ಯುಪಿಐ ಬಳಕೆಗೆ ಏ.1ರಿಂದ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ಗೂಗಲ್ ಪೇ, ಪೇಟಿಎಂ ಮತ್ತಿತರ ಅಪ್ಲಿಕೇಷನ್ ಗಳನ್ನು ಬಳಸುವ ಗ್ರಾಹಕರನ್ನು ಚಿಂತೆಗೀಡು ಮಾಡಿತ್ತು. ಆದರೆ, ಸಾಮಾನ್ಯ ಬಳಕೆದಾರರಿಗೆ ಯುಪಿಐ ಬಳಕೆ ಮೇಲೆ ಯಾವುದೇ ಶುಲ್ಕ ವಿಧಿಸೋದಿಲ್ಲ ಎಂದು ಎನ್‌ಪಿಸಿಐ ಸ್ಪಷ್ಟನೆ ನೀಡಿದೆ ಕೂಡ. ಆದರೂ ಯುಪಿಐ ಪಾವತಿಗೆ ಸಂಬಂಧಿಸಿ ಬಳಕೆದಾರರು ಕೆಲವು ಮಾಹಿತಿಗಳನ್ನು ಹೊಂದಿರೋದು ಅಗತ್ಯ.
Business Desk:ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಇತ್ತೀಚೆಗೆ ತನ್ನ ಸುತ್ತೋಲೆಯಲ್ಲಿ ಏಪ್ರಿಲ್ 1 ರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ನಲ್ಲಿ (ಯುಪಿಐ) ಬ್ಯುಸಿನೆಸ್ ಟ್ರಾನ್ಸಾಕ್ಷನ್‌ಗಳ ಅಥವಾ ವ್ಯಾಪಾರಿ ವಹಿವಾಟುಗಳ ಮೇಲೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್" (ಪಿಪಿಐ) ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿತ್ತು. ಗೂಗಲ್ ಪೇ, ಪೇಟಿಎಂ ಮತ್ತಿತರ ಅಪ್ಲಿಕೇಷನ್ ಗಳ ಮೂಲಕ ಮಾಡಿದ 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿತ್ತು. ಇದು ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ಯುಪಿಐ ಪಾವತಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳು ಹರಡಿದ್ದವು. ಆದರೆ, ಈ ಇಂಟರ್ ಚೇಂಜ್ ಶುಲ್ಕಗಳು ಸಾಮಾನ್ಯ ಗ್ರಾಹಕರಿಗೆ ಅನ್ವಯಿಸೋದಿಲ್ಲ ಎಂಬ ಬಗ್ಗೆ ಪೇಟಿಎಂ ಹಾಗೂ ಎನ್‌ಪಿಸಿಐ ಟ್ವೀಟ್ ಮೂಲಕ ಸ್ಪಷ್ಟನೆ ಕೂಡ ನೀಡಿದ್ದವು. ಹೀಗಾಗಿ ಗೂಗಲ್ ಪೇ, ಪೇಟಿಎಂ ಮತ್ತಿತರ ಅಪ್ಲಿಕೇಷನ್ ಗಳನ್ನು ಬಳಸುವ ಗ್ರಾಹಕರು ನಿರಾಳಾಗಿದ್ದಾರೆ. ಆದರೆ, ಯುಪಿಐ ಬಳಕೆದಾರರಿಗೆ ಉಚಿತವಾಗಿದ್ದರೂ ಕೂಡ ಅದಕ್ಕೆ ಸಂಬಂಧಿಸಿದ ಈ 9 ವಿಷಯಗಳನ್ನು ಅವರು ನೆನಪಿಡೋದು ಅಗತ್ಯ. ಹಾಗಾದ್ರೆ ಅವು ಯಾವುವು? ಇಲ್ಲಿದೆ ಮಾಹಿತಿ.
1. ಇಂಟರ್ ಚೇಂಜ್ ಶುಲ್ಕಗಳು ಪಿಪಿಐ ವ್ಯಾಪಾರಿಗಳ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ, ಗ್ರಾಹಕರಿಗಲ್ಲ ಎಂಬ ಬಗ್ಗೆ ಎನ್ ಪಿಸಿಐ ಮಾ.29ರ ಸುತ್ತೋಲೆಯಲ್ಲಿಯಾವುದೇ ಸ್ಪಷ್ಟನೆ ನೀಡಿದೆ.
2.ಯಾವುದೇ ಬ್ಯಾಂಕ್ ಖಾತೆಯಿಂದ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಯುಪಿಐ ಉಚಿತವಾಗಿದೆ ಎಂದು ಎನ್ ಪಿಸಿಐ ಮುಖ್ಯಸ್ಥರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
3.ಬ್ಯಾಂಕ್ ಖಾತೆಗಳಿಂದ ಮಾಡುವ ಯುಪಿಐ ಪಾವತಿಗಳ ಮೇಲಿನ ಯಾವುದೇ ಶುಲ್ಕಗಳಲ್ಲಿ ಬದಲಾವಣೆಯಿಲ್ಲ.
4.ಸಾಮಾನ್ಯ ಯುಪಿಐ ಹಣ ವರ್ಗಾವಣೆ ಮಿತಿ ಪ್ರತಿ ವಹಿವಾಟಿಗೆ 1ಲಕ್ಷ ರೂ. ಎಂದು ಎನ್ ಪಿಸಿಐ ತಿಳಿಸಿದೆ.
