ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.ಈ ಹಿನ್ನೆಲೆಯಲ್ಲಿಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ, 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯ ಮಿತಿ ನಿಗದಿಪಡಿಸುವ ಬಗ್ಗೆ ಯೋಚಿಸಿದೆ.
ನವದೆಹಲಿ (ನ.28): ದೇಶದಲ್ಲಿ ಹೆಚ್ಚುತ್ತಿರುವ ಆನ್ ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಯುಪಿಐ ವಹಿವಾಟು ನಡೆಯುವಾಗ ನಿರ್ದಿಷ್ಟ ಮೊತ್ತಕ್ಕೆ ಹೆಚ್ಚಿನದಕ್ಕೆ ಕನಿಷ್ಠ ಸಮಯ ಮಿತಿ ವಿಧಿಸಲು ಸರ್ಕಾರ ಯೋಜನೆ ರೂಪಿಸಿದೆ. 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯಾವಧಿ ನಿಗದಿಪಡಿಸುವ ಬಗ್ಗೆ ಯೋಚಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುರಕ್ಷಿತಗೊಳಿಸಲು ಈ ಕ್ರಮ ಅಗತ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಸೈಬರ್ ಸೆಕ್ಯುರಿಟಿ ಹೆಚ್ಚಿಸಲು ಇಂಥದೊಂದು ಕ್ರಮ ಅನಿವಾರ್ಯ ಎಂದು ಕೂಡ ಹೇಳಲಾಗಿದೆ. ಒಂದು ವೇಳೆ ಸರ್ಕಾರ ಈ ನಿಯಮ ಜಾರಿಗೊಳಿಸಿದ್ರೆ ಇಮಿಡೇಟ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್), ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (ಆರ್ ಟಿಜಿಎಸ್) ಹಾಗೂ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮೂಲಕ ಮಾಡುವ ದೊಡ್ಡ ಪ್ರಮಾಣದ ಡಿಜಿಟಲ್ ಪಾವತಿಗಳಿಗೆ ಅನ್ವಯಿಸಲಿದೆ.
ಈ ಯೋಜನೆಯನ್ನು ಯುಪಿಐ ಖಾತೆ ತೆರೆದ ಬಳಿಕ ಮೊದಲ ವಹಿವಾಟನ್ನು ವಿಳಂಬಗೊಳಿಸಲು ಅಥವಾ ತಡಮಾಡುವ ಉದ್ದೇಶದಿಂದ ಮಾತ್ರ ರೂಪಿಸಲಾಗಿಲ್ಲ. ಬದಲಿಗೆ ಇಬ್ಬರು ಬಳಕೆದಾರರ ನಡುವಿನ ಪ್ರತಿ ಮೊದಲ ವಹಿವಾಟನ್ನು ನಿಯಂತ್ರಿಸಲು ರೂಪಿಸಲಾಗಿದೆ. ಉದಾಹರಣೆಗೆ ಪ್ರಸ್ತುತ ಒಬ್ಬ ಬಳಕೆದಾರ ಹೊಸ ಯುಪಿಐ ಖಾತೆ ತೆರೆದಾಗ ಆತ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000ರೂ. ಕಳುಹಿಸಬಹುದು. ಅದೇ ರೀತಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್ (ನಿಫ್ಟ್ ) ವ್ಯವಸ್ಥೆಯಲ್ಲಿ ಕೂಡ ಅದನ್ನು ಆಕ್ಟಿವೇಟ್ ಮಾಡಿದ ಮೊದಲ 24 ಗಂಟೆಗಳಲ್ಲಿ 50,000ರೂ. ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಗಳಲ್ಲಿ ಪಾವತಿಸಬಹುದು.
undefined
ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!
ಆದರೆ, ಯೋಜನೆ ಪ್ರಕಾರ ಪ್ರತಿಬಾರಿ ಮೊದಲ ಬಾರಿಗೆ 2,000ರೂ.ಗಿಂತ ಅಧಿಕ ಮೊತ್ತವನ್ನು ಈ ಹಿಂದೆ ವಹಿವಾಟು ನಡೆಸದಿರುವ ಇನ್ನೊಬ್ಬರು ಬಳಕೆದಾರರಿಗೆ ಪಾವತಿಸಿದಾಗ ನಾಲ್ಕು ಗಂಟೆಗಳ ಸಮಯ ಮಿತಿ ಪ್ರತಿ ಬಾರಿ ಅನ್ವಯಿಸಲಿದೆ.
'ಮೊದಲ ಬಾರಿಗೆ 2,000ರೂ.ಗಿಂತ ಅಧಿಕ ಮೊತ್ತದ ಡಿಜಿಟಲ್ ವಹಿವಾಟು ನಡೆಸೋರಿಗೆ ನಾವು 4 ಗಂಟೆಗಳ ಸಮಯ ಮಿತಿ ನಿಗದಿಪಡಿಸಲು ಯೋಚಿಸಿದ್ದೇವೆ. ಮಂಗಳವಾರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಹಾಗೂ ಗೂಗಲ್, ರೇಜರ್ ಪೇಯಂತಹ ಟೆಕ್ ಕಂಪನಿಗಳು ಸೇರಿದಂತೆ ಕೈಗಾರಿಕಾ ಷೇರುದಾರರ ಜೊತೆಗೆ ಮಂಗಳವಾರ ನಡೆಯುವ ಸಭೇಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು' ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಿಜಿಟಲ್ ಪಾವತಿ ವಿಭಾಗದಲ್ಲಿ ಅತೀಹೆಚ್ಚು ವಂಚನೆ
2022-23ನೇ ಹಣಕಾಸು ಸಾಲಿನಲ್ಲಿ ಡಿಜಿಟಲ್ ಪಾವತಿ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಆರ್ ಬಿಐ ವಾರ್ಷಿಕ ವರದಿ 2022-23 ತಿಳಿಸಿದೆ. 2023ನೇ ಹಣಕಾಸು ಸಾಲಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಟ್ಟು 30,252 ಕೋಟಿ ರೂ. ಮೊತ್ತದ 13,530 ವಂಚನೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಶೇ.49ರಷ್ಟು ಅಥವಾ 6,659 ಪ್ರಕರಣಗಳು ಡಿಜಿಟಲ್ ಪಾವತಿ-ಕಾರ್ಡ್/ಇಂಟರ್ನೆಟ್ ವಿಭಾಗಕ್ಕೆ ಸಂಬಂಧಿಸಿದ್ದಾಗಿವೆ.
ಪಿಂಚಣಿದಾರರೆ ನ.30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿ, ತಡೆಯಿಲ್ಲದೆ ಪಿಂಚಣಿ ಪಡೆಯಿರಿ
ಆನ್ ಲೈನ್ ವಂಚಕರು ವಂಚನೆಗೆ ಹೊಸ ಹೊಸ ವಿಧಾನಗಳನ್ನು ಬಳಸುವ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಒಂದು ಕ್ಷಣ ಮೈ ಮರೆತರೂ ಇಂಥ ವಂಚಕರ ಬಲೆಯಲ್ಲಿ ಸಿಲುಕುವುದು ಗ್ಯಾರಂಟಿ. ಅದರಲ್ಲೂ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿರುವ ಕಾರಣ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ.