ಕೊರೊನಾ ಇಡೀ ಜಗತ್ತಿನ ಚಿತ್ರಣ ಬದಲಿಸಿದೆ. ಕೆಲ ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಅದ್ರಲ್ಲಿ ವರ್ಕ್ ಫ್ರಂ ಹೋಮ್ ಕೂಡ ಒಂದು. ಕೊರೊನಾ ಕಡಿಮೆಯಾಗ್ತಿದ್ದಂತೆ ಮತ್ತೆ ಜಗತ್ತು ತೆರೆದುಕೊಳ್ತಿದೆ. ಆದ್ರೆ ಕಚೇರಿಗೆ ಬರುವ ಜನರ ಸಂಖ್ಯೆ ಮಾತ್ರ ವಿಸ್ತಾರಗೊಳ್ತಿಲ್ಲ.
ವರ್ಕ್ ಫ್ರಂ ಹೋಮ್ (Work From Home). ಕೊರೊನಾ (Corona) ಸಂದರ್ಭದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಕೊರೊನಾಗಿಂತ ಮೊದಲೂ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ವಿಧಾನವನ್ನು ಅಳವಡಿಸಿಕೊಂಡಿದ್ದವು ನಿಜ. ಆದ್ರೆ ಕೊರೊನಾ ಬಂದ್ಮೇಲೆ ಖಾಸಗಿ ಕಂಪನಿ (Private Company) ಗಳು ಹಾಗೂ ಸರ್ಕಾರಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಗೆ ಹೆಚ್ಚು ಆದ್ಯತೆ ನೀಡಿದ್ದವು. ಕೆಲ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ಅಳವಡಿಸಿಕೊಂಡು, ಕಚೇರಿಯನ್ನು ಮುಚ್ಚಿವೆ. ಇನ್ನು ಕೆಲ ಕಂಪನಿಗಳಿಗೆ ಮೊದಲು ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿದ್ದು ದುಬಾರಿಯಾಗಿದೆ. ಯಾಕೆಂದ್ರೆ ಈಗ ಉದ್ಯೋಗಿಗಳು ಕಚೇರಿಗೆ ಬರಲು ಮನಸ್ಸು ಮಾಡ್ತಿಲ್ಲ.
ವರ್ಕ್ ಫ್ರಂ ಹೋಮ್ ಆಯ್ಕೆ ಬಿಟ್ಟ ಕಂಪನಿ : ಕೊರೊನಾ ನಂತ್ರ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ತೆಗೆದು ಹಾಕಿವೆ. ಇಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಟೆಸ್ಲಾ ಸಹ ಇದರಲ್ಲಿ ಸೇರಿದೆ. ಇದ್ರ ಸಿಇಒ (CEO) ಎಲೋನ್ ಮಸ್ಕ್ ಎಲ್ಲಾ ಸಿಬ್ಬಂದಿಗೆ ಕೆಲಸಕ್ಕೆ ಬರುವಂತೆ ಸೂಚನೆ ನೀಡಿದ್ದಾರೆ. ಎಲ್ಲ ಸಿಬ್ಬಂದಿ ಪ್ರತಿ ವಾರ 40 ಗಂಟೆ ಕಚೇರಿಯಲ್ಲಿರುವಂತೆ ಹೇಳಿದ್ದಾರೆ. ಒಂದು ವೇಳೆ ಸಿಬ್ಬಂದಿ ಇದನ್ನು ಪಾಲಿಸದೆ ಹೋದ್ರೆ ಅವರು ಕೆಲಸ ಬಿಟ್ಟಿದ್ದಾರೆಂದು ಪರಿಗಣಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಂಪನಿ ಈ ನೀತಿ ಇಷ್ಟವಿಲ್ಲ ಎನ್ನುವವರು ಕೆಲಸ ಬಿಡಬಹುದು ಎಂದು ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಹೈಬ್ರಿಡ್ ಸಂಸ್ಕೃತಿ ಅಳವಡಿಸಿಕೊಂಡ ದೈತ್ಯ ಕಂಪನಿಗಳು : ಮೊದಲೇ ಹೇಳಿದಂತೆ ಕೆಲವು ಕಂಪನಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ಗೆ ಬದಲಾಗಿವೆ. ಮತ್ತೆ ಕೆಲ ಕಂಪನಿಗಳು ಹೈಬ್ರಿಡ್ ಸಂಸ್ಕೃತಿ ಅಳವಡಿಸಿಕೊಂಡಿವೆ. ಸಿಬ್ಬಂದಿ ಕೆಲ ದಿನ ಕಚೇರಿಗೆ ಬರಬಹುದು ಮತ್ತೆ ಕೆಲ ದಿನ ಮನೆಯಲ್ಲಿ ಕೆಲಸ ಮಾಡ್ಬಹುದು. ಅನೇಕ ಕಂಪನಿಗಳಿಗೆ ವರ್ಕ್ ಫ್ರಂ ಹೋಮ್ ವಿಧಾನ ಇಷ್ಟವಾಗಿದೆ. ಹೈಬ್ರಿಡ್ ಸಂಸ್ಕೃತಿ ಅಳವಡಿಸಿಕೊಂಡ ಕಂಪನಿಗಳಲ್ಲಿ ಹೆಚ್ ಸಿಎಲ್, ಇನ್ಫೋಸಿಸ್ ಹಾಗೂ ಟಿಸಿಎಸ್ ಸೇರಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಂಪನಿಗಳು ಇದನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಐದರಲ್ಲಿ ಮೂರು ವ್ಯಕ್ತಿಗಳಿಗೆ ಈ ಸಂಸ್ಕೃತಿ ಇಷ್ಟವಾಗ್ತಿದೆ. ಕಂಪನಿಗಳಿಗೂ ಇದ್ರಿಂದ ಲಾಭವಾಗ್ತಿದೆ. ದೇಶದ ಶೇಕಡಾ 93ರಷ್ಟು ತಾಂತ್ರಿಕ ಸಂಸ್ಥೆಗಳು ಹೈಬ್ರಿಡ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿವೆ.
ವಾರದಲ್ಲಿ 4 ದಿನ ಮಾತ್ರ ಕೆಲಸ: ಯುಕೆಯಲ್ಲಿ ಈ ಪ್ರಯೋಗ ಶುರು
