ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕಳೆದ ಆರು ತಿಂಗಳುಗಳಿಂದ ಸ್ಥಬ್ದವಾಗಿವೆ. ಇದು ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿದ್ದು ಕುಸಿದು ಹೋಗಿರುವ ಆರ್ಥಿಕತೆಯನ್ನು ಮೇಲೆತ್ತುವ ಸವಾಲು ಪ್ರಧಾನಿ ಮೋದಿ ಮುಂದಿದೆ. ಈ ಸವಾಲನ್ನು ಮೋದಿ ಹೇಗೆ ಎದುರಿಸುತ್ತಾರೆ? ಮುಂದಿನ ದಾರಿಗಳೇನು? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ..!
ನವದೆಹಲಿ (ಸೆ. 04): ಆನೆ ನಡೆದಾಗ ಗುಡ್ಡ ಹತ್ತಿಸೋದು ಸುಲಭ. ಆದರೆ ಒಮ್ಮೆ ಆನೆ ಕೆಳಗೆ ಕುಳಿತರೆ ಮೇಲೆ ಎಬ್ಬಿಸೋದು ವಿಪರೀತ ಕಷ್ಟಕರ. ಕೋವಿಡ್ ಕಾಲದಲ್ಲಿ ಭಾರತದ ಮಲಗಿಬಿಟ್ಟಿರುವ ಅರ್ಥ ವ್ಯವಸ್ಥೆಯನ್ನು ಎಬ್ಬಿಸಲು ಮೋದಿ ಸರ್ಕಾರದ ಬಳಿ ಮಂತ್ರದಂಡ ಏನಾದರೂ ಇದೆಯೇ? ಮೊದಲ ತ್ರೈಮಾಸಿಕ ಜಿಡಿಪಿ ದರ -23.9% ಎಂದು ವರದಿ ಬಂದ ನಂತರ ಪ್ರತಿಯೊಬ್ಬ ಭಾರತೀಯನೂ ಕೇಳುತ್ತಿರುವ ಪ್ರಶ್ನೆ ಇದು. ಒಂದು ಅಂದಾಜಿನ ಪ್ರಕಾರ ಮುಂದಿನ 9 ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದರೂ 2021ರ ಮಾಚ್‌ರ್ ವರೆಗಿನ ಜಿಡಿಪಿ -10.9%ರವರೆಗೆ ಇರಲಿದೆ.
ಹಣದುಬ್ಬರ ಲೆಕ್ಕ ಹಾಕಿದರೂ ಭಾರತದ ಸರಾಸರಿ ಉತ್ಪಾದನೆ 200 ಲಕ್ಷ ಕೋಟಿ ಇದೆ. ಅಂದರೆ ವರ್ಷದ ಅಂತ್ಯಕ್ಕೆ ಸುಮಾರು 20 ಲಕ್ಷ ಕೋಟಿಯ ನಷ್ಟ. ಇದರ ಅರ್ಥ ನಷ್ಟದ ಬಾಬ್ತು ಮೂರು ಕಡೆ ನೇರ ಪರಿಣಾಮ ಬೀರಲಿದೆ. ಒಂದು- ಸರ್ಕಾರದ ವೆಚ್ಚ, ಎರಡು- ಬ್ಯಾಂಕ್‌ಗಳ ಮೇಲೆ ಒತ್ತಡ, ಮೂರು- ಗ್ರಾಹಕರ ಕೊಳ್ಳುವ ಸಾಮರ್ಥ್ಯ. ಈ ಮೂರೂ ಪರಿಣಾಮಗಳಿಂದ ವ್ಯಾಪಾರ ಚಕ್ರ ಕುಸಿದುಹೋಗಿದೆ. ಹೀಗಾಗಿ ತೆರಿಗೆ ಸಂಗ್ರಹ ಇಲ್ಲ. ಹೀಗಾಗಿ ಉಳಿದಿರುವ ಮಾರ್ಗ ತೆರಿಗೆ ದರ ಹೆಚ್ಚಳ ಮಾಡುವುದು. ಇದರಿಂದ ಭಯಂಕರ ಪ್ರಮಾಣದ ಬೆಲೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ನೋಟ್ ಪ್ರಿಂಟ್ ಪರಿಹಾರವೇ?
