ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!

By Suvarna News  |  First Published Aug 14, 2021, 1:53 PM IST

ಉಳಿತಾಯ ಮಾಡೋರಿಗೆ ಅಂಚೆ ಇಲಾಖೆ ಸುರಕ್ಷಿತ ತಾಣ ಎಂದೇ ಹೇಳಬಹುದು. ಹಾಗಾದ್ರೆ ಅಂಚೆ ಇಲಾಖೆಯ ಯಾವ ಯೋಜನೆಯಲ್ಲಿ ಹಣ ತೊಡಗಿಸಿದ್ರೆ ಉತ್ತಮ ರಿಟರ್ನ್ಸ್ ಬರುತ್ತೆ? ಇಲ್ಲಿದೆ ಮಾಹಿತಿ. 


ಉಳಿತಾಯ ಮಾಡಬೇಕೆಂದು ಯೋಚಿಸುತ್ತಿರೋರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆ. ಈ ಯೋಜನೆಗಳಲ್ಲಿ ಹಣ ತೊಡಗಿಸಿದ್ರೆ ಸುರಕ್ಷಿತವಾಗಿರೋ ಜೊತೆ ನಿರೀಕ್ಷಿತ ಬಡ್ಡಿಯೂ ಸಿಗುತ್ತದೆ. ದಿನಗೂಲಿ ನೌಕರನಿಂದ ಹಿಡಿದು ಮಾಸಿಕ ಲಕ್ಷಗಟ್ಟಲೆ ವೇತನ ಪಡೆಯೋ ವ್ಯಕ್ತಿ ತನಕ ಪ್ರತಿಯೊಬ್ಬರೂ ಈ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಬಹುದು. ಪ್ರಸಕ್ತ ಭಾರತೀಯ ಅಂಚೆ ಇಲಾಖೆ 9 ಉಳಿತಾಯ ಯೋಜನೆಗಳನ್ನು ಹೊಂದಿದೆ. ಅವುಗಳ ಮಾಹಿತಿ ಇಲ್ಲಿದೆ.

ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ? ಇಲ್ಲಿದೆ ನೋಡಿ ಸರಳ ಸೂತ್ರ

Tap to resize

Latest Videos

undefined

ಅಂಚೆ ಕಚೇರಿ ಉಳಿತಾಯ ಖಾತೆ
ಬ್ಯಾಂಕ್ನಂತೆ ಪೋಸ್ಟ್ ಆಫೀಸ್ನಲ್ಲಿ ಕೂಡ ಉಳಿತಾಯ ಖಾತೆ ತೆರೆಯಬಹುದು. ಅದೂ ಕೇವಲ 20 ರೂ. ಜಮೆ ಮಾಡೋ ಮೂಲಕ. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 50ರೂ. ಇರುವಂತೆ ನಿರ್ವಹಣೆ ಮಾಡೋದು ಅಗತ್ಯ. ಈ ಖಾತೆಯಿಂದ ಆನ್ಲೈನ್ ಹಣ ವರ್ಗಾವಣೆಗೂ ಅವಕಾಶವಿದೆ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಪಿಪಿಎಫ್ ಇದು 15 ವರ್ಷಗಳ ಅವಧಿಯದ್ದಾಗಿದ್ದು, 5 ವರ್ಷಗಳ ಬಳಿಕ ಸ್ವಲ್ಪ ಹಣ ಹಿಂಪಡೆಯಲು ಅವಕಾಶವಿದೆ. ಈ ಖಾತೆಯನ್ನು ಸಕ್ರಿಯವಾಗಿಡಲು ವಾರ್ಷಿಕ ಕನಿಷ್ಠ 500 ರೂ. ಠೇವಣಿ ಅಗತ್ಯ. PPFನಲ್ಲಿ ವಾರ್ಷಿಕ ಗರಿಷ್ಠ 1,50,000 ರೂ. ಠೇವಣಿ ಇಡಬಹುದು. ಪ್ರಸ್ತುತ ಪಿಪಿಎಫ್ನಲ್ಲಿರೋ ಮೊತ್ತಕ್ಕೆ ವಾರ್ಷಿಕ ಶೇ.7.1 ಬಡ್ಡಿ ನೀಡಲಾಗುತ್ತಿದೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಪಿಪಿಎಫ್  ಖಾತೆಯಲ್ಲಿರೋ ಹಣಕ್ಕೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.

