ಜಿಲ್ಲೆಯ ಜನರ ನಿರೀಕ್ಷೆ ಹುಸಿ| ಬಳ್ಳಾರಿಗೆ ಬರಲೇ ಇಲ್ಲ ಕೃಷಿ ಕಾಲೇಜು| ಪಾರಂಪರಿಕ ತಾಣ ಅಭಿವೃದ್ಧಿಗೆ ಸಿಗದ ಅನುದಾನ| ಶಾಖೋತ್ಪನ್ನ ಕೇಂದ್ರದಲ್ಲಿ ವಾಯುಮಾಲಿನ್ಯ ತಗ್ಗಿಸಲು ಕ್ರಮ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಮಾ.06): ಮುಖ್ಯಮಂತ್ರಿಗಳ ಜೋಳಿಗೆಯಿಂದ ಜಿಲ್ಲೆಗೆ ಈ ಬಾರಿ ಒಂದಷ್ಟು ಅನುದಾನ ಹರಿದು ಬರಲಿದೆ, ಹಳತಾಗುತ್ತಿರುವ ಬೇಡಿಕೆಗಳಿಗೆ ಮರುಜೀವ ಬರಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬುತ್ತಿರುವುದರಿಂದ ಕೊಪ್ಪಳ ಜಿಲ್ಲೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಕಾರ್ಯದ ಆರಂಭಿಕವಾಗಿ 20 ಕೋಟಿ ನೀಡುವ ಪ್ರಸ್ತಾಪ ಬಿಟ್ಟರೆ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಬಿ.ಎಸ್. ಯಡಿಯೂರಪ್ಪ ಹುಸಿಗೊಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ಸಂಶೋಧನಾ ಕೇಂದ್ರದ ಬಳಿ ಕೃಷಿ ಪದವಿ ಕಾಲೇಜು ಆರಂಭಿಸಬೇಕು ಎಂಬ ಬಹುದಿನದ ಬೇಡಿಕೆಗೆ ಈ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಅಸ್ತು ಎನ್ನಲಿಲ್ಲ. ಇದು ಜಿಲ್ಲೆಯ ಕೃಷಿ ಕಾಲೇಜು ಬರಲಿದೆ ಎಂದು ನಿರೀಕ್ಷೆ ಹೊತ್ತಿದ್ದ ಕೃಷಿ ಪ್ರಿಯರನ್ನು ತೀವ್ರ ನಿರಾಸೆಗೊಳಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೃಷಿ ಕಾಲೇಜು ಜಿಲ್ಲೆಗೆ ನೀಡಬೇಕು ಎಂಬುದು ಹಳೆಯ ಬೇಡಿಕೆ. ಈ ಸಂಬಂಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಅನೇಕ ಬಾರಿ ಈ ಹಿಂದಿನ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಹಿಂದಿನಿಂದಲೂ ಬರೀ ಭರವಸೆಯ ಸಮಾಧಾನ ಸಿಕ್ಕಿದೆಯೇ ವಿನಾ ಕೃಷಿ ಕಾಲೇಜು ಬಳ್ಳಾರಿಗೆ ಬರಲೇ ಇಲ್ಲ.
ರಾಯಚೂರು- ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ‘ಪ್ಲ್ಯೂ ಗ್ಯಾಸ್ ಡಿ ಸಲ್ಫರೈಸೇಷನ್’ ವ್ಯವಸ್ಥೆಯನ್ನು ಇಟ್ಟು 2,510 ಕೋಟಿ ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, 2020/21ನೇ ಸಾಲಿನಲ್ಲಿ 500 ಕೋಟಿಗಳನ್ನು ವೆಚ್ಚ ಮಾಡಲಾಗುವುದು. ಇದರಿಂದ ವಾಯುಮಾಲಿನ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಲು ಸಹಾಯವಾಗುವುದು ಎಂದು ಬಜೆಟ್‌ನಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಇದು ಒಂದಷ್ಟು ಸಮಾಧಾನ ತಂದಿದೆ.
ಇನ್ನು ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವ ಪಾರಂಪರಿಕ ತಾಣ ಹಂಪಿ ಅಭಿವೃದ್ಧಿ ನೆಲೆಯ ಯಾವುದೇ ಯೋಜನೆಯ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಲಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ 500 ಕೋಟಿಗಳನ್ನು ನೀಡುವುದಾಗಿ ಹೇಳಿದ್ದರೂ ಜಿಲ್ಲೆಯ ಪಾಲು ನಿರ್ದಿಷ್ಟವಾಗಿಲ್ಲ. ಹಂಪಿಯಲ್ಲಿ ಕನಿಷ್ಠ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಅಗಾಧ ಪರಿಣಾಮ ಬೀರಿದೆ. ಹಂಪಿಗೆ ಆದ್ಯತೆಗಳನ್ನು ನೀಡಬೇಕು. ವಿಶ್ವದ ನಾನಾ ಭಾಗಗಳಿಂದ ಬರುವ ಪ್ರವಾಸಿಗರಿಗೆ ಬೇಕಾದ ಸೌಕರ್ಯ ಕಲ್ಪಿಸಬೇಕು ಎಂಬ ಅನೇಕ ದಶಕಗಳ ಕೂಗಿಗೆ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಸ್ಪಂದನೆ ನೀಡಿಲ್ಲ.