ಅಮೆರಿಕ, ಜರ್ಮನಿ, ಫ್ರಾನ್ಸ್‌ನಂತಹ ದೇಶಗಳು ಹೆಚ್ಚು ಆದಾಯ ಇರುವ ದೇಶಗಳು. ಇವು ತಮ್ಮ ನಾಗರಿಕರ ಜೊತೆಜೊತೆಗೆ ವಿಶ್ವದ ಇತರ ದೇಶಗಳಿಗೂ ಉತ್ಪನ್ನಗಳನ್ನು ತಯಾರಿಸುತ್ತವೆ, ಪೂರೈಸುತ್ತವೆ, ಹಣ ಮಾಡುತ್ತವೆ. ಹೀಗಾಗಿ ಇಲ್ಲಿನ ಸರ್ಕಾರಗಳ ಬಳಿ ಇಂಥ ಸಂಕಷ್ಟಗಳು ಬಂದಾಗ ಖರ್ಚು ಮಾಡಲು ಹೆಚ್ಚುವರಿ ಹಣ ಇರುತ್ತದೆ. ಆದರೆ ಭಾರತ ಸರ್ಕಾರ ಅಷ್ಟೊಂದು ಶ್ರೀಮಂತವಲ್ಲ. ನಮ್ಮ ಜಿಡಿಪಿಯ ಸುಮಾರು 25% ಗಾತ್ರದ ಹಣವೂ ಸರ್ಕಾರದ ಬಳಿ ಹೆಚ್ಚುವರಿಯಾಗಿ ಇರುವುದಿಲ್ಲ. ಹೀಗಿರುವಾಗ ಸರ್ಕಾರ ಸಾಮಾನ್ಯರ ಕೈಗೆ ಉದ್ಯೋಗದ ಮೂಲಕ ಹಣ ಕೊಡಲು ರಸ್ತೆ ನಿರ್ಮಾಣ, ಅಣೆಕಟ್ಟು ನಿರ್ಮಾಣ, ಕಟ್ಟಡ ನಿರ್ಮಾಣಕ್ಕೆ ಇಳಿಯಬೇಕು.
ಕಾಂಗ್ರೆಸ್ ಪ್ರತಿಭಾವಂತ ಆಪತ್ಪಾಂಧವ ಪ್ರಣಬ್‌ರನ್ನು ಪ್ರಧಾನಿಯನ್ನೇಕೆ ಮಾಡಲಿಲ್ಲ ಸೋನಿಯಾ?
ಇದಕ್ಕೆ ಆರ್‌ಬಿಐನಿಂದ ಹೆಚ್ಚುವರಿ ನೋಟ್ ಪ್ರಿಂಟ್ ಮಾಡಿಸಿ ವ್ಯಾಪಾರ ಚಕ್ರ ತಿರುಗಿಸಿ, ತೆರಿಗೆ ಸಂಗ್ರಹ ಮಾಡಿ ಒಂದು ವರ್ಷದಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಬೇಕು. ಆದರೆ ಸರ್ಕಾರಕ್ಕೆ ಇದರಲ್ಲಿ ಬೆಲೆ ಏರಿಕೆ ಕೈಮೀರಿ ಹೋಗುವ ಭೀತಿ ಇದ್ದೇ ಇರುತ್ತದೆ. ನೋಟು ಪ್ರಿಂಟ್ ಮಾಡುವುದು ಅಂದರೆ ರುಪಾಯಿಯ ಅಪಮೌಲ್ಯ ಕೂಡ ಹೌದು. ಇಂಥ ಸಂಕಷ್ಟದಲ್ಲೇ ಚೀನಾ ಕಾಲು ಕೆದರಿ ಯುದ್ಧಕ್ಕೆ ಬರುತ್ತಿದೆ. ಅಂದಹಾಗೆ, 1918ರಲ್ಲಿ ಸ್ಪಾನಿಶ್ ಫ್ಲೂ ಮತ್ತು ಮೊದಲನೇ ಮಹಾಯುದ್ಧದ ನಂತರ ಯುರೋಪಿಯನ್ ದೇಶಗಳು ಭಯಂಕರ ಬೆಲೆ ಏರಿಕೆ ಕಂಡಿದ್ದವು. ಮುಂದೆ ಇದೇ ಕಾರಣಕ್ಕೆ ನಾಜಿ ಜರ್ಮನಿ ಉದಯ ಆಯಿತು ಎನ್ನುವುದು ಇನ್ನೊಂದು ಕಥೆ.
