ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2023ನೇ ಆರ್ಥಿಕ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರೈತರಿಗೆ ವಿವಿಧ ಸಹಾಯಧನಗಳ ಘೋಷಣೆ ಜೊತೆಗೆ ಭೂ ಸಿರಿ ಎಂಬ ನೂತನ ಯೋಜನೆಯನ್ನು ಕೂಡ ಘೋಷಿಸಿದ್ದಾರೆ.
ಬೆಂಗಳೂರು (ಫೆ.17): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು 2023ನೇ ಆರ್ಥಿಕ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅನ್ನದಾತರ ಆರ್ಥಿಕ ಸಬಲೀಕರಣಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಾರಿ ಕೃಷಿ ವಲಯದ ಬೆಳವಣಿಗೆ ಶೇ.5.5ರಷ್ಟಿದೆ ಎಂದು ಸಿಎಂ ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ್ದಾರೆ. ರೈತರಿಗಾಗಿ ವಿವಿಧ ಸಹಾಯಧನಗಳನ್ನು ಕೂಡ ಘೋಷಿಸಲಾಗಿದೆ. ಇನ್ನು ಭೂ ಸಿರಿ ಎಂಬ ಹೊಸ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳ ಅಳವಡಿಕೆಯೊಂದಿಗೆ ರೈತರು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಪೂರಕ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ಸಿಎಂ ತಿಳಿಸಿದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ರಫ್ತಿಗೆ ಆದ್ಯತೆ ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯದಲ್ಲಿ ಸ್ಥಿರತೆಯನ್ನು ತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು. ಬಿತ್ತನೆಯಿಂದ ಮಾರುಕಟ್ಟೆ ತನಕ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನೆರವು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಬಾರಿ ಕೃಷಿ ವಲಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುವ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಕವನದ 'ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸ ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ' ಸಾಲುಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.
ಬಡ್ಡಿರಹಿತ ಸಾಲದ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ
ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ ಸಿಗಲಿದೆ. 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದು ಸಿಎಂ ತಿಳಿಸಿದರು. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ. ಗಳಷ್ಟು ಸಾಲ ವಿತರಿಸಲಾಗುವುದು ಎಂದು ಸಿಎಂ ತಿಳಿಸಿದರು.
undefined
ಭೂ ಸಿರಿ ಯೋಜನೆ
ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ಹೊಸ ಯೋಜನೆ ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ 2023-24ನೇ ಸಾಲಿನಿಂದ ರೈತರಿಗೆ 10 ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲಾಗುವುದು. ಇದರಿಂದ ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್ ನ 7,500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ರೈತ ಸಿರಿ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ
ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೀಗಾಗಿ ಸಿರಿಧಾನ್ಯ ಉತ್ಪಾದನೆಗೆ ರೈತರಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಇನ್ನು ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಬಜೆಟ್ 2023-24 ಸುದ್ದಿಗಳಿಗೆ ಇಲ್ಲಿ ಕ್ಲಿಕಿಸಿ
ಸಹ್ಯಾದ್ರಿ ಯೋಜನೆ
ಈ ಯೋಜನೆಯಡಿಯಲ್ಲಿ ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇನ್ನು 'ಸಹಸ್ರ ಸರೋವರ' ಕಾರ್ಯಕ್ರಮದಡಿ ರಾಜ್ಯದಲ್ಲಿ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿಪಡಿಸಲಾಗುವುದು ಎಮದು ಸಿಎಂ ತಿಳಿಸಿದರು.
5 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ
2022-23ನೇ ಸಾಲಿನಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಪ್ರತಿ ಕ್ವಿಂಟಾಲ್‌ಗೆ 3,578 ರೂ. ನಂತೆ ಒಟ್ಟು 1,879 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ 75 ಸಾವಿರ ರೈತರಿಂದ ಭತ್ತ ಹಾಗೂ 40 ಸಾವಿರ ರೈತರಿಂದ ಬಿಳಿ ಜೋಳವನ್ನು ಖರೀದಿಸಲು 1,072 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಬೆಳೆ ಹಾನಿ ಪರಿಹಾರ ತ್ವರಿತ ಜಮೆ
2022-23ನೇ ಸಾಲಿನಲ್ಲಿ 13.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,031 ಕೋಟಿ ರೂ. ಗಳನ್ನು 2 ತಿಂಗಳೊಳಗೆ ಜಮೆ ಮಾಡಲಾಗಿದೆ ಎಂದು ಸಿಎಂ ಹೇಳಿದರು. ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 10,000 ರೂ. ನಂತೆ 223 ಕೋಟಿ ರೂ. ಪರಿಹಾರವನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅತ್ಯಾಧುನಿಕ ಕೃಷಿ ಯಂತ್ರೋಪಕರ
ರೈತರಿಗೆ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಸುಲಭವಾಗಿ ಗಿ ದೊರೆಯುವಂತೆ ಮಾಡಲು ಕೃಷಿ ಇಲಾಖೆಯು ಈಗಾಗಲೇ ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ 11 ಹಾರ್ವೆಸ್ಟರ್ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂ. ನಂತೆ, ಈ ವರ್ಷ 50 ಕೋಟಿ ರೂ. ಒದಗಿಸಲಾಗುವುದು.
ಡಿಜಿಟಲ್ ಕೃಷಿ
ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಒಂದು ಹೊಸ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಿಂದ ದೊರಕುವ ಮಾಹಿತಿಗಳನ್ನು ಉಪಯೋಗಿಸಿ, Precision Farming ಸೇರಿದಂತೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ತಿಳಿವಳಿಕೆಯುಳ್ಳ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ.
Women in Karnataka Budget 2023-24 : ಮಹಿಳೆಯರಿಗೆ ಬಂಪರ್ ಗಿಫ್ಟ್: ಮಹಿಳೆ- ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್
ಜೀವನ್‌ಜ್ಯೋತಿ ವಿಮಾ ಯೋಜನೆ
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆಯ ನೆರವಿನೊಂದಿಗೆ ಅವರ ಬದುಕಿಗೆ ಭದ್ರತೆ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ತಿಳಿಸಿದರು.
ನೈಸರ್ಗಿಕ ಕೃಷಿಗೆ ಒತ್ತು
ಪ್ರತಿ ತಾಲ್ಲೂಕಿಗೆ ಒಂದರಂತೆ ತಲಾ 50 ಹೆಕ್ಟೇರ್ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ 4 ವರ್ಷಗಳಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸಲಾಗುವುದು.