ಬೆಂಗಳೂರು(ಮೇ.09) ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪೆನಿಗಳನ್ನೊಳಗೊಂಡ ಟೊಯೊಟಾ ಸಮೂಹ ಕಂಪೆನಿಗಳು, ಭಾರತದಲ್ಲಿ ಒಟ್ಟು 4,800 ಕೋಟಿ ರೂಪಾಯಿಗಳ ಹೂಡಿಕೆ ಮಾಡುತ್ತಿದೆ. ಈ ಪೈಕಿ ದೇಶದ ʼಮೇಕ್ ಇನ್ ಇಂಡಿಯಾʼ ತತ್ವದಡಿ ಹಾಗೂ ಇಂಗಾಲದ ಮಾಲಿನ್ಯವನ್ನು ವೇಗವಾಗಿ ತಗ್ಗಿಸುವ ನಿಟ್ಟಿನಲ್ಲಿ 4,100 ಕೋಟಿ ರೂಪಾಯಿ ಬಂಡವಾಳ ಹೂಡಲು ಕರ್ನಾಟಕ ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಭಾರತದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ 25 ವರ್ಷಗಳ ಯಶಸ್ವಿ ಪ್ರಯಾಣದ ಹಿನ್ನೆಲೆಯಲ್ಲಿ ಈ ಘೋಷಣೆ, ಟೊಯೊಟಾದ ಲಕ್ಷಾಂತರ ಸಂತೃಪ್ತ ಗ್ರಾಹಕರ ಹೃದಯ ಗೆದ್ದಿದೆ.
ಸ್ಥಳೀಯ ಉತ್ಪಾದಕ ಇಕೋ ಸಿಸ್ಟಮ್‌ಗೆ ಉತ್ತೇಜನ ನೀಡುವುದರ ಜೊತೆಗೆ ಈ ಹೊಸ ಬೆಳವಣಿಗೆ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ಪ್ರೇರಣೆ ನೀಡಲಿದೆ. ಅಲ್ಲದೇ ಈ ಹೂಡಿಕೆ ಸ್ಥಳೀಯ ಪೂರೈಕೆದಾರರ ನೆಲೆಯನ್ನೂ ವಿಸ್ತರಿಸಲಿದ್ದು, ಅಧಿಕ ಹೂಡಿಕೆಗೆ ಅವಕಾಶ ನೀಡಿ, ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದೆ.
ಭಾರತದ ಮೊದಲ ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಟೊಯೋಟಾ ಮಿರಾಯ್ ಬಿಡುಗಡೆ!
ತಿಳುವಳಿಕೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ವಿಕ್ರಮ್ ಎಸ್. ಕಿರ್ಲೋಸ್ಕರ್ ಸಹಿ ಮಾಡಿದರು. ಕರ್ನಾಟಕದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಖಾತೆಯ ಸಚಿವ ಡಾ. ಮುರುಗೇಶ್ ಆರ್. ನಿರಾಣಿ, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ತಿಳುವಳಿಕೆ ಒಪ್ಪಂದದಡಿ ಟೊಯೊಟಾ ಸಮೂಹ ಕಂಪೆನಿಗಳು ಸರಕಾರದ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮಗಳಿಗೆ ಕೊಡುಗೆಯ ರೂಪದಲ್ಲಿ ಭಾರತವನ್ನು ಉತ್ಪಾದನೆಯ ಕೇಂದ್ರವನ್ನಾಗಿ ಪರಿವರ್ತಿಸಲು ವ್ಯವಸ್ಥಿತವಾಗಿ ಹೂಡಿಕೆ ಮಾಡಲಿವೆ. ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಮಾಲಿನ್ಯವನ್ನು ತಗ್ಗಿಸಲು ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಈ ಹೂಡಿಕೆ ಹೊಂದಿದೆ. ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ನೆರವಾಗಲು ಎಲೆಕ್ಟ್ರಿಕ್ ಪವರ್‌ಟ್ರೈನ್ ಬಿಡಿಭಾಗಗಳನ್ನು ಉತ್ಪಾದಿಸಲು ಸ್ಥಳೀಯವಾಗಿಯೇ ಉತ್ಪಾದನಾ ಸೌಲಭ್ಯಗಳನ್ನು ನಿರ್ಮಿಸಲಿದೆ. ಟೊಯೊಟಾ ಎನ್ವಿರಾನ್‌ಮೆಂಟಲ್ ಚಾಲೆಂಜ್ 2050ನಡಿ ಇಂಗಾಲದ ಮಾಲಿನ್ಯವನ್ನು ಕಡಿಮೆ ಮಾಡುವುದರತ್ತ ಹೆಚ್ಚು ಗಮನ ಹರಿಸಿದ್ದು, 2050ರ ವೇಳೆಗೆ ಶೂನ್ಯ ಇಂಗಾಲದ ಗುರಿಗಳನ್ನು ತಲುಪುದಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹೈಬ್ರಿಡ್ ಎಲೆಕ್ಟ್ರಿಕ್ ವಾಹನಕ್ಕೆ ಸ್ವಯಂ ಚಾರ್ಜಿಂಗ್ ತಂತ್ರಜ್ಞಾನ, ಟೊಯೋಟಾ ಅಭಿಯಾನ!
21ನೇ ಶತಮಾನದ ಕೈಗಾರಿಕೆಗಳ ಟೌನ್‌ಷಿಪ್ ಮತ್ತು ಕಾರಿಡಾರ್‌ಗಳನ್ನು ನಿರ್ಮಿಸುವುದರ ಮೂಲಕ ʼಹೊಸ ಭಾರತಕ್ಕೆ ನವ ಕರ್ನಾಟಕʼವನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡುವುದಕ್ಕೆ ನಮ್ಮ ರಾಜ್ಯ ಬದ್ಧವಾಗಿದ್ದು, ನಮ್ಮ ʼಬಿಲ್ಡ್ ಫಾರ್ ದಿ ವರ್ಲ್ಡ್ʼ ಕಾರ್ಯಕ್ರಮದಡಿ ಕರ್ನಾಟಕವನ್ನು ಸಪ್ಲೈ ಚೈನ್ ಮತ್ತು ಉತ್ಪಾದನೆಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಿದ್ದೇವೆ. ಈ ನಿಟ್ಟಿನಲ್ಲಿ ಟೊಯೊಟಾ ಸಮೂಹ ಕಂಪೆನಿಗಳೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದ ಮಹತ್ವದ ಹೆಜ್ಜೆಯಾಗಿದ್ದು, ಸುಸ್ಥಿರ ಪ್ರಗತಿ ಮತ್ತು ಸ್ಥಳೀಯ ಉತ್ಪಾದನೆಯ ಗುಣಮಟ್ಟ ಹೆಚ್ಚಳಕ್ಕೆ ಟೊಯೊಟಾ ತೋರುತ್ತಿರುವ ಬದ್ಧತೆ ಕರ್ನಾಟಕದ ಪ್ರಗತಿ ಮತ್ತು ಬೆಳವಣಿಗೆಗೆ ಪೂರಕವಾಗಲಿದೆ ಎಂಬ ವಿಶ್ವಾಸವಿದೆ. ಎಲೆಕ್ಟ್ರಿಕ್ ವಾಹನಗಳ ಕೇಂದ್ರವಾಗಿರುವ ಕರ್ನಾಟಕ ಈ ತಿಳಿವಳಿಕೆ ಒಪ್ಪಂದವನ್ನು ಸ್ವಾಗತಿಸುತ್ತಿದ್ದು, ಈ ಕ್ಷೇತ್ರದಲ್ಲಿ ರಾಜ್ಯದ ಸಾಧನೆಗೆ ಇನ್ನೊಂದು ಗರಿ ಮೂಡಿದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಖಾತೆಯ ಸಚಿವ ಡಾ. ಮುರುಗೇಶ್ ಆರ್. ನಿರಾಣಿ ಅವರು “ಟೊಯೊಟಾ ಸಮೂಹದ ಹೂಡಿಕೆಗಳು ಕರ್ನಾಟಕದಲ್ಲಿ ಸ್ಥಳೀಯ ಪೂರೈಕೆದಾರರ ಅಭಿವೃದ್ಧಿಗೆ ಕಾರಣವಾಗುವುದಲ್ಲದೇ, ಇನ್ನಷ್ಟು ಹೂಡಿಕೆಗಳು ಮತ್ತು ಉದ್ಯೋಗ ಸೃಷ್ಟಿಗೆ ನಾಂದಿ ಹಾಡಲಿದೆ. ಸ್ಥಳೀಯ ಉತ್ಪಾದನಾ ವಲಯವನ್ನು ಉತ್ತೇಜಿಸುವುದರ ಜೊತೆಗೆ ಈ ಹೂಡಿಕೆಗಳು ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ ಬೆಂಬಲವಾಗಿ ಬರಲಿವೆ” ಎಂದು ಅಭಿಪ್ರಾಯಪಟ್ಟರು.
ಆರಂಭದಿಂದಲೂ ಟೊಯೊಟಾ ಸ್ಥಿರ, ಸುಸ್ಥಿರ ಮತ್ತು ಸ್ಪರ್ಧಾತ್ಮಕವಾದ ಸ್ಥಳೀಯ ಸಪ್ಲೈ ಚೈನ್ ರೂಪಿಸಲು ಬದ್ಧತೆ ತೋರುತ್ತಿದ್ದು, ಸರಕಾರದ ʼಮೇಕ್ ಇನ್ ಇಂಡಿಯಾʼ ಕಾರ್ಯಕ್ರಮದಡಿ ಸ್ಥಳೀಯವಾಗಿಯೇ ಆಟೋ ಬಿಡಿಭಾಗಗಳನ್ನು ಉತ್ತೇಜಿಸಲು ಇನ್ನಷ್ಟು ಹೆಚ್ಚು ಕ್ರಮಗಳನ್ನು ಕೈಗೊಂಡಿದೆ. ಸ್ಥಳೀಯ ಪೂರೈಕೆದಾರರ ನೇಲೆಯನ್ನು ವಿಸ್ತರಿಸಲು ಮತ್ತು ಸದೃಢಗೊಳಿಸಲು ಟೊಯೊಟಾ ಗ್ರೂಪ್ ಹೂಡಿಕೆಗಳನ್ನು ಮಾಡುತ್ತ ಬಂದಿದೆ. ಕಂಪೆನಿಯ
ಉತ್ತಮ ಕಾರ್ಯಕ್ರಮಗಳು, ಕೌಶಲ್ಯ ಅಭಿವೃದ್ಧಿಯ ಒಳಸುಳಿಗಳನ್ನು ಹಂಚಿಕೊಂಡು ಸ್ಥಳೀಯ ಪೂರೈಕೆದಾರರ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಜಾಗತಿಕ ಗುಣಮಟ್ಟದ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಿ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತಿದೆ.
ಪೂರೈಕೆದಾರರ ಕೌಶಲ್ಯಮಟ್ಟವನ್ನು ಹೆಚ್ಚಿಸಲು ಟೊಯೊಟಾ ಪ್ರತೀ ವರ್ಷ 40,000 ಗಂಟೆಗಳ ಮಾನವ ಶ್ರಮವನ್ನು ತನ್ನ ವ್ಯವಸ್ಥೆ, ನಿರ್ವಹಣೆ, ಟ್ರೈನಿಂಗ್ ಮತ್ತು ಹಾರ್ಡ್‌ವೇರ್ ಡೆವಲಪ್‌ಮೆಂಟ್ ಮೂಲಕ ವ್ಯಯಿಸುತ್ತಿದೆ. ಅಲ್ಲದೇ ಪೂರೈಕೆದಾರರರ ಪೀಪಲ್ ಡೆವಲಪ್‌ಮೆಂಟ್‌ಗಾಗಿ ಇನ್ನೂ 8,500 ಗಂಟೆಗಳ ಮಾನವ ಶ್ರಮವನ್ನು ವಿನಿಯೋಗಿಸಲಾಗುತ್ತಿದೆ.