ಕವಲು ದಾರಿಯಲ್ಲಿ ಜಿಎಸ್‌ಟಿ
ಯಾವುದೇ ತೆರಿಗೆ ಸುಧಾರಣೆ ಯಶಸ್ವಿ ಆಗಬೇಕಾದರೆ ಅಭಿವೃದ್ಧಿ ದರ ಏರುಮುಖವಾಗಿರಬೇಕು. ಹೆಚ್ಚು ವ್ಯಾಪಾರಗಳು ತೆರಿಗೆ ವ್ಯಾಪ್ತಿಯಲ್ಲಿ ಬಂದು ಟ್ಯಾಕ್ಸ್ ಸಂಗ್ರಹ ಜಾಸ್ತಿಯಾಗಿ ಬೆಲೆ ಕಡಿಮೆ ಆಗುತ್ತದೆ ಎಂಬ ಕಾರಣ ನೀಡಿ ಜಿಎಸ್‌ಟಿ ತರಲಾಗಿತ್ತು. ಹೀಗಾಗಿಯೇ ರಾಜ್ಯ ಸರ್ಕಾರಗಳು ಸಂವಿಧಾನದತ್ತವಾದ ತೆರಿಗೆ ಹಾಕುವ ಅಧಿಕಾರವನ್ನು ಕೇಂದ್ರಕ್ಕೆ ಬಿಟ್ಟು ಕೊಟ್ಟಿದ್ದವು. ಆದರೆ ಈಗ ಕೋವಿಡ್‌ನ ನಂತರ ಜಿಎಸ್‌ಟಿ ಕೂಡ ಒತ್ತಡದಲ್ಲಿದೆ. ಒಂದು ಕಡೆ ನಿರೀಕ್ಷಿತ ತೆರಿಗೆ ಬರುತ್ತಿಲ್ಲ, ಖೋತಾ ಹಣ ತುಂಬಿಕೊಡುವ ವಾಗ್ದಾನ ಮಾಡಿದ್ದ ಕೇಂದ್ರ, ಈಗ ನೀವೇ ಸಾಲ ತೆಗೆದುಕೊಳ್ಳಿ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದೆ. ವಿಶ್ವದಲ್ಲೆಡೆ ತೆರಿಗೆ ದರ ಇಳಿಸಬೇಕು ಎಂದು ಪಾಶ್ಚಿಮಾತ್ಯ ಸರ್ಕಾರಗಳು ಚಿಂತನೆ ನಡೆಸಿದ್ದು, ನಮ್ಮಲ್ಲಿ ಮಾತ್ರ ಜಿಎಸ್‌ಟಿ ದರ ಏರಿಸುವ ಪ್ರಸ್ತಾವನೆ ಇದೆ.
ಇಂಡಿಯಾ ಗೇಟ್: ತಿಂಡಿ ತಿನಿಸು ಪ್ರಿಯ ಅಟಲ್ ಬಿಹಾರಿ!
