ಪಿಎಫ್‌ ಹಣವನ್ನು ಯಾವಾಗ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

Suvarna News   | Asianet News
Published : Jun 12, 2021, 01:34 PM IST
ಪಿಎಫ್‌ ಹಣವನ್ನು ಯಾವಾಗ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

ಸಾರಾಂಶ

ಇಪಿಎಫ್‌ ಖಾತೆಯಲ್ಲಿರೋ ಹಣವನ್ನು ಉದ್ಯೋಗ ತ್ಯಜಿಸಿದ ಎಷ್ಟು ಸಮಯದೊಳಗೆ ಹಿಂಪಡೆಯಬೇಕು ಎಂಬ ಬಗ್ಗೆ ಬಹುತೇಕರಿಗೆ ತಿಳಿದಿರೋದಿಲ್ಲ.ಇಪಿಎಫ್‌ಗೆ ಸಂಬಂಧಿಸಿದ ಇಂಥ ಕೆಲವು ಮಾಹಿತಿಗಳು ಇಲ್ಲಿವೆ.

ಉತ್ತಮ ವೇತನ, ಉನ್ನತ ಹುದ್ದೆ ಬಯಕೆಯಿಂದ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸೋದು ಸಾಮಾನ್ಯ. ಆದ್ರೆ ಹೀಗೆ ಉದ್ಯೋಗ ಬದಲಾಯಿಸಿದಾಗ ಬಹುತೇಕರು ತಮ್ಮ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಖಾತೆಯನ್ನು ಹೊಸ ಕಂಪನಿಗೆ ವರ್ಗಾಯಿಸಲು ಮರೆಯುತ್ತಾರೆ. ಹೊಸ ಕಂಪನಿಗೆ ಸೇರಿದ ಬಳಿಕ ಹೊಸ ಪಿಎಫ್‌ ಖಾತೆ ತೆರೆಯುತ್ತಾರೆ. ಹಾಗಾದ್ರೆ ಈ ಮೊದಲ ಪಿಎಫ್‌ ಖಾತೆಯಲ್ಲಿದ್ದ ಹಣ ಏನಾಗುತ್ತೆ? ಆ ಹಣಕ್ಕೆ ಬಡ್ಡಿ ಸಿಗುತ್ತಾ?

2 ವರ್ಷ​ದಿಂದ ಐಟಿ​ಆ​ರ್‌ ಸಲ್ಲಿಸ​ದಿದ್ರೆ ಡಬಲ್‌ ಟಿಡಿ​ಎಸ್‌

ಎಷ್ಟು ಸಮಯ ಬಡ್ಡಿ ಸಿಗುತ್ತೆ?
ಬಹುತೇಕರು ಉದ್ಯೋಗ ತೊರೆದ ಅಥವಾ  ಸ್ವಯಂ ನಿವೃತ್ತಿ ಬಳಿಕ ಪಿಎಫ್‌ ಖಾತೆಯಲ್ಲಿರೋ ಹಣಕ್ಕೆ 58ನೇ ವಯಸ್ಸಿನ ತನಕ ತೆರಿಗೆ ರಹಿತ ಬಡ್ಡಿ ಸಿಗುತ್ತದೆ ಎಂದೇ ಭಾವಿಸುತ್ತಾರೆ. ಹೀಗಾಗಿ ಪಿಎಫ್‌ನಲ್ಲಿರೋ ಹಣವನ್ನು ಉಳಿತಾಯ ಎಂದು ಪರಿಗಣಿಸಿ ಸುಮ್ಮನಿದ್ದು ಬಿಡುತ್ತಾರೆ. 58 ವರ್ಷಕ್ಕೂ ಮುನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ರೆ 36 ತಿಂಗಳುಗಳ ತನಕ ನಿಮ್ಮ ಪಿಎಫ್‌ ಖಾತೆಗೆ ಯಾವುದೇ ಹಣ ಜಮೆಯಾಗದಿದ್ರೂ ಬಡ್ಡಿ ಬರುತ್ತದೆ. ಆದ್ರೆ 36 ತಿಂಗಳೊಳಗೆ ನೀವು ಪಿಎಫ್‌ ಖಾತೆಯಲ್ಲಿರೋ ಹಣ ಹಿಂಪಡೆಯಲು ಅರ್ಜಿ ಹಾಕದಿದ್ರೆ ಅದು ನಿಷ್ಕ್ರಿಯಗೊಳ್ಳುತ್ತದೆ. ಆ ಬಳಿಕ ಖಾತೆಗೆ ಯಾವುದೇ ಬಡ್ಡಿ ಜಮೆಯಾಗೋದಿಲ್ಲ. 

