ತೈಲ ಭದ್ರತೆಗಾಗಿ ಭಾರತದ ಹೆಜ್ಜೆ: ಅಮೆರಿಕಾದ ವಿರುದ್ಧ ದೃಢ ನಡೆ

By Suvarna News  |  First Published May 18, 2024, 5:45 PM IST

ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣ್‌ಧೀರ್ ಜೈಸ್ವಾಲ್ ಅವರು, ಭಾರತದ ಸಂಪೂರ್ಣ ತೈಲ ಆಮದು ಪ್ರಕ್ರಿಯೆ ದೇಶದ ಇಂಧನ ಭದ್ರತೆ ಸಾಧಿಸುವ, ನಿರಂತರ ಪೂರೈಕೆ ಹೊಂದುವ ಅವಶ್ಯಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ.


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

2022ರಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವ ನಿರ್ಧಾರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡಿದ್ದರು ಎಂದು ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಭಾರತೀಯ ಗ್ರಾಹಕರನ್ನು ಜಾಗತಿಕವಾಗಿ ಹೆಚ್ಚುತ್ತಿದ್ದ ತೈಲ ಬೆಲೆಯಿಂದ ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಂಡರು ಎಂದು ಸಚಿವರು ಹೇಳಿದ್ದಾರೆ. ಈ ನಿರ್ಧಾರವನ್ನು ಭಾರತದ ಇಂಧನ ಪೂರೈಕೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿವರಿಸಿದೆ.

Tap to resize

Latest Videos

undefined

ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣ್‌ಧೀರ್ ಜೈಸ್ವಾಲ್ ಅವರು, ಭಾರತದ ಸಂಪೂರ್ಣ ತೈಲ ಆಮದು ಪ್ರಕ್ರಿಯೆ ದೇಶದ ಇಂಧನ ಭದ್ರತೆ ಸಾಧಿಸುವ, ನಿರಂತರ ಪೂರೈಕೆ ಹೊಂದುವ ಅವಶ್ಯಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. ಈ ನಿರ್ಧಾರಗಳನ್ನು ಭಾರತ ಸ್ವತಂತ್ರವಾಗಿ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡಿದೆ ಎಂದು ಅವರು ವಿವರಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಅಮೆರಿಕಾದ ಜೊತೆಗೂ ಮಾತುಕತೆ ನಡೆಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

ಜೈಸ್ವಾಲ್ ಅವರು ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದರು. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಗಾರ್ಸೆಟ್ಟಿ, ಜಾಗತಿಕ ತೈಲ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಬಿಡನ್ ಆಡಳಿತ ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಲು ಅನುಮತಿ ನೀಡಿತು ಎಂದಿದ್ದರು. ಈ ವ್ಯವಸ್ಥೆಯ ಕಾರಣದಿಂದ ತೈಲ ಬೆಲೆ ಸ್ಥಿರವಾಗಿರಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಭಾರತ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಹೇಳಿದ್ದರು. ಗಾರ್ಸೆಟ್ಟಿ ಅವರ ಹೇಳಿಕೆ, ರಷ್ಯಾದ ಜೊತೆಗೆ ಬೆಳೆಯುತ್ತಿರುವ ಭಾರತದ ಇಂಧನ ಬಾಂಧವ್ಯದ ಕುರಿತು ಬದಲಾಗುತ್ತಿರುವ ಅಮೆರಿಕಾದ ನಿಲುವನ್ನು ಸಂಕೇತಿಸುತ್ತಿತ್ತು.

ಈ ಹಿಂದೆ, ಭಾರತ ರಷ್ಯಾದಿಂದ ತೈಲ ಖರೀದಿ ನಡೆಸುವ ಕುರಿತು ಅಮೆರಿಕಾ ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಎಪ್ರಿಲ್ 2022ರಲ್ಲಿ, ಅಮೆರಿಕಾ ಅಧ್ಯಕ್ಷರಾದ ಜೋ ಬಿಡನ್ ಅವರು ಸ್ವತಃ ಪ್ರಧಾನಿ ಮೋದಿಯವರೊಡನೆ ಮಾತನಾಡಿ, ರಷ್ಯಾದಿಂದ ತೈಲ ಖರೀದಿಸುವುದು ಭಾರತದ ಹಿತಾಸಕ್ತಿಗೆ ಉತ್ತಮವಲ್ಲ ಎಂದು ಸಲಹೆ ಮಾಡಿದ್ದರು. ಅದೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕಾದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಅವರು ನೇರವಾಗಿಯೇ ಭಾರತೀಯ ಅಧಿಕಾರಿಗಳ ಬಳಿ ರಷ್ಯಾದಿಂದ ಇಂಧನ ಆಮದು ಹೆಚ್ಚಿಸುವುದು ಭಾರತದ ಹಿತಾಸಕ್ತಿಗಳಿಗೆ ಒಳಿತಲ್ಲ ಎಂದಿದ್ದರು.

