ಹೋಳಿಗೆ ಮಾರಿ ಕೋಟ್ಯಧೀಶನಾದ ಕನ್ನಡಿಗ;ಹೋಟೆಲ್ ವೇಟರ್ ಆಗಿದ್ದಈತನೀಗ 18 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ

By Suvarna NewsFirst Published Dec 5, 2023, 5:16 PM IST
Highlights

ಕಠಿಣ ಪರಿಶ್ರಮ,ಛಲ ಹಾಗೂ ದೃಢಸಂಕಲ್ಪದಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಕನ್ನಡಿಗ ಉದ್ಯಮಿ ಕೆ.ಆರ್. ಭಾಸ್ಕರ್ ಅತ್ಯುತ್ತಮ ನಿದರ್ಶನ. 'ಭಾಸ್ಕರ್ಸ್ ಮನೆ ಹೋಳಿಗೆ' ಎಂಬ ಸಂಸ್ಥೆಮೂಲಕ ಇಂದು ಇವರು ವಾರ್ಷಿಕ 3.6 ಕೋಟಿ ರೂ. ಲಾಭ ಗಳಿಸುತ್ತಿದ್ದಾರೆ. 
 

Business Desk: ಜೀವನ ಯಾವ ಕ್ಷಣ ಬೇಕಾದರೂ ತಿರುವು ಪಡೆಯಬಹುದು.ಬಡ ಕುಟುಂಬದಲ್ಲಿ ಹುಟ್ಟಿದವನು ಮುಂದೊಂದು ದಿನ ಕೋಟ್ಯಧಿಪತಿಯಾಗಬಹುದು. ಐಐಟಿ, ಐಐಎಂನಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ಮಾತ್ರ ಯಶಸ್ವಿ ಉದ್ಯಮಿಗಳಾಗಿಲ್ಲ. ಹೆಚ್ಚು ಓದಿರದ ವ್ಯಕ್ತಿ ಕೂಡ ಯಶಸ್ವಿ ಉದ್ಯಮಿಯಾಗಿರೋದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಸಿಗುತ್ತವೆ. ಜೀವನದಲ್ಲಿ ಹೊಟ್ಟೆಪಾಡಿಗಾಗಿ ಅನೇಕ ಕೆಲಸಗಳನ್ನು ಮಾಡಿ, ಕೈಯಲ್ಲಿ ಕಾಸಿರದೆ ಪಡಬಾರದ ಕಷ್ಟ ಅನುಭವಿಸಿದ ವ್ಯಕ್ತಿಗಳು ಕೂಡ ಕಠಿಣ ಪರಿಶ್ರಮದಿಂದ ಮುಂದೊಂದು ದಿನ ಯಶಸ್ಸಿನ ಉತ್ತುಂಗಕ್ಕೇರಿದ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಈ ರೀತಿ ಸಾಕಷ್ಟು ಸವಾಲುಗಳನ್ನು ಎದುರಿಸಿ, ಸ್ವಂತ ಉದ್ಯಮ ಸ್ಥಾಪಿಸಿ ಅದರಲ್ಲಿ ಯಶಸ್ಸು ಕಂಡವರಲ್ಲಿ ರಾಜ್ಯದ ಕುಂದಾಪುರ ಮೂಲದ ಕೆ.ಆರ್. ಭಾಸ್ಕರ್ ಕೂಡ ಒಬ್ಬರು. ಬೆಂಗಳೂರಿನಲ್ಲಿ 'ಭಾಸ್ಕರ್ಸ್ ಮನೆ ಹೋಳಿಗೆ' ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇನ್ನು ಮಹಾರಾಷ್ಟ್ರದಲ್ಲಿ 'ಪುರನಪೋಲಿ ಘರ್ ಆಫ್ ಭಾಸ್ಕರ್' ಎಂಬ ಹೆಸರಿನಿಂದ ಈ ಮಳಿಗೆ ಹೆಸರು ಗಳಿಸಿದೆ. ಜನಪ್ರಿಯ ರಿಯಾಲ್ಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ' ಎರಡನೇ ಆವೃತ್ತಿಯಲ್ಲಿ ಭಾಗವಹಿಸುವ ಮೂಲಕ ಭಾಸ್ಕರ್ ದೇಶದ ಗಮನ ಸೆಳೆದಿದ್ದರು.