ಸಿಬ್ಬಂದಿ ಏನು ಬಯಸ್ತಾರೆ ? : ಕಚೇರಿಯಲ್ಲಿ ಕೆಲಸ ಮಾಡುವ ಜನರು ಹೈಬ್ರಿಡ್ ಸಂಸ್ಕೃತಿಯನ್ನು ಇಷ್ಟಪಡ್ತಿದ್ದಾರೆ. ಯಾಕೆಂದ್ರೆ ಇದ್ರಿಂದ ಅವರ ಸಮಯ ಉಳಿಯುತ್ತಿದೆ. ಹೋಗಿ – ಬರುವ ಖರ್ಚು ಕಡಿಮೆಯಾಗ್ತಿದೆ. ಗೂಗಲ್ ಕೂಡ ಹೈಬ್ರಿಡ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಹಾಗೆಯೇ ಅದು ಎಲ್ಲ ಸಿಬ್ಬಂದಿಗೆ ಕೊರೊನಾ ಲಸಿಕೆಯನ್ನು ಕಡ್ಡಾಯ ಮಾಡಿದೆ. ಆದ್ರೆ ಇದನ್ನು ಖಚಿತಪಡಿಸಿಕೊಳ್ಳುವುದು ಕಷ್ಟ. ಯಾಕೆಂದ್ರೆ ಲಸಿಕೆ ಪಡೆದ ಮೇಲೂ ಕೊರೊನಾ ಸೋಂಕು ಬರ್ತಿದೆ. ದೇಶದ ಮೂಲೆಯಿರಲಿ, ವಿದೇಶವಿರಲಿ, ಸಿಬ್ಬಂದಿ ಆಯ್ಕೆ ಮಾಡುವುದು ಸುಲಭ. ಹಾಗೆಯೇ ಸಿಬ್ಬಂದಿಗಾಗಿ ಪ್ರತ್ಯೇಕ ಮೂಲಸೌಕರ್ಯಗಳನ್ನು ಸ್ಥಾಪಿಸುವ ಅಗತ್ಯವಿಲ್ಲ. ಇದೇ ಕಾರಣಕ್ಕೆ ಅನೇಕ ದೊಡ್ಡ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಹೆಚ್ಚು ಆದ್ಯತೆ ನೀಡ್ತಿವೆ. ಇದಲ್ಲದೆ ಶಿಫ್ಟ್ ಸಮಸ್ಯೆಯಾಗ್ತಿಲ್ಲ. ಯಾವಾಗ ಹೇಳಿದ್ರೂ ಸಿಬ್ಬಂದಿ ಕೆಲಸಕ್ಕೆ ಸಿದ್ಧವಿರ್ತಾರೆ. ಟ್ರಾಫಿಕ್ ಸಮಸ್ಯೆ ಕಡಿಮೆಯಾಗ್ತಿದೆ, ಪೆಟ್ರೋಲ್ ಖರ್ಚು ಉಳಿಯುತ್ತಿದೆ. ವಿವಾಹಿತರು ಮನೆಯಲ್ಲಿ ಸಮಯ ಕಳೆಯಲು ಸಾಧ್ಯವಾಗ್ತಿದೆ ಎನ್ನುತ್ತಾರೆ ತಜ್ಞರು.
ವರ್ಕ್ ಫ್ರಂ ಹೋಮ್ ಗುಂಗಿನಲ್ಲಿರುವ ಜನರನ್ನು ವರ್ಕ್ ಫ್ರಂ ಆಫೀಸ್ ಗೆ ತರುವುದು ಕಷ್ಟ. ಅದಕ್ಕಾಗಿ ಕೆಲ ಕಂಪನಿ ಹೈಬ್ರಿಡ್ ಸಂಸ್ಕೃತಿ ಅಳವಡಿಸಿಕೊಳ್ತಿದೆ. ಆದ್ರೆ ಕಚೇರಿ ಇರುವ ನಗರದಲ್ಲಿಯೇ ಇರುವ ಸಿಬ್ಬಂದಿಗೆ ಯೋಗ್ಯ. ಬೇರೆ ಊರಿನಲ್ಲಿರುವವರಿಗೆ ಸಮಸ್ಯೆ ಎನ್ನುತ್ತಾರೆ ಕೆಲ ಸಿಬ್ಬಂದಿ. ವರ್ಕ್ ಫ್ರಂ ಆಫೀಸ್ ಕಡ್ಡಾಯ ಮಾಡ್ತಿದ್ದಂತೆ ಅನೇಕ ಸಿಬ್ಬಂದಿ ಕೆಲಸ ಬಿಟ್ಟಿದ್ದಾರೆ. ಕೊರೊನಾ, ಕೆಲಸದ ವಿಧಾನವನ್ನು ಬದಲಿಸಿದೆ. ವರ್ಕ್ ಫ್ರಂ ಹೋಮ್ ಕಂಪನಿಗಳಿಗೆ ತಲೆನೋವಾಗಿದ್ಯಾ ಅಥವಾ ಹೈಬ್ರಿಡ್ ಸಂಸ್ಕೃತಿ ಮುಂದಿನ ಭವಿಷ್ಯವಾ ಎಂಬುದನ್ನು ಹೇಳೋದು ಸದ್ಯ ಜಟಿಲವಾಗಿದೆ.