ಕೇಂದ್ರ ಸರ್ಕಾರ 2020-21ನೇ ಆರ್ಥಿಕ ಸಾಲಿನಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ವ್ಯವಸ್ಥೆ ಪರಿಚಯಿಸಿರುವ ಬಗ್ಗೆ ನಿಮಗೆ ತಿಳಿದೇ ಇದೆ. ಸರ್ಕಾರ ಹೆಚ್ಚಿನ ತೆರಿಗೆದಾರರು ಈ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದು ಬಯಸುತ್ತಿದೆ. ಹೀಗಿರುವಾಗ ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಒಂದಿಷ್ಟು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
Business Desk:ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರೋರು ಆದಾಯ ತೆರಿಗೆ ಪಾವತಿಸೋದು ಅನಿವಾರ್ಯ. ಪ್ರಸ್ತುತ ಆದಾಯ ತೆರಿಗೆಗೆ ಸಂಬಂಧಿಸಿ ಎರಡು ವ್ಯವಸ್ಥೆಗಳಿವೆ. ಒಂದು ಹಳೆಯ ತೆರಿಗೆ ವ್ಯವಸ್ಥೆ ಹಾಗೂ ಇನ್ನೊಂದು ಹೊಸ ತೆರಿಗೆ ವ್ಯವಸ್ಥೆ. ಕೇಂದ್ರ ಸರ್ಕಾರ 2020-21ನೇ ಆರ್ಥಿಕ ಸಾಲಿನಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ವ್ಯವಸ್ಥೆ ಪರಿಚಯಿಸಿರುವ ಬಗ್ಗೆ ನಿಮಗೆ ತಿಳಿದೇ ಇದೆ. ಸರ್ಕಾರ ಹೆಚ್ಚಿನ ತೆರಿಗೆದಾರರು ಈ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದು ಬಯಸುತ್ತಿದೆ. ಹೀಗಾಗಿ ಹೊಸ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲು ಪ್ರಯತ್ನಿಸುತ್ತಿದೆ. ಈ ಹೊಸ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಆಕರ್ಷಕವಾಗಿಸಲು ಕಳೆದ ಬಜೆಟ್ನಲ್ಲಿ ಅವರು ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದರು. ಆದರೂ ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಅನೇಕರು ಕೆಲವು ಸಂದೇಹಗಳು ಹಾಗೂ ಪ್ರಶ್ನೆಗಳನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಕೆಲವರು ಇನ್ನೂ ಹೊಸ ತೆರಿಗೆ ವ್ಯವಸ್ಥೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಕೂಡ. ಹಳೆಯ ತೆರಿಗೆ ವ್ಯವಸ್ಥೆ ಹೊಸ ವ್ಯವಸ್ಥೆಗಿಂತ ಹೆಚ್ಚು ಉತ್ತಮವಾಗಿದೆ. ಹಳೆಯ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಉಳಿಸಬಹುದು ಎಂಬೆಲ್ಲ ಭಾವನೆಗಳು ಅನೇಕರ ಮನಸ್ಸಿನಲ್ಲಿದೆ. ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಅನುಮಾನಗಳು ಹಾಗೂ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಮೊದಲನೆಯದಾಗಿ ಹೊಸ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಗಳು ಹಾಗೂ ದರಗಳ ಬಗ್ಗೆ ನೋಡೋಣ. ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಬದಲಾವಣೆಗಳನ್ನು ಮಾಡಿದ ಬಳಿಕ ಆದಾಯ ತೆರಿಗೆ ಸ್ಲಾಬ್ ನಲ್ಲಿ ಪ್ರಸ್ತುತ ಒಟ್ಟು 6 ಸ್ಲ್ಯಾಬ್ ಗಳನ್ನು ನೋಡಬಹುದು. ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ 3ಲಕ್ಷ ರೂ. ತನಕ ಇದ್ದರೆ, ಆಗ ಯಾವುದೇ ತೆರಿಗೆ ಇರುವುದಿಲ್ಲ. ಆದರೆ, ನಿಮ್ಮ ಆದಾಯ 3ಲಕ್ಷ ರೂ. ಹಾಗೂ 6 ಲಕ್ಷ ರೂ. ನಡುವೆ ಇದ್ದರೆ ಆಗ ನಿಮಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇನ್ನು ತೆರಿಗೆ ದರಗಳು ಆದಾಯದ ಹೆಚ್ಚಳದ ಜೊತೆಗೆ ಏರಿಕೆಯಾಗುತ್ತವೆ. ವಾರ್ಷಿಕ 15ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಆಗ ನೀವು ಶೇ.30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಯುಪಿಐ ಪಾವತಿಗೆ ಇಎಂಐ ಸೌಲಭ್ಯ; ಹೊಸ ಸೇವೆ ಪರಿಚಯಿಸಿದ ಐಸಿಐಸಿಐ ಬ್ಯಾಂಕ್
ಎರಡನೆಯದಾಗಿ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮೂಲ ವಿನಾಯ್ತಿ ಮಿತಿ ಎಷ್ಟು? ಈ ಹಿಂದೆ ತೆರಿಗೆ ವಿನಾಯ್ತಿ ಮಿತಿ 2.50ಲಕ್ಷ ರೂ. ಆಗಿತ್ತು. ಅಂದರೆ ನಿಮ್ಮ ವಾರ್ಷಿಕ ಆದಾಯ 2.50ಲಕ್ಷ ರೂ.ಗಿಂತ ಕಡಿಮೆ ಇದ್ದಿದ್ದರೆ ನೀವು ಯಾವುದೇ ತೆರಿಗೆ ಪಾವತಿಸಬೇಕಿರಲಿಲ್ಲ. ಆದರೆ, ಈಗ ಈ ಮಿತಿಯನ್ನು 3ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹೀಗಾಗಿ ನೀವು ಪ್ರತಿ ವರ್ಷ 3ಲಕ್ಷ ರೂ. ತನಕ ಗಳಿಸಿದರೆ, ಆಗ ನಿಮ್ಮ ಮೇಲೆ ಯಾವುದೇ ತೆರಿಗೆ ಭಾರ ಇರುವುದಿಲ್ಲ.
ಮೂರನೆಯದಾಗಿ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚುವರಿ ಶುಲ್ಕ (surcharge) ಎಷ್ಟು? ಯಾರು 2 ಕೋಟಿ ರೂ.ಗಿಂತ ಹೆಚ್ಚು ಸಂಪಾದಿಸುತ್ತಾರೋ ಅವರಿಗೆ ಸರ್ ಚಾರ್ಜ್ ಅನ್ನು ಸರ್ಕಾರ ಶೇ.25ಕ್ಕೆ ಇಳಿಕೆ ಮಾಡಿದೆ. ಈ ಹಿಂದೆ 5 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರೋರಿಗೆ ಈ ಸರ್ ಚಾರ್ಜ್ ವಿಧಿಸಲಾಗುತ್ತಿತ್ತು. ಅವರು ಶೇ.37ರಷ್ಟು ಸರ್ ಚಾರ್ಜ್ ಪಾವತಿಸಬೇಕಾಗಿತ್ತು.
ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?
ಕೊನೆಯದಾಗಿ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯ್ತಿ ಎಷ್ಟಿದೆ? ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 87A ಅಡಿಯಲ್ಲಿ 2023ರ ಏಪ್ರಿಲ್ 1ರಿಂದ 7ಲಕ್ಷ ರೂ. ತನಕ ತೆರಿಗೆ ವಿಧಿಸಲ್ಪಡುವ ಆದಾಯ ಹೊಂದಿರೋರಿಗೆ 25 ಸಾವಿರ ರೂ. ತೆರಿಗೆ ವಿನಾಯ್ತಿ ನೀಡಲಾಗುತ್ತದೆ. ಅದೇ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ 5ಲಕ್ಷ ರೂ. ತನಕ ತೆರಿಗೆ ವಿಧಿಸಲ್ಪಡುವ ಆದಾಯ ಹೊಂದಿರೋರಿಗೆ 12,500ರೂ. ತೆರಿಗೆ ವಿನಾಯ್ತಿ ನೀಡಲಾಗುತ್ತದೆ.
ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿ ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಅಲ್ಲಿ ಪ್ರಶ್ನೋತ್ತರ ವಿಭಾಗವಿದ್ದು, ಆದಾಯ ತೆರಿಗೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.