ಲಾಭಾಂಶ ಇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳದೆ ಮತ್ತಷ್ಟು ಆಪ್ ಲೈನ್ ಕೇಂದ್ರಗಳ ಸ್ಥಾಪನೆಗೆ ಮುಂದಾದ ಫಿಸಿಕ್ಸ್ ವಾಲಾ!

By Suvarna News  |  First Published Mar 28, 2024, 12:33 PM IST

ಜನಪ್ರಿಯ ಎಡ್ ಟೆಕ್ ಸ್ಟಾರ್ಟ್ ಅಪ್  ಫಿಸಿಕ್ಸ್ ವಾಲಾ ಲಾಭಾಂಶ ಇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳದೆ 2025ನೇ ಸಾಲಿನಲ್ಲಿ ಹೆಚ್ಚಿನ ಆಪ್ ಲೈನ್ ಕೇಂದ್ರಗಳನ್ನು ತೆರೆಯುವ ಯೋಜನೆ ರೂಪಿಸಿದೆ. ಈ ಬಗ್ಗೆ ಸಂಸ್ಥೆ ಸಂಸ್ಥಾಪಕ ಅಲಖ್ ಪಾಂಡೆ ಮಾಹಿತಿ ನೀಡಿದ್ದಾರೆ ಕೂಡ. 


ನವದೆಹಲಿ (ಮಾ.28):  ಜನಪ್ರಿಯ ಇ-ಕಲಿಕಾ ತಾಣ 'ಫಿಸಿಕ್ಸ್ ವಾಲಾ' 2025ನೇ ಹಣಕಾಸು ಸಾಲಿನಲ್ಲಿ ಎಷ್ಟೋ ಸಾಧ್ಯವೋ ಅಷ್ಟು ಆಪ್ ಲೈನ್ ಕೇಂದ್ರಗಳನ್ನು ತೆರೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಅಲಖ್ ಪಾಂಡೆ ತಿಳಿಸಿದ್ದಾರೆ. ಇದರಿಂದ ಸಂಸ್ಥೆಯ ಲಾಭ ತಗ್ಗಿದರೂ ಕೂಡ ಚಿಂತೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆಪ್ ಲೈನ್ ಕೇಂದ್ರಗಳನ್ನು ತೆರೆಯುವ ನಿರ್ಧಾರದಿಂದ ನೋಯ್ಡಾ ಮೂಲದ ಎಡ್ ಸ್ಟಾರ್ಟ್ ಅಪ್ ಫಿಸಿಕ್ಸ್ ವಾಲಾದ ನಿವ್ವಳ ಲಾಭಾಂಶದಲ್ಲಿ ಈಗಾಗಲೇ ಸಾಕಷ್ಟು ಇಳಿಕೆ ಕಂಡುಬಂದಿದೆ. 2022ನೇ ಸಾಲಿನಲ್ಲಿ 98 ಕೋಟಿ ರೂ.ಇದ್ದ ಸಂಸ್ಥೆಯ ಲಾಭಾಂಶ 2023ನೇ ಹಣಕಾಸು ಸಾಲಿನಲ್ಲಿ 16 ಕೋಟಿ ರೂ.ಗೆ ಇಳಿಕೆಯಾಗಿತ್ತು. 2022ರಲ್ಲಿ ಫಿಸಿಕ್ಸ್ ವಾಲಾದ ಮೌಲ್ಯ 1 ಬಿಲಿಯನ್ ಡಾಲರ್ ಗಿಂತ ಹೆಚ್ಚಿತ್ತು. 105 ನಗರಗಳಲ್ಲಿ ಫಿಸಿಕ್ಸ್ ವಾಲಾ 130 ಆಪ್ ಲೈನ್ ಕೋಚಿಂಗ್ ಕೇಂದ್ರಗಳನ್ನು ಹೊಂದಿದೆ. ಅವುಗಳಲ್ಲಿ 55 ಈ ಹಣಕಾಸು ಸಾಲಿನಲ್ಲಿ ತೆರೆಯಲ್ಪಟ್ಟಿವೆ. ಮುಂದಿನ ಹಣಕಾಸು ಸಾಲಿನ ಕೊನೆಯಲ್ಲಿ ಮತ್ತೆ 50 ಆಪ್ ಲೈನ್ ಕೋಚಿಂಗ್ ಕೇಂದ್ರಗಳನ್ನು ತೆರೆಯುವ ಯೋಜನೆಯಿದೆ ಎಂದು ಪಾಂಡೆ ತಿಳಿಸಿದ್ದಾರೆ. 

'ಆಪ್ ಲೈನ್ ಕೇಂದ್ರಗಳನ್ನು ತೆರೆಯಲು ಹೆಚ್ಚಿನ ಬಂಡವಾಳ ವೆಚ್ಚವಾಗುತ್ತದೆ. ಈ ಕೇಂದ್ರಗಳನ್ನು ಲಾಭದಾಯಕವನ್ನಾಗಿ ಮಾಡಲು ಮೂರು ವರ್ಷಗಳಾದ್ರೂ ಬೇಕು. ಅಷ್ಟು ದೀರ್ಘಾವಧಿ ಕಾಯುತ್ತ ನಿಧಾನವಾಗಿ ಆಪ್ ಲೈನ್ ಕೇಂದ್ರಗಳನ್ನು ತೆರೆಯಲು ನಾನು ಸಿದ್ಧನಿಲ್ಲ' ಎಂದು ಪಾಂಡೆ ತಿಳಿಸಿದ್ದಾರೆ. 'ನಮ್ಮ ಬ್ರ್ಯಾಂಡ್ ಪ್ರಬಲವಾಗಿದೆ. ಹಾಗೆಯೇ ವಿದ್ಯಾರ್ಥಿಗಳ ಪ್ರಮಾಣ ಕೂಡ ಹೆಚ್ಚಿದೆ. ಹೀಗಾಗಿ ನಾನು ಭಾರತದಾದ್ಯಂತ ಸಂಚರಿಸಲು ಬಯಸುತ್ತೇನೆ. ಹಾಗೆಯೇ ಎಷ್ಟು ಸಾಧ್ಯವೋ ಅಷ್ಟು ಆಪ್ ಲೈನ್ ಕೇಂದ್ರಗಳನ್ನು ಈಗಲೇ ತೆರೆಯಲು ಇಚ್ಛಿಸುತ್ತೇನೆ. ಇದಕ್ಕಾಗಿ ಲಾಭಾಂಶದಲ್ಲಿನ ಇಳಿಕೆಯನ್ನು ನಾವು ಸ್ವೀಕರಿಸಬೇಕಾಗುತ್ತದೆ' ಎಂದು ಪಾಂಡೆ ತಿಳಿಸಿದ್ದಾರೆ. 

Tap to resize

Latest Videos

ಇಂಜಿನಿಯರಿಂಗ್ ಡ್ರಾಪ್ ಔಟ್ ವಿದ್ಯಾರ್ಥಿ ಯೂಟ್ಯೂಬ್ ಚಾನೆಲ್ ಆದಾಯ 9100 ಕೋಟಿ ರೂ.; ಇದು ಫಿಸಿಕ್ಸ್ ವಾಲಾನ ಕಥೆ

ಪರೀಕ್ಷೆ ಸಿದ್ಧತೆ ಹಾಗೂ ಕೆ-12 ವಲಯಗಳ ಎಡ್ ಟೆಕ್ ಸ್ಟಾರ್ಟ್ ಅಪ್ ಗಳಾದ ಫಿಸಿಕ್ಸ್ ವಾಲಾ, ಅನ್ ಅಕ್ಯಾಡಮಿ ಹಾಗೂ ಬೈಜುಸ್ ಆಪ್ ಲೈನ್ ಕೇಂದ್ರಗಳನ್ನು ತೆರೆಯುವತ್ತ ತಮ್ಮ ಗಮನ ಕೇಂದ್ರೀಕರಿಸಿವೆ. ಕೋವಿಡ್ ಭಯ ತಗ್ಗಿದ ಬೆನ್ನಲ್ಲಢ ಆನ್ ಲೈನ್ ಕೋರ್ಸ್ ಗಳಿಗೆ ಬೇಡಿಕೆ ತಗ್ಗಿದೆ. ಹೀಗಾಗಿ ಆಪ್ ಲೈನ್ ಕೇಂದ್ರಗಳ ವಿಸ್ತರಣೆಗೆ ಎಡ್ ಟೆಕ್ ಸಂಸ್ಥೆಗಳು ಮುಂದಾಗಿವೆ. ಆಪ್ ಲೈನ್ ಕೋರ್ಸಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ  ಫಿಸಿಕ್ಸ್ ವಾಲಾದ ಒಟ್ಟು ವಿದ್ಯಾರ್ಥಿಗಳ ಪ್ರಮಾಣದ ಶೇ.5ರಷ್ಟಿದ್ದರೂ  ಒಟ್ಟು ಆದಾಯಕ್ಕೆ ಇದರ ಕೊಡುಗೆ  ಶೇ.40ರಷ್ಟಿದೆ ಎಂದು ಪಾಂಡೆ ತಿಳಿಸಿದ್ದಾರೆ. ಆದಾಯದ ಪ್ರಮಾಣವನ್ನು ಸುಮಾರು ಶೇ.45ಕ್ಕೇರಿಸುವ ಗುರಿಯನ್ನು ಕಂಪನಿ ಹೊಂದಿದೆ. 