ಒಟ್ಟಾರೆ ಜಿಎಸ್‌ಟಿ ಭವಿಷ್ಯ ಕೋವಿಡ್ ಕಾಲದ ಹಿಂಜರಿತದ ಪರಿಣಾಮಗಳ ಮೇಲೆ ಅವಲಂಬಿತವಾಗಿದೆ. ಜಿಎಸ್‌ಟಿ ಬಂದಾಗಿನಿಂದಲೇ ತರಹೇವಾರಿ ಫಾಮ್‌ರ್ ತುಂಬುವ ಜಂಜಾಟದಿಂದ ವ್ಯಾಪಾರಿಗಳಿಗೆ ಇದು ಬೇಡವಾಗಿತ್ತು. ಈಗ ತೆರಿಗೆ ಖೋತಾ ಕಾರಣದಿಂದ ರಾಜ್ಯಗಳಿಗೂ ಕೂಡ ಇದು ಬೇಡವಾಗಿದೆ. ಈಗ ಕೋವಿಡ್ ಕಾರಣದಿಂದ ಬೆಲೆ ಏರಿಕೆ ಅನಿವಾರ್ಯ ಆಗಿರುವಾಗ ಗ್ರಾಹಕರಲ್ಲೂ ಅಸಮಾಧಾನವಿದೆ. ಮುಂಬರುವ ದಿನಗಳಲ್ಲಿ ಜಿಎಸ್‌ಟಿ ಖೋತಾ ಕೊಡಲು ಕೇಂದ್ರ ಹೀಗೇ ಮೀನಮೇಷ ಎಣಿಸಿದರೆ, ಕೆಲವು ರಾಜ್ಯಗಳು ನಮಗೆ ಜಿಎಸ್‌ಟಿ ಬೇಡವೇ ಬೇಡ ಎಂದು ವರಾತ ತೆಗೆದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಜಿಎಸ್‌ಟಿ ಟೈಮು ಖರಾಬ್ ಇದೆ!
ಬ್ಯಾಂಕುಗಳು ದಿವಾಳಿ ಎದ್ದರೆ?
ಕೋವಿಡ್ ಆರಂಭವಾಗುವುದಕ್ಕಿಂತ ಮುಂಚೆಯೇ ಭಾರತೀಯ ಸರ್ಕಾರಿ ಬ್ಯಾಂಕ್‌ಗಳು 9 ಲಕ್ಷ ಕೋಟಿ ಸುಸ್ತಿ ಸಾಲದ ಮೇಲೆ ಕುಳಿತಿದ್ದವು. ಈಗ ಕೇಂದ್ರ ಸರ್ಕಾರ 6 ತಿಂಗಳು ಸಾಲ ಮರುಪಾವತಿಗೆ ವಿನಾಯ್ತಿ ನೀಡಿರುವುದರಿಂದ ಮುಂದೆ ಈ ಸಾಲದಲ್ಲಿ 20 ಪ್ರತಿಶತ ಮುಳುಗಿದರೂ ಬ್ಯಾಂಕ್‌ಗಳ ವಾಪಸ್ ಬರದ ಸಾಲದ ಮೊತ್ತ 20 ಲಕ್ಷ ಕೋಟಿ ಆಗಲಿದೆ. ಆರ್‌ಬಿಐ ಪ್ರಕಾರ ಸರ್ಕಾರಿ ಬ್ಯಾಂಕ್‌ಗಳಲ್ಲಿ 100ಕ್ಕೆ 29 ಸಾಲಗಾರರು ಹಾಗೂ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ 80 ಸಾಲಗಾರರು 6 ತಿಂಗಳ ಸಾಲ ಮರುಪಾವತಿ ಮುಂದೂಡಿಕೆಗೆ ಅರ್ಜಿ ಹಾಕಿದ್ದಾರೆ.