ಹೋಟೆಲ್ ವೇಟರ್ ಕೋಟ್ಯಧೀಶನಾಗಿದ್ದು ಹೇಗೆ?
ಭಾಸ್ಕರ್ ಅವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಸಾಕಷ್ಟು ಅಡೆತಡೆಗಳನ್ನು ಅವರು ಎದುರಿಸಿದ್ದರು. 12ನೇ ವಯಸ್ಸಿನಲ್ಲಿ ಊರು ಬಿಟ್ಟು ಬೆಂಗಳೂರು ಸೇರಿದ ಅವರು, ಹೋಟೆಲ್ ವೊಂದರಲ್ಲಿ ವೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಸಮಯದಲ್ಲಿ ಹೋಟೆಲ್ ನಲ್ಲಿ ಟೇಬಲ್ ಹಾಗೂ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಕ್ಲೀನರ್ ಕೆಲಸ ಕೂಡ ಮಾಡಿದ್ದರು. ಆ ಬಳಿಕ ಸುಮಾರು 8 ವರ್ಷಗಳ ಕಾಲ ಡ್ಯಾನ್ಸ್ ಟೀಚರ್ ಆಗಿ ಕೂಡ ಭಾಸ್ಕರ್ ಕಾರ್ಯನಿರ್ವಹಿಸಿದ್ದರು. ನಂತರ ಸ್ವಂತ ಉದ್ಯಮಕ್ಕೆ ಕೈಹಾಕಿದ ಅವರು, ಪಾನ್ ಶಾಪ್ ವೊಂದನ್ನು ತೆರೆಯುತ್ತಾರೆ. ಆದರೆ, ಅದರಲ್ಲಿ ಯಶಸ್ಸು ಸಿಗೋದಿಲ್ಲ. ನಂತರ ಅಂದರೆ 23ನೇ ವಯಸ್ಸಿನಲ್ಲಿ ಮುಂಬೈ ಸೇರಿದ ಅವರು, ಅಲ್ಲಿನ ಬೀದಿಬದಿಗಳಲ್ಲಿ ಸೈಕಲ್ ಮೇಲೆ 'ಪುರನಪೋಲಿ' ಅಥವಾ ಹೋಳಿಗೆ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಹೀಗೆ ಪ್ರಾರಂಭವಾದ ಭಾಸ್ಕರ್ ಅವರ ಹೋಳಿಗೆ ಉದ್ಯಮ ಇಂದು ವಾರ್ಷಿಕ 3.6 ಕೋಟಿ ರೂ. ಲಾಭ ಗಳಿಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ.

Latest Videos

ತೆಂಗಿನ ಚಿಪ್ಪಿಂದಲೇ ತಿಂಗಳಿಗೆ ಲಕ್ಷಾಂತರ ಸಂಪಾದಿಸ್ತಾರೆ ಕೇರಳದ ಈ ಹುಡುಗಿ!

ತಿರುವು ನೀಡಿದ ಅಡುಗೆ ಶೋ
ಭಾಸ್ಕರ್ ಅವರು 'ಶಾರ್ಕ್ ಟ್ಯಾಂಕ್ ಇಂಡಿಯಾ'ದಲ್ಲಿ ಹಂಚಿಕೊಂಡ ಮಾಹಿತಿ ಅನ್ವಯ ಒಮ್ಮೆ ಅವರು ಜನಪ್ರಿಯ ಅಡುಗೆ ಕಾರ್ಯಕ್ರಮವೊಂದಕ್ಕೆ ಆಯ್ಕೆಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತಂತೆ. ಹಾಗೆಯೇ ಅವರ ಉದ್ಯಮ ಇನ್ನಷ್ಟು ಬೆಳವಣಿಗೆ ಹೊಂದಲು ಇದು ನೆರವು ನೀಡಿತಂತೆ.

17 ಮಳಿಗೆಗಳು, ವಾರ್ಷಿಕ 18 ಕೋಟಿ ವ್ಯವಹಾರ
ಭಾಸ್ಕರ್ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೋಳಿಗೆ ಮಾರಾಟ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ ಒಟ್ಟು 17 ಮಳಿಗೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ 10 ಫ್ರಾಂಚೈಸಿಗಳು ಕರ್ನಾಟಕದಲ್ಲೇ ಇವೆ. ಇನ್ನು ಈ ಶಾಪ್ ಗಳಿಂದ ಅವರು ವಾರ್ಷಿಕ 18 ಕೋಟಿ ರೂ. ವ್ಯವಹಾರ ನಡೆಸುತ್ತಿದ್ದಾರೆ. ಇದರಲ್ಲಿ ಶೇ.20ರಷ್ಟು ಲಾಭ ಸಿಗುತ್ತಿದೆ. ಅಂದರೆ ವಾರ್ಷಿಕ ಸುಮಾರು 3 ಕೋಟಿ ಲಾಭ ಗಳಿಸುತ್ತಿದ್ದಾರೆ. ಇನ್ನು ಫ್ರಾಂಚೈಸಿಗಳಿಂದ ಶೇ.5ರಷ್ಟು ಕಮೀಷನ್ ಕೂಡ ಸಿಗುತ್ತಿದೆ. 

ಬರೀ 20ನೇ ವಯಸ್ಸಿಗೆ 770 ಮಿಲಿಯನ್ ಡಾಲರ್ ವಹಿವಾಟು ನಡೆಸೋ ಉದ್ಯಮ ಕಟ್ಟಿದ ಯುವಕ;ಈತನ ಯಶಸ್ಸಿನ ಗುಟ್ಟೇನು?

8 ತಿಂಗಳಿಗೊಮ್ಮೆ ಹೊಸ ಮಳಿಗೆ
ಭಾಸ್ಕರ್ ಅವರು ಪ್ರತಿ ಎಂಟು ತಿಂಗಳಿಗೊಮ್ಮೆ ದೇಶದ್ಯಾಂತ ಎಲ್ಲಿ ಸಾಧ್ಯವೋ ಅಲ್ಲಿ ಒಂದು ಮಳಿಗೆ ತೆರೆಯುವ ಸಂಕಲ್ಪ ಮಾಡಿದ್ದು, ಅದನ್ನು ಪೂರೈಸಿಕೊಂಡು ಹೋಗುತ್ತಿದ್ದಾರೆ ಕೂಡ. ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಬಯಕೆಯನ್ನು ಭಾಸ್ಕರ್ ಹೊಂದಿದ್ದು, ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಕೂಡ ನಡೆಸಿದ್ದಾರೆ. 

click me!