ಸರ್ಕಾರ, ದೇಶದ ಬಡ ಜನರಿಗೆ ನೆರವಾಗ್ಲಿ ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ ಮೂಲಕ ಜನರಿಗೆ ರೇಷನ್ ನೀಡ್ತಿದೆ. ಆದ್ರೆ ಅನೇಕರು ಇದ್ರ ದುರುಪಯೋಗಪಡಿಸಿಕೊಳ್ತಿದ್ದಾರೆ. ಮತ್ತೆ ಕೆಲವರಿಗೆ ಇದ್ರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣ, ಸರ್ಕಾರದ ಸೇವೆಯಿಂದ ವಂಚಿತರಾಗ್ತಿದ್ದಾರೆ.
ಭಾರತ (India) ದಲ್ಲಿ ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government ) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ. ಇದೆಲ್ಲದರ ಹೊರತಾಗಿ, ಪಡಿತರ ಚೀಟಿ ಪ್ರಮುಖ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅನೇಕರಿಗೆ ಪರಿತರ ಚೀಟಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಅವರಿಗೆ ಸೂಕ್ತವಾದ ಪಡಿತರ ಚೀಟಿ ಪಡೆಯಲು ಇದ್ರಿಂದ ಸಾಧ್ಯವಾಗುವುದಿಲ್ಲ. ಪಡಿತರ ಚೀಟಿಗೆ ಅಪ್ಲೈ ಮಾಡುವ ಮೊದಲು ಪಡಿತರ ಚೀಟಿ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕು. ಅನೇಕರು ಪಡಿತರ ಚೀಟಿ ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದು ಭಾವಿಸಿದ್ದಾರೆ. ಆದ್ರೆ ಅದು ತಪ್ಪು ತಿಳುವಳಿಕೆ. ಪಡಿತರ ಚೀಟಿಯಲ್ಲಿ ಹಲವು ವಿಧಗಳಿವೆ ಎಂಬುದು ನಿಮಗೆ ಗೊತ್ತಾ? ಪಡಿತರ ಚೀಟಿ ಬದಲಾದಂತೆ ಅದರಿಂದ ಸಿಗುವ ಪ್ರಯೋಜನಗಳೂ ಬದಲಾಗುತ್ತವೆ. ಭಾರತ ಸರ್ಕಾರ ವಿವಿಧ ರೀತಿಯ ಪಡಿತರ ಚೀಟಿಗಳನ್ನು ನೀಡುತ್ತದೆ. ಇಂದು ನಾವು ಭಾರತದಲ್ಲಿ ಸಿಗುವ ವಿವಿಧ ಪಡಿತರ ಚೀಟಿಗಳ ಬಗ್ಗೆ ಮಾಹಿತಿ ನೀಡ್ತೇವೆ.
ಪಡಿತರ ಚೀಟಿ ವಿಧಗಳು :
ಅಂತ್ಯೋದಯ ಅನ್ನ ಯೋಜನೆ (AAY) : ಯಾರ ಆದಾಯ ಸ್ಥಿರವಾಗಿರುವುದಿಲ್ಲವೋ ಅಂತವರಿಗೆ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಇಷ್ಟು ಆದಾಯ ಎಂದು ನಿಗದಿಯಾಗದ ಜನರು ಇದರ ಲಾಭ ಪಡೆಯಬಹುದು. ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಬರುವ ಫಲಾನುಭವಿಗಳ ಕುಟುಂಬಕ್ಕೆ ಪ್ರತಿ ತಿಂಗಳು 35 ಕೆಜಿ ಪಡಿತರ ಸಿಗುತ್ತದೆ. ಅಂತ್ಯೋದಯ ಅನ್ನ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಅಕ್ಕಿ ಮೂರು ರೂಪಾಯಿ ಕೆಜಿಗೆ ಸಿಗುತ್ತದೆ. ಹಾಗೆ ಗೋಧಿ ಕೆಜಿಗೆ 2 ರೂಪಾಯಿ ಮತ್ತು ಇತರ ಧಾನ್ಯಗಳು ಕೆಜಿಗೆ 1 ರೂಪಾಯಿಯಂತೆ ಸಿಗುತ್ತದೆ.
ಇದನ್ನೂ ಓದಿ: 100 ರೂಪಾಯಿ ಮಾತ್ರೆಯಲ್ಲಿ ವ್ಯಾಪಾರಿಗಳಿಗಿದೆ 1000% ಕ್ಕೂ ಹೆಚ್ಚು ಲಾಭ!