ಸ್ವಯಂ ಸರ್ಕಾರವೇ ತನ್ನ ವೆಚ್ಚಕ್ಕಾಗಿ ಸಾಲ ಮಾಡುತ್ತಿರುವಾಗ ಬ್ಯಾಂಕ್‌ಗಳ ನಷ್ಟತುಂಬಿಕೊಡುವವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ. ಹೀಗಾಗಿಯೇ ಕೇಂದ್ರ ಸರ್ಕಾರವೇ ಗ್ಯಾರಂಟಿ ಕೊಟ್ಟರೂ ಬ್ಯಾಂಕ್‌ಗಳು ಸ್ವಯಂ ಉದ್ಯೋಗಗಳಿಗೆ ಸಾಲ ಕೊಡಲು ಮುಂದೆ ಬರುತ್ತಿಲ್ಲ. ಇನ್ನೊಂದು ಕಡೆ ಹಣದ ಪ್ರಸರಣ ಜಾಸ್ತಿ ಮಾಡಲು ಠೇವಣಿ ಬಡ್ಡಿ ದರವನ್ನು ಆರ್‌ಬಿಐ ಕಡಿತಗೊಳಿಸುತ್ತಿರುವುದರಿಂದ ಕೂಡ ಬ್ಯಾಂಕ್‌ಗಳು ನಷ್ಟಅನುಭವಿಸುತ್ತಿವೆ. ಮುಂದೆ ಹೇಗೋ ಗುದ್ದಾಡಿ ಕೇಂದ್ರ ಸರ್ಕಾರ ದೊಡ್ಡ ದೊಡ್ಡ ಬ್ಯಾಂಕ್‌ಗಳಿಗೆ ನಷ್ಟಭರಿಸಿ ಉಳಿಸಿಕೊಳ್ಳಬಹುದು. ಆದರೆ ಸಣ್ಣ ಸಣ್ಣ ಬ್ಯಾಂಕ್‌ಗಳ ಕಥೆಯೇನು? ಹೀಗಾಗಿಯೇ ಸರ್ಕಾರ 3 ಸಣ್ಣ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಅಂದಹಾಗೆ, ಸಾಲ ಎಂದೂ ಮಲಗೋದಿಲ್ಲ, ಅದು ಬಡ್ಡಿ ಚಕ್ರಬಡ್ಡಿ ಜೊತೆ ಮುಂದೆ ಸಾಗುತ್ತಲೇ ಇರುತ್ತದೆ.
ಚೀನಾಕ್ಕೇಕೆ ಹೆಚ್ಚು ನಷ್ಟವಾಗಿಲ್ಲ?
ಕೋವಿಡ್ ಕಾರಣದಿಂದ ಅಮೆರಿಕ, ಜರ್ಮನಿ, ಬ್ರಿಟನ್ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆ ಕುಸಿತ ಕಂಡಿವೆ. ಆದರೆ ನೋಟು ರದ್ದತಿ, ಜಿಎಸ್‌ಟಿ ಕಾರಣದಿಂದ ಸತತ 16 ತ್ರೈಮಾಸಿಕದಿಂದ 8.5ರಿಂದ 4ರ ವರೆಗೆ ಕುಸಿತ ಕಂಡಿದ್ದ ಭಾರತದ ಜಿಡಿಪಿ ಕೋವಿಡ್ ಕಾರಣದಿಂದ ನೇರವಾಗಿ ಪಾತಾಳ ಕಂಡಿದೆ. ಆದರೆ ಆಶ್ಚರ್ಯ ಎಂದರೆ ಚೀನಾ ಮಾತ್ರ ಶೇ.6ರಿಂದ ಕುಸಿದರೂ ಜಿಡಿಪಿಯನ್ನು ಶೇ.3ರಲ್ಲಿ ಉಳಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ವುಹಾನ್ ಅಕ್ಕಪಕ್ಕ ಬಿಟ್ಟರೆ ಪೂರ್ತಿ ಚೀನಾವನ್ನು ಅಲ್ಲಿನ ಸರ್ಕಾರ ಲಾಕ್‌ಡೌನ್ ಮಾಡಲಿಲ್ಲ. ಭಾರತದಲ್ಲಿ ಪೂರ್ತಿ ಲಾಕ್ ಮಾಡಿದ್ದು ಸರಿಯೋ, ತಪ್ಪೋ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯ ಇವೆಯಾದರೂ ಅದರಿಂದಾದ ನಷ್ಟಮಾತ್ರ ಅಪಾರ.