ಯಾವಾಗ ಹಣ ಹಿಂಪಡೆಯಬಹುದು?
ಉದ್ಯೋಗಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಇಪಿಎಫ್‌ನಲ್ಲಿರೋ ಸಂಪೂರ್ಣ ಹಣವನ್ನು ಹಿಂಪಡೆಯಲು ಉದ್ಯೋಗಿ ಅರ್ಹನಾಗಿರುತ್ತಾನೆ. ಆದ್ರೆ ಆತ ಹೊಸ ಉದ್ಯೋಗಕ್ಕೆ ಇದೇ ಪಿಎಫ್‌ ಖಾತೆಯನ್ನು ವರ್ಗಾಯಿಸಿರಬಾರದಷ್ಟೆ. ಬೇರೆ ಉದ್ಯೋಗಕ್ಕೆ ಸೇರದಿರೋರು, ಹೊಸ ಸಂಸ್ಥೆಯಲ್ಲಿ ಹೊಸ ಪಿಎಫ್‌ ಖಾತೆ ತೆರೆದಿರೋರು ಹಾಗೂ ನಿವೃತ್ತಿಯಾದವರು ಎರಡು ತಿಂಗಳ ಬಳಿಕ ಪಿಎಫ್‌ ಖಾತೆಯಲ್ಲಿರೋ ಹಣವನ್ನು ಪಡೆಯಬಹುದು. 

ಕೋವಿಡ್‌ ಲಸಿಕೆ ಪಡೆದವರಿಗೆ ಬ್ಯಾಂಕ್‌ನಲ್ಲಿ ಸಿಗಲಿದೆ ಭರ್ಜರಿ ಆಫರ್!

ಯಾವ ಸಂದರ್ಭಗಳಲ್ಲಿ ಖಾತೆ ನಿಷ್ಕ್ರಿಯಗೊಳ್ಳುತ್ತೆ?
ಇಪಿಎಫ್‌ಒ ನಿಯಮಗಳ ಪ್ರಕಾರ ಈ ಕೆಳಗಿನ ನಾಲ್ಕು ಸಂದರ್ಭಗಳಲ್ಲಿ ಪಿಎಫ್‌ ಖಾತೆ ನಿಷ್ಕ್ರಿಯಗೊಳ್ಳುತ್ತದೆ. 
-ಉದ್ಯೋಗಿ 55 ವರ್ಷಗಳ ಬಳಿಕ ಸೇವೆಯಿಂದ ನಿವೃತ್ತಿಗೊಂಡರೆ.
-ಪಿಎಫ್‌ ಚಂದಾದಾರ ಖಾಯಂ ಆಗಿ ನೆಲೆ ನಿಲ್ಲಲು ವಿದೇಶಕ್ಕೆ ವಲಸೆ ಹೋದರೆ
-ಚಂದಾದಾರ ಮೃತಪಟ್ಟರೆ
-ಚಂದಾದಾರ ಉದ್ಯೋಗ ತ್ಯಜಿಸಿದ 36 ತಿಂಗಳುಗಳೊಳಗೆ ಇಪಿಎಫ್ ಹಣ ಹಿಂಪಡೆಯಲು ಅರ್ಜಿ ಹಾಕದಿದ್ರೆ 

ತೆರಿಗೆ ವಿಧಿಸಲ್ಲ
ಪಿಎಫ್‌ ಅಕೌಂಟ್‌ನಲ್ಲಿರೋ ಹಣಕ್ಕೆ ನಿವೃತ್ತಿ ವಯಸ್ಸಿನ (58 ವರ್ಷ) ತನಕ ಅಥವಾ ಉದ್ಯೋಗಕ್ಕೆ ರಾಜೀನಾಮೆ ನೀಡೋವರೆಗೆ ಯಾವುದೇ ತೆರಿಗೆ ವಿಧಿಸೋದಿಲ್ಲ. ಆದ್ರೆ ರಾಜೀನಾಮೆ, ನಿವೃತ್ತಿ ಅಥವಾ ಉದ್ಯೋಗ ಕೊನೆಗೊಂಡ ಬಳಿಕ ಪಿಎಫ್‌ ಅಕೌಂಟ್‌ನಲ್ಲಿರೋ ಹಣಕ್ಕೆ ದೊರೆತ ಬಡ್ಡಿ ಮೊತ್ತಕ್ಕೆ ಕಾನೂನಿನ ಅನ್ವಯ ತೆರಿಗೆ ವಿಧಿಸಲಾಗುತ್ತದೆ. ಹಾಗೆಯೇ ಆದಾಯ ತೆರಿಗೆ ನಿಯಮಗಳ ಅನ್ವಯ ಪಿಎಫ್‌ ಖಾತೆಯಲ್ಲಿರೋ ಹಣವನ್ನು ಸೇವೆಯಲ್ಲಿ ನಿರಂತರ ಐದು ವರ್ಷ ಪೂರ್ಣಗೊಳಿಸೋ ಮುನ್ನ ಹಿಂಪಡೆದರೆ ಆ ಮೊತ್ತಕ್ಕೆ ಸಂದಾಯವಾಗಿರೋ ಬಡ್ಡಿ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. 

