ನಿಮಗೆ ಗೊತ್ತಿಲ್ಲದೇ ಅದು, ಇದು ಅಂಥ ಸರ್ವಿಸ್ ಚಾರ್ಜ್ ಹಾಕುತ್ತೆ ಬ್ಯಾಂಕ್, ಇರಲಿ ಗಮನ

By Suvarna NewsFirst Published Sep 12, 2022, 11:49 AM IST
Highlights

ಬ್ಯಾಂಕಿನ ಕೆಲವು ಸೇವೆಗಳನ್ನು ನಾವು ಉಚಿತ ಎಂದು ಭಾವಿಸಿರುತ್ತೇವೆ.ಆದರೆ, ಎಲ್ಲ ಸೇವೆಗಳಿಗೂ ಬ್ಯಾಂಕ್ ಒಂದಲ್ಲ ಒಂದು ರೀತಿಯಲ್ಲಿ ಶುಲ್ಕ ವಸೂಲಿ ಮಾಡುತ್ತದೆ.ಕೆಲವು ಸೇವೆಗಳಿಗೆ ನಿರ್ದಿಷ್ಟ ಉಚಿತ ಮಿತಿ ನಿಗದಿಪಡಿಸಲಾಗಿರುತ್ತದೆ. ಅದನ್ನು ಮೀರಿದ್ರೆ ಶುಲ್ಕ ವಿಧಿಸಲಾಗುತ್ತದೆ. ಹಾಗಾದ್ರೆ ಬ್ಯಾಂಕಿನ ಯಾವೆಲ್ಲ ಸೇವೆಗಳಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತಿದೆ? ಇಲ್ಲಿದೆ ಮಾಹಿತಿ.
 

Business Desk:ಇಂದು ಬ್ಯಾಂಕ್ ಖಾತೆ ಪ್ರತಿಯೊಬ್ಬರಿಗೂ ಅಗತ್ಯ. ಬ್ಯಾಂಕಿಂಗ್ ಸೇವೆಗಳು ಆನ್ ಲೈನ್ ಹಾಗೂ ಆಪ್ ಲೈನ್ ಎರಡೂ ಮಾದರಿಯಲ್ಲಿ ಲಭ್ಯವಿವೆ. ಮೊಬೈಲ್ ಮೂಲಕವೇ ಇಂದು ಬಹುತೇಕ ಬ್ಯಾಂಕಿಂಗ್ ಕೆಲಸಗಳನ್ನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಬಹುದು. ಆದರೆ, ಆನ್ ಲೈನ್ ಅಥವಾ ಆಪ್ ಲೈನ್ ನಲ್ಲಿ ಯಾವುದೇ  ಬ್ಯಾಂಕಿಂಗ್ ಸೇವೆಗಳು ಪೂರ್ಣ ಉಚಿತವಾಗಿಲ್ಲ. ನೀವು ನಡೆಸಿದ ವಹಿವಾಟುಗಳ ಬಗ್ಗೆ ನಿಮ್ಮ ಮೊಬೈಲ್ ಗೆ ಬರುವ ಎಸ್ಎಂಎಸ್ ನಿಂದ ಹಿಡಿದು ಐಎಂಪಿಎಸ್ ಹಣ ವರ್ಗಾವಣೆ, ಚೆಕ್ ಕ್ಲಿಯರೆನ್ಸ್ ಅಥವಾ ಎಟಿಎಂ ವಿತ್ ಡ್ರಾ ಸೌಲಭ್ಯ ಇವೆಲ್ಲದಕ್ಕೂ ನಿರ್ದಿಷ್ಟ ಶುಲ್ಕವನ್ನು ಬ್ಯಾಂಕ್ ಗ್ರಾಹಕರಿಂದ  ಒಂದಲ್ಲ ಒಂದು ವಿಧದಲ್ಲಿ ವಸೂಲಿ ಮಾಡುತ್ತದೆ. ಈ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಅಲ್ಲದೆ, ಎಟಿಎಂ ವಿತ್ ಡ್ರಾನಂತಹ ಕೆಲವು ಸೇವೆಗಳಿಗೆ ನಿರ್ದಿಷ್ಟ ಮಿತಿಯನ್ನು ಮೀರಿದ್ರೆ ಮಾತ್ರ ಈ ಶುಲ್ಕಗಳು ಅನ್ವಯಿಸುತ್ತವೆ. ಹೀಗಾಗಿ ಒಂದು ವೇಳೆ ನೀವು ಬ್ಯಾಂಕಿಂಗ್ ಸೇವೆಗಳು ಸಂಪೂರ್ಣ ಉಚಿತ ಎಂದು ಭಾವಿಸಿಕೊಂಡರೆ, ನಿಮ್ಮ ಖಾತೆಯಿಂದ ಸೇವಾ ಶುಲ್ಕಗಳು ಕಡಿತವಾಗುತ್ತಲೇ ಇರುತ್ತವೆ. ಆದಕಾರಣ ಬ್ಯಾಂಕಿಂಗ್ ಸೇವಾ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಉತ್ತಮ. ಹಾಗಾದ್ರೆ ಯಾವೆಲ್ಲ ಸೇವಗಳಿಗೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ?

