ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರೋರಿಗೆ ಈ ತಿಂಗಳ ಅಂತ್ಯದೊಳಗೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಪಿಪಿಎಫ್, ಎನ್ ಎಸ್ ಸಿ, ಕೆವಿಪಿ ಸೇರಿದಂತೆ ಪ್ರಮುಖ ಯೋಜನೆಗಳ ಬಡ್ಡಿದರ ಶೀಘ್ರದಲ್ಲೇ ಏರಿಕೆಯಾಗುವ ನಿರೀಕ್ಷೆಯಿದೆ.
ನವದೆಹಲಿ (ಡಿ.15): ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಹಾಗೂ ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಈ ತಿಂಗಳ ಅಂತ್ಯದೊಳಗೆ ಪರಿಷ್ಕರಿಸಲಾಗುತ್ತದೆ. ಕೇಂದ್ರ ಸರ್ಕಾರ ಬೆಂಬಲಿತ ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ ಹಾಗೂ ಉತ್ತಮ ರಿಟರ್ನ್ ಸಿಗುವ ಕಾರಣ ಹೂಡಿಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಇವು ಕೂಡ ಸೇರಿವೆ. ಈ ಯೋಜನೆಗಳ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ, ಕೋವಿಡ್ ಕಾರಣದಿಂದ ದೀರ್ಘ ಸಮಯದ ತನಕ ಕೇಂದ್ರ ಸರ್ಕಾರ ಈ ಯೋಜನೆಗಳ ಬಡ್ಡಿ ದರ ಏರಿಕೆ ಮಾಡಿರಲಿಲ್ಲ. ಆದರೆ, ಸೆಪ್ಟೆಂಬರ್ 30ರಂದು ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ (ಕೆವಿಸಿ), ಮಾಸಿಕ ಆದಾಯ ಖಾತೆ ಯೋಜನೆ ಮತ್ತು ಸಮಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರ ಹೆಚ್ಚಿಸಿದೆ. ಈ ವರ್ಷ ಆರ್ ಬಿಐ ಐದು ಬಾರಿ ರೆಪೋ ದರ ಏರಿಕೆ ಮಾಡಿದ್ದು, ಒಟ್ಟು 225 ಬೇಸಿಸ್ ಪಾಯಿಂಟ್ಸ್ ಹೆಚ್ಚಳವಾಗಿದೆ. ಬ್ಯಾಂಕ್ ಗಳ ಎಫ್ ಡಿ ಬಡ್ಡಿ ಕೂಡ ಏರಿಕೆಯಾಗಿದೆ. ಹೀಗಾಗಿ 2023ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಏರಿಕೆ ಮಾಡುವ ನಿರೀಕ್ಷೆಯಿದೆ.
ಸಣ್ಣ ಉಳಿತಾಯ ಯೋಜನೆಗಳು ಅಂದ್ರೇನು?
ಸಣ್ಣ ಉಳಿತಾಯ ಯೋಜನೆಗಳು ಕೇಂದ್ರ ಸರ್ಕಾರ ನಾಗರಿಕರಲ್ಲಿ ನಿಯಮಿತ ಉಳಿತಾಯದ ಹವ್ಯಾಸವನ್ನು ಪ್ರೋತ್ಸಾಹಿಸಲು ರೂಪಿಸಿರುವ ಯೋಜನೆಗಳಾಗಿವೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಮೂರು ವರ್ಗಗಳಿವೆ -ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತೆ ಯೋಜನೆಗಳು ಹಾಗೂ ಮಾಸಿಕ ಆದಾಯ ಯೋಜನೆ. ಉಳಿತಾಯ ಠೇವಣಿಗಳಲ್ಲಿ (Saving deposits) 1-3 ವರ್ಷಗಳ ಅವಧಿ ಠೇವಣಿಗಳು (time deposits) ಹಾಗೂ 5 ವರ್ಷಗಳ ಅವಧಿಯ ಆರ್ ಡಿಗಳು (recurring deposits)ಸೇರಿವೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF),ಸುಕನ್ಯಾ ಸಮೃದ್ಧಿ ಯೋಜನೆ (SSY) ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಸೇರಿವೆ. ಇನ್ನು ಮಾಸಿಕ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯ ಖಾತೆ ಇದೆ.
