ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ; ಬಡ್ಡಿ ದರ ಏರಿಕೆಗೆ ಕಡಿವಾಣ ಬೀಳುತ್ತಾ?

By Suvarna News  |  First Published Nov 15, 2022, 11:04 AM IST

*ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರ 19 ತಿಂಗಳ ಕನಿಷ್ಠ ಮಟ್ಟ ಶೇ.8.39ಕ್ಕೆ ಇಳಿಕೆ
*ಸೆಪ್ಟೆಂಬರ್ ನಲ್ಲಿ 5 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದ ಚಿಲ್ಲರೆ ಹಣದುಬ್ಬರ
*ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಹಣದುಬ್ಬರ  ಶೇ.7.41ರಷ್ಟಿತ್ತು
 


ನವದೆಹಲಿ (ನ.15): ದೇಶದಲ್ಲಿ ಏರಿಕೆ ಹಾದಿಯಲ್ಲಿದ್ದ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ನಲ್ಲಿ ಶೇ. 6.77ಕ್ಕೆ ಇಳಿಕೆ ಕಂಡಿದ್ದು, ಬೆಲೆಯೇರಿಕೆಯಿಂದ ಕಂಗ್ಗೆಟ್ಟಿರುವ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಸಿಕ್ಕಿದೆ.  ಸೆಪ್ಟೆಂಬರ್ ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಐದು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇ.7.41ರಷ್ಟಿತ್ತು. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಗರಿಷ್ಠ ಸಹನ ಮಿತಿಯಾದ ಶೇ.6ಕ್ಕಿಂತ ಮೇಲಿರೋದು ಇದು 10ನೇ ತಿಂಗಳು. ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿದ್ದರೆ, ಜೂನ್ ನಲ್ಲಿ ಶೇ.7.01ಕ್ಕೆ ಇಳಿಕೆಯಾಗಿತ್ತು.  ಜುಲೈನಲ್ಲಿ ಕೂಡ ಇಳಿಕೆಯಾಗಿ ಶೇ.6.71ರಷ್ಟಿತ್ತು. ಆದರೆ, ಆಗಸ್ಟ್ ನಲ್ಲಿ ಶೇ.7ಕ್ಕೆ ಏರಿಕೆ ಕಂಡಿತ್ತು.  ಅಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7ಕ್ಕೆ ಇಳಿಕೆಯಾಗಿರುವ ಸಾಧ್ಯತೆಯಿದೆ ಎಂದು ಕೆಲವು ದಿನಗಳ ಹಿಂದೆ ಆರ್ಥಿಕ ತಜ್ಞರು ಕೂಡ ಅಂದಾಜಿಸಿದ್ದರು. ಅಕ್ಟೋಬರ್ ನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೂಡ ಹಣದುಬ್ಬರ ತಗ್ಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರ ಶೇ.6.98ಕ್ಕೆ ಇಳಿಕೆಯಾಗಿದ್ರೆ, ನಗರ ಪ್ರದೇಶದಲ್ಲಿ ಶೇ.6.50ರಷ್ಟಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ  (NSO) ಇತ್ತೀಚಿನ ಅಂಕಿಅಂಶಗಳ ಪ್ರಕಾರ ಆಹಾರ ಬಾಸ್ಕೆಟ್ ಹಣದುಬ್ಬರ ಅಥವಾ ಗ್ರಾಹಕ ಆಹಾರ ಬೆಲೆ ಸೂಚ್ಯಂಕ ಶೇ.7.01ಕ್ಕೆ ಇಳಿಕೆಯಾಗಿದೆ. ಸೆಪ್ಟೆಂಬರ್ ನಲ್ಲಿ ಆಹಾರ ಹಣದುಬ್ಬರ ಶೇ.8.60ರಷ್ಟಿತ್ತು.  

ಸಗಟು ಹಣದುಬ್ಬರ ಇಳಿಕೆ
ಇನ್ನು ಸಗಟು ಹಣದುಬ್ಬರ ದರ ಕೂಡ ಅಕ್ಟೋಬರ್ ನಲ್ಲಿ 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಶೇ.8.39ರಷ್ಟಿದೆ. ಆಹಾರ, ಇಂಧನ ಹಾಗೂ ಉತ್ಪಾದನಾ ವೆಚ್ಚ ತಗ್ಗಿದ ಬೆನ್ನಲ್ಲೇ ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಸೆಪ್ಟೆಂಬರ್ ನಲ್ಲಿ ಶೇ.10.7ರಷ್ಟಿತ್ತು. ಇನ್ನು  ಆಗಸ್ಟ್ ನಲ್ಲಿ ಇದು ಶೇ.12.41ರಷ್ಟಿತ್ತು. ಹೀಗಾಗಿ ಸತತ 18 ತಿಂಗಳ ಬಳಿಕ  ಎರಡಂಕಿಯಲ್ಲಿದ್ದ ಡಬ್ಲ್ಯುಪಿಐ ಹಣದುಬ್ಬರ  ಇಳಿಕೆ ಕಂಡಿದೆ.

Tap to resize

Latest Videos

Twitter Blue Tick: ಬ್ಲೂ ಟಿಕ್‌ಗೆ ಭಾರತೀಯರು ಹಣ ನೀಡ್ತಾರಾ? ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

ಹಣದುಬ್ಬರ ತಗ್ಗುವ ನಿರೀಕ್ಷೆ  
ಇನ್ನು ಆರ್ ಬಿಐ ಇತ್ತೀಚೆಗೆ ಅಂದಾಜಿಸಿರುವ ಪ್ರಕಾರ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ನಿಂದ ಡಿಸೆಂಬರ್ ತನಕದ ತ್ರೈಮಾಸಿಕದಲ್ಲಿ ಶೇ.6.5ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ನಂತರದ ಕ್ವಾರ್ಟರ್ ನಲ್ಲಿ ಶೇ.5.8ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ 2023-24ನೇ ಹಣಕಾಸು ಸಾಲಿನಲ್ಲಿ ಸರಾಸರಿ ಹಣದುಬ್ಬರ ಶೇ.5.2ಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಆರ್ ಬಿಐ ಅಂದಾಜಿಸಿದೆ. 
ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ (Margin) ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6. ಆದ್ರೆ ಸತತ 10 ತಿಂಗಳಿಂದ ಚಿಲ್ಲರೆ ಹಣದುಬ್ಬರ ಈ ಮಿತಿಯನ್ನು ಮೀರಿದೆ. ಹೀಗಾಗಿ ಸೆಪ್ಟೆಂಬರ್ 30ರಂದು ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.  ಈ ಹಿನ್ನೆಲೆ ಸದ್ಯದ ರೆಪೋ ದರವು ಶೇ.5.90 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಈ ತನಕ ಒಟ್ಟು ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ.

ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ರೆಪೋ ದರ ಏರಿಕೆ ಮಾಡಲ್ವ?
ದೇಶದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ತಡೆ ಹಾಕಲು ಆರ್ ಬಿಐ ರೆಪೋ ದರದಲ್ಲಿ ಗಣನೀಯ ಏರಿಕೆ ಮಾಡಿತ್ತು. ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ತಗ್ಗಿರುವ ಕಾರಣ ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡೋದಿಲ್ಲ ಎಂದು ಹೇಳಲಾಗುತ್ತಿದೆ. ರೆಪೋ ದರ ಹೆಚ್ಚಳದಿಂದ ಬ್ಯಾಂಕ್ ಗಳು ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದವು. ಇದರಿಂದ ಸಾಲಗಳ ಇಎಂಐ ಹೆಚ್ಚಳವಾಗಿತ್ತು.


 

click me!