ದೇಶದ ಆರ್ಥಿಕ ಬೆಳವಣಿಗೆ ದರ ವಿಶ್ವದಲ್ಲೇ ಉತ್ತಮ: ಭಾರತದ ಆರ್ಥಿಕತೆಗೆ ಮತ್ತೆ ವಿಶ್ವಬ್ಯಾಂಕ್‌ ಶಹಭಾಷ್

By Kannadaprabha News  |  First Published Apr 5, 2023, 7:04 AM IST

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯ ಬೆಳವಣಿಗೆ ದರ (economic growth rate) ಉತ್ತಮವಾಗಿದೆ ಎಂದು ವಿಶ್ವಬ್ಯಾಂಕ್‌ ಮಂಗಳವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.


ನವದೆಹಲಿ: ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯ ಬೆಳವಣಿಗೆ ದರ (economic growth rate) ಉತ್ತಮವಾಗಿದೆ ಎಂದು ವಿಶ್ವಬ್ಯಾಂಕ್‌ ಮಂಗಳವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಅಭಿವೃದ್ಧಿ ದರದ ಕುರಿತಾಗಿ ವಾರ್ಷಿಕ ವರದಿ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್‌ ಈ ವರ್ಷ ಭಾರತದ ಅಭಿವೃದ್ಧಿ ದರವನ್ನು ಶೇ.6.3ಕ್ಕೆ ಕಡಿತಗೊಳಿಸಿದೆ.  ಈ ಮೊದಲು 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇ.6.6ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿತ್ತು. ಆದರೆ ಭಾರತದಲ್ಲಿ ಸಾಲದ ದರ ಹೆಚ್ಚಿರುವ ಕಾರಣ ಉಪಭೋಗದಲ್ಲಿ ಕುಂಠಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ದರವನ್ನು ವಿಶ್ವಬ್ಯಾಂಕ್‌ ಶೇ.6.3ಕ್ಕೆ ಕಡಿತಗೊಳಿಸಿದೆ.

ಸಾಲದ ದರದಲ್ಲಿನ ಹೆಚ್ಚಳ, ಆದಾಯದಲ್ಲಿ ಕಡಿಮೆ ಬೆಳವಣಿಗೆಗಳು ಉಪಭೋಗದ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿವೆ. ಹೀಗಾಗಿ ಅಭಿವೃದ್ಧಿ ದರವನ್ನು ಮತ್ತೆ ಅಂದಾಜು ಮಾಡಲಾಗಿದೆ ಎಂದು ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ. ಆದರೆ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. ಭಾರತದಲ್ಲಿನ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಂಕ್ರಾಮಿಕದ ಬಳಿಕ ಅವು ಸುಧಾರಿಸಿವೆ ಎಂದು ವರದಿ ಹೇಳಿದೆ.

Tap to resize

Latest Videos

ವಿಶ್ವ ಆರ್ಥಿಕ ಪ್ರಗತಿಯಲ್ಲಿ ಭಾರತದ ಪಾಲು ಶೇ. 15: ಐಎಂಎಫ್‌ ಮೆಚ್ಚುಗೆ; ಕೇಂದ್ರ ಬಜೆಟ್‌ಗೂ ಶ್ಲಾಘನೆ

ವಿಶ್ವ ಆರ್ಥಿಕತೆಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಪ್ರಕಾಶಮಾನ ಸ್ಥಾನದಲ್ಲಿದೆ. 2023ರಲ್ಲಿ ಒಟ್ಟು ಜಾಗತಿಕ ಬೆಳವಣಿಗೆಯ ಶೇ.15ರಷ್ಟುಕೊಡುಗೆಯನ್ನು ಭಾರತ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಭಾರತದ ಕಾರ್ಯಕ್ಷಮತೆ ಸಾಕಷ್ಟು ಪ್ರಭಾವಶಾಲಿಯಾಗಿದೆ. ಈ ವರ್ಷ, ಭಾರತವು ಹೆಚ್ಚಿನ ಬೆಳವಣಿಗೆ ದರವನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಮಾರ್ಚ್‌ನಲ್ಲಿ ಕೊನೆಗೊಳ್ಳುವ ವರ್ಷಕ್ಕೆ ಶೇ.6.8 ರಷ್ಟು ಪ್ರಗತಿ ಕಾಣಲಿದೆ. 

