
ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಬದಲಾಗಬಹುದು, ಸ್ಟಾಂಡರ್ಡ್ ಡಿಡಕ್ಷನ್ ಮೊತ್ತದಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಡೇರಿಸಿದ್ದಾರೆ. ಆದರೆ ಅದರಲ್ಲಿ ಒಂದು ಷರತ್ತು ಇದೆ. ಏನೆಂದರೆ- ಹೊಸ ತೆರಿಗೆ ಪದ್ಧತಿಯಡಿ ನೀವು ತೆರಿಗೆ ಪಾವತಿ ಮಾಡಿದರೆ ಮಾತ್ರ. ಹಳೆ ಪದ್ಧತಿಯನ್ನೇ ಈಗಲೂ ಬಳಸಿದರೆ ನಿಮಗೆ ಯಾವುದೇ ಲಾಭವಾಗದು. ಅದೇ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 17500 ರು.ಗಳನ್ನು ಉಳಿಸಬಹುದು.
ಹೊಸ ತೆರಿಗೆ ಪದ್ಧತಿಯನ್ನು ಬಳಸುವ ಸಂಬಳದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 50 ಸಾವಿರ ರು.ನಿಂದ 75 ಸಾವಿರ ರು.ಗೆ ಏರಿಕೆ ಮಾಡಲಾಗಿದೆ. ಪಿಂಚಣಿದಾರರ ಕೌಟುಂಬಿಕ ಪಿಂಚಣಿ ಡಿಡಕ್ಷನ್ ಅನ್ನು 15 ಸಾವಿರ ರು.ನಿಂದ 25 ಸಾವಿರ ರು.ಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ನಾಲ್ಕು ಕೋಟಿ ವ್ಯಕ್ತಿಗಳು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!
ಹೊಸ ತೆರಿಗೆ ಸ್ಲ್ಯಾಬ್: ಹೊಸ ಆದಾಯ ತೆರಿಗೆ ಪದ್ಧತಿಯಡಿ ಸ್ಲ್ಯಾಬ್‌ಗಳನ್ನು ಕೂಡ ಪರಿಷ್ಕರಿಸಲಾಗಿದೆ. ಅದರ ಪ್ರಕಾರ- 3 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 3ರಿಂದ 7 ಲಕ್ಷ ರು. ಆದಾಯಕ್ಕೆ ಶೇ.5, 7ರಿಂದ 10 ಲಕ್ಷ ರು. ಆದಾಯಕ್ಕೆ ಶೇ.10, 10ರಿಂದ 12 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.15, 12ರಿಂದ 15 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.20 ಹಾಗೂ 15 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಇರಲಿದೆ ಎಂದು ಹೇಳಿದ್ದಾರೆ. ಈ ಬದಲಾವಣೆಗಳಿಂದಾಗಿ ಸಂಬಳದಾರ ನೌಕರರು ಹೊಸ ತೆರಿಗೆ ಪದ್ಧತಿಯಡಿ ವಾರ್ಷಿಕ 17,500 ರು.ಗಳನ್ನು ಉಳಿಸಬಹುದಾಗಿದೆ ಎಂದು ನಿರ್ಮಲಾ ವಿವರಿಸಿದ್ದಾರೆ.
ಏ.1ರಿಂದ ಜಾರಿಗೆ: ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ ಹೊಸ ಸ್ಲ್ಯಾಬ್‌ಗಳು 2024ರ ಏ.1ರಿಂದ ಜಾರಿಗೆ ಬರಲಿವೆ. 2025-26ನೇ ಸಾಲಿನ ಆದಾಯ ತೆರಿಗೆಗೆ ಅನ್ವಯವಾಗಲಿವೆ. ಹೊಸ ತೆರಿಗೆ ಪದ್ಧತಿಯನ್ನು ಮೂರನೇ ಎರಡರಷ್ಟು ತೆರಿಗೆದಾರರು ಬಳಸುತ್ತಿದ್ದಾರೆ. 2023-24ರಲ್ಲಿ 8.16 ಕೋಟಿ ತೆರಿಗೆದಾರರು ಈ ಪದ್ಧತಿಯನ್ನು ಬಳಕೆ ಮಾಡಿದ್ದಾರೆ ಎಂದು ನಿರ್ಮಲಾ ಅವರು ಮಾಹಿತಿ ನೀಡಿದ್ದಾರೆ.
ಏನಿಲ್ಲ ಏನಿಲ್ಲ ಕರ್ನಾಟಕಕ್ಕೆ ಏನಿಲ್ಲ,ಬಜೆಟ್ ಮನಿ ಮಾಲೀಕ ಆಂಧ್ರ ಬಿಹಾರ, ಹರಿದಾಡುತ್ತಿದೆ ಮೀಮ್ಸ್!
ಏನಿದು ಸ್ಟಾಂಡರ್ಡ್ ಡಿಡಕ್ಷನ್?: ಸಂಬಳದಾರರು ತಮ್ಮ ವಾರ್ಷಿಕ ಆದಾಯದಲ್ಲಿ ಒಂದಷ್ಟು ನಿಶ್ಚಿತ ಮೊತ್ತವನ್ನು ಮುರಿದುಕೊಂಡು ತೆರಿಗೆ ಲೆಕ್ಕಾಚಾರ ಮಾಡುವುದೇ ಸ್ಟಾಂಡರ್ಡ್ ಡಿಡಕ್ಷನ್. ಉದಾಹರಣೆಗೆ ವಾರ್ಷಿಕ 9 ಲಕ್ಷ ರು. ಸಂಬಳ ಹೊಂದಿರುವ ವ್ಯಕ್ತಿ, ತೆರಿಗೆ ಲೆಕ್ಕಾಚಾರ ವೇಳೆ 9 ಲಕ್ಷ ರು. ಆದಾಯವನ್ನೂ ಪರಿಗಣಿಸಬೇಕಾಗುತ್ತದೆ. ಸ್ಟಾಂಡರ್ಡ್ ಡಿಡಕ್ಷನ್ ಸೌಕರ್ಯವನ್ನು ಸರ್ಕಾರ ಕಲ್ಪಿಸಿದ್ದರೆ, ಡಿಡಕ್ಷನ್ ಅಡಿ ಎಷ್ಟು ಮೊತ್ತ ಉಲ್ಲೇಖಿಸಲಾಗಿರುತ್ತದೆಯೋ ಅಷ್ಟು ಮೊತ್ತವನ್ನು ಒಟ್ಟು ವರಮಾನದಲ್ಲಿ ಕಡಿತಗೊಳಿಸಿ, ಉಳಿಕೆ ಮೊತ್ತಕ್ಕೆ ತೆರಿಗೆ ಲೆಕ್ಕಾಚಾರ ಮಾಡಬೇಕಾಗುತ್ತದೆ. ಈ ಬಾರಿಯ ಬಜೆಟ್‌ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತವನ್ನು 75 ಸಾವಿರ ರು.ಗೆ ಹೆಚ್ಚಿಸಲಾಗಿದೆ. 9 ಲಕ್ಷ ರು. ಸಂಬಳವಿರುವ ವ್ಯಕ್ತಿ ತನ್ನ ಆದಾಯದಲ್ಲಿ 75 ಸಾವಿರ ರು.ಗಳನ್ನು ಕಡಿತಗೊಳಿಸಬಹುದು. ಇದರಿಂದ 8.25 ಲಕ್ಷ ರು.ಗೆ ತೆರಿಗೆ ಲೆಕ್ಕಾಚಾರ ಮಾಡಬೇಕಾಗುತ್ತದೆ. ಈ ರೀತಿಯ ಕಡಿತಕ್ಕೆ ಯಾವುದೇ ರಶೀದಿ ಅಥವಾ ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.