ಹೊಚ್ಚ ಹೊಸ ಟೋಯೋಟಾ ಗ್ಲಾಂಜಾ ಕಾರು ಬಿಡುಗಡೆ, ಬೆಲೆ 6.39 ಲಕ್ಷ ರೂ!
ಮೇಕ್ ಇನ್ ಇಂಡಿಯಾ ತತ್ವಕ್ಕೆ ಪೂರಕವಾಗಿ ಸ್ಥಳೀಯ ಉತ್ಪಾದನೆಯನ್ನು ಸದೃಢಗೊಳಿಸಲು ವಿದ್ಯುದ್ದೀಕರಣದ ವೇಗವನ್ನು ಹೆಚ್ಚಿಸಲು ಟೊಯೊಟಾ ಬದ್ಧವಾಗಿದೆ. ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದ ಇಂಗಾಲದ ಮಾಲಿನ್ಯವನ್ನು ಗಮನಾರ್ಹವಾಗಿ ತಗ್ಗಿಸಲು, ಉದ್ಯೋಗ ಸೃಷ್ಟಿಯ ಪ್ರಮಾಣವನ್ನು ಹೆಚ್ಚಿಸಲು, ಸ್ಥಳೀಯ ಬೇಡಿಕೆ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಬೇಡಿಕೆಗಳಿಗೆ ಸ್ಪಂದಿಸಲು ಸ್ಥಳೀಯ ಉತ್ಪಾದನೆ ಇಕೋ ಸಿಸ್ಟಮ್ ಬೆಳೆಸಲು, ಸ್ಥಳೀಯ ಸಮುದಾಯದ ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾವೀನ್ಯತೆಯ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ರೀತಿಯ ಹೂಡಿಕೆಗಳು ಸಂಚಾರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಇಂಧನ ಆಧಾರಿತ ತಂತ್ರಜ್ಞಾನಗಳಿಗೆ ಸ್ಪರ್ಧಾತ್ಮಕವಾದ ಪರ್ಯಾಯವನ್ನು ಉತ್ತೇಜಿಸಲು ಅಗತ್ಯವಾಗಿವೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ್ ಉಪಾಧ್ಯಕ್ಷರಾದ ವಿಕ್ರಮ್ ಎಸ್ ಕಿರ್ಲೋಸ್ಕರ್ ಹೇಳಿದರು.
“ನಮ್ಮ ನೀತಿಯ ಭಾಗವಾಗಿ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ, ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ, ಇಂಗಾಲದ ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಆಳವಾದ ಅಧ್ಯಯನಗಳನ್ನು ಮಾಡಿ, ವಿಶ್ಲೇಷಿಸಿ, ಬಹು ತಂತ್ರಜ್ಞಾನಗಳ ಸಾಧ್ಯತೆಗಳನ್ನು ಆವಿಷ್ಕರಿಸುತ್ತೇವೆ. ನಮ್ಮ ದೇಶ ಮತ್ತು ನಾವು ಕಾರ್ಯಾಚರಣೆ ಮಾಡುವ ಸಮುದಾಯಕ್ಕೆ ಸೇವೆ ಸಲ್ಲಿಸಲು ಟೊಯೊಟಾ ಸದಾ ಬದ್ಧತೆಯನ್ನು ಉಳಿಸಿಕೊಂಡಿರುತ್ತದೆ” ಎಂದು ಅವರು ಹೇಳಿದರು.
