ಬಡತನದ ವಿರುದ್ಧದ ಯುದ್ಧದಲ್ಲಿ ಭಾರತವು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಗ್ರಾಮೀಣ ಪ್ರದೇಶದ ಜನರೂ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವಂತೆ ಮಾಡುವುದು ಸರ್ಕಾರದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರು (ನ.17): ಬಡತನದ ವಿರುದ್ಧದ ಯುದ್ಧದಲ್ಲಿ ಭಾರತವು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಗ್ರಾಮೀಣ ಪ್ರದೇಶದ ಜನರೂ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವಂತೆ ಮಾಡುವುದು ಸರ್ಕಾರದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಳ್ಳಾರಿ ರಸ್ತೆಯ ಅರಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದ ರಜತೋತ್ಸವ ಸಮಾವೇಶಕ್ಕೆ ವರ್ಚುವಲ್ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಬಡತನದ ವಿರುದ್ಧದ ಯುದ್ಧದಲ್ಲಿ ಭಾರತ ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸುತ್ತಿದೆ. ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಜಮೀನುಗಳ ನಕ್ಷೆ ಮಾಡಲು ಡ್ರೋನ್‌ಗಳನ್ನು ಬಳಸುತ್ತಿದ್ದು ಬಳಿಕ ಆಸ್ತಿ ಕಾರ್ಡ್ ನೀಡಲಾಗುತ್ತದೆ. ಇದರಿಂದ ಭೂವಿವಾದಗಳು ಕಡಿಮೆಯಾಗಲಿವೆ.
ಬಡವರು ಹಣಕಾಸು ಸೇವೆ ಮತ್ತು ಸಾಲ ಪಡೆಯಲು ಸಹಾಯಕವಾಗಲಿದೆ ಎಂದು ವಿವರಿಸಿದರು. ಕಳೆದ 8 ವರ್ಷದಲ್ಲಿ ದೇಶದ ತಾಂತ್ರಿಕತೆ ಬಳಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಗತಿ ಹೊಂದಿದ್ದೇವೆ. ಕೊರೋನಾ ಬಳಿಕ ಆನ್‌ಲೈನ್ ಶಿಕ್ಷಣದಲ್ಲಿ ಕ್ರಾಂತಿ ಉಂಟಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದೇವೆ. ಬಂಡವಾಳ ಹೂಡಿಕೆದಾರರಿಗೆ ದೇಶದಲ್ಲಿ ರತ್ನಗಂಬಳಿಯ ಸ್ವಾಗತವಿದೆ. 2021 ರಿಂದ ದೇಶದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ. ನಾವು ವಿಶ್ವದ 3 ನೇ ದೊಡ್ಡ ಸ್ಟಾರ್ಟಪ್ ಹಬ್ ಆಗಿದ್ದು 81 ಸಾವಿರಕ್ಕೂ ಅಧಿಕ ಮಾನ್ಯತೆ ಪಡೆದ ಸ್ಟಾರ್ಟಪ್ ಹೊಂದಿದ್ದೇವೆ ಎಂದು ಪ್ರಶಂಸಿಸಿದರು.
ಕನ್ನಡ ಕಲಿಯಲು ರಾಜ್ಯದ ಸರ್ಕಾರಿ ಶಾಲೆಗೆ ತಮಿಳುನಾಡು ಮಕ್ಕಳು!
