ ಯಾವಾಗ? ಮತ್ತೆ ಮಾಯಾಮೃಗದಂಥ ಧಾರಾವಾಹಿ ಅಲ್ಲ. ಅದೇ `ಮಾಯಾಮೃಗ'ವೇ ಈಗ ನಮ್ಮ `ಭೂಮಿಕಾ ಟಾಕೀಸ್' ಯೂಟ್ಯೂಬ್ ವಾಹಿನಿಯ ಮೂಲಕ ಪ್ರಸಾರವಾಗುತ್ತಿದೆ. ಈಗಾಗಲೇ ತುಂಬ ಅದ್ಭುತವಾದ ಪ್ರತಿಕ್ರಿಯೆಗಳೂ ದೊರಕುತ್ತಿವೆ. ಇಲ್ಲಿಯವರೆಗೆ ಬಿಡುಗಡೆಯಾಗಿರುವ ಕೆಲವೇ ಸಂಚಿಕೆಗಳು ಸೇರಿ ಒಟ್ಟು 2.5 ಮಿಲಿಯನ್ ಗಿಂತ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ. ಇದರ ನಡುವೆ ಹೊಸ ಧಾರಾವಾಹಿಯ ಕೆಲಸವೂ ಶುರುವಾಗಿದೆ. ಆದರೆ ಈ ಕೋವಿಡ್ ಸಮಸ್ಯೆ ಸಂಪೂರ್ಣವಾಗಿ ದೂರವಾದ ಬಳಿಕವಷ್ಟೇ ಅದರ ಪ್ರಸಾರದ ಕುರಿತು ಮಾಹಿತಿ ನೀಡುತ್ತೇನೆ.


 

click me!