ತಿಂಗಳಿಗೆ 42 ರೂ. ಪಾವತಿಸಿದ್ರೆ ಸಾಕು, ನೆಮ್ಮದಿಯ ನಿವೃತ್ತಿ ಬದುಕು ನಿಮ್ಮದು!

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)
ಎನ್ಎಸ್ಸಿ 5 ವರ್ಷ ಅವಧಿಯ ಹೂಡಿಕೆಯಾಗಿದ್ದು, ಕೇವಲ100 ರೂ. ಜಮೆ ಮಾಡೋ ಮೂಲಕ NSCಯಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ NSCಗೆ ವಾರ್ಷಿಕ ಶೇ.6.8 ಬಡ್ಡಿ ಸಿಗುತ್ತಿದೆ. ಇದ್ರಲ್ಲಿ 1000ರೂ. ಹೂಡಿಕೆ ಮಾಡಿದ್ರೆ 5 ವರ್ಷಗಳ ಬಳಿಕ 1,389.49 ರೂ. ಸಿಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಎನ್ಎಸ್ಸಿಯಲ್ಲಿ ಹೂಡಿಕೆ ಮಾಡಿರೋ ಮೊತ್ತಕ್ಕೆ ಗರಿಷ್ಠ 1.50 ಲಕ್ಷ ರೂ. ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.

ಮಾಸಿಕ ಆದಾಯ ಯೋಜನೆ (MIS)
ಇದು ಅಂಚೆ ಇಲಾಖೆಯ ಇನ್ನೊಂದು ಸುರಕ್ಷಿತ ಉಳಿತಾಯ ಯೋಜನೆಯಾಗಿದೆ. ಇದ್ರಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 4.5 ಲಕ್ಷ ರೂ. ಹಾಗೂ ಜಂಟಿಯಾಗಿ 9 ಲಕ್ಷ ರೂ. ತನಕ ಹೂಡಿಕೆ ಮಾಡಲು ಅವಕಾಶವಿದೆ. ಪ್ರಸ್ತುತ ಇದಕ್ಕೆ ವಾರ್ಷಿಕ ಶೇ.6.6 ಬಡ್ಡಿದರ ನೀಡಲಾಗುತ್ತಿದೆ. 

ಸುಕನ್ಯಾ ಸಮೃದ್ಧಿ ಯೋಜನೆ
ಇದು ಹೆಣ್ಣುಮಗುವಿಗಾಗಿರೋ ಉಳಿತಾಯ ಯೋಜನೆ. 10 ವರ್ಷ ವಯಸ್ಸಿನೊಳಗಿನ ಯಾವುದೇ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆ ಖಾತೆ ತೆರೆಯಬಹುದು. ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಲ್ಲಿ ಪ್ರತ್ಯೇಕ ಖಾತೆ ತೆರೆಯಲು ಅವಕಾಶವಿದೆ. ಖಾತೆ ತೆರೆದ 15 ವರ್ಷಗಳ ತನಕ ಈ ಖಾತೆಗೆ ಹಣ ಜಮಾ ಮಾಡಿದರೆ ಸಾಕು. ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000ರೂ. ತನಕ ಈ ಖಾತೆಯಲ್ಲಿ ಜಮಾ ಮಾಡಬಹುದು. ಪ್ರಸ್ತುತ ಈ ಖಾತೆಯಲ್ಲಿರೋ ಹಣಕ್ಕೆ ವಾರ್ಷಿಕ ಶೇ. 7.6 ಬಡ್ಡಿ ವಿಧಿಸಲಾಗುತ್ತಿದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಕೂಡ ಇದೆ. ಮಗುವಿಗೆ 21 ವರ್ಷ ತುಂಬಿದ ತಕ್ಷಣ ಖಾತೆಯಲ್ಲಿರೋ ಹಣ ಹಿಂಪಡೆಯಲು ಆಕೆ ಅರ್ಹಳಾಗಿರುತ್ತಾಳೆ. ಹುಡುಗಿಗೆ 18 ವರ್ಷ ತುಂಬಿದ ಬಳಿಕ ಆಕೆಯ ವಿವಾಹಕ್ಕಾಗಿಯೋ ಈ ಖಾತೆಯಲ್ಲಿರೋ ಹಣ ಪಡೆಯಲು ಅವಕಾಶವಿದೆ. 


