ಗೃಹಸಾಲದ ಇಎಂಐ ಮಿಸ್ ಆದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ

By Suvarna News  |  First Published Oct 18, 2022, 11:31 AM IST

ಸಾಲ ಮಾಡಿ ಮನೆ ಕಟ್ಟಿರೋರಿಗೆ ಇತ್ತೀಚಿನ ದಿನಗಳಲ್ಲಿ ಬಡ್ಡಿ ಹೊರೆ ಹೆಚ್ಚುತ್ತಿದೆ. ಪರಿಣಾಮ ಇಎಂಐ ಮೊತ್ತ ಕೂಡ ಹೆಚ್ಚಳವಾಗಿದೆ. ಇಂಥ ಸಮಯದಲ್ಲಿ ತಿಂಗಳ ಇಎಂಐ ಕಟ್ಟೋದು ಮಿಸ್ ಆದ್ರೆ ಏನಾಗುತ್ತದೆ? ಅದರಿಂದ ಮುಂದೆ ಏನೆಲ್ಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ? ಇಎಂಐ ಪಾವತಿ ಮಿಸ್ ಆದಾಗ ನೀವು ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ. 


Business Desk:ಸಾಲ ಮಾಡಿ ಸ್ವಂತ ಸೂರು ಕಟ್ಟಿಕೊಂಡೋರಿಗೆ ಈ ವರ್ಷ ಬಡ್ಡಿದರ ಹೆಚ್ಚಳ ಜೇಬು ಸುಡುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ಈ ವರ್ಷ ಇಲ್ಲಿಯ ತನಕ ರೆಪೋ ದರವನ್ನು  140 ಮೂಲಾಂಕದಷ್ಟು ಹೆಚ್ಚಿಸಿದೆ. ಪರಿಣಾಮ ಸದ್ಯ ರೆಪೋ ದರ ಶೇ. 5.40 ಕ್ಕೆ ಏರಿಕೆಯಾಗಿದೆ. ರೆಪೋ ದರ ಹೆಚ್ಚಳದ ಬೆನ್ನಲ್ಲೇ ಬ್ಯಾಂಕ್ ಗಳು ಕೂಡ ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿದರ ಹೆಚ್ಚಳ ಮಾಡಿವೆ. ಇದ್ರಿಂದ ಗೃಹಸಾಲ ಪಡೆದವರ ಮೇಲಿನ ಇಎಂಐ ಹೊರೆ ಕೂಡ ಹೆಚ್ಚಳವಾಗಿದೆ. ಕೆಲವರು ಸಾಲದ ಅವಧಿ ಹೆಚ್ಚಿಸಿಕೊಳ್ಳುವ ಮೂಲಕ ಇಎಂಐ ಹೆಚ್ಚುವರಿ ಹೊರೆಯನ್ನು ತಗ್ಗಿಸಿಕೊಂಡಿರಬಹುದು. ಆದರೂ ಗೃಹಸಾಲ ಪಡೆದ ಮೇಲೆ ಪ್ರತಿ ತಿಂಗಳು ಇಎಂಐಯನ್ನು ತಪ್ಪದೇ ಪಾವತಿಸಬೇಕಾಗುತ್ತದೆ. ಏಕೆಂದರೆ ಇಎಂಐ ಮಿಸ್ ಆದ್ರೆ ಅದರ ಪರಿಣಾಮ ನೇರವಾಗಿ ನಿಮ್ಮ ಸಿಬಿಲ್ ಸ್ಕೋರ್ ಮೇಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಇಎಂಐ ಮಿಸ್ ಆದ್ರೆ ಏನ್ ಮಾಡ್ಬೇಕು? ಇಎಂಐ ಹೊರೆ ತಗ್ಗಿಸಿಕೊಳ್ಳಲು ಏನ್ ಮಾಡ್ಬಹುದು? ಇಲ್ಲಿದೆ ಮಾಹಿತಿ.

ಇಎಂಐ ಮಿಸ್ ಆದ್ರೆ ಏನಾಗುತ್ತೆ?
ಪ್ರಸ್ತುತ ಗೃಹಸಾಲ (Home loan) ಪಡೆದವರು ಪ್ರತಿ ತಿಂಗಳು ಇಎಂಐ (EMI) ಪಾವತಿ ಬಗ್ಗೆ ನೆನಪು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಬದಲಿಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ಸಾಲ ಪಡೆದವರ ಖಾತೆಯಿಂದ ಇಎಂಐ ನೇರವಾಗಿ ಕಡಿತಗೊಳ್ಳುತ್ತದೆ. ಹೀಗಾಗಿ ಇಎಂಐ ಪಾವತಿಸಲು ಮರೆತು ಹೋಗುವ ಸಂದರ್ಭ ಎದುರಾಗೋದಿಲ್ಲ. ಆದರೆ, ಬ್ಯಾಂಕ್ (Bank) ಖಾತೆಯಲ್ಲಿ ಪ್ರತಿ ತಿಂಗಳು ಇಎಂಐಗೆ ಸಾಕಾಗುವಷ್ಟು ಮೊತ್ತದ ಹಣವಿದೆಯಾ ಎಂದು ಚೆಕ್ ಮಾಡೋದು ಅಗತ್ಯ. ಗೃಹಸಾಲದ ಇಎಂಐ ಮಿಸ್ ಆದ್ರೆ ಸಿಬಿಲ್ ಸ್ಕೋರ್ (CIBIL Score) ತಗ್ಗುತ್ತದೆ. ಇದ್ರಿಂದ ಭವಿಷ್ಯದಲ್ಲಿ ಸಾಲ ಪಡೆಯಲು ತೊಂದರೆಯಾಗಬಹುದು. ಒಂದು ಇಎಂಐ ಮಿಸ್ ಆದರೂ ಸಿಬಿಲ್ ಸ್ಕೋರ್ ನಲ್ಲಿ 40-80 ಅಂಕಗಳು ಕುಸಿತ ಕಾಣಲಿವೆ. ಅಲ್ಲದೆ, ತಡವಾಗಿ ಇಎಂಐ ಪಾವತಿ ಮಾಡಿದ್ದಕ್ಕೆ ಶೇ.2ರಷ್ಟು ದಂಡ (Fine) ಕೂಡ ಪಾವತಿಸಬೇಕು. 

