8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್

By Suvarna NewsFirst Published Jan 26, 2021, 4:21 PM IST
Highlights

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ನಿತಿನ್ ಗಡ್ಕರಿ ಅವರು ಹೊಸ ಪ್ರಸ್ತಾಪಕ್ಕೆ ಅನುಮತಿ ನೀಡಿದ್ದು, ಕೆಲವು ವರ್ಗದ 8 ವರ್ಷಕ್ಕಿಂತ ಹಳೆಯದಾದ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್ ಹೇರಲಾಗುತ್ತದೆ. ಆ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳ ಬಳಕೆಯನ್ನು ತಡೆಯಲು ವೇದಿಕೆ ಸೃಷ್ಟಿಸಲಾಗುತ್ತಿದೆ.

ಸ್ಕ್ರ್ಯಾಪೇಜ್ ನೀತಿ ಅನುಷ್ಠಾನಕ್ಕೆ ಸರ್ಕಾರದಿಂದ ಒಪ್ಪಿಗೆಗೆ ಕಾಯುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್(ಹಸಿರು ತೆರಿಗೆ) ಹೇರುವ ಪ್ರಸ್ತಾವನೆಗೆ ಅನುಮತಿ ನೀಡಿದ್ದಾರೆ

ಕೇಂದ್ರ ಸಚಿವಾಲಯವು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಹಂತ ಹಂತವಾಗಿ ರಸ್ತೆಯಿಂದ ಆಚೆಗಿಡುವ ವೇದಿಕೆಯನ್ನು ಸೃಷ್ಟಿಸಲಾಗುತ್ತಿದೆ. ಉದ್ದೇಶಿತ ಪ್ರಸ್ತಾವನೆ ಜಾರಿಗೆ ಮೊದಲು ರಾಜ್ಯಗಳಿಗೆ ಕಳುಹಿಸಿ ಸಮಾಲೋಚನೆ ಮಾಡುಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈಗಾಗಲೇ 15 ವರ್ಷಕ್ಕೂ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾಪವು ಕೇಂದ್ರದ ಬಳಿ ಇದ್ದು, ಶೀಘ್ರವೇ ಅದು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.  

ಅಬ್ಬಾ... ಕಳೆದ ವರ್ಷ 1.60 ಲಕ್ಷ ಸ್ವಿಫ್ಟ್ ಕಾರು ಮಾರಾಟ !

ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಕಂಪನಿಗಳು 15 ವರ್ಷಕ್ಕೂ ಹಳೆಯ ವಾಹನಗಳನ್ನು ಹೊಂದಿದ್ದರೆ ಅಂಥ ವಾಹನಗಳನ್ನು ನೋಂದಣಿ ರದ್ದು ಮಾಡುವ ಗುಜರಿಗೆ ಹಾಕುವ ನೀತಿಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ. ಈ ನೀತಿಯು 2022ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಆದರೆ, ಸಾರ್ವಜನಿಕವಾಗಿ ಅನುಷ್ಠಾನವಾಗುವ ಈ ನೀತಿಯನ್ನು ಸರ್ಕಾರ ಇನ್ನಷ್ಟೇ ಘೋಷಿಸಬೇಕಿದೆ.

ಪ್ರಸ್ತಾವನೆಯ ಪ್ರಕಾರ, ಫಿಟ್‌ನೆಸ್ ಪ್ರಮಾಣಪತ್ರವನ್ನು ನವೀಕರಿಸುವ ಸಮಯದಲ್ಲಿ ಎಂಟು ವರ್ಷಕ್ಕಿಂತ ಹಳೆಯದಾದ ಸಾರಿಗೆ ಅಥವಾ ವಾಣಿಜ್ಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸಬಹುದು. ಈ ತೆರಿಗೆಯ ರಸ್ತೆ ತೆರಿಗೆಯ  ಶೇ.10ರಿಂದ ಶೇ.25ರವರೆಗೂ ಇರಲಿದೆ. ಒಂದು ವೇಳೆ ವೈಯಕ್ತಿಕ ವಾಹನಗಳಾಗಿದ್ದರೆ ಅಂಥ ವಾಹನಗಳಿಗೆ 15 ವರ್ಷಗಳ ಫಿಟ್ನೆಸ್ ಸಂದರ್ಭದಲ್ಲಿ ಈ ತೆರಿಗೆಯನ್ನು ವಿಧಿಸಲಾಗುತ್ತದೆ.

