EV Charging at Home: ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

By Suvarna NewsFirst Published Jan 17, 2022, 1:01 PM IST
Highlights

*ಸಾರ್ವಜನಿಕ ವಲಯದಲ್ಲಿ ಇವಿ ಅಳವಡಿಕೆಗೆ ಸರ್ಕಾರದ ಅನುಮತಿ
*ಮಾರ್ಗಸೂಚಿ, ಮಾನದಂಡಗಳ ಬಿಡುಗಡೆ
*ಖಾಸಗಿಯವರಿಗೆ ಬಾಡಿಗೆ ನೀಡಲು ಅವಕಾಶ

Auto Desk: ಕಳೆದೆರಡು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (Electrci vehicles) ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ವಾಹನ ತಯಾರಕರು ಇವಿ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಆದರೆ, ಅವುಗಳ ಚಾರ್ಜಿಂಗ್ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಈಗ ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ಗೆ (Charging) ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು  ಬಿಡುಗಡೆಗೊಳಿಸಿದೆ.

ಈ ಹೊಸ ಮಾರ್ಗಸೂಚಿ ಪ್ರಕಾರ, ಇವಿ (EV) ಮಾಲೀಕರು ತಮ್ಮ ವಾಹನಗಳನ್ನು ಚಾರ್ಜ್ ಮಾಡಲು ಮನೆ ಮತ್ತು ಕಚೇರಿಗಳಲ್ಲಿ ತಮ್ಮ ಅಸ್ತಿತ್ವದಲ್ಲಿರುವ ವಿದ್ಯುತ್ ಸಂಪರ್ಕಗಳನ್ನು ಬಳಸಬಹುದು ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಶನಿವಾರ ತಿಳಿಸಿದೆ.ಮಾಲೀಕರು ತಮ್ಮ ಅಸ್ತಿತ್ವದಲ್ಲಿರುವ ವಿದ್ಯುತ್ ಸಂಪರ್ಕಗಳನ್ನು ಬಳಸಿಕೊಂಡು ತಮ್ಮ ಮನೆ, ಕಚೇರಿಗಳಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು. ದೀರ್ಘ ಪ್ರಯಾಣದ ಇವಿಗಳು ಅಥವಾ ಹೆವಿ ಡ್ಯೂಟಿ ವಾಹನಗಳಿಗೆ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸಲು ರೂಪುರೇಷೆ ನಿರ್ಮಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!

ಕೇಂದ್ರ ವಿದ್ಯುತ್ ಸಚಿವಾಲಯ 2022ರ ಜನವರಿ 14ರಂದು ಎಲೆಕ್ಟ್ರಿಕ್ ವೆಹಿಕಲ್ಗಳಿಗೆ (EV) ಚಾರ್ಜ್ ಮಾಡುವ ಮೂಲಸೌಕರ್ಯಕ್ಕಾಗಿ ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಪ್ರಕಟಿಸಿದೆ. ಇದರನ್ವಯ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪರವಾನಗಿಯ ಅಗತ್ಯವಿಲ್ಲದೇ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಬಹುದಾಗಿದೆ. ಅಂತಹ ನಿಲ್ದಾಣಗಳು ತಾಂತ್ರಿಕ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸುತ್ತವೆ.

ಭಾರತದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಶೀಘ್ರವಾಗಿ ಅಳವಡಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರಲ್ಲಿ ಇನ್ನಷ್ಟು ತಂತ್ರಜ್ಞಾನ ಅಳವಡಿಸಲಾಗುವುದು ಹಾಗೂ ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ ಅಂತಾರಾಷ್ಟ್ರೀಯ ಚಾರ್ಜಿಂಗ್ ಗುಣಮಟ್ಟದ ಜೊತೆಗೆ, ಹೊಸ ಭಾರತೀಯ ಚಾರ್ಜಿಂಗ್ ಗುಣಮಟ್ಟಗಳನ್ನು ಕೂಡ ಒದಗಿಸಲಾಗುವುದು. ಇದು ಇಂಧನ ಭದ್ರತೆಯನ್ನು ಪ್ರೋತ್ಸಾಹಿಸುವ ಜೊತೆಗೆ, ಇವಿ ವಾತಾವರಣದ ಉತ್ತೇಜನದಿಂದ ದೇಶದಲ್ಲಿ ಹಾನಿಕರ ಅನಿಲ ಹೊರಸೂಸುವಿಕೆಯನ್ನು ತಡೆಯುವುದು ಕೂಡ ಇದರ ಉದ್ದೇಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Electric Bike ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ದಾಖಲೆ, 350 ಕಿ.ಮೀ ಮೈಲೇಜ್!