Tap to resize

Latest Videos

ಕೇವಲ 399 ರೂ.ಗೆ ಅಂಚೆ ಇಲಾಖೆಯ ಅಪಘಾತ ವಿಮೆ; ಸಿಗಲಿದೆ 10 ಲಕ್ಷ ರೂ. ಕವರೇಜ್!

ಇಎಂಐ ಮಿಸ್ ಆದ್ರೆ ಏನ್ ಮಾಡ್ಬೇಕು?
ಒಂದು ವೇಳೆ ನೀವು ಒಂದು ಅಥವಾ ಎರಡು ಇಎಂಐ ಮಿಸ್ ಮಾಡಿ ಅದನ್ನು ಮೂರು ತಿಂಗಳ ಒಳಗೆ ಪಾವತಿಸಿದ್ರೆ ಅದೇನು ದೊಡ್ಡ ಸಮಸ್ಯೆಯಾಗಿ ಕಾಡುವುದಿಲ್ಲ. ಆದರೆ, ಮೂರು ತಿಂಗಳಾದ ಬಳಿಕವೂ ಪಾವತಿಸಿದ್ರೆ ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಆದಕಾರಣ ನಿಮ್ಮ ಗೃಹಸಾಲದ ಇಎಂಐ ಮಿಸ್ ಆಗಿದೆ ಎಂದು ತಿಳಿದ ಕೂಡಲೇ ಬ್ಯಾಂಕ್ ಗೆ (Bank) ತೆರಳಿ ಇಎಂಐ ಮಿಸ್ ಆಗಿರೋದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿ ಇಎಂಐ ಪಾವತಿಸಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇಎಂಐಗೆ ಸಾಕಾಗುವಷ್ಟು ಹಣ ಇರುವಂತೆ ನೋಡಿಕೊಳ್ಳಿ. 

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳಿಗೆ ಇ-ಪಾಸ್ ಬುಕ್; ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡೋ ಅವಕಾಶ

ಆರ್ಥಿಕ ಸ್ಥಿತಿ ಕೆಟ್ಟಿರುವಾಗ ಏನ್ ಮಾಡೋದು?
ಬದುಕು ಎಲ್ಲಿ, ಯಾವಾಗ ತಿರುವು ಪಡೆಯುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವೊಮ್ಮೆ ಆರ್ಥಿಕ ಸಂಕಷ್ಟದ ಪರಿಸ್ಥಿತಿಗಳು ಎದುರಾಗುತ್ತವೆ. ಉದ್ಯೋಗ ಕಳೆದುಕೊಂಡು ಅಥವಾ ಉದ್ಯಮದಲ್ಲಿ ನಷ್ಟ ಅನುಭವಿಸಿ ಕೆಲವರು ಸಂಕಷ್ಟಕ್ಕೆ ಸಿಲುಕುತ್ತಾರೆ.ಇಂಥ ಸಮಯದಲ್ಲಿ ಇಎಂಐ ಪಾವತಿಸೋದು ಸಾಧ್ಯವಾಗದೆ ಹೋಗಬಹುದು. ಆಗ ಏನ್ ಮಾಡ್ಬಹುದು? ನಿಮ್ಮ ಇಎಂಐ ಅವಧಿಯನ್ನು ವಿಸ್ತರಿಸಿಕೊಳ್ಳಿ. ಅಂದ್ರೆ ನೀವು ಗೃಹಸಾಲವನ್ನು15 ವರ್ಷಕ್ಕೆ ಪಡೆದಿದ್ರೆ ಅದನ್ನು 20 ವರ್ಷಕ್ಕೆ ವಿಸ್ತರಿಸಿಕೊಳ್ಳಿ.ಇದ್ರಿಂದ ಇಎಂಐ ಮೊತ್ತ ತಗ್ಗುತ್ತದೆ. ಇನ್ನು ಆರು ತಿಂಗಳ ಕಾಲ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವಂತೆ ಕೂಡ ನೀವು ಬ್ಯಾಂಕ್ ಗೆ ಮನವಿ ಸಲ್ಲಿಸಬಹುದು. ಈ ಸಮಯದಲ್ಲಿ ನೀವು ಹೊಸ ಉದ್ಯೋಗ ಹುಡುಕಿಕೊಳ್ಳಿ ಅಥವಾ ಬೇರೇನಾದ್ರೂ ವ್ಯವಸ್ಥೆ ಮಾಡಿಕೊಳ್ಳಬಹುದು. ಹಾಗೆಯೇ ನಿಮ್ಮ ನಿತ್ಯದ ಖರ್ಚು -ವೆಚ್ಚಗಳನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸಿ. ತಿಂಗಳ ಖರ್ಚಿಗೆ ಬಜೆಟ್ ಸಿದ್ಧಪಡಿಸಿಕೊಂಡು, ಅದಕ್ಕೆ ಅನುಗುಣವಾಗಿ ಖರ್ಚು ಮಾಡಿ. 

click me!