ಎಸ್ ಬಿಐ ಗ್ರಾಹಕರಿಗೆ ಸಿಹಿಸುದ್ದಿ; ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ
ಪ್ರಸ್ತುತ ಬಡ್ಡಿ ಎಷ್ಟಿದೆ?
ಪ್ರಸ್ತುತ ತ್ರೈಮಾಸಿಕಕ್ಕೆ ಅನ್ವಯಿಸುವಂತೆ ಕಿಸಾನ್ ವಿಕಾಸ್ ಪತ್ರ (KVP), ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು, ಮಾಸಿಕ ಆದಾಯ ಖಾತೆ ಯೋಜನೆ ಹಾಗೂ ಎರಡು ಹಾಗೂ ಮೂರು ವರ್ಷಗಳ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ. ಈ ಬಡ್ಡಿದರವನ್ನು 10-30 ಬೇಸಿಸ್ ಪಾಯಿಂಟ್ಸ್ ಶ್ರೇಣಿಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೆ, ಸಾರ್ವಜನಿಕ ಭವಿಷ್ಯ ನಿಧಿ, ಉಳಿತಾಯ ಖಾತೆಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಹಾಗೂ ಸುಕನ್ಯಾ ಸಮೃದ್ಧಿ ಖಾತೆಗಳ ಬಡ್ಡಿದರ ಬದಲಾವಣೆ ಮಾಡಿಲ್ಲ.
ಅಂಚೆ ಕಚೇರಿ ಉಳಿತಾಯ ಠೇವಣಿಗಳಿಗೆ ಪ್ರಸ್ತುತ ವಾರ್ಷಿಕ ಶೇ.4ರಷ್ಟು ಬಡ್ಡಿ ನೀಡಲಾಗುತ್ತಿದೆ. ಒಂದು ವರ್ಷಗಳ ಅವಧಿ ಠೇವಣಿಗಳ ಮೇಲೆ ಶೇ.5.5ರಷ್ಟು ಬಡ್ಡಿದರ ವಿಧಿಸಲಾಗುತ್ತಿದೆ. ಇನ್ನು ಎರಡು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತ ಶೇ. 5.7ರಷ್ಟಿದೆ. ಇನ್ನು ಮೂರು ವರ್ಷಗಳ ಅವಧಿಯ ಠೇವಣಿಗಳ ಬಡ್ಡಿದರವನ್ನು 30 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿದ್ದು, ಶೇ. 5.8 ರಷ್ಟಿದೆ. ಐದು ವರ್ಷಗಳ ಅವಧಿ ಠೇವಣಿ ವಾರ್ಷಿಕ ಶೇ.6.7ರಷ್ಟು ಬಡ್ಡಿ ನೀಡುತ್ತದೆ. ಐದು ವರ್ಷಗಳ ಅವಧಿಯ ಆರ್ ಡಿ ವಾರ್ಷಿಕ ಶೇ.5.8ರಷ್ಟು ಬಡ್ಡಿ ನೀಡುತ್ತದೆ.
ವಿಶ್ವದ ನಂ.1 ಶ್ರೀಮಂತನ ಪಟ್ಟ ಕಳೆದುಕೊಂಡ ಎಲಾನ್ ಮಸ್ಕ್; ಸಿರಿವಂತನ ಬಿರುದು ಅರ್ನಾಲ್ಟ್ ತೆಕ್ಕೆಗೆ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಹಾಗೂ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಕ್ರಮವಾಗಿ ಶೇ.6.8 ಹಾಗೂ ಶೇ.7.6 ಬಡ್ಡಿ ನೀಡಲಾಗುತ್ತಿದೆ. ಪಿಪಿಫ್ ಬಡ್ಡಿದರ ಪ್ರಸ್ತುತ ಶೇ.7.1ರಷ್ಟಿದೆ. 123 ತಿಂಗಳ ಅವಧಿಯ ಕಿಸಾನ್ ವಿಕಾಸ್ ಪತ್ರಕ್ಕೆ ಶೇ.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು ಮಾಸಿಕ ಆದಾಯ ಖಾತೆಗೆ ಶೇ.6.7ರಷ್ಟು ಬಡ್ಡಿ ನೀಡಲಾಗುತ್ತಿದೆ.