ನಗದು ವಹಿವಾಟು
ಪ್ರತಿ ಬ್ಯಾಂಕು ನಗದು ವಹಿವಾಟಿನ ಸೌಲಭ್ಯ ಒದಗಿಸುತ್ತದೆ. ಆದರೆ, ಈ ವಹಿವಾಟಿಗೆ ನಿರ್ದಿಷ್ಟ ಮಿತಿಯಿದೆ. ಆ ಮಿತಿಯನ್ನು ಮೀರಿ ನೀವು ನಗದು ವಹಿವಾಟು ನಡೆಸಿದ್ರೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇದು ಸಾಮಾನ್ಯವಾಗಿ 20ರೂ.ನಿಂದ 100ರೂ. ತನಕ ಇರುತ್ತದೆ.

Recurring Deposit:ಆರ್ ಡಿ ಖಾತೆ ಎಲ್ಲಿ ತೆರೆಯುವುದು ಬೆಸ್ಟ್ ? ಎಸ್ ಬಿಐ ಅಥವಾ ಅಂಚೆ ಕಚೇರಿ?

ಕನಿಷ್ಠ ಬ್ಯಾಲೆನ್ಸ್
ಇನ್ನು ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡೋದು ಕಡ್ಡಾಯ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಅದಕ್ಕಿಂತ ಕಡಿಮೆ ಹಣವಿದ್ರೆ ನೀವು ಶುಲ್ಕ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಎಚ್ ಡಿಎಫ್ ಸಿ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್  10,000 ರೂ. ಇರಬೇಕು. ಅದಕ್ಕಿಂತ ಕಡಿಮೆಯಿದ್ರೆ ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಮಿತಿ ಹಾಗೂ ಶುಲ್ಕಗಳು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತವೆ.

ಐಎಂಪಿಎಸ್ ಶುಲ್ಕಗಳು
ಎಲ್ಲ ಬ್ಯಾಂಕುಗಳು ನಿಫ್ಟ್ (NEFT) ಹಾಗೂ ಆರ್ ಟಿಜಿಎಸ್ (RTGS) ವಹಿವಾಟುಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡುತ್ತಿವೆ. ಆದರೆ, ಅನೇಕ ಬ್ಯಾಂಕುಗಳು ಈಗಲೂ ಕೂಡ ಐಎಂಪಿಎಸ್ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತವೆ. ಇದು 1ರೂ.ನಿಂದ  25ರೂ. ತನಕ ಇದೆ. 