ಲಾಭಕ್ಕಿಂತ ಹೆಚ್ಚಾಗಿ ಆಪ್ ಲೈನ್ ಕೇಂದ್ರಗಳ ವಿಸ್ತರಣೆಗೆ ಫಿಸಿಕ್ಸ್ ವಾಲಾ ಹೆಚ್ಚಿನ ಗಮನ ನೀಡುತ್ತಿರೋದಾಗಿ ಪಾಂಡೆ ತಿಳಿಸಿದ್ದಾರೆ. 'ಪ್ರತಿ ಬಳಕೆದಾರರಿಗೆ ಅಂದಾಜು ಆದಾಯವನ್ನು ನಾವು ಸರಿಪಡಿಸುತ್ತಿದ್ದೇವೆ. ಹಾಗೆಯೇ ಬಂಡವಾಳ ವೆಚ್ಚದ ಖರ್ಚನ್ನು ಕೂಡ ಸರಿದೂಗಿಸಲು ಪ್ರಯತ್ನಿಸುತ್ತೇವೆ. ಇಲ್ಲಿ ನಾವು ಸಾಕಷ್ಟು ಕಲಿಯುತ್ತಿದ್ದೇವೆ. ಆನ್ ಲೈನ್ ನಲ್ಲಿ ನಾವು ಗಳಿಸುವ ಹಣವನ್ನು ಆಪ್ ಲೈನ್ ನಲ್ಲಿ ತೊಡಗಿಸುತ್ತಿದ್ದೇವೆ' ಎಂದು ಪಾಂಡೆ ವಿವರಿಸಿದ್ದಾರೆ. 

ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ; ಇವರ ವಾರ್ಷಿಕ ಸಂಬಳವೇ 9.6 ಕೋಟಿ ರೂ.!

ಫಿಸಿಕ್ಸ್ ವಾಲಾದ ಆಪ್ ಲೈನ್ ತರಗತಿಗಳ ವಿಸ್ತರಣೆಯಿಂದ 2023ನೇ ಹಣಕಾಸು ಸಾಲಿನಲ್ಲಿ ಉದ್ಯೋಗಿಗಳ ವೆಚ್ಚ ಸೇರಿದಂತೆ ವಿವಿಧ ಖರ್ಚುಗಳಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಇದರಿಂದ ಸಂಸ್ಥೆಯ ಒಟ್ಟು ವೆಚ್ಚದಲ್ಲಿ ಕೂಡ ಏರಿಕೆ ಕಂಡುಬಂದಿದೆ. ಒಂದೇ ಬಾರಿಯ ವೆಚ್ಚ ಹಾಗೂ ನಗದುರಹಿತ ವೆಚ್ಚ 777 ಕೋಟಿ ರೂ. ಆಗಿತ್ತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 103 ಕೋಟಿ ರೂ. ಆಗಿತ್ತು. 

ಇಂಜಿನಿಯರಿಂಗ್ ಕಾಲೇಜ್ ಡ್ರಾಪ್ ಔಟ್ ಅಲಖ್ ಪಾಂಡೆ  ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಯೂಟ್ಯೂಬ್ ಚಾನೆಲ್ ಮುಂದೆ  9100 ಕೋಟಿ ರೂ. ಮೌಲ್ಯದ 'ಫಿಸಿಕ್ಸ್ ವಾಲಾ' ಎಂಬ ಎಡ್ ಟೆಕ್ ಸಂಸ್ಥೆಯಾಗಿ ಬೆಳೆಯಿತು.  ಇಂದು 'ಫಿಸಿಕ್ಸ್ ವಾಲಾ' ಅನ್ನೋದು ಜನಪ್ರಿಯ ಇ-ಕಲಿಕಾ ತಾಣವಾಗಿದೆ.  ಇದು 61 ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿದ್ದು 31 ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. 

click me!