ಭ್ರಷ್ಟಾಚಾರಕ್ಕೆ ಅಂಕುಶ, ಯೋಜನೆಗೆ ವೇಗ: ದೇಶದಲ್ಲಿ ತಂತ್ರಜ್ಞಾನ ಬಳಸಿಕೊಂಡು ಭ್ರಷ್ಟಾಚಾರಕ್ಕೆ ತೆರೆ ಎಳಯುವ ಕೆಲಸ ಮಾಡಲಾಗಿದೆ. ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಜನ್ ಧನ್, ಆಧಾರ್ ಕಾರ್ಡ್, ಇ-ಮಾರ್ಕೆಟ್ ಸೇರಿದಂತೆ ಎಲ್ಲದರಲ್ಲೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಳಿಗೆ ವೇಗದ ಸ್ಪರ್ಶ ನೀಡಿದ್ದು, ಪಾರದರ್ಶಕತೆಯೂ ಹೆಚ್ಚಿದೆ. ಇದರಿಂದಾಗಿ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣ ಸಾಧಿಸಲಾಗುತ್ತಿದೆ ಎಂದು ಬಣ್ಣಿಸಿದರು. ಪ್ರಸಕ್ತ ವರ್ಷ ಜಾಗತಿಕ ಸೂಚ್ಯಂಕದಲ್ಲಿ ಭಾರತ 40 ನೇ ಸ್ಥಾನಕ್ಕೆ ಜಿಗಿದಿದೆ. 2015 ರಲ್ಲಿ ನಾವು 81 ನೇ ಸ್ಥಾನದಲ್ಲಿದ್ದೆವು ಎಂದು ವಿವರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾರೀ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ಡು ಇತರರಿದ್ದರು.
ಆಸ್ಪ್ರೇಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್ ಪ್ಯಾಟ್ಸ್, ಅರಬ್ ಸಂಯುಕ್ತ ಸಂಸ್ಥಾನದ ಸಚಿವ ಒಮರ್ ಬಿನ್ ಸುಲ್ತಾನ್, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್‌ಟಿಪಿಐನ ಪ್ರತಿನಿಧಿಗಳಾದ ಅರವಿಂದ್ ಕುಮಾರ್, ಶೈಲೇಂದ್ರ ತ್ಯಾಗಿ, ವಿಜಯ್ ಚಂದ್ರು, ಜಿತೇಂದ್ರ ಛಡ್ಡಾ, ಕಿಂಡ್ರೆಲ್ ಸಂಸ್ಥಾಪಕ ಮಾರ್ಟಿನ್ ಶ್ರೋಟರ್, ಉಪಸ್ಥಿತರಿದ್ದರು.
ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ!: ‘ಎಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ. ನಮ್ಮ ಕನ್ನಡ ನಾಡಿಗೆ ಸ್ವಾಗತ, ನಮ್ಮ ಬೆಂಗಳೂರಿಗೆ ಸ್ವಾಗತ’ ಹೀಗಂತ ಕನ್ನಡದಲ್ಲೇ ಭಾಷಣ ಶುರು ಮಾಡಿದ ಮೋದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಸಾಧನೆಯನ್ನು ಹಾಡಿ ಹೊಗಳಿದರು. ಬೆಂಗಳೂರು ತಂತ್ರಜ್ಞಾನ ಮತ್ತು ಸ್ಟಾರ್ಟಪ್‌ಗಳ ತವರು. ಸಂಶೋಧನೆಯ ತಾಣ ಇದಾಗಿದ್ದು ತಂತ್ರಜ್ಞಾನದ ಕ್ರಾಂತಿಯೇ ಇಲ್ಲಿ ನಡೆಯುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ನಾವೀನ್ಯತೆಯ, ಸಂಸ್ಕೃತಿಯ ನಗರ ಬೆಂಗಳೂರು. ಸ್ಟಾರ್ಟಪ್, ತಂತ್ರಜ್ಞಾನಗಳ ತವರಾಗಿದ್ದು, ಅತಿ ಹೆಚ್ಚು ಸಂಶೋಧನೆಗಳು ಇಲ್ಲಿಯೇ ನಡೆಯುತ್ತವೆ ಎಂದರು.