ಕಾಂಗ್ರೆಸ್ ನಾಯಕತ್ವ ಪ್ರಿಯಾಂಕಾಗೆ; ಶುರುವಾಗಿದೆ ವೋಟ್ ಬ್ಯಾಂಕ್ ಪಾಲಿಟಿಕ್ಸ್..!
ಮೋದಿ ಮತ್ತು ಆರ್ಥಿಕತೆ ಜಾದೂ
ಅತ್ಯಂತ ಜನಪ್ರಿಯ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿ ಬಿಜೆಪಿಯ ಮೂಲ ಅಜೆಂಡಾಗಳಾದ ಆರ್ಟಿಕಲ್ 370 ರದ್ದತಿ, ರಾಮ ಮಂದಿರ ನಿರ್ಮಾಣ, ಏಕರೂಪದ ನಾಗರಿಕ ಕಾನೂನು ವಿಷಯಗಳಲ್ಲಿ ಕೆಲಸ ಮಾಡಿದ್ದು ಎದ್ದು ಕಾಣುತ್ತಿದೆ. ಅವರ ಕಟ್ಟಾಬೆಂಬಲಿಗರ ಸಂಖ್ಯೆಯೂ ಇದರಿಂದ ಹೆಚ್ಚಾಗಿದೆ. ಆದರೆ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಂಥ ಆರ್ಥಿಕ ವಿಚಾರಗಳಲ್ಲಿ ಅನೇಕರಿಗೆ ಅಸಮಾಧಾನವಿದೆ. ಕೋವಿಡ್ ಬರುವ ಮುಂಚೆಯೇ ಭಾರತದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ.
ಮಾರುಕಟ್ಟೆಯಲ್ಲಿ ಕೊಳ್ಳುವ ಸಾಮರ್ಥ್ಯ ಕಡಿಮೆ ಆಗಲು ನೋಟು ರದ್ದತಿ ಮತ್ತು ಜಿಎಸ್‌ಟಿ ಕಾರಣ ಎಂದು ವ್ಯಾಪಾರಿಗಳು ಹೇಳುತ್ತಿದ್ದರಾದರೂ ಸಾಮಾನ್ಯ ಜನರಲ್ಲಿ ಇದು ಆಕ್ರೋಶಕ್ಕೆ ಕಾರಣ ಆಗಿರಲಿಲ್ಲ. ಆರ್ಥಿಕತೆ ಮತ್ತು ಕೃಷಿ ವಿಚಾರದಲ್ಲಿ ಬೇಸರ ಇದ್ದವರೂ ಪುಲ್ವಾಮಾ ಸೇಡು ತೀರಿಸಿಕೊಳ್ಳಲು ಸರ್ಜಿಕಲ್ ಸ್ಟೆ್ರೖಕ್ ನಡೆಸಿದ್ದ ಕಾರಣದಿಂದ ಮೋದಿ ಹಿಂದೆ ನಿಂತುಕೊಂಡಿದ್ದರು. ಈಗ ಜಿಡಿಪಿ ಕುಸಿಯುವುದರ ಅರ್ಥ ಕೋಟ್ಯಂತರ ಜನರ ಉದ್ಯೋಗ ಹೋಗುವುದು, ಸಂಬಳ ಕಡಿತವೂ ಹೌದು. ಇದರ ಮೇಲೆ ಬೆಲೆ ಏರಿಕೆ ಕೂಡ. ಇದು ಕೇಂದ್ರ ಸರ್ಕಾರದ ಜನಪ್ರಿಯತೆ ಮೇಲೆ ಕೂಡ ಪರಿಣಾಮ ಉಂಟುಮಾಡಬಹುದು. ಇದನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ರಿಂದ ಉತ್ತರವಂತೂ ಸಿಗುತ್ತಿಲ್ಲ. ಹಾಗೆಂದು ಸರ್ಕಾರದ ಬಳಿ ಜಾದೂ ಮಾಡುವ ದಂಡ ಕೂಡ ಇರುವುದಿಲ್ಲ ನೋಡಿ.
