ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 25 ಲಕ್ಷ ಮನೆಗಳಿಗೆ ನಳ ಸಂಪರ್ಕ, 5000 ಸಾವಿರ ಶಾಲಾ ಆವರಣ ‘ವಿದ್ಯಾಧಾಮ’ಗಳಾಗಿ ಉನ್ನತೀಕರಣ, 4000 ಗ್ರಾಮ ಪಂಚಾಯಿತಿಗಳಲ್ಲಿ ‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರ ಆರಂಭಿಸುವುದು.
ಬೆಂಗಳೂರು (ಜು.08): ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ 25 ಲಕ್ಷ ಮನೆಗಳಿಗೆ ನಳ ಸಂಪರ್ಕ, 5000 ಸಾವಿರ ಶಾಲಾ ಆವರಣ ‘ವಿದ್ಯಾಧಾಮ’ಗಳಾಗಿ ಉನ್ನತೀಕರಣ, 4000 ಗ್ರಾಮ ಪಂಚಾಯಿತಿಗಳಲ್ಲಿ ‘ಕೂಸಿನ ಮನೆ’ ಶಿಶುಪಾಲನಾ ಕೇಂದ್ರ ಆರಂಭಿಸುವುದು ಸೇರಿದಂತೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಇನ್ನಷ್ಟುಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 18,038 ಕೋಟಿ ರು. ನಿಗದಿ ಮಾಡಲಾಗಿದೆ.
ಸುಸ್ಥಿರ ಜಲಮೂಲ ಆಧರಿಸಿ 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಮೂಲಕ 25 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5000 ಗೋಮಾಳ ಪ್ರದೇಶಗಳು, 50 ಸಾವಿರ ಹುಲ್ಲುಗಾವಲು ಪ್ರದೇಶಗಳು, ಎರಡು ಲಕ್ಷ ಬರ ಪರಿಹಾರ ಕಾಮಗಾರಿಗಳು, 81 ಸಾವಿರ ಪ್ರವಾಹ ನಿಯಂತ್ರಣ ಕಾಮಗಾರಿಗಳು ಹಾಗೂ 4268 ಭೂ ಕುಸಿತ ತಡೆ ಕಾಮಗಾರಿಗಳು ಮತ್ತು 27,903 ಸ್ಮಶಾನ ಭೂಮಿಯನ್ನು ‘ಶಾಂತಿಧಾಮ’ಗಳನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
45 ದಿನದಲ್ಲೇ ಪಕ್ಷದ ಭರವಸೆ ಈಡೇರಿಕೆ, ಎದೆ ಎತ್ತಿ ಉತ್ತರಿಸಿ: ಸಿಎಂ ಸಿದ್ದರಾಮಯ್ಯ
5000 ಶಾಲಾ ಆವರಣ ‘ವಿದ್ಯಾಧಾಮ’: ಸಮಗ್ರ ಶಾಲಾ ಅಭಿವೃದ್ಧಿಯಡಿ 5000 ಶಾಲಾ ಆವರಣಗಳನ್ನು ‘ವಿದ್ಯಾಧಾಮ’ಗಳನ್ನಾಗಿ ಉನ್ನತೀಕರಿಸಲಾಗುವುದು. ಇದಲ್ಲದೇ 750 ಗ್ರಾಮೀಣ ಸಂತೆಗಳನ್ನು ಹಾಗೂ 27 ಸಾವಿರ ಬೋರ್‌ವೆಲ್ ರಿಚಾಜ್‌ರ್ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ‘ಅರಿವು ಕೇಂದ್ರಗಳು’ ಎಂದು ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷಚೇತನ ಸ್ನೇಹಿತ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ.
4000 ಕೂಸಿನ ಮನೆ: ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷತೆಗಾಗಿ ‘ಕೂಸಿನ ಮನೆ’ ಎಂಬ ಹೆಸರಿನಲ್ಲಿ 4000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಆಡಳಿತವನ್ನು ಬಲಪಡಿಸಲು ಪ್ರತಿ ತಾಲ್ಲೂಕಿನಲ್ಲಿ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳ ಅವಧಿಗೆ ‘ಮುಖ್ಯಮಂತ್ರಿಗಳ ಫೆಲೋಶಿಫ್’ಗೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ 10 ಕೋಟಿ ರು. ಒದಗಿಸಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳನ್ನು ತಲಾ 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುವುದಾಗಿ ಬಜೆಟ್ ಹೇಳಲಾಗಿದೆ.
27 ಜಿಲ್ಲೆಗಳಲ್ಲಿ ‘ಮೆಟೀರಿಯಲ್ ರಿಕವರಿ ಫೆಸಿಲಿಟಿ’: ಗ್ರಾಮೀಣ ಪ್ರದೇಶದಲ್ಲಿ ಒಣ ತ್ಯಾಜ್ಯ ವಿಲೇವಾರಿ ನಿರಂತರತೆ ಕಾಪಾಡಲು ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು 27 ಜಿಲ್ಲೆಗಳಲ್ಲಿ ತಲಾ ಒಂದು ‘ಮೆಟೀರಿಯಲ್ ರಿಕವರಿ ಫೆಸಿಲಿಟಿ’ಯನ್ನು ತಲಾ ಎರಡು ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಅಭಿಮಾನಿಗಳ ಜತೆ ರಿಷಬ್ ಶೆಟ್ಟಿ ಹುಟ್ಟುಹಬ್ಬ: ಹೊಸಕೆರೆಹಳ್ಳಿಯ ನಂದಿ ಮೈದಾನದಲ್ಲಿ ಬೃಹತ್ ಕಾರ‍್ಯಕ್ರಮ
ಹಳ್ಳಿ ಯುವಕರ ವಲಸೆ ತಡೆಗೆ ಯೋಜನೆ ಇಲ್ಲ: ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಹಂಚಿಕೆಯಾಗಿರುವ ‘ಪ್ರಕಾರ್ಯ’ಗಳನ್ನು ಪಂಚಾಯಿತಿಗೆ ವರ್ಗಾಯಿಸುವ ನಿರ್ಧಾರ, 25 ಲಕ್ಷ ಮನೆಗಳಿಗೆ ನಳ ಸಂಪರ್ಕ,‘ವಿದ್ಯಾಧಾಮ’, ‘ಕೂಸಿನ ಮನೆ’, ‘ಮುಖ್ಯಮಂತ್ರಿಗಳ ಫೆಲೋಶಿಫ್’, ಸಮುದಾಯ ಶೌಚಾಲಯ ನಿರ್ಮಾಣ ಕಾರ್ಯಕ್ರಮ ಸ್ವಾಗತಾರ್ಹ. ಆದರೆ ಫೆಲೋಶಿಪ್‌ಗಳಿಗೆ ಹೇಗೆ, ಯಾರನ್ನು ಆಯ್ಕೆ ಮಾಡುತ್ತಾರೆ. ಅವರು ಪಂಚಾಯಿತಿಗೆ ಹೇಗೆ ಪೂರಕವಾಗಿರುತ್ತಾರೆಂಬ ಮಾಹಿತಿ ಇಲ್ಲ. ಪ್ರಮುಖವಾಗಿ ಗ್ರಾಮೀಣ ಭಾಗದ ಪದವೀಧರರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮ ಇಲ್ಲದಿರುವುದು ವಿಷಾದನೀಯ.