ಡಿಸೆಂಬರ್ 2022ರಲ್ಲಿ, ಜಿ7 ರಾಷ್ಟ್ರಗಳ ಗುಂಪು ರಷ್ಯಾದಿಂದ ಖರೀದಿಸುವ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ ಗರಿಷ್ಠ 60 ಡಾಲರ್‌ಗಳ ದರವನ್ನು ನಿಗದಿಪಡಿಸಿದ್ದವು. ಇದರ ಪರಿಣಾಮವಾಗಿ, ಪಾಶ್ಚಾತ್ಯ ವಿಮಾ ಸೇವೆ ಮತ್ತು ಸರಕು ಸಾಗಾಣಿಕಾ ಸೇವೆಗಳನ್ನು ಬಳಸುವ ರಾಷ್ಟ್ರಗಳು ಪ್ರತಿ ಬ್ಯಾರಲ್‌ಗೆ 60 ಡಾಲರ್‌ಗಿಂತ ಕಡಿಮೆ ದರದಲ್ಲಿ ಮಾತ್ರವೇ ರಷ್ಯಾದಿಂದ ತೈಲ ಖರೀದಿಸಲು ಸಾಧ್ಯವಿತ್ತು. ಆ ವರ್ಷದಿಂದ, ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಈಗ ಭಾರತದ ಒಟ್ಟು ತೈಲ ಆಮದಿನ 30-40% ತೈಲವನ್ನು ರಷ್ಯಾ ಒಂದೇ ಪೂರೈಸುತ್ತಿದೆ.

ಒಂದು ವೇಳೆ, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಎದುರಾದ ಪಾಶ್ಚಾತ್ಯ ಒತ್ತಡಕ್ಕೆ ಭಾರತ ಏನಾದರೂ ಮಣಿದು, ರಷ್ಯಾದಿಂದ ತೈಲ ಆಮದು ನಡೆಸುವುದನ್ನು ಸ್ಥಗಿತಗೊಳಿಸಿದ್ದರೆ, ಭಾರತದಲ್ಲಿ ತೈಲ ಬೆಲೆ ಕನಿಷ್ಠ 20 ರೂಪಾಯಿಗಳಷ್ಟು ಹೆಚ್ಚಾಗಿರುತ್ತಿತ್ತು ಎಂದು ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಮೇ 5ರಂದು ಹೇಳಿಕೆ ನೀಡಿದ್ದರು. ಭಾರತದ ಪೆಟ್ರೋಲಿಯಂ ಸಚಿವಾಲಯ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ದರವನ್ನು ಮಾರ್ಚ್ ತಿಂಗಳಲ್ಲಿ ಕಡಿತಗೊಳಿಸಿತ್ತು. ಇದು ಎಪ್ರಿಲ್ 2022ರ ಬಳಿಕ ಭಾರತದ ತೈಲ ದರದಲ್ಲಿನ ಮೊದಲ ಬದಲಾವಣೆಯಾಗಿತ್ತು. 

ಭಾರತದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪಾಶ್ಚಾತ್ಯ ರಾಷ್ಟ್ರಗಳ ಭಾರೀ ಒತ್ತಡದ ನಡುವೆಯೂ ರಷ್ಯಾದಿಂದ ತೈಲ ಆಮದು ನಡೆಸಿದ ಕ್ರಮ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅತ್ಯಂತ ಮುಖ್ಯವಾಗಿತ್ತು ಎಂದಿದ್ದರು. ಭಾರತದ ಅಧಿಕೃತ ದಾಖಲೆಗಳ ಪ್ರಕಾರ, 2022-23ನೇ ಸಾಲಿನಲ್ಲಿ ಭಾರತದಲ್ಲಿ ತೈಲ ಚಿಲ್ಲರೆ ಮಾರಾಟ ದರ 8% ಇಳಿಕೆ ಕಂಡಿದೆ. ಆದರೆ, ಇದೇ ಅವಧಿಯಲ್ಲಿ ಫ್ರಾನ್ಸ್, ಇಟಲಿ, ಮತ್ತು ಯುಕೆಗಳಲ್ಲಿ ಇಂಧನ ಆಮದು ದರ ಕನಿಷ್ಠ 12ರಿಂದ 29% ಹೆಚ್ಚಳ ಕಂಡಿದೆ. ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕಾರಣ ಮತ್ತು ಪ್ರಾದೇಶಿಕ ವಿದ್ಯಮಾನಗಳ ಕಾರಣದಿಂದ, ಮುಂದಿನ ಐದು ವರ್ಷಗಳ ಅವಧಿ ಅತ್ಯಂತ ಸವಾಲಿನದ್ದಾಗಿರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

ವಿವಿಧ ದೇಶಗಳ ಮೇಲೆ ಇದರಿಂದಾಗಿ ಹೆಚ್ಚಿನ ಒತ್ತಡ ಮತ್ತು ಸಂಕಷ್ಟಗಳು ತಲೆದೋರಲಿವೆ ಎಂದು ಅವರು ಎಚ್ಚರಿಸಿದ್ದಾರೆ. ಜೈಶಂಕರ್ ಅವರು ಪ್ರಸ್ತುತ ಭೌಗೋಳಿಕ ವಿದ್ಯಮಾನಗಳಾದ ಉಕ್ರೇನ್ ಮತ್ತು ಮಧ್ಯ ಪೂರ್ವ ಪ್ರದೇಶದ ಉದ್ವಿಗ್ನತೆಗಳು, ಅರಬ್ಬೀ ಸಮುದ್ರ ಮತ್ತು ದಕ್ಷಿಣ ಚೀನಾ ಸಮುದ್ರದ ಸಂಕೀರ್ಣತೆಗಳು ಮತ್ತು ಭಾರತ ಮತ್ತು ಚೀನಾ ನಡುವಿನ ಗಡಿ ಚಕಮಕಿಗಳು ಮುಂದಿನ ದಿನಗಳಲ್ಲಿ ಪ್ರಮುಖ ಸವಾಲಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದರು.

click me!