ಮುಂದಿನ 20 ವರ್ಷ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗದ ಪ್ರಗತಿ

ಇದು ವಿಶ್ವದ ಇತರ ಆರ್ಥಿಕತೆಗಳಂತೆ ಸ್ವಲ್ಪ ನಿಧಾನವಾದರೂ ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ. ಅದೇ ರೀತಿ ಭಾರತವು 2023 ರಲ್ಲಿ ಜಾಗತಿಕ ಬೆಳವಣಿಗೆ ಶೇ.15 ರಷ್ಟು ತನ್ನ ಕೊಡುಗೆ ಒದಗಿಸುತ್ತದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಬೆಳವಣಿಗೆಯ ದರವಾಗಿದೆ’ ಎಂದರು. ‘ಕೋವಿಡ್‌ ಸಾಂಕ್ರಾಮಿಕದಿಂದ ಆದ ಕಷ್ಟ-ನಷ್ಟವನ್ನು ಡಿಜಿಟಲೀಕರಣವು ಸರಿದೂಗಿಸಿದೆ. ವಿವೇಕಯುತ ಹಣಕಾಸು ನೀತಿ ಮತ್ತು ಮುಂದಿನ ವರ್ಷದ ಬಜೆಟ್‌ನಲ್ಲಿ ಒದಗಿಸಲಾದ ಬಂಡವಾಳ ಹೂಡಿಕೆಗಳು, ಆರ್ಥಿಕ ಬೆಳವಣಿಗೆಯು ವೇಗ ಕಾಪಾಡಿಕೊಳ್ಳಲು ನೆರವಾಗಲಿದೆ’ ಎಂದು ಹೇಳಿದರು. ಜಾಗತಿಕ ಬೆಳವಣಿಗೆಯು ಕಳೆದ ವರ್ಷದ ಶೇ. 3.4ರಿಂದ ಶೇ. 2.9ಕ್ಕೆ 2023ರಲ್ಲಿ ನಿಧಾನಗೊಳ್ಳಲಿದೆ. ಹಾಗಾಗಿ 2023ನೇ ಸಾಲು ಕಷ್ಟಕರವೆಂದು ಕಂಡುಬರುತ್ತಿದ್ದರೂ ಈ ಸಮಯದಲ್ಲಿ ಭಾರತವು ಪ್ರಕಾಶಮಾನವಾದ ತಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತ ಏಕೆ ಪ್ರಕಾಶಮಾನವಾದ ತಾಣವಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಐಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು, ಈಗಾಗಲೇ ಸಾಕಷ್ಟು ಉತ್ತಮವಾಗಿ ಚಲಿಸುತ್ತಿರುವ ಡಿಜಿಟಲೀಕರಣವನ್ನು ಸಾಂಕ್ರಾಮಿಕ ರೋಗದ ಪ್ರಭಾವದಿಂದ ಹೊರಬರಲು ಮತ್ತು ಬೆಳವಣಿಗೆ ಹಾಗೂ ಉದ್ಯೋಗಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಪ್ರಮುಖ ಡ್ರೈವರ್‌ ಆಗಿ ಪರಿವರ್ತಿಸಲು ದೇಶವು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಶ್ಲಾಘಿಸಿದರು.

ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆದರೂ ಲಾಭದಲ್ಲಿ ಭಾರತ

ಎರಡನೆಯದಾಗಿ, ಭಾರತದ ಹಣಕಾಸಿನ ನೀತಿಯು ಆರ್ಥಿಕ ಪರಿಸ್ಥಿತಿಗಳಿಗೆ ಸ್ಪಂದಿಸುವಂತಿದೆ. ನಾವು ಹೊಸ ಬಜೆಟ್ ಮಂಡಿಸಿರುವುದನ್ನು ನೋಡಿದ್ದೇವೆ ಮತ್ತು ಇದು ಹಣಕಾಸಿನ ಬಲವರ್ಧನೆಗೆ ಬದ್ಧತೆಯನ್ನು ಸೂಚಿಸುತ್ತದೆ, ಅದೇ ಸಮಯದಲ್ಲಿ ಬಂಡವಾಳ ಹೂಡಿಕೆಗಳಿಗೆ ಗಮನಾರ್ಹ ಹಣಕಾಸು ಒದಗಿಸುತ್ತದೆ. ಮತ್ತು ಮೂರು, ಏಕೆಂದರೆ ಭಾರತ ಸಾಂಕ್ರಾಮಿಕ ರೋಗದಿಂದ ಪಾಠಗಳನ್ನು ಕಲಿಯಲು ಮತ್ತು ಕೆಲವು ತಿಂಗಳುಗಳಿಂದ ನಿಜವಾಗಿಯೂ ಕಷ್ಟಕರವಾದ ಸಮಯವನ್ನು ಜಯಿಸಲು ಅತ್ಯಂತ ಬಲವಾದ ನೀತಿಗಳನ್ನು ಜಾರಿಗೆ ತರಲು ಹಿಂಜರಿಯಲಿಲ್ಲ ಎಂದು ಕ್ರಿಸ್ಟಲಿನಾ ಜಾರ್ಜಿವಾ ಪಿಟಿಐಗೆ ತಿಳಿಸಿದರು.

 

click me!