ಎಲೆಕ್ಟ್ರಿಕ್ ವಾಹನಗಳ ವಲಯ ಬೆಳೆಯುತ್ತಿರುವಾಗ, ಚಾರ್ಜಿಂಗ್ ಸ್ಟೇಷನ್ಗಳು ಆರ್ಥಿಕವಾಗಿ ಕೈಗೆಟಕುವಂತೆ ಮಾಡಲು, ಚಾರ್ಜಿಂಗ್ ಸ್ಟೇಷನ್ ಇರುವ ಪ್ರದೇಶದಲ್ಲೇ ಆದಾಯ-ಹಂಚಿಕೆಯ ಮಾದರಿಯನ್ನು ಅಳವಡಿಸಲು ಅವಕಾಶ ನೀಡಲಾಗುತ್ತದೆ. ಸರ್ಕಾರ ಹಾಗೂ ಸಾರ್ವಜನಿಕ ಸ್ವಾಮ್ಯದ ಘಟಕಗಳಲ್ಲಿ ಲಭ್ಯವಿರುವ ಭೂಮಿಯನ್ನು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳ ಅಳವಡಿಕೆಗೆ ನೀಡಲಾಗುವುದು. ಇದನ್ನು ಪ್ರತಿ ಕಿಲೋವ್ಯಾಟ್ಗೆ 1 ರೂ. ಹಂಚಿಕೆ ಆಧಾರದ ಮೇಲೆ ನೀಡಲಾಗುವುದು. ಇದು ತ್ರೈಮಾಸಿಕದ ಪಾವತಿಯ ಪಿಸಿಎಸ್ ಮಾದರಿಯಲ್ಲಿ ಏಜೆನ್ಸಿಗಳಿಗೆ ನೀಡಲಾಗುವುದು.

ಈ ಆದಾಯ ಹಂಚಿಕೆಯ ಮಾದರಿಯನ್ನು ಕೂಡ ಮಾರ್ಗಸೂಚಿಯಲ್ಲಿಯೇ ನೀಡಲಾಗಿದೆ. ಈ ಕುರಿತು ಎರಡೂ ಪಕ್ಷಗಳು 10 ವರ್ಷಗಳ ದೀರ್ಘಾವಧಿಯ ಒಪ್ಪಂದಕ್ಕೆ ಒಳಪಡಲಿವೆ. ಸಾರ್ವಜನಿಕ ಭೂಮಿ-ಮಾಲಿಕತ್ವ ಹೊಂದಿರುವ ಏಜೆನ್ಸಿಗಳು ಕೂಡ ಖಾಸಗಿ ಕಂಪನಿಗಳಿಗೆ ತಮ್ಮ ಭೂಮಿಯಲ್ಲಿ ಸಾರ್ವಜನಿಕ ಸಾರ್ವಜನಿಕ ಸ್ಟೇಷನ್ಗಳನ್ನು ಅಳವಡಿಸಲು ಈ ಆದಾಯ ಹಂಚಿಕೆ ಮಾದರಿ ಅಡಿ ಅವಕಾಶ ನೀಡಬಹುದು. ಇದನ್ನು ನಿಗದಿತ ಮೊತ್ತದಲ್ಲೇ ಬಿಡ್ಡಿಂಗ್ ಮೂಲಕ ಖಾಸಗಿಯವರಿಗೆ ನೀಡಬಹುದು.

ಈ ಮಾರ್ಗಸೂಚಿಯನ್ನು ಇಂಧನ ಸಾಮರ್ಥ್ಯದ ಬ್ಯೂರೋ (Bureau of Energy Efficiency-BEE), ಇಂಧನ ಸಚಿವಾಲಯ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರಗಳ ನಿಯಮಗಳನ್ನು ಅನುಸಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಹಲವು ಖಾಸಗಿ ಕಂಪನಿಗಳು ಇವಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರಿದ್ದು, ಅಂತಹವರಿಗೆ ಈ ಮಾರ್ಗಸೂಚಿ ವರದಾನವಾಗಲಿದೆ.

click me!