ಸಂಶೋಧನೆ, ಅಭಿವೃದ್ಧಿ, ನಾವೀನ್ಯತಾ ನೀತಿ ಬಿಡುಗಡೆ: ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವ್ಯವಸ್ಥಿತವಾಗಿ ಬೆಳೆಸಲು ‘ಕರ್ನಾಟಕ ರಾಜ್ಯ ಸಂಶೋಧನಾ ಪ್ರತಿಷ್ಠಾನ’ ಆರಂಭಿಸಲಾಗುವುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾವೇಶದಲ್ಲಿ ಈ ಸಂಬಧ ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿ’ಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಪ್ರತಿಯೊಂದು ಇಲಾಖೆಯೂ ಸಂಶೋಧನೆ ಮತ್ತು ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಶೇ.0.1ರಷ್ಟುಹಣವನ್ನು ಹೆಚ್ಚಿಸಲಿವೆ. ಮುಂದಿನ 5 ವರ್ಷದಲ್ಲಿ ರಾಷ್ಟ್ರೀಯ ಜಿಡಿಪಿಯ ಶೇ.0.7 ಮತ್ತು ರಾಜ್ಯ ಜಿಡಿಪಿಯ ಶೇ.2 ರಿಂದ 3ರಷ್ಟುಹಣವನ್ನು ಈ ಉದ್ದೇಶಕ್ಕೆ ಮೀಸಲಿಡು ವ್ಯವಸ್ಥೆಯನ್ನು ರೂಪಿಸಲಾಗುವುದು. ರಾಜ್ಯದ ಹಲವೆಡೆ ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾಗಲಿವೆ. ಸಂಶೋಧನೆಯ ಫಲಗಳು ಸಮಾಜದ ಎಲ್ಲ ವರ್ಗಗಳ ಜನರನ್ನೂ ತಲುಪಲು ಇ-ಪ್ಲಾಟ್‌ಫಾರಂ ಅಭಿವೃದ್ಧಿ ಪಡಿಸಲಾಗುವುದು. ಆದ್ಯತಾ ವಲಯಗಳಲ್ಲೂ ಸಾಮಾಜಿಕ ಪರಿವರ್ತನೆ ಉಂಟು ಮಾಡುವ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ನೀತಿಯಲ್ಲಿ ಹೇಳಲಾಗಿದೆ.
ಶಿಕ್ಷಕರ ಪರಸ್ಪರ ವರ್ಗದ 1 ಸಲದ ಮಿತಿ ರದ್ದು: ಶಿಕ್ಷಕರ ವರ್ಗಾವಣೆ ಕರಡು ನಿಯಮಾವಳಿ ಪ್ರಕಟ
ಬಿಟಿಎಸ್-22ನಲ್ಲಿ 500 ಪ್ರದರ್ಶಕರಿಗೆ ಅವಕಾಶ: ನ.16 ರಿಂದ 18 ರವರೆಗೂ ನಡೆಯಲಿರುವ ಏಷ್ಯಾದ ಅತಿದೊಡ್ಡ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದ ರಜತೋತ್ಸವ ಸಮಾವೇಶಕ್ಕೆ ಬುಧವಾರ ಬಳ್ಳಾರಿ ರಸ್ತೆಯ ಅರಮನೆಯಲ್ಲಿ ಅದ್ದೂರಿ ಚಾಲನೆ ದೊರೆತಿದೆ. 500ಕ್ಕೂ ಅಧಿಕ ಪ್ರದರ್ಶಕರಿಗೆ ಅವಕಾಶ ಕಲ್ಪಿಸಿದ್ದು ನವೀನ ತಂತ್ರಜ್ಞಾನಗಳ ಅನಾವರಣವಾಗಿದೆ. 300ಕ್ಕೂ ಅಧಿಕ ತಂತ್ರಜ್ಞರು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ದೇಶ-ವಿದೇಶಗಳ ಸಾವಿರಾರು ತಂತ್ರಜ್ಞರು ಪಾಲ್ಗೊಂಡಿದ್ದರು. ಪ್ರತಿ ದಿನ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆಯವರೆಗೂ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮೊದಲ ದಿನವೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.