ಆದ್ಯತಾ ಗೃಹ ಪಡಿತರ ಚೀಟಿ (PHH) : ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ಬರದ ಕುಟುಂಬಗಳು ಆದ್ಯತಾ ಗೃಹ ಪಡಿತರ ಚೀಟಿ (PHH ) ಅಡಿಯಲ್ಲಿ ಬರುತ್ತವೆ. ರಾಜ್ಯ ಸರ್ಕಾರಗಳು ತಮ್ಮ ನಿರ್ದಿಷ್ಟ ಅಂತರ್ಗತ ಮಾರ್ಗಸೂಚಿಗಳ ಪ್ರಕಾರ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಅಡಿಯಲ್ಲಿ ಆದ್ಯತೆಯ ಮನೆಗಳನ್ನು ಗುರುತಿಸುತ್ತವೆ. ಸರ್ಕಾರಗಳು ಇದಕ್ಕೆ ಸಂಬಂಧಿಸಿದಂತೆ ತಮ್ಮದೆ ಆದ ನಿಯಮಗಳನ್ನು ಹೊಂದಿರುತ್ತವೆ. ಆದ್ಯತಾ ಗೃಹ ಪಡಿತರ ಕಾರ್ಡ್ ಯೋಜನೆಯಡಿಯಲ್ಲಿ ತಿಂಗಳಿಗೆ ಒಬ್ಬ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ (BPL) : ಪಡಿತರ ಚೀಟಿಯ ಇನ್ನೊಂದು ವಿಧಾನ ಇದು. ಬಡತನ ರೇಖೆಗಿಂತ ಕೆಳಗಿರುವ ದೇಶದ ಎಲ್ಲ ಜನರಿಗೂ ಇದನ್ನು ಪಡೆಯುವ ಅರ್ಹತೆಯಿರುತ್ತದೆ. ರಾಜ್ಯ ಸರ್ಕಾರದ ಪ್ರಕಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬ ತಿಂಗಳಿಗೆ 10 ಕೆಜಿಯಿಂದ 20 ಕೆಜಿ ಆಹಾರ ಧಾನ್ಯಗಳನ್ನು ಆರ್ಥಿಕ ವೆಚ್ಚದ ಶೇಕಡಾ 50 ರಲ್ಲಿ ಪಡೆಯುತ್ತದೆ.
ಇದನ್ನೂ ಓದಿ: Price Hike: ಸೋಪು, ಶ್ಯಾಂಪುನಿಂದ ಹಿಡಿದು ಟಿವಿ, ಎಸಿ ತನಕ ಎಲ್ಲವೂ ದುಬಾರಿ; ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ
ಸರ್ಕಾರಗಳು, ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗಾಗ ನಿಯಮಗಳಲ್ಲಿ ಬದಲಾವಣೆ ಮಾಡ್ತಿರುತ್ತವೆ. ಸರ್ಕಾರದ ನಿಯಮಗಳನ್ನು ಮೀರಿ ಪಡಿತರ ಪಡೆಯುತ್ತಿದ್ದರೆ ಅವರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಲಾಗುತ್ತದೆ. ಕುಟುಂಬದಲ್ಲಿ ನಾಲ್ಕು ಚಕ್ರದ ವಾಹನ, ಹವಾನಿಯಂತ್ರಣ, ಟ್ರ್ಯಾಕ್ಟರ್, ಟ್ರಕ್, ಜೆಸಿಬಿ ಇದ್ದರೆ ಅಥವಾ ಮಾಜಿ ಸೈನಿಕರು ಮತ್ತು ಅರೆಸೇನಾಪಡೆ, ನಿವೃತ್ತ ಪಿಂಚಣಿ ನೌಕರರಿಗೆ ಅಗ್ಗದ ರೇಷನ್ ಸಿಗುವುದಿಲ್ಲ. ಇದಲ್ಲದೆ 2 ಹೆಕ್ಟೇರ್ ನೀರಾವರಿ ಭೂಮಿ ಹೊಂದಿದ್ದರೆ ಮತ್ತು ವಾರ್ಷಿಕ ಆದಾಯದ ಮೇಲೆ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅವರಿಗೂ ಪಡಿತರ ಚೀಟಿ ನೀಡಲಾಗುವುದಿಲ್ಲ.