ಏ.1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ?ಇಲ್ಲಿದೆ ಮಾಹಿತಿ
5.ಯುಪಿಐನಲ್ಲಿ ಕೆಲವು ನಿರ್ದಿಷ್ಟ ವರ್ಗಗಳಲ್ಲಿನ ವಹಿವಾಟಿಗೆ ಅಂದರೆ ಕ್ಯಾಪಿಟಲ್ ಮಾರ್ಕೆಟ್ಸ್, ಕಲೆಕ್ಷನ್ಸ್, ವಿಮೆ, ಫಾರಿನ್ ಇನ್ ವರ್ಡ್ ರಿಮಿಟೆನ್ಸ್ ವಹಿವಾಟಿನ ಮಿತಿ 2ಲಕ್ಷ ರೂ. ತನಕ ಇದೆ.
6.ಇನ್ಯಿಯಲ್ ಪಬ್ಲಿಕ್ ಆಫರಿಂಗ್ ಅಥವಾ ಐಪಿಒ ಹಾಗೂ ರಿಟೇಲ್ ಡೈರೆಕ್ಟ್ ಯೋಜನೆಗೆ ಪ್ರತಿ ವಹಿವಾಟಿನ ಮೇಲಿನ ಮಿತಿ 5ಲಕ್ಷ ರೂ.
7.ಯುಪಿಐ ಬಳಸಿ ಹಣ ವರ್ಗಾವಣೆ ಮಾಡುವ ವಿವಿಧ ಚಾನಲ್ ಗಳು-ವರ್ಚುವಲ್ ಐಡಿ ಮೂಲಕ ಸೆಂಡ್/ಕಲೆಕ್ಟ್, ಖಾತೆ ಸಂಖ್ಯೆ ಐಎಫ್ ಎಸ್ ಸಿ ಹಾಗೂಆಧಾರ್ ಸಂಖ್ಯೆ.
8.ಈ ಹಿಂದೆ ಗ್ರಾಹಕರು ಬ್ಯಾಂಕ್ ಖಾತೆಗಳನ್ನು ಮಾತ್ರ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಗ್ರಾಹಕರು ಪಿಪಿಐ ವ್ಯಾಲೆಟ್ಸ್ ಹಾಗೂ ಯುಪಿಐ ಲಿಂಕ್ ಮಾಡಬಹುದು. ಆದರೆ, ಈ ಪಿಪಿಐ ವ್ಯಾಲೆಟ್ಸ್ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ.
9.ಯುಪಿಐ ಪ್ಲಾಟ್ ಫಾರ್ಮ್ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಖಾತೆಗಳ ಮಾಹಿತಿಗಳನ್ನು ಗೊತ್ತಾಗದ ರೀತಿಯಲ್ಲಿ (ಮಾಸ್ಕಡ್ ಮ್ಯಾನರ್) ಪಡೆಯುತ್ತದೆ. ಅಂದ್ರೆ ಯುಪಿಐ ಅಪ್ಲಿಕೇಷನ್ ನಲ್ಲಿ ಎಲ್ಲ ಮಾಹಿತಿಗಳನ್ನು ಕಾಣಿಸೋದಿಲ್ಲ.
ಏ.1ರಿಂದ NPS ನಿಯಮದಲ್ಲಿ ಬದಲಾವಣೆ; ವಿತ್ ಡ್ರಾ ಮಾಡಲು ದಾಖಲೆಗಳನ್ನುಅಪ್ಲೋಡ್ ಮಾಡೋದು ಅಗತ್ಯ
ಸುತ್ತೋಲೆಯಲ್ಲಿ ಏನಿದೆ?
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್‌ನಲ್ಲಿ ವ್ಯಾಪಾರ ವಹಿವಾಟುಗಳಿಗೆ ಪ್ರೀಪೇಯ್ಡ್ ಪಾವತಿ ಉಪಕರಣಗಳ ಶುಲ್ಕವನ್ನು ಅನ್ವಯಿಸಲು NPCI ಸುತ್ತೋಲೆಯಲ್ಲಿ ಶಿಫಾರಸು ಮಾಡಲಾಗಿದೆ. ಈ ಶುಲ್ಕವು ಏಪ್ರಿಲ್ 1, 2023 ರಿಂದ ಅಂದರೆ ನಾಳೆಯಿಂದ ದೇಶದಾದ್ಯಂತ ಜಾರಿಗೆ ಬರಲಿದೆ. PPI ಮೂಲಕ UPI ಬಳಸಿಕೊಂಡು 2,000 ರೂ.ಗಿಂತ ಹೆಚ್ಚಿನ ಯಾವುದೇ ವಹಿವಾಟು ಮೌಲ್ಯದ ಶೇ.1.1ರಷ್ಟು ವಿನಿಮಯವನ್ನು ಆಕರ್ಷಿಸುತ್ತದೆ ಎಂದು NPCI ಘೋಷಿಸಿದೆ. ಆದರೆ, ಇದು ವಹಿವಾಟುಗಳಿಗಾಗಿ ಕ್ಯೂಆರ್ ಕೋಡ್ ಅಥವಾ ಯುಪಿಐ ಮೋಡ್ ಬಳಸುವ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ ಎಂದು NPCI ಸ್ಪಷ್ಟಪಡಿದೆ.