ನಮ್ಮ ರಾಷ್ಟ್ರೀಯ ಗುರಿಗಳನ್ನು ಈಡೇರಿಸಲು ಆಯ್ದುಕೊಂಡಿರುವ ತಂತ್ರಜ್ಞಾನಗಳು ಹೆಚ್ಚು ಪ್ರಾಯೋಗಿಕ, ಸುಸ್ಥಿರ ಮತ್ತು ವಿಶಿಷ್ಟವಾಗಿರುವ ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೆಯಾಗಿರುವಂತಿರಬೇಕು. ಇದರಿಂದಾಗಿ ಬದಲಾವಣೆ ಹೆಚ್ಚು ತ್ವರಿತವಾಗಿ ಮತ್ತು ಸುಲಭವಾಗಿ ನಡೆಯುತ್ತದೆ. ಆದ್ದರಿಂದ ನಮ್ಮ ದೀರ್ಘಾವಧಿಯ ದೂರದೃಷ್ಟಿ 2050ರ ವೇಳೆಗೆ ಶೂನ್ಯ ಇಂಗಾಲದ ಮಾಲಿನ್ಯ ಎಂದಿದ್ದರೂ, ತಕ್ಷಣಕ್ಕೆ ಹೆಚ್ಚು ಸಾಮಾಜಿಕ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾದ ಗುರಿಗಳನ್ನು ಈಡೇರಿಸಿಕೊಳ್ಳುವುದಾಗಿದೆ. ಇದು ಬಹುತೇಕ ದೇಶದ
ಸ್ಥಳೀಯ ಸಾಮರ್ಥ್ಯ, ಸಿದ್ಧ ಮೂಲಸೌಕರ್ಯ ಮತ್ತು ʼಲೀವ್ ನೋ ಒನ್ ಬಿಹೈಂಡ್ʼ ಎಂಬ ನಮ್ಮ ನಂಬಿಕೆಯನ್ನು ಒಪ್ಪಿಕೊಳ್ಳುವ ಗ್ರಾಹಕನನ್ನು ಅವಲಂಬಿಸಿದೆ. ಟೊಯೊಟಾ ಸಮೂಹದಡಿ ಇರುವ ಕಂಪೆನಿಗಳು ಇದುವರೆಗೆ 11,812 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದ್ದು 8,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ಹಲವು ವರ್ಷಗಳಿಂದ ಟೊಯೊಟಾ ಸಮೂಹ ಸುಸ್ಥಿರ ವಹಿವಾಟು ತಂತ್ರಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದ್ದು, ಇದರಿಂದಾಗಿ ಕಂಪೆನಿ ಕಾರು ಉತ್ಪಾದಕ ಕಂಪೆನಿಯಿಂದ ʼಮೊಬಿಲಿಟಿ ಕಂಪೆನಿʼಯಾಗಿ ಪರಿವರ್ತನೆಗೊಂಡಿದೆ.
ಉತ್ತಮ ದೃಷ್ಟಿಕೋನಗಳಲ್ಲಿ ಟೊಯೊಟಾ ನಂಬಿಕೆ ಇಟ್ಟಿದ್ದು, ಪರಿಸರ ಸ್ನೇಹಿ ಭವಿಷ್ಯಕ್ಕೆ ಕಾಲಿಡಲು ರಾಜ್ಯದ ಮತ್ತು ದೇಶದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಿದೆ. ಭಾರತವನ್ನು ವಿದ್ಯುದ್ದೀಕರಣದ ಉತ್ಪಾದನೆ ಕೇಂದ್ರವನ್ನಾಗಿ ಮಾಡುವ ವಿಶ್ವಾಸವನ್ನು ಟೊಯೊಟಾ ಹೊಂದಿದ್ದು, ಈ ಮೂಲಕ ತನ್ನ ʼಮಾಸ್ ಹ್ಯಾಪಿನೆಸ್ ಟು ಆಲ್ʼ ಉದ್ದೇಶವನ್ನು ಈಡೇರಿಸಿಕೊಳ್ಳಲಿದೆ.