ಕೃಷಿಯತ್ತ ಎಲ್ಲರ ಚಿತ್ತ
ಸ್ವಾತಂತ್ರ್ಯ ಸಿಕ್ಕ ನಂತರ ನಿಧಾನವಾಗಿ ಕೈಗಾರಿಕಾ ಕ್ಷೇತ್ರ ಬೆಳೆದು, ಸೇವಾ ವಲಯ ವೇಗವಾಗಿ ಬೆಳೆಯಿತು. ಆದರೆ ಲಾಕ್‌ಡೌನ್‌ನಲ್ಲಿ ಇವು ಯಾವುವೂ ನಮ್ಮ ಭಾರತೀಯರ ಕೈಹಿಡಿದಿಲ್ಲ. ಬದಲಾಗಿ ನೆರವಿಗೆ ಬಂದಿದ್ದು ಅತ್ಯಂತ ನಿರ್ಲಕ್ಷಿತ, ಸರ್ಕಾರಕ್ಕೂ, ಜನರಿಗೂ ಬೇಡವಾಗಿರುವ ಕೃಷಿ ಕ್ಷೇತ್ರ ಮಾತ್ರ. 3 ತಿಂಗಳಲ್ಲಿ ಎಲ್ಲಾ ಕ್ಷೇತ್ರಗಳು ನೆಗೆಟಿವ್ ಬೆಳವಣಿಗೆ ತೋರಿಸಿದ್ದರೆ, ಕೃಷಿ ಮಾತ್ರ 3% ಬೆಳವಣಿಗೆ ಕಂಡಿದೆ. ಅರ್ಥಶಾಸ್ತ್ರದ ಸಿದ್ಧಾಂತ ‘ಡಿಮ್ಯಾಂಡ್ ಅ್ಯಂಡ್ ಸಪ್ಲೈ’ನ ಉಚ್ಛ್ರಾಯ ಸ್ಥಿತಿಗೆ ನಾವು ಹೋಗಬೇಕಾದರೆ ಈ ವರ್ಷದ ಅಂತ್ಯಕ್ಕೆ ಬಂಪರ್ ಬೆಳೆ ಬರಬೇಕು. ಅಂದಾಗ ಮಾತ್ರ ಗ್ರಾಮೀಣ ವಹಿವಾಟು ವೇಗವಾಗಿ ಸಣ್ಣ ಸಣ್ಣ ನಗರಗಳಲ್ಲಿ ಚುರುಕು ಕಾಣಸಿಗಲಿದೆ. ಏಕೆಂದರೆ ಮಹಾನಗರಗಳಲ್ಲಂತೂ ಅನಿಯಮಿತತೆ ಕಾರಣದಿಂದ ಅನೇಕರ ಬಳಿ ಕೈಯಲ್ಲಿ ಹಣವಿಲ್ಲ. ಕೆಲವರ ಬಳಿ ಕೂಡಿಟ್ಟಿದ್ದು ಇದೆ, ಆದರೂ ಅವಶ್ಯಕ್ಕೆ ಬಿಟ್ಟು ಉಳಿದೆಡೆ ಖರ್ಚು ಮಾಡಲು ಧೈರ್ಯ ಇಲ್ಲ.ಹೀಗಾಗಿ ಪೂರ್ತಿ ಭಾರತ ಮತ್ತೊಮ್ಮೆ ಹಳ್ಳಿಗಳ ಕಡೆ ನೋಡುತ್ತಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