ಈ ರೀತಿಯ ಹೆಚ್ಚುವರಿ ತೆರಿಗೆಯನ್ನು ವಿಧಿಸುವುದರಿಂದ ಬಳಕೆದಾರರು ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಬಳಕೆಯನ್ನು ಬಿಟ್ಟು ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ವಾಲಬಹುದು ಎಂಬುದು ಉದ್ದೇಶಿತ ಪ್ರಸ್ತಾವನೆಯ ಉದ್ದೇಶವಾಗಿದೆ.

15 ವರ್ಷಗಳ ಹಳೆಯ ವಾಹನಗಳು ಗುಜರಿಗೆ ಪಕ್ಕಾ?

ಇದೇ ವೇಳೆ, ಸಾರ್ವಜನಿಕ ಸಾರಿಗೆ ವಾಹನಗಳಾದ ಅಂದರೆ ಸಿಟಿ ಬಸ್‌ಗಳ ಮೇಲೆ ಅತಿ ಕಡಿಮೆ ಹಸಿರು ತೆರಿಗೆಯನ್ನು ವಿಧಿಸಲಾಗುತ್ತದೆ. ಅತಿ ಹೆಚ್ಚು ಮಲೀನಗೊಂಡಿರುವ ನಗರಗಳಲ್ಲಿ ನೋಂದಣಿಯಾಗಿರುವ ವಾಹನಗಳ ಮೇಲೆ ರಸ್ತೆ ತೆರಿಗೆಯ ಶೇ.50ರಷ್ಟು ಹಸಿರು ತೆರಿಗೆಯನ್ನು ವಿಧಿಸಬಹುದು. ಈ ತೆರಿಗೆ ನಿರ್ಧಾರವು ಇಂಧನ  ಪೆಟ್ರೋಲ್ ಅಥವಾ ಡಿಸೇಲ್ ಮತ್ತು ವಾಹನ ಮಾದರಿಯ ಮೇಲೆ ಅವಲಂಬಿತವಾಗಿದೆ.

ಗ್ರೀನ್ ಟ್ಯಾಕ್ಸ್‌ನಿಂದ ಬರುವ ಹಣವನ್ನು ಪ್ರತ್ಯೇಕವಾಗಿಟ್ಟು ಅದನ್ನು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬಳಸಲಾಗುವುದು ಎಂದು ಸಚಿವಾಲಯವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶೀಘ್ರ ಸ್ಕ್ರ್ಯಾಪೇಜ್ ನೀತಿ ಜಾರಿ
15 ವರ್ಷಗಳ ಹಳೆಯ ವಾಹನಗಳ ಸ್ಕ್ರ್ಯಾಪ್ ಮಾಡುವ ನೀತಿಗೆ ಈ ವರ್ಷ ಕೇಂದ್ರ ಸರ್ಕಾರ ಒಪ್ಪಿಗೆ  ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಹನಗಳ ಸ್ಕ್ರ್ಯಾಪ್ ನೀತಿ ಬಹಳ ದಿನಗಳಿಂದ ನಿರೀಕ್ಷಿತವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮತಿ ನೀಡುವ ತಿದ್ದುಪಡಿಗಳನ್ನು ಮೋಟಾರು ವಾಹನ ಕಾಯ್ದೆಗೆ 2019ರ ಜುಲೈ 15 ರಂದು ಒಪ್ಪಿಗೆ ನೀಡಲಾಗಿತ್ತು. ಈ ಸಂಬಂಧ ನಾವು ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಮತ್ತು ಸ್ಕ್ರ್ಯಾಪಿಂಗ್ ಪಾಲಿಸಿಗೆ ಆದಷ್ಟು ಬೇಗನೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂದು ಗಡ್ಕರಿ ತಿಳಿಸಿದ್ದಾರೆ.

5.2 ಸೆಕೆಂಡಲ್ಲಿ 0 ನಿಂದ 100 ಕಿ.ಮೀ. ವೇಗ; ಐಒನಿಕ್ ಕಾರಿನ 5 ಚಿತ್ರಗಳು ಬಿಡುಗಡೆ!

ಕಾರುಗಳು, ಟ್ರಕ್ಸ್, ಬಸ್‌ಗಳು ಸೇರಿದಂತೆ 15 ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ನೀತಿಯಾಗಿದೆ ಎಂದು ಸಚಿವರು ಇತ್ತೀಚೆಗಷ್ಟೇ ನಡೆದ ಆತ್ಮನಿರ್ಭರ್  ಭಾರತ್ ಇನ್ನೋವೇಷನ್ ಚಾಲೆಂಜ್-2020-21ರ ಕಾರ್ಯಕ್ರಮದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

click me!