ಚೆಕ್
ಒಂದು ವೇಳೆ ನಿಮ್ಮ ಚೆಕ್ 1ಲಕ್ಷ ರೂ.ತನಕದಾಗಿದ್ರೆ ನೀವು ಬ್ಯಾಂಕಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀವು ಕ್ಲಿಯರೆನ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕ 150ರೂ. ಇನ್ನು ನಿರ್ದಿಷ್ಟ ಸಂಖ್ಯೆಯ ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಸ್ ಬಿಐ ಬ್ಯಾಂಕ್ ಉಳಿತಾಯ ಖಾತೆಗೆ  10 ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಚೆಕ್ ಗಳಿಗೆ ನೀವು ಶುಲ್ಕ ಪಾವತಿಸಬೇಕು.

ಎಟಿಎಂ ವಹಿವಾಟು
ಎಟಿಎಂನಿಂದ ನಗದು ವಿತ್ ಡ್ರಾ ಸೌಲಭ್ಯ ಕೂಡ ನಿಗದಿತ ಸಮಯದ ತನಕ ಮಾತ್ರ ಉಚಿತ. ಆ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆದ್ರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಪ್ರತಿ ಬ್ಯಾಂಕ್ ವಿಧಿಸುವ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಬಹುತೇಕ ಬ್ಯಾಂಕುಗಳು ತಮ್ಮದೇ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತವೆ. ಅದಕ್ಕಿಂತ ಹೆಚ್ಚಿದ್ರೆ ಪ್ರತಿ ವಹಿವಾಟಿಗೆ 20ರೂ.ನಿಂದ 50ರೂ. ತನಕ ಶುಲ್ಕ ವಿಧಿಸಲಾಗುತ್ತದೆ.

ಪಿವಿಆರ್‌-ಐನಾಕ್ಸ್‌ ಹೂಡಿಕೆದಾರರ ಮೇಲೆ ಬ್ರಹ್ಮಾಸ್ತ್ರ ಎಫೆಕ್ಟ್‌, 800 ಕೋಟಿ ಸಂಪತ್ತು ಮಾಯ!

ಎಸ್ ಎಂಎಸ್
ಇಮ್ಮ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಅಥವಾ ಡೆಬಿಟ್ ಆದ್ರೆ ಆ ಬಗ್ಗೆ ನಿಮ್ಮ ಮೊಬೈಲ್ ಗೆ ಎಸ್ ಎಂಎಸ್ ಬರುತ್ತದೆ. ಇದು ಉಚಿತ ಎಂದು ಭಾವಿಸಬೇಡಿ. ಇದಕ್ಕೂ ಕೂಡ ಬ್ಯಾಂಕ್ ಶುಲ್ಕ ವಿಧಿಸುತ್ತದೆ.  ಆದರೆ, ಈ ಶುಲ್ಕ ಸಣ್ಣ ಮೊತ್ತದಾಗಿರುತ್ತದೆ. ಪ್ರತಿ ತಿಂಗಳಿಗೆ  ಎಕ್ಸಿಸ್ ಬ್ಯಾಂಕ್ ಈ ಸೇವೆಗೆ  5 ರೂ. ಶುಲ್ಕ ವಿಧಿಸಿದ್ರೆ, ಐಸಿಐಸಿಐ ಬ್ಯಾಂಕ್ ಪ್ರತಿ ತ್ರೈಮಾಸಿಕಕ್ಕೆ 15 ರೂ. ವಿಧಿಸುತ್ತದೆ. 

ಕಾರ್ಡ್ ಬದಲಾವಣೆ
ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ ಕಳೆದುಕೊಂಡಿದ್ರೆ ಹೊಸ ಕಾರ್ಡ್ ಪಡೆಯಲು ಶುಲ್ಕ ಪಾವತಿಸಬೇಕು. ಈ ಶುಲ್ಕ 50ರೂ.ನಿಂದ 500ರೂ. ತನಕ ಇರುತ್ತದೆ. ಪ್ರತಿ ಬ್ಯಾಂಕ್ ಇದಕ್ಕೆ ಬೇರೆ ಬೇರೆ ಶುಲ್ಕ ವಿಧಿಸುತ್ತದೆ. 

click me!