ಪಿಎಫ್‌ ವರ್ಗಾಯಿಸಿ
ಉದ್ಯೋಗಿ ಪಿಎಫ್‌ ಚಂದಾದಾರನಾದ ಪ್ರಾರಂಭಿಕ 5 ವರ್ಷ ಒಂದೇ ಸಂಸ್ಥೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ರೆ, ಆತ ಹೊಸ ಸಂಸ್ಥೆಗೆ ಸೇರಿದಾಗ ಪಿಎಫ್‌ ಖಾತೆಯನ್ನು ಅಲ್ಲಿಗೆ ವರ್ಗಾಯಿಸಬಹುದು. ಹೀಗಾಗಿ ಉದ್ಯೋಗ ಸಂಸ್ಥೆಯನ್ನು ಬದಲಾಯಿಸಿದ ತಕ್ಷಣ ನಿಮ್ಮ ಪಿಎಫ್ ಖಾತೆಯನ್ನು ಮರೆಯದೆ ಹೊಸ ಸಂಸ್ಥೆಗೆ ವರ್ಗಾಯಿಸಿ. ಆದ್ರೆ ನೀವು 58 ವರ್ಷಕ್ಕೂ ಮುನ್ನ ಸ್ವಯಂ ನಿವೃತ್ತಿ ಪಡೆಯುತ್ತಿದ್ದೀರಾದ್ರೆ ಉದ್ಯೋಗ ತ್ಯಜಿಸಿದ 36 ತಿಂಗಳೊಳಗೆ ಮರೆಯದೆ ಪಿಎಫ್‌ ಹಣ ಹಿಂಪಡೆಯಿರಿ. 

ಕೊರೋನಾ ಹೊಡೆತಕ್ಕೆ ನಲುಗಿದ ‘ಬಳ್ಳಾರಿ ಜೀನ್ಸ್‌’!

ಈ 3 ವಿಷಯಗಳನ್ನು ನೆನಪಿಡಿ
-ಪೂರ್ಣ ಪ್ರಯೋಜನ ಪಡೆಯಲು ಉದ್ಯೋಗ ಬದಲಾಯಿಸಿದ ತಕ್ಷಣ ನಿಮ್ಮ ಪಿಎಫ್‌ ಖಾತೆಯನ್ನು ಪ್ರಸ್ತುತ ಕಾರ್ಯನಿರ್ವಹಿಸೋ ಸಂಸ್ಥೆಗೆ ವರ್ಗಾಯಿಸಿ.
-ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಪಿಎಫ್‌ ಖಾತೆಗಳನ್ನು ಹೊಂದಿದ್ರೆ, ಅವುಗಳೆಲ್ಲವೂ ಒಂದೇ ಯುಎಎನ್‌ ಸಂಖ್ಯೆಗೆ ಸಂರ್ಪಕಿಸಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 
-ನೀವು 58 ವರ್ಷಕ್ಕಿಂತ ಮುನ್ನ ನಿವೃತ್ತಿ ಪಡೆದರೆ, ಆ ದಿನದಿಂದ 36 ತಿಂಗಳೊಳಗೆ ಪಿಎಫ್ ಮೊತ್ತವನ್ನು ಹಿಂಪಡೆಯಲು ಮರೆಯಬೇಡಿ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ವೀಳ್ಯದೆಲೆ ಬೆಲೆ ಗಗನಕ್ಕೆ ಏರಿಕೆ, ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ 200ರ ಗಡಿ ದಾಟಿದ ಪಾನ್ ಎಲೆ!
ಕೇಂದ್ರ ಬಜೆಟ್ 2026, ಗಂಡ ಹೆಂಡತಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್