
ನವದೆಹಲಿ (ಡಿ.4): ನಿರ್ದಿಷ್ಟ ಆಲೂಗಡ್ಡೆ (Potato) ತಳಿಗೆ ಪೆಪ್ಸಿಕೋ ಇಂಡಿಯಾ (PepsiCo India) ಪಡೆದಿದ್ದ ಹಕ್ಕುಸ್ವಾಮ್ಯವನ್ನು (Patent) ಸಸ್ಯ ವೈವಿಧ್ಯ ಹಾಗೂ ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (PPV ಹಾಗೂ PPR) ರದ್ದುಪಡಿಸಿದೆ. ಗುಜರಾತಿನ(Gujarat) 9 ರೈತರು ಪೇಟೆಂಟ್ ಹಕ್ಕುಗಳನ್ನು ಉಲ್ಲಂಘಿಸಿ ನೋಂದಾಯಿತ ನಿರ್ದಿಷ್ಟ ತಳಿಯ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಎರಡು ವರ್ಷಗಳ ಹಿಂದೆ ಪೆಪ್ಸಿಕೋ ಇಂಡಿಯಾ ಆರೋಪಿಸಿತ್ತು. ಈ ತೀರ್ಪು ಗುಜರಾತ್ ನಲ್ಲಿ ಪೆಪ್ಸಿಕೋ ನೀತಿಯ ವಿರುದ್ಧ ಹೋರಾಟ ನಡೆಸಿದ ರೈತರಿಗೆ ಸಿಕ್ಕ ಗೆಲುವು ಎಂದೇ ಹೇಳಬಹುದು. 'ಈ ತೀರ್ಪು ಭಾರತದ ರೈತರ ಪಾಲಿಗೆ ಇತಿಹಾಸಿಕ ಗೆಲುವಾಗಿದೆ. ಇದು ಇತರ ಯಾವುದೇ ಬೀಜ ಅಥವಾ ಆಹಾರ ನಿಗಮ ಕಾನೂಬದ್ಧವಾಗಿ ಅನುಮತಿ ನೀಡಿರೋ ಭಾರತದ ರೈತರ ಬಿತ್ತನೆ ಕಾಳು ಸ್ವಾತಂತ್ರ್ಯದ ಮೇಲೆ ಅತಿಕ್ರಮಣ ಮಾಡೋದನ್ನುತಡೆಯುವಂತಾಗಬೇಕು' ಎಂದು ಸುಸ್ಥಿರ ಹಾಗೂ ಸಮಗ್ರ ಕೃಷಿ ಮೈತ್ರಿಯ ವಕ್ತಾರೆ ಕವಿತಾ ಕುರುಗಂಟಿ ಹೇಳಿದ್ದಾರೆ. ಇವರು ಪೆಪ್ಸಿಕೋ ನಿರ್ದಿಷ್ಟ ತಳಿಯ ಆಲೂಗಡ್ಡೆಗೆ ಪಡೆದಿರೋ ಹಕ್ಕುಸ್ವಾಮ್ಯವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಬೀಜ ತಳಿಯ ಮಾಲೀಕತ್ವದ ಬಗ್ಗೆ ಪೆಪ್ಸಿಕೋ ಹಾಜರುಪಡಿಸಿರೋ ದಾಖಲೆಗಳನ್ನು ಪಿಪಿವಿ ಹಾಗೂ ಎಫ್ ಆರ್ ಎ ಪ್ರಶ್ನಿಸಿದೆ. 2019ರ ಏಪ್ರಿಲ್ ನಲ್ಲಿ ಲೇಸ್ ಆಲೂಗಡ್ಡೆ ಚಿಪ್ಸ್ ನಲ್ಲಿ ಬಳಸಿದ FL-2027 ಪ್ರಭೇದದ ಆಲೂಗಡ್ಡೆ ಬೆಳಕಿಗೆ ಬಂದಿರೋ ಜೊತೆ ಗುಜರಾತ್ ಉತ್ತರ ಭಾಗದಲ್ಲಿ ಆಲೂಗಡ್ಡೆ ಬೆಳೆಯೋ ಪ್ರದೇಶದಲ್ಲಿ ಡೇವಿಡ್ ವರ್ಸಸ್ ಗೊಲಿಯಥ್ ಹೋರಾಟಕ್ಕೆ ಕೇಂದ್ರಬಿಂದುವಾಯಿತು. ಭಾರತದಲ್ಲಿ 2009ರಲ್ಲಿ ಪರಿಚಯಿಸಲ್ಪಟ್ಟ ಆಲೂಗಡ್ಡೆಯನ್ನು ಸುಮಾರು 12 ಸಾವಿರ ರೈತರು ಬೆಳೆಯುತ್ತಿದ್ದರು. ಅವರೊಂದಿಗೆ ಕಂಪನಿ ಬೀಜಗಳ ಮಾರಾಟ ಹಾಗೂ ಆಲೂಗಡ್ಡೆ ಖರೀದಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿತ್ತು.
LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ
2016ರಲ್ಲಿ ಕಂಪನಿ ಪಿಪಿವಿ ಹಾಗೂ ಎಫ್ಆರ್ ಕಾಯ್ದೆ 2001ರ ಅಡಿಯಲ್ಲಿ ಈ ಆಲೂಗಡ್ಡೆ ತಳಿಯ ಹಕ್ಕುಸ್ವಾಮ್ಯದ ನೋಂದಣಿ ನಡೆಸಿತ್ತು. ಆದ್ರೆ ನಂತರದ ದಿನಗಳಲ್ಲಿ ಗುಜರಾತ್ ನಲ್ಲಿ ಈ ತಳಿಯ ಆಲೂಗಡ್ಡೆಯನ್ನು ತನ್ನೊಂದಿಗೆ ಒಪ್ಪಂದ ಮಾಡಿಕೊಳ್ಳದ ಇತರ ರೈತರು ಕೂಡ ಬೆಳೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ 9 ರೈತರ ವಿರುದ್ಧ ಪಿಪಿವಿ ಹಾಗೂ ಎಫ್ಆರ್ ಕಾಯ್ದೆ ಅಡಿಯಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿತ್ತು. ಇದ್ರಲ್ಲಿ 4 ಸಣ್ಣ ರೈತರ ವಿರುದ್ಧ 4.2ಕೋಟಿ ರೂ. ಮೊತ್ತದ ದಾವೆಯೂ ಸೇರಿತ್ತು.ತನ್ನ ಲೇಸ್ ಆಲಗೂಡ್ಡೆ ಚಿಪ್ಸ್ಗಾಗಿ ಬೆಳೆಯುವ ವಿಶಿಷ್ಟ ತಳಿಯ ಆಲೂಗಡ್ಡೆಯನ್ನು ರೈತರು ತಮ್ಮ ಲಾಭಕ್ಕಾಗಿ ಬೆಳೆದಿದ್ದಾರೆ ಎಂಬುದು ಪೆಪ್ಸಿ ಕಂಪನಿಯ ಆರೋಪವಾಗಿತ್ತು. ಈ ನಡುವೆ ಚುನಾವಣೆ ಸಂದರ್ಭದಲ್ಲಿ ಕಂಪನಿಯ ಈ ಕ್ರಮ ವಿರೋಧಿಸಿ ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ನಿರಂತರ ಪ್ರತಿಭಟನೆ ನಡೆಸಿದ ಕಾರಣ ಮಧ್ಯಪ್ರವೇಶಿಸಿದ ಗುಜರಾತ್ ಸರ್ಕಾರ 2019ರ ಮೇನಲ್ಲಿಎಲ್ಲ ಪ್ರಕರಣಗಳನ್ನು ಹಿಂಪಡೆಯುವಂತೆ ಕಂಪನಿ ಮೇಲೆ ಒತ್ತಡ ಹಾಕಿತು.
Satellite Internet: ಭಾರತದಲ್ಲಿ ಅನುಮತಿ ಪಡೆಯಲಿದೆ ಎಲಾನ್ ಮಸ್ಕ್ ಕಂಪನಿ Starlink
2019ರ ಜೂನ್ ನಲ್ಲಿ ಕವಿತಾ ಕುರುಗಂಟಿ ಪೆಪ್ಸಿಕೋ ನೋಂದಣಿ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸ್ವೀಕರಿಸೋ ಮೂಲಕ ಪ್ರಾಧಿಕಾರ, ದೇಶದ ರೈತರ ಹಕ್ಕುಗಳನ್ನು ಐಪಿಆರ್ ಹಕ್ಕುದಾರರು ಕಡೆಗಣಿಸುವಂತಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. ಬಹುರಾಷ್ಟ್ರೀಯ ಕಂಪನಿಗಳು ಒಪ್ಪಂದದ ಹೆಸರಿನಲ್ಲಿ ರೈತರ ಮೇಲೆ ನಡೆಸುತ್ತಿರೋ ದೌರ್ಜನ್ಯಗಳ ತಡೆಗೆ ಈ ತೀರ್ಪು ಮುಂದಿನ ದಿನಗಳಲ್ಲಿ ನೆರವು ನೀಡಲಿದೆ. ಭಾರತದಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು ನಿರ್ದಿಷ್ಟ ತಳಿಯ ಬಿತ್ತನೆ ಬೀಜಗಳನ್ನು ನೀಡಿ ರೈತರು ಬೆಳೆದ ಫಸಲನ್ನು ಖರೀದಿಸೋ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಇದ್ರಿಂದ ಕೆಲವು ರೈತರು ಲಾಭ ಗಳಿಸಿದ್ದರೆ, ಇನ್ನೂ ಕೆಲವು ರೈತರು ಅನ್ಯಾಯಕ್ಕೂ ಒಳಗಾಗಿರೋ ಉದಾಹರಣೆಗಳಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.