ಹಿರಿಯ ನಾಗರಿಕರ ಉಳಿತಾಯ ಯೋಜನೆ
60 ವರ್ಷ ತುಂಬಿದ ಅಥವಾ 55ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಪಡೆದವರು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 15 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಇದು 5 ವರ್ಷಗಳ ಅವಧಿಯದ್ದಾಗಿದೆ. ಈ ಖಾತೆಗೆ ವಾರ್ಷಿಕ ಶೇ. 7.4 ಬಡ್ಡಿ ನೀಡಲಾಗುತ್ತಿದೆ. 

RD ಖಾತೆ
ರಿಕರಿಂಗ್ ಡೆಫಾಸಿಟ್ ಅಥವಾ ಆರ್ಡಿ ಖಾತೆ 5 ವರ್ಷ ಅವಧಿಯದ್ದಾಗಿದ್ದು, ಮಾಸಿಕ ಪುಟ್ಟ ಮೊತ್ತವನ್ನು ನೀವು ಈ ಖಾತೆಯಲ್ಲಿ ಜಮಾ ಮಾಡಬಹುದು. ಕನಿಷ್ಠ 100 ರೂ. ಜಮೆ ಮಾಡೋದು ಕಡ್ಡಾಯ. ಸಣ್ಣ ಉಳಿತಾಯ ಮಾಡೋರಿಗೆ ಇದೊಂದು ಉತ್ತಮ ಯೋಜನೆ. ವಾರ್ಷಿಕ ಶೇ. 5.8 ಬಡ್ಡಿ ನೀಡಲಾಗುತ್ತಿದೆ.

ಕಂಡಿದ್ದೆಲ್ಲ ಕೊಳ್ಳೋ ಅಭ್ಯಾಸನಾ? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ

ಟೈಮ್ ಡೆಪಾಸಿಟ್ ಅಕೌಂಟ್ 
ಇದು ಬ್ಯಾಂಕ್ಗಳಲ್ಲಿನ ಫಿಕ್ಸಡ್ ಡೆಫಾಸಿಟ್ಗೆ ಸರಿಸಮನಾದ ಯೋಜನೆ. ಅಂಚೆ ಕಚೇರಿಯಲ್ಲಿ 1,2, 3 ಹಾಗೂ 5 ವರ್ಷಗಳ ಅವಧಿಗೆ ಟೈಮ್ ಡೆಫಾಸಿಟ್ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು ಕೂಡ ಈ ಖಾತೆ ತೆರೆಯಬಹುದು. ಈ ಖಾತೆಗೆ ಶೇ.5.5 –ಶೇ.6.7 ತನಕ ಬಡ್ಡಿ ವಿಧಿಸಲಾಗುತ್ತದೆ. 

ಕಿಸಾನ್ ವಿಕಾಸ್ ಪತ್ರ (KVP)
ಕೆವಿಪಿಯಲ್ಲಿ ನೀವು ತೊಡಗಿಸಿದ ಹಣ 10.4 ವರ್ಷಗಳ ಅವಧಿಯಲ್ಲಿ ದುಪ್ಪಟ್ಟಾಗುತ್ತದೆ. ಇದ್ರಲ್ಲಿ ತೊಡಗಿಸಿರೋ ಹಣಕ್ಕೆ ವಾರ್ಷಿಕ ಶೇ.6.9 ಬಡ್ಡಿ ವಿಧಿಸಲಾಗುತ್ತದೆ. 
 

click me!