ವಿಪರ್ಯಾಸವೆಂದರೆ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಹಂಪಿಯ ಪ್ರವಾಸೋದ್ಯಮ ಬೆಳವಣಿಗೆಗೆ ಒತ್ತು ನೀಡಿ ಹೆಚ್ಚಿನ ಅನುದಾನ ತರಲಿಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬಂದಿವೆ.
ಜಿಲ್ಲೆಯ ಗಣಿಬಾಧಿತ ಪ್ರದೇಶಗಳತ್ತ ಈ ಬಾರಿಯ ಬಜೆಟ್ ಗಮನ ಹರಿಸಿಲ್ಲ. ಅಕ್ರಮ ಗಣಿಗಾರಿಕೆ ಹಾವಳಿಯಿಂದ ಜಿಲ್ಲೆಯ ಗಣಿಗಾರಿಕೆಗೆ ಕುತ್ತು ಬಂದ ಬಳಿಕ ಲಕ್ಷಾಂತರ ಕಾರ್ಮಿಕರ ಬದುಕು ಬೀದಿಪಾಲಾಯಿತಲ್ಲದೆ ಗಣಿಬಾಧಿತ ಪ್ರದೇಶದ ಅಭಿವೃದ್ಧಿಯ ನಿರೀಕ್ಷೆ ಹುಸಿಯಾಯಿತು. ಈ ಬಾರಿಯಾದರೂ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಯ ದುಡಿವ ಜನಗಳ ಆಸ್ಥೆಗೆ ಸ್ಪಂದಿಸಲಿದೆ ಎಂದು ನಿರೀಕ್ಷಿಸಿತ್ತು. ಆದರೆ, ಮುಖ್ಯಮಂತ್ರಿ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸಲಿಲ್ಲ.
ಗಣಿಗಾರಿಕೆ ಪ್ರದೇಶಗಳ ವ್ಯಾಪ್ತಿಯ ಸ್ಮಾರಕಗಳನ್ನು ರಕ್ಷಿಸಬೇಕು ಎಂದು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಧ್ವನಿ ಎತ್ತಿದ್ದರು. ಈ ಬಾರಿ ಅವರೇ ಮುಖ್ಯಮಂತ್ರಿಯಾಗಿದ್ದು ಸಂಡೂರಿನ ಶ್ರೀ ಕುಮಾರಸ್ವಾಮಿ ದೇವಸ್ಥಾನ ರಕ್ಷಣೆಗೆ ಮುಂದಾಗಬೇಕು ಎಂದು ಅನೇಕ ಹೋರಾಟಗಳು ನಡೆದಿದ್ದು, ಬಜೆಟ್‌ನಲ್ಲಿ ಸ್ಮಾರಕ ರಕ್ಷಣೆಯ ಬಗ್ಗೆ ಮುಖ್ಯಮಂತ್ರಿ ಮಾತನಾಡಲಿಲ್ಲ ಎಂಬುದು ವಿಪರ್ಯಾಸ.
ಕೃಷಿಗೆ ನೀಡಿದ ಅನುದಾನ ಸಾಲದು...
ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ದೂರದೃಷ್ಟಿಯಿರದ ಬಜೆಟ್ ಎಂದು ಆರೋಪಗಳು ಕೇಳಿ ಬಂದಿವೆ. ಮುಖ್ಯಮಂತ್ರಿಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಕೃಷಿಗೆ ನೀಡಿರುವ ಅನುದಾನ ಯಾವುದಕ್ಕೂ ಸಾಲದು ಎಂಬ ಆರೋಪಗಳಿವೆ. ದುಡಿಯುವ ಜನರ ಹಿತಾಸಕ್ತಿ ಕಾಯುವ ಯಾವುದೇ ಅಂಶಗಳು ಬಜೆಟ್‌ನಲ್ಲಿ ಕಂಡು ಬರುವುದಿಲ್ಲ. ಶಿಕ್ಷಣಕ್ಕೆ ನೀಡಿರುವ ಅನುದಾನ ಯಾವುದಕ್ಕೂ ಸಾಲದು. ಗಾರ್ಮೆಂಟ್ ಹಬ್ ಆಗಿರುವ ಬಳ್ಳಾರಿ ಜಿಲ್ಲೆಯ ವಸೊತ್ರೕದ್ಯಮ ಕಡೆಗೆ ಗಮನ ಹರಿಸಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ.